Monday, July 1, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಮತ್ತೆ ಮತ್ತೆ ಮಾಡುತ್ತಿರುವ ತಪ್ಪು

ಭಾವನಾತ್ಮಕ ವಿಷಯಗಳಿಗೆ ‘ಶೆಲ್ಫ್ ಲೈಫ್’ ಎನ್ನುವುದೊಂದಿದೆ. ಜನರ ನಿತ್ಯ ಬದುಕಿನ ಸಂಕಟಗಳನ್ನು ಅರ್ಥಮಾಡಿಕೊಂಡು ಆ ದಿಕ್ಕಿನತ್ತ ತನ್ನ ಯೋಚನೆ ಯೋಜನೆಗಳನ್ನು ಬದಲಾಯಿಸಿಕೊಳ್ಳದಿದ್ದರೆ ಬಿಜೆಪಿ ಇನ್ನಷ್ಟು ರಾಜ್ಯಗಳನ್ನು ಕಳೆದುಕೊಳ್ಳುವುದನ್ನು ಯಾರಿಂದಲೂ ತಡೆಯಲಾಗದು. ಇದಕ್ಕೆ ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ ಮಧ‍್ಯಪ್ರದೇಶ ಚುನಾವಣೆಯೂ ಸಾಕ್ಷಿಯಾಗಲಿದೆ –ಶ್ರೀನಿವಾಸ ಕಾರ್ಕಳ

ಒಂದಂತೂ ಸತ್ಯ. ದೇಶದ ಆರ್ಥಿಕ ಸ್ಥಿತಿ ಸಮಾಧಾನಕರವಾಗಿಲ್ಲ. ವಿಶ್ವಬ್ಯಾಂಕ್ ವರದಿಯ ಪ್ರಕಾರ 2022 ರಲ್ಲಿ ಭಾರತದ ಯುವ ನಿರುದ್ಯೋಗ ದರ ಶೇ. 23.2 ರಷ್ಟಿತ್ತು. ಯೆಮನ್ (25.6%), ಇರಾನ್ (26%), ಲೆಬನಾನ್ (25.5%), ಆನಂತರದ ಸ್ಥಾನ ಭಾರತದ್ದು. ಬಾಂಗ್ಲಾದೇಶದಲ್ಲಿ ಈ ದರ ಇರುವುದು ಕೇವಲ 12.9%.

ಸ್ವಾತಂತ್ರ್ಯದ  67 ವರ್ಷಗಳಲ್ಲಿ ಭಾರತವು 55 ಲಕ್ಷ ಕೋಟಿ ರುಪಾಯಿ ಸಾಲ ಮಾಡಿದ್ದರೆ, ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಬಳಿಕ ಕೇವಲ 9 ವರ್ಷಗಳಲ್ಲಿ ಭಾರತ 100 ಲಕ್ಷ ಕೋಟಿ ಸಾಲ ಮಾಡಿದೆ. ಅಂದರೆ ಈಗ ದೇಶದ ಮೇಲಿರುವ ಒಟ್ಟು ಸಾಲದ ಹೊರೆ 155 ಲಕ್ಷ ಕೋಟಿ! ‌

ಜಿಡಿಪಿ ಬೆಳವಣಿಗೆ ದರ 7% ದ ಸುತ್ತ ಸುತ್ತುತ್ತಿದೆ. ಸದಾ ಸುಳ್ಳನ್ನು ಹೇಳುವ ಸರಕಾರ ನೀಡುವ ಜಿಡಿಪಿ ಬೆಳವಣಿಗೆ ದರವನ್ನು ಯಾವತ್ತೂ ನಂಬಬೇಡಿ, ನಿಮಗೆ ನಿಜವಾದ ಜಿಡಿಪಿ ಬೆಳವಣಿಗೆ ದರ ಬೇಕಾದರೆ ಸರಕಾರ ಘೋಷಿಸುವ ಅಂಕಿಅಂಶದಿಂದ 2% ಕಡಿಮೆ ಮಾಡಿ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಅಂದರೆ ನಿಜವಾದ ಜಿಡಿಪಿ ಬೆಳವಣಿಗೆ ದರ ಈಗಲೂ ಸುಮಾರು 5%.

