ಮಣಿಪುರದಲ್ಲಿ ಕ್ರೂರ ಹಿಂಸಾಚಾರಕ್ಕೆ ಒಳಗಾದ ಮೂವರು ಮಹಿಳೆಯರಲ್ಲಿ ಒಬ್ಬರಾದ 21 ವರ್ಷದ ಯುವತಿಯ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ಹೇಳಲಾಗಿದೆ. ಈ ಕುರಿತು FIR ದಾಖಲಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಮಣಿಪುರದ ಇಬ್ಬರು ಕುಕಿ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಉದ್ರಿಕ್ತ ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ಈಗ ದೇಶವನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆ ಆರಂಭಗೊಂಡ ಒಂದು ದಿನದ ನಂತರ ಮೇ 4ರಂದು ಕಂಗ್ಪೊಕ್ಪಿ ಜಿಲ್ಲೆಯ ಬಿ ಫೈನೊಮ್ ಬಳಿ ಈ ಘಟನೆ ನಡೆದಿದೆ. ಈ ದುರಂತದಲ್ಲಿ ಬದುಕುಳಿದ ಮಹಿಳೆಯೊಬ್ಬರೊಡನೆ scroll.in ಮಾತನಾಡಿದ್ದು ಅದರ ಅನುವಾದ ಇಲ್ಲಿದೆ
ಉದ್ರಿಕ್ತ ಮೈತೇಯಿ ಗುಂಪು ಹತ್ತಿರದ ಊರುಗಳಲ್ಲಿ “ಮನೆಗಳನ್ನು ಸುಡುತ್ತಿರುವುದು” ಗೊತ್ತಾದ ತಕ್ಷಣ ಅವರ ಕುಟುಂಬದವರು ಮತ್ತು ಊರಿನವರು ಕಾಲುದಾರಿಯಲ್ಲಿ ಓಡಿ ತಪ್ಪಿಸಿಕೊಂಡರು. ಆದರೆ ಗುಂಪು ಅವರನ್ನು ಹಿಂಬಾಲಿಸಿ ಹಿಡಿಯಿತು. ಅವರ ಪಕ್ಕದ ಮನೆಯವರನ್ನು ಮತ್ತು ಮಗನನನ್ನು ಸ್ಪಲ್ಪ ದೂರ ಎಳೆದುಕೊಂಡು ಹೋಗಿ ಕೊಲ್ಲಲಾಯಿತು ಎಂದು ಸಂತ್ರಸ್ಥ ಮಹಿಳೆ ಆರೋಪಿಸಿದರು. ನಂತರ ಈ ಗುಂಪು ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಾ “ನಮ್ಮ ಬಳಿ ಬಟ್ಟೆ ಬಿಚ್ಚಲು ಹೇಳಿತು”,
“ನಾವು ಬಟ್ಟೆ ಬಿಚ್ಚಲು ಒಪ್ಪದಿದ್ದಾಗ ಅವರು: ʼಬಟ್ಟೆ ಬಿಚ್ಚದೆ ಹೋದ್ರೆ ನಿಮ್ಮನ್ನ ಕೊಂದು ಬಿಡ್ತೀವಿʼ” ಎಂದರು ಎನ್ನುತ್ತಾರೆ ಆ 40ರ ಪ್ರಾಯದ ಮಹಿಳೆ. “ಜೀವ ಉಳಿಸಿಕೊಳ್ಳುವ ಸಲುವಾಗಿ ಮೈಮೇಲಿದ್ದ ಪ್ರತಿಯೊಂದು ಉಡುಪನ್ನೂ ತೆಗದೆ” ಎಂದು ಆಕೆ ಹೇಳುತ್ತಾರೆ. ಇದೆಲ್ಲ ನಡೆಯುತ್ತಿರಬೇಕಾದರೆ ಗುಂಪು ಆಕೆಗೆ ಹೊಡೆಯುವುದು, ಬಡಿಯುವುದನ್ನು ಮಾಡುತ್ತಿತ್ತು. ತನ್ನ ಪಕ್ಕದ ಮನೆಯ 21 ವರ್ಷದ ಹೆಣ್ಣುಮಗಳ ವಿಷಯದಲ್ಲಿ ಏನಾಗುತ್ತಿದೆಯೆನ್ನುವುದು ನನಗೆ ಗೊತ್ತಾಗುತ್ತಿರಲಿಲ್ಲ ನಾನು ಅವಳಿಂದ ಬಹಳ ದೂರದಲ್ಲಿದ್ದೆ ಎಂದು ಆಕೆ ಹೇಳುತ್ತಾರೆ.
