Tuesday, March 10, 2026

ಸತ್ಯ | ನ್ಯಾಯ |ಧರ್ಮ

ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ: ವದಂತಿಗಳಿಗೆ ಕೇಂದ್ರ ಸರ್ಕಾರ ತೆರೆ

ದೇಶದಲ್ಲಿ ಎಲ್‌ಪಿಜಿ (ಅಡುಗೆ ಅನಿಲ) ಕೊರತೆಯಿದೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಅನಿಲ ಪೂರೈಕೆ ಸಂಪೂರ್ಣ ಸ್ಥಿರವಾಗಿದೆ ಮತ್ತು ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿಲ್ಲ ಎಂದು ತಿಳಿಸಿದೆ.

ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಕುರಿತು ಕೆಲ ವಲಯಗಳಿಂದ ವ್ಯಕ್ತವಾದ ಆತಂಕದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರಿ ಮೂಲಗಳು, ದೇಶದ ತೈಲ ಸಂಸ್ಕರಣಾಗಾರಗಳಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದ್ದು, ಪ್ರಸ್ತುತ ಎಲ್ಲಾ ಸಂಸ್ಕರಣಾಗಾರಗಳು ಶೇ.100 ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿವೆ. ಹಿಂದಿನ ಸೂಚನೆಗಳಂತೆ ಉತ್ಪಾದನೆಯನ್ನು ಸುಮಾರು ಶೇ.10ರಷ್ಟು ಹೆಚ್ಚಿಸಲಾಗಿದೆ ಎಂಬುದನ್ನೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅದೇ ವೇಳೆ ಸಿಲಿಂಡರ್‌ಗಳ ಕಾಳಸಂತೆ ಮತ್ತು ಅಕ್ರಮ ದಾಸ್ತಾನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವಿತರಣಾ ವ್ಯವಸ್ಥೆಯ ಮೇಲಿನ ನಿಗಾವನ್ನು ಹೆಚ್ಚಿಸಲು ಮಾನಿಟರಿಂಗ್ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ವಿಸ್ತರಿಸಲಾಗಿದೆ. ಅಕ್ರಮ ಸಂಗ್ರಹಣೆ ತಡೆಯಲು ಅಗತ್ಯ ವಸ್ತುಗಳ ಕಾಯ್ದೆನ (Essential Commodities Act) ನಿಬಂಧನೆಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ESMA) ಜಾರಿಗೊಳಿಸಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮನೆ ಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ ಅಧಿಕಾರಿಗಳು, ವಾಣಿಜ್ಯ ಸಿಲಿಂಡರ್‌ಗಳ ಬೇಡಿಕೆಯನ್ನೂ ಸಮರ್ಪಕವಾಗಿ ಈಡೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಭಾರತದಲ್ಲಿ ಇಂಧನ ಪೂರೈಕೆ ಸ್ಥಿತಿ ನಿಯಂತ್ರಣದಲ್ಲಿದ್ದು, ವಿದೇಶಗಳಿಂದ ಇಂಧನ ಆಮದು ಸುಗಮವಾಗಿ ನಡೆಯುವಂತೆ ಸಂಬಂಧಿತ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸರ್ಕಾರ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page