Thursday, June 13, 2024

ಸತ್ಯ | ನ್ಯಾಯ |ಧರ್ಮ

ಎಲ್ಲರಂತಲ್ಲ ಈ ʼಆದಿʼ.. ಬರೆದಷ್ಟೂ ಬರಿದಾಗದ ಭಾವಗಳ ಒಡತಿ!

ಇದು ಸ್ವರೂಪದ ಆದಿ. ನಮ್ಮನ್ನು ನಾವು ಅರಿತುಕೊಳ್ಳುವ ದಾರಿಯ ಆದಿ. ಬದುಕಿನ ಕಲಿಕಾ ಸಾಧ್ಯತೆಗಳನ್ನು ಹೊರಜಗತ್ತಿಗೆ ತೆರೆದಿಟ್ಟ ಆದಿ. ಈ ಆದಿಯೇ  ಸರಳ, ಸೌಜನ್ಯದ ಆದಿ ಸ್ವರೂಪ. ಸ್ವರೂಪದ ಶಕ್ತಿಯಾಗಿ, ಸಾಧ್ಯತೆಗಳ ಸಾಕ್ಷಿಪ್ರಜ್ಞೆಯಾಗಿ, ಮುಗ್ಧ ನಗುವನ್ನು ಉಳಿಸಿಕೊಂಡು, ವಿನಯತೆಯೇ ಆವರಿಸಿಕೊಂಡ ಮಂಗಳೂರಿನ ಮಗಳು ಆದಿ ಸ್ವರೂಪ.

ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಶ್ರೀ ಗೋಪಾಡ್ಕರ್ ಮತ್ತು ಸುಮಾಡ್ಕರ್, ತಮ್ಮ ಮಗಳು ಆದಿಯನ್ನು ಕಲಿಕಾ ಸಾಧ್ಯತೆಯ ಪ್ರಯೋಗಕ್ಕೊಳಪಡಿಸಿ ಹಲವಾರು ವರ್ಷಗಳ ಅಧ್ಯಯನದ ಯಶಸ್ಸನ್ನು ಆದಿಯ ಬಹುಮುಖಿ ಪ್ರತಿಭೆಯಲ್ಲಿ ಅನಾವರಣ ಗೊಳಿಸಿದವರು.

ಯುವ ಕಲಾವಿದೆಯಾಗಿ

ಕ್ರಿಯಾತ್ಮಕ ಚಿತ್ರಕಲೆಗಳಿಗೆ ಕುಂಚದೊಂದಿಗೆ, ಶ್ರೀಮಂತ ಸಾಹಿತ್ಯ ರೂಪಕಗಳ ಜೊತೆ ನಾಡಿನ ಪ್ರಸಿದ್ಧ ವ್ಯಕ್ತಿತ್ವಗಳ ಮನವನ್ನು ಮುಟ್ಟಿದ ಹೃದಯವಂತೆ ಈಕೆ. ಬರೆದ ರೇಖೆಗಳಿಗೆ ಭಾವ ಹೆಣೆದು, ತುಂಬಿದ ಬಣ್ಣಗಳ ಮೂಲಕ ಮಾತನಾಡುತ್ತಾ ಹೃದಯಕ್ಕೆ ಹತ್ತಿರವಾಗುವ ಆದಿ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಬೆಳೆಯುತ್ತಿದ್ದಾಳೆ. ಎಂಟು ವರ್ಷಗಳಿಂದ ಮಂಗಳೂರಿನ ನೃತ್ಯ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ಅವರ ಬಳಿ ಯಕ್ಷಗಾನ ಹಾಗೂ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾಳೆ. ಯಕ್ಷಗಾನದ ಹಲವಾರು ಪ್ರದರ್ಶನಗಳಲ್ಲಿ ಇವಳ ಪಾತ್ರ ನಿರ್ವಹಣೆ ಪ್ರಸಂಗದ ಘನತೆಯನ್ನು ಹೆಚ್ಚಿಸಿದೆ. ಪಂಡಿತ್ ರವಿಕಿರಣ್ ಮಣಿಪಾಲ್ ಅವರ ಬಳಿ ಹಿಂದೂಸ್ಥಾನಿ ಸಂಗೀತ ಅಭ್ಯಾಸವನ್ನೂ ಮಾಡುತ್ತಿರುವ ಆದಿ, ಗಿಟಾರ್ ಹಾಗೂ ಕೀಬೋರ್ಡ್ ನುಡಿಸುವ ಮೂಲಕವೂ ಬೆರಗು ಹುಟ್ಟಿಸುತ್ತಾಳೆ.