ನಂತರ ತನ್ನನ್ನು ರಸ್ತೆಯ ಬಳಿಯ ಭತ್ತದ ಗದ್ದೆಗೆ ಎಳೆದೊಯ್ದರು ಮತ್ತು ಗುಂಪಿನಲ್ಲಿದ್ದ ಗಂಡಸರು ಅಲ್ಲಿ “ಮಲಗಲು” ಹೇಳಿದರು ಎಂದು ಮಹಿಳೆ ಆರೋಪಿಸಿದ್ದಾರೆ. “ಅವರು ಹೇಳಿದಂತೆ ನಾನು ಮಾಡಿದೆ, ನಂತರ ಮೂವರು ಗಂಡಸರು ನನ್ನನ್ನು ಸುತ್ತುವರೆದರು … ಅವರಲ್ಲಿ ಒಬ್ಬ ಇನ್ನೊಬ್ಬನ ಬಳಿ,’ಅವಳ ಮೇಲೆ ಅತ್ಯಾಚಾರ ಮಾಡೋಣ’ ಎಂದು ಹೇಳಿದ, ಆದರೆ ಕೊನೆಗೆ ಅವರು ಹಾಗೆ ಮಾಡಲಿಲ್ಲ” ಎಂದು ಅವರು ಹೇಳಿದರು.
ಅವರು ಆ ಮಟ್ಟಕ್ಕೆ [ಆಕೆಯ ಮೇಲೆ ಅತ್ಯಾಚಾರ ಎಸಗುವ ಮಟ್ಟಕ್ಕೆ] ಹೋಗದಿದ್ದದ್ದು ತನ್ನ “ಅದೃಷ್ಟ” ಎನ್ನುತ್ತಾರೆ ಆ ಮಹಿಳೆ. “ಆದರೆ ಅವರು ನನ್ನ ಎದೆಯನ್ನು ಒತ್ತಿದರು” ಎಂದು ಅವರು ಹೇಳಿದರು.
ಪೊಲೀಸ್ ಪ್ರಕರಣ
ಈ ಕುರಿತು ಮಹಿಳೆಯರ ಸಂಬಂಧಿಕರು ಸಲ್ಲಿಸಿದ ಪೊಲೀಸ್ ದೂರಿನಲ್ಲಿ ಮಹಿಳೆಯರಲ್ಲಿ ಒಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳಲಾಗಿದೆ. ಈ ದೂರಿನ ಆಧಾರದ ಮೇಲೆ, ಮೇ 18ರಂದು ಕಂಗ್ಪೊಕ್ಪಿ ಜಿಲ್ಲೆಯ ಸೈಕುಲ್ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಅಪರಾಧ ನಡೆದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಥಮ ಮಾಹಿತಿ ವರದಿಯನ್ನು (FIR) ದಾಖಲಿಸಲಾಗುತ್ತದೆಯಾದರೂ, ಜೀರೋ FIR ಯಾವುದೇ ಠಾಣೆಯಲ್ಲಿ ಆ ಕುರಿತು ದೂರು ಸ್ವೀಕರಿಸಲು ಮತ್ತು ದಾಖಲಿಸಲು ಮತ್ತು ನಂತರ ಅದನ್ನು ಇನ್ನೊಂದು ಠಾಣೆಗೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ.
800-1,000 ಸಂಖ್ಯೆಯ “ಅಪರಿಚಿತ ದುಷ್ಕರ್ಮಿಗಳ” ವಿರುದ್ಧ ಅತ್ಯಾಚಾರ ಮತ್ತು ಕೊಲೆ ಆರೋಪಗಳನ್ನು ಹೊರಿಸಲಾಗಿದೆ ಎಂದು ಸೈಕುಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಒಂದು ದಿನದ ನಂತರ ಮೇ 4ರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
“ಎಕೆ ರೈಫಲ್ಸ್, ಎಸ್ಎಲ್ಆರ್, ಐಎನ್ಎಸ್ಎಎಸ್ ಮತ್ತು .303 ರೈಫಲ್ಸ್ ಮಾದರಿಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುತ್ತಿದ್ದ ಕೆಲವು ಅಪರಿಚಿತ ದುಷ್ಕರ್ಮಿಗಳು… ಮಣಿಪುರದ ದ್ವೀಪ ಉಪ ವಿಭಾಗ ಕಂಗ್ಪೊಕ್ಪಿ ಜಿಲ್ಲೆಯ ನಮ್ಮ ಗ್ರಾಮವನ್ನು ಬಲವಂತವಾಗಿ ಪ್ರವೇಶಿಸಿದರು” ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಗುಂಪು ಊರಿನಲ್ಲಿನ ಮನೆಗಳನ್ನು ಸುಟ್ಟು ಧ್ವಂಸಗೊಳಿಸಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಪ್ರಕಾರ, ಆ ಗ್ರಾಮದ ಐದು ನಿವಾಸಿಗಳು ತಮ್ಮನ್ನು ರಕ್ಷಿಸಿಕೊಳ್ಳಲು “ಕಾಡಿನ ಕಡೆಗೆ” ಪಲಾಯನ ಮಾಡುತ್ತಿದ್ದರು.
