Friday, December 19, 2025

ಸತ್ಯ | ನ್ಯಾಯ |ಧರ್ಮ

ಇದು ಸರ್ಕಾರದ ಘೋರ ವೈಫಲ್ಯ: ದೆಹಲಿ ವಾಯು ಮಾಲಿನ್ಯದ ಕುರಿತು ಸುಪ್ರೀಂ ಕೋರ್ಟ್ ಆಕ್ರೋಶ

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (NCR) ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಈ ಕುರಿತು ವಿಚಾರಣೆ ನಡೆಸಿ, ಮಾಲಿನ್ಯದ ವಿರುದ್ಧ ಕೇವಲ ತಾತ್ಕಾಲಿಕ ಕ್ರಮಗಳ ಬದಲಿಗೆ ದೀರ್ಘಕಾಲೀನ ಯೋಜನೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಗುರ್ಗಾಂವ್‌ನ ಎಂಸಿಡಿ ಟೋಲ್‌ಗಳಲ್ಲಿ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವುದರಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ವಾದವನ್ನು ಆಲಿಸಿದ ನ್ಯಾಯಾಲಯ, ಆ ಭಾಗದ ೯ ಟೋಲ್ ಪ್ಲಾಜಾಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಬಗ್ಗೆ ಪರಿಶೀಲಿಸುವಂತೆ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ಗೆ (DMC) ಸೂಚಿಸಿದೆ.

ಇದರೊಂದಿಗೆ, ಮಾಲಿನ್ಯ ನಿಯಂತ್ರಣದ ನಿಬಂಧನೆಗಳಿಂದಾಗಿ ಕೆಲಸ ಕಳೆದುಕೊಂಡಿರುವ ಸುಮಾರು 2.5 ಲಕ್ಷ ನಿರ್ಮಾಣ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆ (DBT) ಮಾಡುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈಗಾಗಲೇ 7,000 ಕಾರ್ಮಿಕರನ್ನು ಗುರುತಿಸಲಾಗಿದ್ದು, ಅವರಿಗೆ ಹಣ ವರ್ಗಾಯಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ವಾಯು ಗುಣಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಬಿಎಸ್-4 (BS-4) ಮಾನದಂಡಕ್ಕಿಂತ ಕಡಿಮೆ ಇರುವ ಹಳೆಯ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಅನುಮತಿ ನೀಡಿದೆ. ಆದರೆ ಬಿಎಸ್-೪ ಅಥವಾ ಅದಕ್ಕಿಂತ ಹೆಚ್ಚಿನ ಮಾನದಂಡದ ಹೊಸ ವಾಹನಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ಪೀಠವು ಸ್ಪಷ್ಟಪಡಿಸಿದೆ. ಮಾಲಿನ್ಯ ಹೆಚ್ಚಾಗಲು ಶ್ರೀಮಂತರ ಜೀವನಶೈಲಿಯೂ ಒಂದು ಕಾರಣ ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿತು.

ಇದೇ ವೇಳೆ, ‘ಡಿಜಿಟಲ್ ಅರೆಸ್ಟ್’ ನಂತಹ ಆನ್‌ಲೈನ್ ವಂಚನೆಗೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಹರಿಯಾಣದ ವೃದ್ಧ ದಂಪತಿಗಳ ದೂರಿನ ಕುರಿತು ವಿಚಾರಣೆ ನಡೆಸಿದ ಪೀಠವು, ಸೈಬರ್ ಅಪರಾಧಿಗಳು ದೇಶದ ಹಣವನ್ನು ವಿದೇಶಕ್ಕೆ ಸಾಗಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತು. ಸೈಬರ್ ಅಪರಾಧಗಳ ವಿರುದ್ಧ ಹೋರಾಡಲು ವಿವಿಧ ಸಚಿವಾಲಯಗಳ ಜಂಟಿ ಸಭೆಯನ್ನು ಕರೆಯಲಾಗುವುದು ಎಂದು ಅಟಾರ್ನಿ ಜನರಲ್ ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page