ಈ ಆದಿ ಎಲ್ಲರಂತಲ್ಲ..

ʼಇದು ಅದಲ್ಲʼ ಎನ್ನುವ ಸ್ವರೂಪದ ಸ್ಲೋಗನ್ ಗೆ ಅನುರೂಪವಾಗಿ ಇವಳ ಪ್ರತಿಭೆ, ಸಾಧನೆಗಳು ಉಳಿದೆಲ್ಲರ ಸಾಧನೆಗಿಂತ ವಿಭಿನ್ನವಾಗಿ ತೆರೆದು ಕೊಳ್ಳುತ್ತದೆ. ಏಕೆಂದರೆ ಆದಿ ಶಾಲೆಯ ಮೆಟ್ಟಿಲು ಹತ್ತಿದವಳಲ್ಲ!

ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಕಥೆ, ಕಾದಂಬರಿ ಹಾಗೂ ಕವಿತೆಗಳನ್ನು ರಚಿಸುವ ಪ್ರೌಢಿಮೆ ಈಕೆಯದು. 2015 ರಲ್ಲಿ ಬಿಡುಗಡೆಗೊಂಡ ಆದಿಯ ಕಥೆ, ಅಂತ್ಯ ನೀವೇ ಹೇಳಿ ಎಂಬ ಕಥಾ ಸಂಗ್ರಹ ಪುಸ್ತಕವು ದೊಡ್ಡವರನ್ನೂ ಚಿಂತನೆಗೆ ಹಚ್ಚುವ ಕೊಡುಗೆ. ಕಥೆಗಳಿಗೆ ಸಂಬಂಧಿಸಿದಂತೆ ಸ್ವ ರಚಿತ ಏಕವ್ಯಕ್ತಿ ಚಿತ್ರ ಕಲಾ ಪ್ರದರ್ಶನವನ್ನೂ ನೀಡಿರುತ್ತಾಳೆ. ಹಲವಾರು ನಾಟಕಗಳಲ್ಲಿ ಅಭಿನಯಿಸಿರುವ ಆದಿ, ರಂಗಭೂಮಿಯ ಅನುಭವಗಳನ್ನೂ ದಕ್ಕಿಸಿಕೊಂಡಿದ್ದಾಳೆ. ಹೆಣ್ಣು ಮಕ್ಕಳು ಕಡಿಮೆ ತೊಡಗಿಸಿ ಕೊಂಡಿರುವ ಮಿಮಿಕ್ರಿ ಮತ್ತು ಬೀಟ್ ಬಾಕ್ಸ್ ಕಲಾವಿದೆಯಾಗಿಯೂ ಹೊಸತೊಂದು ಭರವಸೆಗೆ ಕಾರಣವಾಗಿದ್ದಾಳೆ.