ತಪ್ಪು ಆರ್ಥಿಕ ನೀತಿಗಳು

ಭಾರತದ ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣ ಕೋವಿಡ್ ಮಹಾಮಾರಿ ಎಂದು ಕೆಲವರು ಸಮರ್ಥನೆ ಒದಗಿಸಲು ಯತ್ನಿಸುತ್ತಿದ್ದಾರೆ. ಆದರೆ ದೇಶದ ಆರ್ಥಿಕ ಸ್ಥಿತಿ ಹದಗೆಡಲು ಆರಂಭವಾದುದು ಕೋವಿಡ್ ಬಳಿಕವಲ್ಲ. 2016 ರ ನೋಟು ನಿಷೇಧದ ಬೆನ್ನಿಗೇ ಇದು ಆರಂಭವಾಗಿತ್ತು. ಕೋವಿಡ್ ಆರಂಭಕ್ಕೆ ಮುನ್ನದ ವರ್ಷಗಳ ದರವನ್ನು ಪರಾಂಬರಿಸಿದರೆ ಇದು ಯಾರಿಗೂ ಅರ್ಥವಾದೀತು. ಅಂದರೆ ಆರ್ಥಿಕತೆ ಇಳಿಜಾರಿನ ಹಾದಿಯಲ್ಲಿ ಸಾಗಲು ಕಾರಣ ಮೋದಿ ಸರಕಾರದ ತಪ್ಪು ಆರ್ಥಿಕ ನೀತಿಗಳು. ಕೋವಿಡ್ ಬೆನ್ನಿಗೆ ಘೋಷಿಸಿದ ಅತಾರ್ಕಿಕ, ಅವೈಜ್ಞಾನಿಕ ಮತ್ತು ಕ್ರೂರ ಲಾಕ್ ಡೌನ್ ಈ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು ಅಷ್ಟೇ.

ಸರಕಾರದ ದುಡುಕಿನ ನಿರ್ಧಾರಗಳ ಕಾರಣ ಅನೇಕ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು, ಹೊಟೇಲುಗಳು, ಅಂಗಡಿಗಳು ಮುಚ್ಚಿಹೋದವು. ಹೊಸ ಉದ್ಯೋಗ ಸೃಷ್ಟಿಯಾಗಲಿಲ್ಲ, ಇದ್ದ ಉದ್ಯೋಗವೂ ಹೋಯಿತು. ಉದ್ಯೋಗ ಇಲ್ಲವಾಗಿ ಸಂಪಾದನೆ ಇಳಿಮುಖವಾದಾಗ, ಜನರ ಕೊಳ್ಳುವ ಶಕ್ತಿಯೂ ಕಡಿಮೆಯಾಯಿತು. ಜನರ ಕೊಳ್ಳುವ ಶಕ್ತಿ ಕಡಿಮೆಯಾದಾಗ, ಇಡಿಯ ಆರ್ಥಿಕತೆಯ ಚಕ್ರದ ತಿರುಗುವಿಕೆ ನಿಂತುಹೋಗುವುದು ಸ್ವಾಭಾವಿಕ. ‘ಇಂತಹ ಬಿಕ್ಕಟ್ಟಿನ ಹೊತ್ತಿನಲ್ಲಿ ಬಡ ಜನರ ಕೈಗೆ ನೇರವಾಗಿ ಹಣ ಹಾಕಿ’ ಎಂದು ವಿಶ‍್ವದ ಖ್ಯಾತ ಅರ್ಥಶಾಸ್ತ್ರಜ್ಞರು ಹೇಳುತ್ತಲೇ ಬಂದಿದ್ದಾರೆ. ದೇಶದ ನೂರಾರು ದೇಶಗಳು ಈ ನೀತಿಯನ್ನು ಪಾಲಿಸಿ ತಮ್ಮ ಆರ್ಥಿಕತೆಯನ್ನು ಸುಧಾರಿಸಿಕೊಂಡಿವೆ ಕೂಡಾ.

