ಬೆಂಗಳೂರು : ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಬಿಕ್ಕಟ್ಟು (LPG Crisis) ಹೆಚ್ಚುತ್ತಿದೆ ಎಂಬ ಸುದ್ದಿಗಳ ನಡುವೆ ಬೆಂಗಳೂರು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ಇಲ್ಲ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಇಸ್ರೇಲ್–ಇರಾನ್ ಯುದ್ಧದ ಪರಿಣಾಮ ಇಂಧನ ಪೂರೈಕೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗ್ಯಾಸ್ ಕೊರತೆ ಉಂಟಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕೆಲವೆಡೆ ಕಮರ್ಷಿಯಲ್ ಸಿಲಿಂಡರ್ ಕೊರತೆಯಿಂದ ಹೋಟೆಲ್‌ಗಳಿಗೂ ಸಮಸ್ಯೆ ಎದುರಾಗಿದ್ದು, ಮೆನು ಬದಲಾವಣೆ ಮಾಡುತ್ತಿರುವುದಾಗಿ ವರದಿಯಾಗಿದೆ. ಈ ನಡುವೆ ಗೃಹಬಳಕೆ ಸಿಲಿಂಡರ್‌ಗಳ ಕೊರತೆಯೂ ಉಂಟಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ
ಈ ಹಿನ್ನೆಲೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಆದ್ದರಿಂದ ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಹಾಗೂ ಹೆಚ್ಚುವರಿಯಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ವದಂತಿಗಳಿಗೆ ಕಿವಿಗೊಡಬೇಡಿ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಜಿಲ್ಲೆಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಕೊರತೆ ಉಂಟಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
LPG ಸಮಸ್ಯೆಗೆ ಸಹಾಯವಾಣಿ ಬಿಡುಗಡೆ
ಇದೇ ವೇಳೆ ಬೆಂಗಳೂರು ಜಿಲ್ಲಾಡಳಿತ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಸಮಸ್ಯೆಗಳ ಕುರಿತು ದೂರು ನೀಡಲು ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಗ್ರಾಹಕರು 9611404384 ಸಂಖ್ಯೆಗೆ ಸಂಪರ್ಕಿಸಿ ಗೃಹಬಳಕೆ ಅಡುಗೆ ಅನಿಲ ಸಂಬಂಧಿತ ಸಮಸ್ಯೆಗಳನ್ನು ತಿಳಿಸಬಹುದು ಎಂದು ಸೂಚಿಸಲಾಗಿದೆ.