ಸ್ವರೂಪ ಅಧ್ಯಯನ ಕೇಂದ್ರ ಪ್ರತಿಯೊಂದು ಮಗು ಜೀನಿಯಸ್, ಅಗಾಧ ಶಕ್ತಿ ಎನ್ನುವ ಸ್ವರೂಪ ಮಕ್ಕಳನ್ನು ದೇಶದ ಆಸ್ತಿಯಾಗಿ ರೂಪಿಸುವ ಬಹುಸಾಧ್ಯತೆಗಳನ್ನು ಅವಿರತ ತಲಸ್ಪರ್ಶಿ ಅಧ್ಯಯನದ ಮೂಲಕ ಕಂಡು ಕೊಂಡಿದೆ. ಇದರ ಫಲ ಶ್ರುತಿಯಾಗಿ ಅನೌಪಚಾರಿಕ ಅಧ್ಯಯನ ಕೇಂದ್ರವನ್ನು ಆರಂಭಿಸಿ ವಿಷಯ, ವಿಧಾನ, ಶಿಸ್ತು, ವೇಳಾಪಟ್ಟಿ, ಕರಿಕ್ಯುಲಮ್ -ಎಲ್ಲವುಗಳಲ್ಲಿ ಸೃಜನಶೀಲ, ವಿದ್ಯಾರ್ಥಿಸ್ನೇಹಿ, ಸಂಶೋಧನಾಪ್ರದ, ಜೀವನ್ಮುಖಿ, ಅನುಭವ ಶಿಕ್ಷಣವನ್ನು ಪ್ರಚುರ ಪಡಿಸುತ್ತಾ ಬಂದಿದೆ. ಸ್ವರೂಪವು ಹತ್ತು ನೆನಪಿನ ತಂತ್ರಗಳ ಮೂಲಕ ಹತ್ತು ಪ್ರತಿಭೆಗಳನ್ನು ಮೈಗೂಡಿಸಿ ಕೊಳ್ಳುವ ಅಪೂರ್ವ ಶಿಕ್ಷಣ. ಭದ್ರ ಮನೋವೈಜ್ಞಾನಿಕ ತಳಹದಿಯಲ್ಲಿ ಸುಂದರ ಮನಸ್ಸುಗಳನ್ನು ಕಟ್ಟುವ, ಸಾಮರ್ಥ್ಯಗಳನ್ನು ಬೆಳೆಸುವ, ದೇಸಿ ಶಿಕ್ಷಣ. ಪರೀಕ್ಷೆ ಮೀರಿದ, ಕೌಶಲ್ಯಗಳ ನಿತ್ಯ ಪರಿವರ್ತನೆಗೆ ತೆರೆದು ಕೊಳ್ಳುವ ನೆಲಜಲದ, ಭಾಷೆಗಳ, ಜನರ ಬದುಕಿನ ಪ್ರೀತಿಯನ್ನು ಬೆಳೆಸುವ ಬಯಲ ಶಿಕ್ಷಣ.

ಸಾಧನೆಯ ಮೂಲ..

ಅಪ್ಪಾ..ನನ್ನೊಳಗೆ ಅಹಂಕಾರ ಆವರಿಸಿಕೊಂಡರೆ ಕೂಡಲೇ ಹೇಳು ಎನ್ನುವ ಆದಿಯ ವಿನಯವಂತಿಕೆಯೇ ಅವಳ ಸಾಧನೆಯ ಮೂಲ.