2019 ರ ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇದೇ ಹಿನ್ನೆಲೆಯಲ್ಲಿ ‘ನ್ಯಾಯ’ ಯೋಜನೆಯನ್ನು ಘೋಷಿಸಿದರು. “ದೊಡ್ಡ ದೊಡ್ಡ ಉದ್ಯಮಿಗಳಿಗಲ್ಲ, ಬಡ ಜನರ ಕೈಗೆ ನೇರ ಹಣ ವರ್ಗಾಯಿಸಿ, ಅವರ ಕೊಳ್ಳುವ ಶಕ್ತಿ ಹೆಚ್ಚಿಸಿ, ಆಗ ಆರ್ಥಿಕತೆಯ ಚಕ್ರ ತಿರುಗುತ್ತದೆ ನೋಡಿ” ಅಂದರು. ಆದರೆ ಜನರು ಇದನ್ನು ಅರ್ಥಮಾಡಿಕೊಳ್ಳಲಿಲ್ಲ. ಕಾಂಗ್ರೆಸ್ ಗೆ ಸೋಲಾಯಿತು.

ಆದರೆ, ಮೋದಿಯವರ ನೇತೃತ್ವದ ಒಕ್ಕೂಟ ಸರಕಾರ ತನ್ನ ಆರ್ಥಿಕ ನೀತಿಯನ್ನು ಬದಲಾಯಿಸಿಕೊಳ್ಳಲೇ ಇಲ್ಲ. ದೊಡ್ಡ ಉದ್ಯಮಿಗಳಿಗೆ ಸಾಲ ಮನ್ನಾದ ರೂಪದಲ್ಲಿ 10 ಲಕ್ಷ ಕೋಟಿಯಷ್ಟು ಆರ್ಥಿಕ ನೆರವನ್ನು ನೀಡಿದ ಸರಕಾರ ಜನರ ಕೈಗೆ ಒಂದು ಪೈಸೆಯನ್ನೂ ಹಾಕಲಿಲ್ಲ.

ಕರ್ನಾಟಕ ರವಾನಿಸಿದ ಸಂದೇಶ

ಇತ್ತೀಚೆಗೆ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ದೇಶದ ಆರ್ಥಿಕ ಸ್ಥಿತಿಯ ವಾಸ್ತವಿಕತೆಯ ನೆಲೆಯಲ್ಲಿ ಜನರ ಬದುಕಿನ ಬಗ್ಗೆ ಮಾತನಾಡಬೇಕಿದ್ದ ಬಿಜೆಪಿಗೆ ಹಿಂದೂ ಮುಸ್ಲಿಂ ವಿಚಾರಗಳು, ಸಮಾನ ನಾಗರಿಕ ಸಂಹಿತೆ, ಎನ್ ಆರ್ ಸಿ, ಜೈ ಬಜರಂಗಬಲಿ ಗಳೇ ಮುಖ್ಯವಾದವು. ಇದೇ ಹೊತ್ತಿನಲ್ಲಿ ಜನರ ನಾಡಿ ಮಿಡಿತವನ್ನು ಬಹುಬೇಗ ಅರ್ಥಮಾಡಿಕೊಂಡ ಕಾಂಗ್ರೆಸ್, ಎಲ್ಲ ಜನರಿಗೂ ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕವಾಗಿ ನೆರವಾಗುವ ಮತ್ತು ಆರ್ಥಿಕತೆಯ ಮೂಲಕ  ಅವರನ್ನು ಸಾಮಾಜಿಕವಾಗಿ ಸಬಲೀಕರಿಸುವ ಯೋಜನೆಗಳನ್ನು ಘೋಷಿಸಿತು. ಪರಿಣಾಮವಾಗಿ, ಜನ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. 224 ಸದಸ್ಯಬಲದ ವಿಧಾನಸಭೆಯಲ್ಲಿ 135 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತು. ಬಿಜೆಪಿಗೆ ಸಿಕ್ಕಿದ್ದು ಕೇವಲ 66 ಸ್ಥಾನಗಳು.

