Monday, June 17, 2024

ಸತ್ಯ | ನ್ಯಾಯ |ಧರ್ಮ

“ಈ ಚಂಡಿನೆಲ್ಲಾ ಬುಟ್ಟು ನನ್ ಕುಟ್ ಮಲಿಕೊಳಕೇಳಿ ಅಯ್ಯೋರ”

(ಈ ವರೆಗೆ)

ಬೋಪಯ್ಯ ಮತ್ತು ದೇವೀರಮ್ಮನ ಸಂಸಾರದಲ್ಲಿ ಬಿರುಕು ಹೆಚ್ಚಾಯಿತೇ ವಿನ ಕಡಿಮೆಯಾಗಲಿಲ್ಲ. ಒಂದು ದಿನ ಇದ್ದಕ್ಕಿದ್ದ ಹಾಗೆ ಸಾಕಮ್ಮ ಎಂಬ ಬಾಲ ವಿಧವೆಯನ್ನು ಮದುವೆ ಆಗಿ ಮನೆಗೆ ಬಂದ ಬೋಪಯ್ಯ ಬೇರೆ ಮನೆಯಲ್ಲಿ ಉಳಿಯುವಂತಾಯ್ತು. ದೇವೀರಮ್ಮ ತವರು ಮನೆ ಸೇರಿದಳು. ಬೋಪಯ್ಯನ ತಂಗಿ ತುಂಗಾಳ ಮದುವೆ ಹೆಡ್ಡನಂತಿರುವ ಮಾರಯ್ಯನೊಂದಿಗೆ ನಡೆಯುತ್ತದೆ. ಇವರ ಸಂಸಾರದ ಕತೆ ಏನು ? ಓದಿ ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಇಪ್ಪತ್ತೇಳನೆಯ ಕಂತು.

ಅಪ್ಪ ರಾಚಪ್ಪಯ್ಯನ ನೀಚ ಬುದ್ಧಿಗೆ ಬಲಿಪಶುವಾಗಿ ಕುತ್ತಿಗೆಗೆ ತಾಳಿ ಬಿಗಿಸಿ ಕೊಂಡ ತುಂಗೆ, ಆ ರಾತ್ರಿ ಸೋಬನದ ಕೋಣೆಯಲ್ಲಿ ಮಾರಯ್ಯನನ್ನು ಇಗ್ಗಾ ಮುಗ್ಗಾ ಬಡಿದು, ಸೆರಗಿಗೆ ಕೈ ಹಾಕಿದ ಅವನ ಕೈ ಮುರಿಯುವಂತೆ ನುಲುಚಿ  ಬೀದಿ ಬಾಗಿಲಿಗೆ ಓಡಿ ಬಂದು ನಿಂತಳು. ಆಗಲೇ ಎಲ್ಲರ ಮನೆ ದೀಪಗಳು ಆರಿ  ಊರು ಕತ್ತಲಲ್ಲಿ ಮುಳುಗಿತ್ತು. ಅತ್ತ ಇತ್ತ ಕಣ್ಣಾಯಿಸಿ ನೋಡಿದಳು ಒಂದು ನರ ಪಿಳ್ಳೆಯ  ಸುಳಿವು ಅಲ್ಲಿರಲಿಲ್ಲ. ಅಪ್ಪ ಅವ್ವ ಮಲಗಿರ ಬಹುದಾದ ಮನೆಗಳನ್ನು ಊಹಿಸಿ ಬಾಗಿಲು ಬಡಿದು ಏಳಿಸಿಯೇ ಬಿಡುವುದೆಂದು ನಿರ್ಧರಿಸಿ ಆ ಕತ್ತಲಲ್ಲೇ ಧೈರ್ಯ ಮಾಡಿ ಹೊರಟಳು. ಯಾಕೋ ಸಂಕೋಚವಾದಂತೆನಿಸಿ ಹಾಗೆಯೇ ಹಿಂದಕ್ಕೆ ಬಂದು  ಬೀದಿ ಬಾಗಿಲ ಜಗಲಿ ಕಟ್ಟೆಯಲ್ಲಿ ಕುಳಿತಳು. ಇಡೀ ರಾತ್ರಿ ಒಳ ಹೋಗದೆ, ಕಣ್ಣು ಮಿಟುಕಿಸದೆ ಬೆಳಕರಿಸಿದಳು. ಇತ್ತ ಮಾರಯ್ಯ, ಹಟ ಹಿಡಿದು ಬೀದಿಯಲ್ಲಿ ಕುಳಿತ ಹೆಂಡತಿಯೊಬ್ಬಳನ್ನೇ ಬಿಟ್ಟು  ಮಲಗಲಾರದೆ, ತಲೆ ಬಾಗಿಲ ಒಳಗೆ ಕೂತು “ನಿನ್ನ್ ಕಾಲಿಡಿತಿನಿ ಒಳುಗ್ ಬಾ ತುಂಗವ್ವ ನೋಡಿದ್ ಜನ ಏನಂದಾರು” ಎಂದು ಗೋಗರೆದು ಸಾಕಾಗಿ ಕುಳಿತಲ್ಲಿಯೇ ಜೂಗರಿಸ ತೊಡಗಿದ. 