ಸ್ವರೂಪ ಅಧ್ಯಯನ ಕೇಂದ್ರದ ಮೂಲಕ ಶ್ರೀ ಗೋಪಾಡ್ಕರ್ ಮತ್ತು ಶ್ರೀಮತಿ ಸುಮಾಡ್ಕರ್ ಇವರು, ಯಾರದೋ ದೌರ್ಬಲ್ಯಕ್ಕೆ ಬಲಿಯಾಗಿ ಕಳೆದು ಹೋಗುತ್ತಿರುವ ಅನೇಕ ಮಕ್ಕಳ ಬದುಕಿಗೆ ಹೊಸ ತಿರುವನ್ನು ನೀಡಿದವರು. ಸಲಹೆ ಮತ್ತು ಭಾಷಣಗಳನ್ನು ಹೊರತುಪಡಿಸಿ, ಎಲ್ಲ ಮಕ್ಕಳೂ ಜೀನಿಯಸ್ ಎಂದು ಇವರು ಕಂಡುಕೊಂಡದ್ದು ʼಸ್ವರೂಪʼ ದ ಮಕ್ಕಳ‌ ಮೂಲಕ. ಕಲಿಕೆಯನ್ನು ನಿತ್ಯ ಸಂಭ್ರಮವನ್ನಾಗಿಸಿ, ಪ್ರದರ್ಶನದ ಮೂಲಕವೇ ಮಕ್ಕಳನ್ನು ಬೆಳೆಸುವ ವಿಭಿನ್ನ ಪರಿಕಲ್ಪನೆಯ ಸ್ವರೂಪ ಶಿಕ್ಷಣದ ಮೊದಲ ಮಗು ಆದಿ ಸ್ವರೂಪ. ಅಧ್ಯಯನ ಕೇಂದ್ರದ ಶೈಕ್ಷಣಿಕ ಜಾಗೃತಿ ಜಾಥಾದಲ್ಲಿ, ಸಾವಿರದ ಆರುನೂರು ಕೇಂದ್ರಗಳಲ್ಲಿ ಅದ್ಭುತವಾದ ನೆನಪು ಶಕ್ತಿಯ ಪ್ರದರ್ಶನ, ನೂರಾರು‌ ಫೋನ್ ನಂಬರ್ ಗಳನ್ನು ನೆನಪಿನಲ್ಲಿಡುವ ಜಾದೂ! ತ್ರಯೋದಶಾವಧಾನ ಎನ್ನುವ ಸ್ಮೃತಿ ವಿಸ್ಮಯವನ್ನು ಪ್ರತ್ಯಕ್ಷವಾಗಿ ಪ್ರದರ್ಶನ ನೀಡಿ ನೋಡುಗರಿಗೆ ಅಚ್ಚರಿ ಹುಟ್ಟಿಸುತ್ತಾ, ಮಕ್ಕಳೊಳಗಿನ ಶಕ್ತಿಗೆ ಕಿಚ್ಚು ಹಚ್ಚಿ ಬೆರಗು ಮೂಡಿಸಿದ್ದಾಳೆ. ಸಾಮಾನ್ಯ- ಜ್ಞಾನದ ಭಂಡಾರವನ್ನೇ ತುಂಬಿಕೊಂಡು, ನಾಲಗೆ ತುದಿಯಲ್ಲಿಯೇ ನಲಿದಾಡುವ ಅನೇಕ ವಿಷಯಗಳ ಪ್ರಸ್ತುತಿಯ ಮೂಲಕ ಕಲಿಯದವರನ್ನು ಮತ್ತೆ ಮತ್ತೆ ಎಚ್ಚರಿಸುವಂತಿರುತ್ತಾಳೆ.

ಸಾಧನೆಯ ಹಾದಿ

ಸ್ವರೂಪ ಅಧ್ಯಯನ ಕೇಂದ್ರ ನಡೆಸುವ ಶಿಬಿರಗಳಲ್ಲಿ  ಶಾಲಾ‌ ಪಠ್ಯದ ಅನೇಕ ಪರಿಕಲ್ಪನೆಗಳನ್ನು ಹಾಡುಗಳ ಮೂಲಕ ಸರಳಗೊಳಿಸಿ, ಎಂದಿಗೂ ನೆನಪಿನಲ್ಲಿ ಉಳಿಯುವ ಕಲಿಕೆಯಾಗಿ ದಾಖಲಾಗಿಸಿದ್ದಾಳೆ. ಮಕ್ಕಳಿಗೆ ಕಲಿಕೆಯೆನ್ನುವುದು ಹೊರೆಯಾಗುವುದಿಲ್ಲ ಎನ್ನುವುದರ ಅರಿವು ಮೂಡಿಸಿದ ಆದಿಯ ಹಾಡುಗಳ ಪರಿಣಾಮವಾಗಿ, ಹಲವಾರು ಮಕ್ಕಳು ವಿಭಿನ್ನ ರೀತಿಯ ಚಿಂತನೆಯನ್ನು ಮೂಡಿಸಿ ಕೊಂಡಿದ್ದಾರೆ.