ಈ ಸೋಲಿನ ಆನಂತರವಾದರೂ ಬಿಜೆಪಿಗೆ ಜ್ಞಾನೋದಯವಾಗಬೇಕಿತ್ತು. ಹಿಂದೂ ಮುಸ್ಲಿಂ, ಧರ್ಮ, ಮಂದಿರ ಇತ್ಯಾದಿ ವಿಷಯಗಳು ಬಹುಕಾಲ ಕೈಹಿಡಿಯುವುದಿಲ್ಲ, ಜನರಿಗೆ ತಮ್ಮ ನಿತ್ಯ ಬದುಕಿನ ವಿಷಯಗಳು ಬಹಳ ಮುಖ್ಯ, ರಾಮ ಮಂದಿರಕ್ಕಿಂತಲೂ ಅವರಿಗೆ ಗ್ಯಾಸ್ ಸಿಲಿಂಡರ್ ದರ ದೊಡ್ಡದು  ಎಂಬುದು ಅರ್ಥವಾಗಬೇಕಿತ್ತು. ಆದರೆ ಎಂದೂ ಜನಕಲ್ಯಾಣ ಯೋಜನೆಗಳು, ಜನರ ನಿಜಬದುಕಿನ ವಿಚಾರಗಳು ತನ್ನ ಸಿದ್ಧಾಂತದ ಭಾಗವಾಗಿಯೇ ಇರದ ಬಿಜೆಪಿ ಇದನ್ನು ಅರ್ಥಮಾಡಿಕೊಳ್ಳದಿದ್ದುದರಲ್ಲಿ ಅಚ್ಚರಿಯೇನೂ ಇಲ್ಲ. ಅವರದ್ದು ಸದಾ ದ್ವೇಷದ ನೆಲೆಯಿಂದ ಹೊರಟ ಭಾವನಾತ್ಮಕ ವಿಚಾರಗಳ ರಾಜಕಾರಣ. ಅವರಿಗೆ ದ್ವೇಷಿಸಿ ಗೊತ್ತೇ ಹೊರತು, ಪ್ರೀತಿಸಿ ಗೊತ್ತಿಲ್ಲ. ಕೆಡವಿ ಗೊತ್ತೇ ಹೊರತು ಕಟ್ಟಿ ಗೊತ್ತಿಲ್ಲ. ಈಗಲೂ ಅದು ಮುಂದುವರಿಸಿರುವುದು ಅದೇ ದ್ವೇಷದ ರಾಜಕಾರಣ ಮತ್ತು ಬಳಸುತ್ತಿರುವುದು ಅವೇ ಕುಟಿಲ ತಂತ್ರಗಳನ್ನು.