ಮಗಳನ್ನು ಸೋಬನದ ಕೋಣೆಗೆ ಬಿಟ್ಟು ಹೊಸ ಜೋಡಿಯ ಏಕಾಂತಕ್ಕೆ ತೊಂದರೆಯಾಗ ಬಾರದೆಂದು, ಮೇಲಿನ ಬೀದಿಯ ಪುಟ್ಟಮ್ಮತ್ತೆ ಮನೆಯಲ್ಲಿ  ಮಲಗಿದ್ದ ರಾಚಪ್ಪಯ್ಯ ಮತ್ತು  ನರಸಮ್ಮ ಬೆಳಗ್ಗೆ ತುಸು ತಡವಾಗಿಯೇ ಎದ್ದು ಮನೆಯ ಕಡೆ ಹೆಜ್ಜೆ ಹಾಕಿದರು.

ಮಂಡಿಯೊಳಗೆ  ಮುಖ ತೂರಿಸಿ, ಮೈ ತುಂಬಾ ಸೆರಗೊದ್ದು ಕೂದಲು ಕೆದರಿ ಕೊಂಡು ಚಾಮುಂಡಿಯಂತೆ ಬೀದಿ ಬಾಗಿಲಲ್ಲಿ  ಕೂತಿದ್ದ ಮಗಳನ್ನು ಕಂಡು ನರಸಮ್ಮನಿಗೆ ಕಸಿವಿಸಿಯಾಯಿತು. ಮಗಳ ಪಕ್ಕ ಕುಳಿತು ಅವಳ ಕೂದಲು ಸರಿಪಡಿಸುತ್ತಾ ” ಅಲ್ಲ ಕನ್ ಮಗ ನಿಂಗೇನಾರ ಬುದ್ಧಿ ಗಿದ್ದಿ ಐತ. ಬೆಳ್ಬೆಳಿಗ್ಗೆ ಬಂದು ಹಿಂಗೆ ಬೀದಿ ಬಾಗ್ಲಲ್ಲಿ ಕೂತಿದ್ಯಲ್ಲ. ನೋಡಿದ್ ಜನ ನಗಾಡಕಿಲ್ವಾ” ಎಂದು ಹೇಳಿದಳು. ಅವ್ವನ ಮಾತು ಕೇಳಿ ರೊಚ್ಚಿಗೆದ್ದ ತುಂಗೆ ” ಹಂಗ್ ನಗಾಡೋರುನ್ನೆ  ಬಂದು ಆ ಗಮರುನ್ತವ ಮಲಿಕೊಳಕೇಳು ಎಂದು ಚೀರಿದಳು. 