ಸಾಧಕಿಯಾಗಿ..ಆಕಾಶವಾಣಿ ಮಂಗಳೂರಿನಲ್ಲಿ ಪ್ರತಿಭಾ ದರ್ಪಣ ಕಾರ್ಯಕ್ರಮದಲ್ಲಿ ಹಾಗೂ ಹಲವಾರು FM ರೇಡಿಯೋಗಳಲ್ಲಿ ಆದಿಯ ಸಂದರ್ಶನ ಪ್ರಸಾರಗೊಂಡಿರುತ್ತದೆ. ನಾಡಿ‌ನ‌ ಅನೇಕ ಪತ್ರಿಕೆ ಹಾಗೂ ಮ್ಯಾಗಜಿನ್ ಗಳಲ್ಲಿ ಈ ಪ್ರತಿಭೆಯ ಬಗ್ಗೆ ಲೇಖನ ಸಂದರ್ಶನಗಳು ಪ್ರಕಟವಾಗಿವೆ. ಇಂಡಿಯಾ ಟುಡೇ, ಬಿ. ಬಿ. ಸಿ ಅರೇಬಿಕ್, ANI ವಾಹಿನಿಗಳು ಸೇರಿದಂತೆ ಅನೇಕ ಪ್ರಾದೇಶಿಕ ಹಾಗೂ ಇತರ ರಾಜ್ಯದ ಬಹು ಭಾಷಾ ವಾಹಿನಿಗಳಲ್ಲೂ ambidextrous Aadi ಯ ಪರಿಚಯ ಸಾಧನೆ ಬಿತ್ತರಗೊಂಡಿದೆ.

ಮುಡಿಗೇರಿದ ಐದು ವಿಶ್ವದಾಖಲೆಗಳು!

1 ಎಕ್ಸ್ ಕ್ಲೂಜಿವ್ ವರ್ಲ್ಡ್ ರೆಕಾರ್ಡ್ 2020 – ಎರಡು ಕೈಗಳಲ್ಲಿ ಏಕಕಾಲದಲ್ಲಿ 175 ಅಕ್ಷರಗಳನ್ನು ಬರೆಯುವ ಮೂಲಕ ವಿಶ್ವದಾಖಲೆ.

ಪ್ರಸ್ತುತ ಎರಡೂ ಕೈಗಳಲ್ಲಿ ಏಕಕಾಲಕ್ಕೆ 17 ರೀತಿ ಬರೆಯುವ ಸಾಧ್ಯತೆಯನ್ನು ಕಂಡುಕೊಂಡಿದ್ದಾಳೆ!

2. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2021 – ಇನ್ಕ್ರೆಡಿಬಲ್ ವಿಶ್ಯುವಲ್ ಮೆಮೊರಿ ಆರ್ಟಿಸ್ಟ್ ಎನ್ನುವ ದಾಖಲೆಯನ್ನು ಆದಿ ತನ್ನ  ಪಾಲಿಗೆ ಒದಗಿಸಿ ಕೊಂಡಿದ್ದಾಳೆ. ಹತ್ತನೇ ತರಗತಿಯ ಆರು ವಿಷಯಗಳಿಗೆ ಒಟ್ಟು ಹನ್ನೆರಡು ಪುಸ್ತಕಗಳಿಗೆ ಪೂರ್ತಿ‌ ಪ್ರಶ್ನೋತ್ತರಗಳನ್ನು 31*21  ಇಂಚಿನ ಬೋರ್ಡಿನಲ್ಲಿ ವಿಜುವಲ್ ಮೆಮೊರಿ ಎನ್ನುವ ಚಿಕಣಿ ಚಿತ್ರಗಳನ್ನು ರಚಿಸಿದ ದಾಖಲೆ ಇದು.