ಕುತರ್ಕಗಳು

ಕಾಂಗ್ರೆಸ್ ನ ಜನಕಲ್ಯಾಣ ಯೋಜನೆಗಳ ಬಗ್ಗೆ ಬಿಜೆಪಿಯ ವಾದಗಳಾದರೂ ಹೇಗಿದ್ದವು? “ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿಗಳು ಮಹಾ ಸುಳ್ಳು ಮತ್ತು ಮೋಸ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ಗ್ಯಾರಂಟಿಯಿಲ್ಲ, ಈ ಗ್ಯಾರಂಟಿಗಳು ಜಾರಿಗೆ ಬರುವ ಗ್ಯಾರಂಟಿ ಇದೆಯೇ? ಈ ಭಾಗ್ಯ ಯೋಜನೆಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಪಾತಾಳಕ್ಕೆ ತಲಪಲಿದೆ, ಕರ್ನಾಟಕವು ಶ್ರೀಲಂಕಾ, ಪಾಕಿಸ್ತಾನದಂತಾಗಲಿದೆ, ಭಾಗ್ಯಗಳಿಗೆ ಯಾಕೆ ಷರತ್ತು ಹಾಕುತ್ತೀರಿ? ಎಲ್ಲರಿಗೂ ಅದನ್ನು ಕೊಡಿ, ಉಚಿತ ಪ್ರಯಾಣ ಸರಕಾರಿ ಬಸ್ ನಲ್ಲಿ ಮಾತ್ರ ಯಾಕೆ? ಖಾಸಗಿ ಬಸ್ ನಲ್ಲಿಯೂ ಕೊಡಿ, ಉಚಿತ ಪ್ರಯಾಣದ ಅವಕಾಶ ಮಹಿಳೆಯರಿಗೆ ಕೊಟ್ಟರೆ ಸಾಕಾ? ಪುರುಷರಿಗೆ ಬೇಡವಾ? ಈ ಉಚಿತಗಳಿಗಾಗಿ ಬೇರೆ ವಸ್ತುಗಳ ಮೇಲೆ ತೆರಿಗೆ ಹಾಕಲಿದ್ದೀರಿ..” ಹೀಗೆ. ‘ಕೈಲಾಗದವನು ಮೈ ಪರಚಿಕೊಂಡನಂತೆ’ ಎಂಬಂತೆ ಈ ಟೀಕೆ ಮತ್ತು ವಾದಗಳ ಹಿಂದೆ ಒಂದು ತರ್ಕವೆಂಬುದೇ ಇರಲಿಲ್ಲ. ರಾಜ್ಯದ ಆರ್ಥಿಕತೆ ನೆಲಕಚ್ಚಲಿದೆ ಎಂದು ರಾಜ್ಯದ ಖಜಾನೆಯ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಪಕ್ಷವೇ ಉಚಿತಗಳನ್ನು ಎಲ್ಲರಿಗೂ ಷರತ್ತು ರಹಿತವಾಗಿ ಕೊಡಿ ಎಂದು ಹೇಗೆ ಹೇಳುತ್ತದೆ?!

ಐದು ಗ್ಯಾರಂಟಿಗಳ ಪೈಕಿ ಈಗ ಒಂದು ಗ್ಯಾರಂಟಿಗೆ ಸರಕಾರ ಚಾಲನೆ ನೀಡಿಯಾಗಿದೆ. ಸರಕಾರಿ ಸಾಮಾನ್ಯ ಬಸ್ ಗಳಲ್ಲಿ ಮಹಿಳೆಯರು ಕರ್ನಾಟಕದ ಒಳಗಡೆ ಎಲ್ಲಿ ಬೇಕಾದರೂ ಉಚಿತವಾಗಿ ಸಂಚರಿಸಬಹುದು. ಲಕ್ಷ ದುಡಿಯುವವರಿಗೆ ಈ ಬಸ್ ಟಿಕೆಟ್ ಮೊತ್ತ ಏನೂ ಅಲ್ಲದಿರಬಹುದು. ಆದರೆ ದಿನಕ್ಕೆ ಐನೂರು ರುಪಾಯಿಯ ಸಣ್ಣ ಸಂಬಳ ಪಡೆಯುವ ಕಾರ್ಮಿಕರಿಗೆ ನೂರು ರುಪಾಯಿ ಉಳಿತಾಯ ಎಂದರೆ ಅದು ಬಹುದೊಡ್ಡ ಮೊತ್ತ. ಬರೇ ಹಣ ಎಂದಲ್ಲ, ಅದು ಹೆಣ್ಣುಮಕ್ಕಳಿಗೆ ಕೊಡುವ ಆತ್ಮವಿಶ್ವಾಸವೂ ಬಹುದೊಡ್ಡದು. “ಬಸ್ ಪ್ರಯಾಣ ಉಚಿತವಾಗಿರುವುದರಿಂದ ನಾನು ಇನ್ನೂ ಒಂದೆರಡು ಹೆಚ್ಚು ಮನೆಗಳಲ್ಲಿ ದುಡಿದು ಹೆಚ್ಚು ಹಣ ಸಂಪಾದಿಸುತ್ತೇನೆ. ನನ್ನ ಕೈಯಲ್ಲಿ 2,000 ರುಪಾಯಿ ಉಳಿದರೆ ನಾನು ಮನೆ ಮಂದಿಗೆ ಒಳ್ಳೆಯ ಬಟ್ಟೆ ಖರೀದಿಸುತ್ತೇನೆ, ಮಗುವನ್ನು ಟ್ಯೂಶನ್ ಗೆ ಹಾಕುತ್ತೇನೆ, ಮಗುವನ್ನು ಒಳ್ಳೆಯ ಶಾಲೆಯಲ್ಲಿ ಓದಿಸುತ್ತೇನೆ” ಎನ್ನುವ ನೂರಾರು ಮಂದಿಯನ್ನು ನೀವು ಈಗ ನೋಡಬಹುದು. ಬಡವರಿಗೆ ಒಂದು ಸಣ್ಣ ಹಣಕಾಸಿನ ನೆರವಿನ ಶಕ್ತಿ ಇದು.

ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಸಮಾಜದ ಯಾವುದೇ ಒಂದು ವರ್ಗವನ್ನು ಗುರಿ ಮಾಡಿಲ್ಲ. ಅವುಗಳಿಂದ ಎಲ್ಲರಿಗೂ ಪ್ರಯೋಜನವಿದೆ. ಹೆಣ್ಣುಮಕ್ಕಳ ಸಂಚಾರ ಉಚಿತ ಅಂದರೆ, ಅಷ್ಟು ಹಣ ಉಳಿಯುವುದು ಇಡೀ ಕುಟುಂಬಕ್ಕೆ. ಮನೆ ಯಜಮಾನಿಗೆ 2000 ರುಪಾಯಿ ಅಂದರೂ ಅದು ಸಲ್ಲುವುದು ಇಡೀ ಕುಟುಂಬಕ್ಕೆ. ಅನ್ನಭಾಗ್ಯ, ಉಚಿತ ವಿದ್ಯುತ್ ಕೂಡಾ ಹೀಗೆಯೇ.

ಸಬಲೀಕರಣದ ದಿಟ್ಟ ಹೆಜ್ಜೆ

ಜನರ, ಅದರಲ್ಲೂ ಮುಖ್ಯವಾಗಿ ಮಹಿಳೆಯರ ಸಬಲೀಕರಣದ ಹಾದಿಯಲ್ಲಿ ಇಂತಹ ಸಣ್ಣ ಸಣ್ಣ ಕಾರ್ಯಕ್ರಮಗಳ ಪಾತ್ರ ಬಹಳ ದೊಡ್ಡದು. ಇದರಿಂದ ಮಹಾ ಎಂದರೆ ಎಷ್ಟು ಆರ್ಥಿಕ ಹೊರೆಯಾದೀತು? ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುವ ಪ್ರಕಾರ, ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಲು ಅಂದಾಜು 59,000 ಕೋಟಿ ಬೇಕಾದೀತು. ಆದರೆ ಕರ್ನಾಟಕದ ಬಜೆಟ್ ಗಾತ್ರ 3 ಲಕ್ಷ ಕೋಟಿಗೂ ದೊಡ್ಡದಿದೆ ಮತ್ತು ಇದು ಬೆಳೆಯುತ್ತಲೇ ಇರುತ್ತದೆ. ಅಲ್ಲದೆ, ಬಜೆಟ್ ನಲ್ಲಿ ಅನೇಕ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಹತ್ತಿರ ಹತ್ತಿರ ಒಂದು ಲಕ್ಷ ಕೋಟಿ ಹಣ ಮೀಸಲಿಡುವಾಗ ಈ ವೆಚ್ಚವನ್ನು ಅದರೊಳಗೇ ತಂದು ನಿಭಾಯಿಸುವುದು ಬಹಳ ಕಷ್ಟವಲ್ಲ.