ಮಗಳ ಬಾಯನ್ನು ಗಟ್ಟಿಯಾಗಿ ಮುಚ್ಚಿ ಹಿಡಿದ ನರಸಮ್ಮ “ಅಯ್ಯೋ ಮುಂಡೆ ಮಗಳೆ ಬೀದಿಲಿ ಮಾನ ತಗಿಬ್ಯಾಡ ನಡಿ ವಳಿಕೆ” ಎಂದು ಹೇಳಿ ಬಲವಂತವಾಗಿ ಹಜಾರಕ್ಕೆ ಎಳೆದು ತಂದಳು. ಮಗಳನ್ನು ಎದುರಿಸಲಾರದೆ ಸೀದ ಒಳಗೆ ಬಂದು ಆರಾಮ ಕುರ್ಚಿಗೆ ಒರಗಿ ಸೂರಿಗೆ ದೃಷ್ಟಿ ನೆಟ್ಟಿದ್ದ ರಾಜಪ್ಪಯ್ಯನಿಗೆ, ಮಗ ಬೋಪಯ್ಯನನ್ನು ಕೊಂದು ಬಿಡ ಬೇಕೆಂಬಷ್ಟು ಕೋಪ ಒತ್ತರಿಸಿ ಬಂತು. ಕುಂಟುತ್ತಾ ಮಾವ ರಾಚಪ್ಪಯ್ಯನ ಬಳಿ ಬಂದು ಕುಳಿತ ಮಾರಯ್ಯ, ನೋವಾದ ತನ್ನ ಕೈಯನ್ನು ಒತ್ತಿಕೊಳ್ಳುತ್ತಾ “ರಾತ್ರಿನಾಗ ಅವಾಂತ್ರ ಎಬ್ಬುಸಿ ನನ್ನ ಕೈನೆ ಮುರ್ದುಬುಟ್ಟೈತೆ ಈ ತುಂಗವ್ವ. ನೀವಾರ ಒಂದೀಟು ಬುದ್ದಿ  ಹೇಳಿ,ಈ ಚಂಡಿನೆಲ್ಲಾ ಬುಟ್ಟು ನನ್ ಕುಟ್ ಮಲಿಕೊಳಕೇಳಿ ಅಯ್ಯೋರ” ಎಂದು ಹಲ್ಲು ಗಿಂಜಿದ.

ಆ ವಯಸ್ಸಿನಲ್ಲೂ ಹೆಣ್ಣುಗಳಿಗಾಗಿ ಹಾತೊರೆಯುತ್ತಿದ್ದ ರಾಜಪ್ಪಯ್ಯನಿಗೆ, ಬಿಸಿ ರಕ್ತದ ಮಾರಯ್ಯನ ಸಂಕಟ ಎದೆ ಕನಲಿಸಿತು. ಸೂರಿಗೆ ನೆಟ್ಟಿದ್ದ ದೃಷ್ಟಿಯನ್ನು ಕದಲಿಸಿದಂತೆ “ಈಗ ಆಗಿದ್ದಾಗೋಯ್ತು  ಹಣೆಲಿ ಬರ್ದಿದ್ದ್ ಯಾರು ತಪ್ಸಕಾಗಕಿಲ್ಲ ತುಂಗವ್ವ. ಪಾಪ ಅವನುನ್ಯಾಕೆ ಉಪವಾಸ ಕೆಡುಗ್ತಿಯ ಹೊಂದಾಣಿಕೆ ಮಾಡ್ಕೊಂಡ್ಹೋಗದ್ ಕಲ್ತುಕೊ. ಮನೆ ಒಳಗಿನ ಹುಳ್ಕುನ್ನ ನಾಕ್ ಜನದ್ ಎದ್ರು ತೋರ್ಸ್ಕ ಬಾರದು ಕನವ್ವ” ಎಂದು ಬುದ್ದಿ ಹೇಳಿದ. ಅಪ್ಪನಿಗೆ ಎಂದೂ ಎದುರಾಡದಿದ್ದ ತುಂಗೆ ಅಂದು ಅಪ್ಪನ ಮಾತು ಕೇಳಿ ಕೆಕ್ಕರಿಸಿ ನಿಂತಳು. “ನನ್ನಣೆಲಿ ಬರ್ದಿತ್ತು ಅಂತ ಅದ್ಯಾವ ಬಾಯಲ್ಲೇಳ್ತಿಯಪ್ಪ. ನೀನ್ ನ್ಯಾಯವಾಗಿದ್ದಿದ್ರೆ  ಇವತ್ತು ನಂಗ್ಯಾಕೆ ಈ ಪಾಡ್ ಬತ್ತಿತ್ತು ಹೇಳು. ನೀನುವೆ ಆ ದರ್ಬೇಸಿ ಅಣ್ಣಯ್ಯನುವೆ ಜಿದ್ದಿಗ್ ಬಿದ್ದು ನನ್ನ ಬಾಳ್ ಹಾಳ್ ಮಾಡುದ್ರಿ ಅಂತ ಒಪ್ಕೊ” ಎಂದು ರಾಚಪ್ಪಯ್ಯನ ಮುಖಕ್ಕೆ ಹೊಡೆದಂತೆ ಹೇಳಿ ಸರಸರನೆ ಅಟ್ಟ ಏರಿ ತಲೆ ತುಂಬಾ ಮುಸುಕೊದ್ದು ಮಲಗಿ ಬಿಟ್ಟಳು.