ಪ್ರಸ್ತುತ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬಲ್ಲ 10 ದಾಖಲೆಗಳನ್ನು ಬಹುಭಾಷಾ ಬರೆಹ, ಅವಧಾನ ಮೊದಲಾದ ವಿಷಯಗಳಲ್ಲಿ ಮಾಡುವ ತಯಾರಿಯಲ್ಲಿದ್ದಾಳೆ.

3. ಗುಂಪಿನಲ್ಲಿ ಗಿನ್ನೆಸ್ ದಾಖಲೆ – ಪೃಥ್ವಿಶ್ ಮೊಸಾಯಿಕ್ ಮೂಲಕ ಸೇವ್ ಟೈಗರ್ ಎಂಬ ಶೀರ್ಷಿಕೆಯಡಿಯಲ್ಲಿ ರೂಬಿಕ್ಸ್ ಕ್ಯೂಬ್ ಸಂಯೋಜನೆಯ ಮೂಲಕ ದಾಖಲೆ.

4. ಹಾರ್ವರ್ಡ್ ವರ್ಲ್ಡ್ ರೆಕಾರ್ಡ್ – ಏಕಕಾಲದಲ್ಲಿ ಎರಡೂ ಕೈಗಳಲ್ಲಿ ಒಂದು ನಿಮಿಷದಲ್ಲಿ 40 ರಿಂದ 60 ಪದಗಳನ್ನು ಬರೆಯುವ ಮೂಲಕ ತನ್ನದೇ ದಾಖಲೆಯನ್ನು ಮುರಿದಿದ್ದಾಳೆ.

5. ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್- ಏಕಕಾಲದಲ್ಲಿ ಎರಡೂ ಕೈಗಳಲ್ಲಿ ಮಿರರ್ ಇಮೇಜ್ ಬರಹದ ದಾಖಲೆ-2023

ಪ್ರಸ್ತುತ ಸ್ವರೂಪ‌ ಅಧ್ಯಯನ‌ ಕೇಂದ್ರದಲ್ಲಿ ಸಂಶೋಧನಾರ್ಥಿಯಾಗಿ ಹಲವಾರು ಕಲಿಕಾ ಪ್ರಯೋಗಗಳನ್ನು ಮಾಡುತ್ತಿರುವ  ಆದಿಯಲ್ಲೊಂದು ಸಾಧನೆಯ ಹುಚ್ಚಿದೆ. ಅದು ನಿರಂತರವಾಗಿರುವಂತೆ ಕಾಯ್ದುಕೊಳ್ಳುವ ಛಲವಿದೆ.. ಈ ದಾರಿಯಲ್ಲಿ ಸ್ವರೂಪದ ಮಕ್ಕಳನ್ನು ಕರೆದುಕೊಂಡು ಹೋಗುವ ಜವಾಬ್ದಾರಿಯಿದೆ….

ಪತ್ರಾಂದೋಲನ..

ಮಕ್ಕಳ ಜಗಲಿ ಎನ್ನುವ ಆನ್ಲೈನ್ ಪತ್ರಿಕೆಯ ಅಂಕಣದಲ್ಲಿ ಪ್ರಕಟಗೊಂಡ  ಆದಿಯ 50 ಪತ್ರಗಳು, ಆತ್ಮವಿಮರ್ಶೆಯ ವಿಷಯವಾಗಿ ಹಿರಿಯ ಕಿರಿಯರೆಲ್ಲರಲ್ಲಿಯೂ ಸಂಚಲನವನ್ನು ಮೂಡಿಸಿದೆ. ಓದಿದಷ್ಟೂ ಆಳವಾದ ಚಿಂತನೆಗಳು, ಓದುಗರನ್ನು ಸ್ವಯಂ ಕಲಿಕೆಗೆ ತೆರೆದಿಡುವ ಪತ್ರ ಆಂದೋಲನ ಆದಿಯಿಂದ ನಿರಂತರವಾಗಿ ನಡೆಯುತ್ತಿದೆ. ಎಲ್ಲರನ್ನೂ ಎಚ್ಚರಿಸುವ ಪರಿಣಾಮಕಾರಿ ಬರೆಹ ಮತ್ತು ಫಲಿತಾಂಶದ ಮಾತುಗಳ ಮೇಲೆ ನಿತ್ಯ ಅಧ್ಯಯನವನ್ನು ಕೈಗೊಳ್ಳುತ್ತಿರುವ ಆದಿ, ಸ್ವರೂಪದ ಮಕ್ಕಳು ಮತ್ತು ಪೋಷಕರನ್ನು ಈ ಕಲಿಕೆಯೊಳಗೆ ತೊಡಗಿಸಿ ಕೊಳ್ಳುತ್ತಿದ್ದಾಳೆ.