ಇಲ್ಲಿ ಹಣಕಾಸಿನ ಹೊರೆಗಿಂತಲೂ ಅದು ಜನರ ಆರ್ಥಿಕ, ಸಾಮಾಜಿಕ, ರಾಜಕೀಯ ಸಬಲೀಕರಣದಲ್ಲಿ ವಹಿಸುವ ಪಾತ್ರವನ್ನು ನಾವು ಗಮನಿಸಬೇಕು. ಹೊಟ್ಟೆ ತುಂಬುವಷ್ಟು ಆಹಾರ ಅಂದರೆ, ಉತ್ತಮ ಆರೋಗ್ಯ, ಉತ್ತಮ ಆರೋಗ್ಯ ಎಂದರೆ ಆಸ್ಪತ್ರೆಗೆ ಮಾಡುವ ಖರ್ಚಿನಲ್ಲಿ ಉಳಿತಾಯ, ಉತ್ತಮ ಆರೋಗ್ಯ ಎಂದರೆ ಹೆಚ್ಚುವ ಉತ್ಪಾದಕತೆ, ಹೀಗೆ ಇದು ಸಾವಿರಗಳ ಹೂಡಿಕೆಯಲ್ಲಿ ನಾಡಿಗೆ ಲಕ್ಷಗಳನ್ನು ಮರಳಿಸುವ ಕಾರ್ಯಕ್ರಮ. ಇಂತಹ ಜನಕಲ್ಯಾಣ ಯೋಜನೆಗಳನ್ನು ಮೊದಲು ಆರಂಭಿಸಿದ್ದು ತಮಿಳುನಾಡು. ಆ ರಾಜ್ಯ ಈಗ ಆರ್ಥಿಕತೆ, ಮಾನವಾಭಿವೃದ್ಧಿ ಸೂಚ್ಯಂಕ ಹೀಗೆ ಎಲ್ಲದರಲ್ಲೂ ಮುಂದಿದೆ.

ಇದನ್ನು ಅರ್ಥಮಾಡಿಕೊಳ್ಳದೆ ಅತಾರ್ಕಿಕ ವಾದಗಳನ್ನು ಮಂಡಿಸುವ, ಆಮೂಲಕ ಬಡವರನ್ನು ಹಂಗಿಸುವ, ಅವರ ಬಗ್ಗೆ ಕುಹಕವಾಡುವ ಯತ್ನಗಳು ಬಿಜೆಪಿಗೆ ಮತ್ತಷ್ಟು ಮುಳುವಾಗಲಿವೆ. ಭಾವನಾತ್ಮಕ ವಿಷಯಗಳಿಗೆ ‘ಶೆಲ್ಫ್ ಲೈಫ್’ ಎನ್ನುವುದೊಂದಿದೆ. ಜನರ ನಿತ್ಯ ಬದುಕಿನ ಸಂಕಟಗಳನ್ನು ಅರ್ಥಮಾಡಿಕೊಂಡು ಆ ದಿಕ್ಕಿನತ್ತ ತನ್ನ ಯೋಚನೆ ಯೋಜನೆಗಳನ್ನು ಬದಲಾಯಿಸಿಕೊಳ್ಳದಿದ್ದರೆ ಬಿಜೆಪಿ ಇನ್ನಷ್ಟು ರಾಜ್ಯಗಳನ್ನು ಕಳೆದುಕೊಳ್ಳುವುದನ್ನು ಯಾರಿಂದಲೂ ತಡೆಯಲಾಗದು. ಇದಕ್ಕೆ ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ ಮಧ‍್ಯಪ್ರದೇಶ ಚುನಾವಣೆಯೂ ಸಾಕ್ಷಿಯಾಗಲಿದೆ.

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಇದನ್ನೂ ಓದಿ-ಬಡವರ ಬಗ್ಗೆ ಯಾಕಿಷ್ಟು ದ್ವೇಷ?!

Related Articles

ಇತ್ತೀಚಿನ ಸುದ್ದಿಗಳು