ಹೀಗೆ ಅಪ್ಪ ಮಕ್ಕಳ ಜಿದ್ದಾ ಜಿದ್ದಿಯಲ್ಲೆ  ಕೆಲವು ದಿನಗಳು ಕಳೆದು ಹೋದವು. ತುಂಗೆ ಮಾತ್ರ ಬದಲಾಗಲಿಲ್ಲ  ಗಂಡನನ್ನು ಕಂಡರೆ ವಾಂತಿ ಬಂದವಳಂತೆ ವಾಕರಿಸುತ್ತಿದ್ದಳು. ಇತ್ತ ಬರಗೆಟ್ಟವನಂತೆ ಹೆಂಡತಿಯ ಸಾಮೀಪ್ಯಕ್ಕಾಗಿ ಹಾತೊರೆಯುತ್ತಿದ್ದ ಮಾರಯ್ಯ  ಕಂಡ ಕಂಡವರಲ್ಲಿ “ನನ್ನ್ ಹೆಡ್ತಿಗೆ ನೀವಾರ ಒಂದೀಟ್ ಬುದ್ದಿ ಯೋಳಿ. ಇನ್ನು ಎಳ್ಸಂಗಾಡ್ತದೆ  ನನ್ ಕುಟ್ ಮಲಿಕೊಳಕಿಲ ಅಂತದೆ” ಎಂದು  ಹೇಳಿಕೊಂಡು ತಿರುಗ ತೊಡಗಿದ.

ಇದು ಊರಲೆಲ್ಲ ದೊಡ್ಡ ಸುದ್ದಿಯಾಗಿ ಎಲ್ಲರ ಬಾಯಿಗೂ ಒಳ್ಳೆಯ ರಸವತ್ತಾದ ಕವಳವಾಯಿತು. “ಮಲಿಕೊಳಕ್ಕಿಲ್ಲ” ಎನ್ನುವ ಮಾರಯ್ಯನ ದೂರಿಗೆ, ಅಂತೆ ಕಂತೆ ಬೊಂತೆಗಳೆಲ್ಲ ಸೇರಿ ಊರಿನ ತುಂಬಾ ಹರಡಿ ಹಾರಾಡಿ ಒಂದು ದೊಡ್ಡ ಕಥೆಯಾಗಿ ಬೆಳೆದು ವಿಜೃಂಭಿಸತೊಡಗಿತ್ತು. ಹೀಗೆ ಇಡೀ ಮನೆಯೇ ಊರಿನವರ ನಗೆ ಪಾಟಲಿಗೆ ಗುರಿಯಾಗುತ್ತಿರುವುದನ್ನು ನೋಡಲಾರದ ಬೋಪಯ್ಯ, ಒಮ್ಮೆ ಹೊಲದ ಅರಳಿಮರದ ನೆರಳಿನಲ್ಲಿ ಕುಳಿತು ಕೆಲಸ ಮಾಡಿಸುತ್ತಿದ್ದ ಅಪ್ಪನ ಮುಂದೆ ಬುಸುಗುಟ್ಟುತ್ತಾ ಬಂದು ನಿಂತು “ಎಲ್ರು ಸೇರಿ ಮನೆ ಮರ್ಯಾದಿನ ಹರಾಜಾಕ್ಬೇಕು ಅಂತ ಮಾಡಿದಿರ. ಮೊದ್ಲು ಹೋಗಿ ನಿನ್ನ ಮಗ್ಳಿಗೆ ಕಟ್ಕೊಂಡೋನ್ ಜೊತೆ ಅಚ್ಕಟ್ಟಾಗಿ ಸಂಸಾರ ಮಾಡಕೇಳು. ನನಗೂ ಸಾಕಾಗದೆ ನಾನು ಒಬ್ಬ ಗಂಡ್ಸಾಗಿ ಎಷ್ಟು ಅಂತ ಅವಮಾನ ಸೈಸ್ಲೇಳು ಎಂದು ಗದ್ಗತಿತನಾಗಿ ನುಡಿದು ಹೊರಟೇ ಬಿಟ್ಟ. 