 ಆದಿ ಸ್ವರೂಪದ ಶಕ್ತಿಯೇ ಸರಿ

 ಮಕ್ಕಳು ಯಾರ ಜೊತೆಗಿದ್ದರೆ ಒಳ್ಳೆಯದು? ಈ ಪ್ರಶ್ನೆಗೆ ಆದಿ ಉತ್ತರವಾಗುತ್ತಾಳೆ. ಹಲವಾರು ವರ್ಷಗಳಿಂದ ಶಾಲೆಯಲ್ಲಿ ಕಾಪಿ ಬರೆದರೂ ಅಕ್ಷರ ಅಂದವಾಗದ ಮಕ್ಕಳು ಆದಿಯ ಸಾಂಗತ್ಯದಿಂದ ಬದಲಾಗಿದ್ದಾರೆ. ಹೇಗೆ ಬರೆದರೂ ಬಹಳ ಮುದ್ದಾಗಿರುವ ಆದಿಯ ಕೈಬರೆಹ ಅವಳ ವ್ಯಕ್ತಿತ್ವದ ಕನ್ನಡಿ. ಸ್ವಚ್ಛ ಮನಸ್ಸಿನ ಸರಳತೆ, ಸಹೃದಯತೆ, ನಿರಂತರ…ಸಾಧನೆಯ ನಂತರ ಕೈಕಟ್ಟಿ ಕುಳಿತು ಕೊಳ್ಳದೆ ನಿತ್ಯ ಕಲಿಯುತ್ತಿರುವ ಆದಿ, ಇತರ ಮಕ್ಕಳನ್ನೂ ಸದ್ದು ಮಾಡದೆ ಸಾಧನೆಯ ಕಡೆಗೆ ಕರೆದುಕೊಂಡು ಹೋಗುತ್ತಿದ್ದಾಳೆ. ಸೌಜನ್ಯದ ಮಾತಿನ‌  ಮೂಲಕ ಹೃದಯ ಗೆಲ್ಲುವ ಆದಿಯೊಳಗೊಬ್ಬ ಪ್ರಬುದ್ಧ ಬರೆಹಗಾರ್ತಿ ಇದ್ದಾಳೆ. ಯಾವ ಕ್ಷಣವನ್ನೂ ವ್ಯರ್ಥ ಮಾಡದೆ ಎಲ್ಲದರಲ್ಲಿಯೂ ಕಲಿಕೆಯನ್ನು ಕಾಣುವ ಸದಾ ಕ್ರಿಯಾಶೀಲ, ಸೃಜನಶೀಲ ವ್ಯಕ್ತಿತ್ವದ ಆದಿ ಸ್ವರೂಪದ ಶಕ್ತಿಯೇ ಸರಿ.