ಈ ಗುಂಪಿನಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಇದ್ದರು. ಅವರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರು: 56 ವರ್ಷದ ವ್ಯಕ್ತಿ, ಅವರ 19 ವರ್ಷದ ಮಗ ಮತ್ತು 21 ವರ್ಷದ ಮಗಳು. 42 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಮತ್ತು 52 ವರ್ಷದ ಇನ್ನೊಬ್ಬರು ಸಹ ಈ ಗುಂಪಿನ ಭಾಗವಾಗಿದ್ದರು.
ಕಾಡಿಗೆ ಹೋಗುವ ದಾರಿಯಲ್ಲಿ, ನೊಂಗ್ಪೊಕ್ ಸೆಕ್ಮೈ ಪೊಲೀಸ್ ಠಾಣೆಯ ತಂಡವು ಅವರನ್ನು “ರಕ್ಷಿಸಿದೆ” ಎಂದು ದೂರಿನಲ್ಲಿ ಸೇರಿಸಲಾಗಿದೆ. ಆದಾಗ್ಯೂ, ನೊಂಗ್ಪೊಕ್ ಸೆಕ್ಮೈ ಪೊಲೀಸ್ ಠಾಣೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ತೌಬು ಬಳಿ ಉದ್ರಿಕ್ತ ಜನರ ಗುಂಪು ಅವರನ್ನು ದಾರಿಯಲ್ಲಿ ತಡೆದು ಪೊಲೀಸ್ ತಂಡದ ಕಸ್ಟಡಿಯಿಂದ ತಮ್ಮ ವಶಕ್ಕೆ ತೆಗೆದುಕೊಂಡಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅವರನ್ನು ವಶಕ್ಕೆ ಪಡೆದ ತಕ್ಷಣ 56 ವರ್ಷದ ಮಹಿಳೆಯನ್ನು ಕೊಂದ ಗುಂಪು “ಉಳಿದ ಮಹಿಳೆಯರಿಗೆ ಮೈಮೇಲಿರುವ ಎಲ್ಲಾ ವಸ್ತ್ರಗಳನ್ನು ಕಳಚುವಂತೆ ಹಿಂಸಿಸಿತು. ಮತ್ತು ಜನ ಸಮೂಹದ ಮುಂದೆ ನಗ್ನಗೊಳಿಸಿತು” ಎಂದು ದೂರಿನಲ್ಲಿ ಆರೋಪಿಸಲಾಗಿದೆ.
21 ವರ್ಷದ ಯುವತಿಯ ಮೇಲೆ “ಹಾಡಹಗಲೇ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಇತರ ಇಬ್ಬರು ಮಹಿಳೆಯರು ತಮಗೆ ಪರಿಚಿತರಾದ ಕೆಲವು ಜನರ ಸಹಾಯದಿಂದ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ದೂರಿನಲ್ಲಿ ಹೇಳಲಾಗಿದೆ.
“21 ವರ್ಷದ ಯುವತಿ ತಮ್ಮ ಅಕ್ಕನನ್ನು ಬಿಟ್ಟು ಬಿಡುವಂತೆ ವಿನಂತಿ ಮಾಡಿಕೊಂಡು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದಾಗ ಗುಂಪು ಅವನನ್ನು ಸ್ಥಳದಲ್ಲೇ ಕೊಂದು ಹಾಕಿತು” ಎಂದು ದೂರು ಹೇಳಿದೆ.
ದೂರನ್ನು ಘಟನೆಯ ಸ್ಥಳವಾದ ನಂಗ್ಪೋಕ್ ಸೆಕ್ಮೈ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಕಂಗ್ಪೊಕ್ಪಿಯ ಪೊಲೀಸ್ ಅಧೀಕ್ಷಕ ಮನೋಜ್ ಪ್ರಭಾಕರ್ ಎಂ ಇದನ್ನು ದೃಢಪಡಿಸಿದರು: “ನಾವು ಸೈಕುಲ್ [ಪೊಲೀಸ್ ಠಾಣೆ] ನಲ್ಲಿ ಶೂನ್ಯ ಎಫ್ಐಆರ್ ದಾಖಲಿಸಿದ್ದೇವೆ ಮತ್ತು ನೊಂಗ್ಪೋಕ್ ಸೆಕ್ಮೈ [ಪೊಲೀಸ್ ಠಾಣೆ] ಗೆ ಅದನ್ನು ಕಳುಹಿಸಲಾಗಿದೆ.”
ದೂರಿನ ಬಗ್ಗೆ ತನಿಖೆ ಪ್ರಾರಂಭವಾಗಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ಕೋರಿ ಮಾಡಿದ ಕರೆಗಳು ಮತ್ತು ಸಂದೇಶಗಳಿಗೆ ನೊಂಗ್ಪೋಕ್ ಸೆಕ್ಮೈ ಠಾಣೆಯ ಉಸ್ತುವಾರಿ ಅಧಿಕಾರಿ ಪ್ರತಿಕ್ರಿಯಿಸಲಿಲ್ಲ.