ಬಿರಬಿರನೇ ನಡೆದು ಹೋಗುತ್ತಿದ್ದ ಮಗನನ್ನೇ ದೃಷ್ಟಿಸುತ್ತಾ ನಿಂತ ರಾಚಪ್ಪಯ್ಯನಿಗೆ, ತಾನು ಆ ದಿನ ದೇವಿರಮ್ಮನ ಜೊತೆ ಮಲಗಿದ್ದ ದೃಶ್ಯ ಕಣ್ಣ ಮುಂದೆ ಬಂದು ನಿಂತಿತು. ಕ್ಷಣ ಮೈ ನಡುಗಿದಂತಾಗಿ ಸಣ್ಣಗೆ ಬೆವರು ಕಿತ್ತು ಕೊಂಡಿತು. “ಥೋ…ಥೋ…ಎಂತ ಕೆಲ್ಸಾ ಆಗ್ಬುಡ್ತು” ಎಂದು ಕೈ ಕೈ ಹಿಸುಕಿ ಕೊಳ್ಳುತ್ತಾ ಸಂಕಟದಿಂದ ಮನೆ ಕಡೆ ಹೆಜ್ಜೆ ಹಾಕ ತೊಡಗಿದ. ದಾರಿಯ ನಡುವೆ ಎದುರಾದ ಪಂಚಾಯ್ತಿ ಮುಖ್ಯಸ್ಥ ಬೆಟ್ಟೇಗೌಡ ರಾಚ್ಚಪ್ಪಯ್ಯನನ್ನು ನಿಲ್ಲಿಸಿ, “ಅದೇನ್ ರಾಚಪ್ಪ ನಿನ್ನ್ ಮನೆ ಕಥೆ ಊರ್ ತುಂಬಾ ಗಬ್ಬ್ ನಾರ್ತೈತೆ ಮೊದ್ಲು ಸರಿ ಮಾಡದಲ್ವೇನೋ ಮಾರಾಯ” ಎಂದು ಚೇಡಿಸಿ ನಕ್ಕ. ಬೆಟ್ಟೇ ಗೌಡನ ಅಣಕದ ಮಾತು ಕೇಳಿ, ರಾಚ್ಚಪ್ಪಯ್ಯನ ಎದೆಯೊಳಗೆ ಮುಳ್ಳಾಡಿದಂತಾದರು ಅದನ್ನು ಹೊರಗೆ ತೋರಗೊಡದೆ ” ಮದುವೆಯಾದ್ ತಟಿಂದ್ಲು  ಗಂಡ ಹೆಂಡ್ರುನ್ನ ಒಂದ್ ಮಾಡಕೆ ನಾವು ಸಾಹಸ  ಮಾಡ್ತಾನೆ ಇದ್ದೀವಿ ಗೌಡ್ರೆ. ಏನ್ ಮಾಡದು ನಮ್ ತುಂಗವ್ವ ಯಾರ್ ಮಾತ್ಗು ಜಗ್ಗ್ತಾನೆ ಇಲ್ಲ.  ನೋಡನ ಇನ್ ಓಸ್  ದಿನ ಕಳುದ್ರೆ ಸರಿಯಾದಳು” ಎಂದು ಹೇಳಿ ಒಂದೇ ಉಸಿರಿಗೆ ಮನೆ ಕಡೆ ದೌಡಾಯಿಸಿದ. 