ಒಂದೇ ಓದಿಗೆ ನಿಲುಕದ ‌ಗಂಭೀರ ವಿಚಾರಗಳನ್ನು ಸೂಕ್ಷ್ಮವಾಗಿ ಅಭಿವ್ಯಕ್ತಿಗೊಳಿಸುವ ಆದಿಯ ಬರೆಹದ ಶೈಲಿಯ ಹಿಂದೆ ಶಿಕ್ಷಕಿ, ಸಾಹಿತಿ, ಕಲಾವಿದೆಯಾಗಿರುವ ಶ್ರೀಮತಿ ಸುಮಾಡ್ಕರ್ ಅವರ ನೆರಳಿದೆ. ನಾನು ಚಿತ್ರಕಲಾ ಶಿಕ್ಷಕನಾಗಿರುವುದಕ್ಕಾಗಿ ನನ್ನ ಮಗಳು ಚಿತ್ರ ಕಲಾವಿದೆಯಾದದ್ದಲ್ಲ ಎನ್ನುವ ಗೋಪಾಡ್ಕರ್ ಅವರ ಮಾತಿನ ಒಳಾರ್ಥ, ತಾನು ಈಗಲೂ ಚಿತ್ರ ಮಾಡುತ್ತಲೇ ಇರುವುದಕ್ಕೆ ಮತ್ತು ಆ ನಿರಂತರತೆ ಮಗಳ ಕಣ್ಣಿಗೆ ಕಂಡದ್ದಕ್ಕಾಗಿ ಎನ್ನುವುದನ್ನು ಮಾರ್ಮಿಕವಾಗಿ ನುಡಿಯುತ್ತಾರೆ.

ಮಾತನಾಡಿದಷ್ಟೂ ಸಾಕಾಗದ, ಬರೆದಷ್ಟೂ ಬರಿದಾಗದ ಭಾವಗಳ ಒಡತಿ ಆದಿ ಸ್ವರೂಪ. ಎಲ್ಲರೊಳಗಿನ ಒಳಿತುಗಳನ್ನು ಗುರುತಿಸಿ ಮೆಚ್ಚಿಕೊಳ್ಳುವ ಗುಣ, ಸ್ಪಂದನೆ, ಗೌರವ, ಮಾನವತೆ, ಪ್ರಕೃತಿ ಪ್ರೇಮ, ಪ್ರಾಮಾಣಿಕತೆ, ಒಪ್ಪಿಕೊಳ್ಳುವ ಗುಣ, ಸ್ವೀಕಾರದ ಗುಣ….ಹೀಗೆ ಸಾಲು ಸಾಲು ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಆದಿಯ ಹಿಂದೆ ಮತ್ತದೇ ಗೋಪಾಡ್ಕರ್  ಹಾಗೂ ಸುಮಾಡ್ಕರ್ ಅವರ ನಿಲುವು ಮತ್ತು ಒದಗಿಸಿದ ಪೂರಕ ವಾತಾವರಣ ಗೋಚರವಾಗುತ್ತದೆ. ಶಾಲೆಗೆ ಕಳುಹಿಸದೆ ಮಗುವೊಂದನ್ನು ಈ ರೀತಿ ಬೆಳೆಸಬಹುದೆನ್ನುವುದಾದರೆ ನಾವೆಲ್ಲಿದ್ದೇವೆ? ಏನು ಮಾಡುತ್ತಿದ್ದೇವೆ? ನಮ್ಮ ಮಕ್ಕಳು ಯಾರ ಜೊತೆಗಿದ್ದಾರೆ?

ನಮ್ಮ ನಡುವಿರುವ ಈ ಅದ್ಭುತ ಪ್ರತಿಭೆಯನ್ನು ನಮ್ಮ ಎಲ್ಲ ಮಕ್ಕಳು ಕಾಣಬೇಕು. ಅದು ಸ್ಫೂರ್ತಿಗಾಗಿ…ಜೀವನ ಪ್ರೀತಿಗಾಗಿ…ಬದುಕಿನ ಶಕ್ತಿಗಾಗಿ…

ತೇಜಸ್ವಿ ಅಂಬೆಕಲ್ಲು

ಇದನ್ನೂ ಓದಿಮನೆಯೇ ಮೊದಲ ಪಾಠಶಾಲೆ – ಕಲಿಕೆಯಾದ್ರೂ ಎಂಥದ್ದು?! https://peepalmedia.com/home-is-the-first-school-what-is-learning/

Related Articles

ಇತ್ತೀಚಿನ ಸುದ್ದಿಗಳು