ಅಜಾರದ ಮೂಲೆಯಲ್ಲಿ ನೆಟ್ಟಿದ್ದ ಕಲ್ಲಿನಲ್ಲಿ ಅಕ್ಕಿ ಬೀಸುತ್ತಾ ಕೂತಿದ್ದ ತುಂಗೆಯನ್ನು ಹತ್ತಿರ ಕರೆದು ಕೂರಿಸಿಕೊಂಡ ರಾಜಪ್ಪಯ್ಯ, ಊರಿನವರು ಮಾತಾಡಿಕೊಳ್ಳುತ್ತಿರುವ ಸಂಗತಿಯನ್ನೆಲ್ಲ ಮಗಳ ಮುಂದೆ ಹೇಳಿಕೊಂಡು ನಿಟ್ಟುಸಿರು ಬಿಟ್ಟ. “ನಿನ್ನ್ ದಮ್ಮಯ್ಯ ಕನ್ ಮಗ ಆಗೋಗಿದ್ನೆಲ್ಲ ಇಟ್ಕೊಂಡು ಸಾಧುಸ್ತಾ ಕೂತ್ಕಬ್ಯಾಡ. ಮಾರಯ್ಯುಂಗೆ  ಈ  ಯವಾರ ಗಿವಾರ ಗೊತ್ತಾಗಕಿಲ್ಲ ಅನ್ನೋದ್ ಬುಟ್ರೆ ಚಿನ್ನುದಂತ ಆಳು ಕನವ್ವ. ನೋಡಕು ಕಟ್ಟ್ ಮಸ್ತನಾಗವ್ನೆ ಹತ್ತಾಳ್ ಕೆಲ್ಸವ ಒಬ್ಬನೆ ಮಾಡಾಕ್ತಾನೆ. ತಿಂದು ತೇಗೊ ಅಷ್ಟು ಇರೊ ಆಸ್ತಿ ನೋಡ್ಕಳಕೆ ಇವ್ನೆ ಸರಿಯಾದ ಆಳು ಮಗ. ನಾವು ಮಸೂರ ಹಾಕ್ಕೊಂಡ್  ಹುಡುಕಿದ್ರೂ ಇಂಥ ಹುಡುಗ ಸಿಕಕಿಲ್ಲ. ಅವನು  ಆಸ್ತಿ ನೋಡ್ಕೊಳ್ಳಿ  ನೀನು ಹಣಕಾಸಿನ್ ಯವಾರ ನೋಡ್ಕೊಳವ್ವ. ಬದುಕು ಬಂಗಾರ ಆಯ್ತದೆ” ಎಂದು ಹೇಳಿ ಕೈ ಮುಗಿಯುತ್ತಾ ” ಇದ್ನೆಲ್ಲ ಅರ್ಥ ಮಾಡ್ಕಂಡು ಮನೆ ಮರ್ಯಾದಿ ಕಾಯಿ ತಾಯಿ. ನಾವು ಸತ್ತ್ ಮ್ಯಾಲೆ ಅವ್ನೆ ತಾನೆ ನಿನಗೆ ದಿಕ್ಕು” ಎಂದು ಮಗಳ ಭುಜಕ್ಕೊರಗಿ ಗಳ ಗಳನೆ ಅಳ ತೊಡಗಿದ.

“ನಂಗೊಂದೆರಡ್ ದಿನ ಟೈಮ್ ಕೊಡಪ್ಪಯ್ಯ” ಎಂದು ಹೇಳಿ ಬೀಸುತ್ತಿದ್ದ ಅಕ್ಕಿಯನ್ನು ಅಲ್ಲಿಯೇ ಬಿಟ್ಟು, ಅಟ್ಟ ಏರಿ ಕುಳಿತವಳು ಕೆಳಗಿಳಿಯಲೇ ಇಲ್ಲ.  ರಾತ್ರಿ ಊಟ ಮಾಡಲು ಮಗಳನ್ನು ಕರೆದು ಸಾಕಾದ ನರಸಮ್ಮ ಅಟ್ಟ ಏರಿ ಹೋಗಲಾರದೆ ಮಾರಯ್ಯನನ್ನು “ಒಸಿ ಅವುಳುನ್ನ್  ಕರ್ಕಾಬಾರಪ್ಪ” ಎಂದು ಕಳುಹಿಸಿದಳು. ತುಂಗೆಯ ಕೈ ರುಚಿ ಕಂಡಿದ್ದ ಮಾರಯ್ಯ ಹೆದರುತ್ತಲೇ ಅಟ್ಟಯೇರಿದ. ತುಂಗೆಯಿಂದ ಮಾರು ದೂರದಲ್ಲಿಯೇ ನಿಂತು “ಬಾ ತುಂಗವ್ವ ಊಟುಕ್ಕೆ, ನೀನು ಉಣ್ಣಕ್ಕಿಲ ಅಂದ್ರೆ ನಾನು ಉಣ್ಣಕ್ಕಿಲ ಆಟೆಯ. ನನ್ ಮ್ಯಾಲಿನ ಕ್ವೊಪವ ಆ ತಿನ್ನೊ ಅನ್ನುದ್ ಮ್ಯಾಲ್ಯಾಕ್  ತೋರ್ತಿ. ನಿನ್ ದಮ್ಮಯ್ಯ ಬಾವ್ವ” ಎಂದು ಧೈರ್ಯಮಾಡಿ ಅವಳ ಕಾಲು ಹಿಡಿದ. ಕೊಸರಿ ಕೊಂಡವಳಂತೆ ನಾಟಕವಾಡಿದ ತುಂಗೆಗೆ ಅವನನ್ನು ಕಂಡು ಕನಿಕರ ಮೂಡಿತು. ಕಿರುಗಣ್ಣಿನಲ್ಲಿಯೇ ಅವನನ್ನು ಮೇಲಿನಿಂದ ಕೆಳಗಿನವರೆಗು ಗಮನಿಸಿದಳು.

ಇದನ್ನು ಓದಿದ್ದೀರಾ-https://peepalmedia.com/unpredictable-move-of-bopaiah/http://ಊಹೆಗೂ ನಿಲುಕದ ಬೋಪಯ್ಯನ ನಡೆ

ಅಪ್ಪ ಹೇಳಿದಂತೆ ಕಟ್ಟು ಮಸ್ತಾಗಿದ್ದ ಮಾರಯ್ಯ, ತುಸು ಕಪ್ಪಾಗಿದ್ದರೂ ಲಕ್ಷಣವಾಗಿದ್ದ. ದುಡಿಮೆಯ ಹೊರತು ಬೇರೆ ಯಾವುದರ ಬಗ್ಗೆಯು ತಲೆ ಕೆಡಿಸಿಕೊಳ್ಳದ ಅವನು, ಸಹಜವಾಗಿಯೇ ತುಸು ವಡ್ಡಾಗಿದ್ದ. ಎಣ್ಣೆ ಕಾಣದೆ ಒರಟಾದ ತಲೆ ಕೂದಲು, ಅಡ್ಡಾದಿಡ್ಡಿ ಆಗಿ ಬೆಳೆದಿದ್ದ ಹುಲುಸಾದ ಗಡ್ಡ, ಕೊಳೆ ಮೆತ್ತಿ ಕೊಂಡಿದ್ದ ಬಟ್ಟೆ, ಬ್ಲೇಡು ತಾಕದ ಕೈ ಉಗುರು ಇವೆಲ್ಲವೂ ಅವನ ಚಂದವನ್ನು ಮಸುಕು ಮಾಡಿದ್ದನ್ನು ಕಂಡ ತುಂಗೆ ಒಂದು ನಿರ್ಧಾರಕ್ಕೆ ಬಂದವಳಂತೆ ಪಕ್ಕದಲ್ಲಿದ್ದ ತನ್ನ ಬಟ್ಟೆ ಟ್ರಂಕಿನತ್ತ ಹೆಜ್ಜೆ ಹಾಕಿದಳು. ಸದ್ದಾಗದಂತೆ ಮೆಲ್ಲಗೆ ಅದನ್ನು ತೆರೆದು,  ತನ್ನ ಸೀರೆಯ ಮಡಿಕೆಯೊಳಗೆ ಮಡಿಚಿಟ್ಟಿದ್ದ ಐದು ರೂಪಾಯಿ ನೋಟನ್ನು ಅವನ ಕೈ ಗಿಟ್ಟು “ನಾಳೆ ಚೌರುದಂಗಡಿಗೋಗಿ ಕೂದ್ಲು ಕತ್ರುಸಿ, ಗಡ್ಡ ಬೋಳುಸ್ಕೊಂಡ್ ಬಾ” ಎಂದು ಹೇಳಿ ಹೊಸ ಹುರುಪು ತುಂಬಿ ಕೊಂಡವಳಂತೆ ಅಟ್ಟದಿಂದ ಕೆಳಗಿಳಿದು ಬಂದಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌

Related Articles

ಇತ್ತೀಚಿನ ಸುದ್ದಿಗಳು