Thursday, March 13, 2025

ಸತ್ಯ | ನ್ಯಾಯ |ಧರ್ಮ

ಇದು ರೀಲ್‌ ಅಲ್ಲ, ರೈಲ್! ರೈಲ್ವೇ ಮಸೂದೆ ಚರ್ಚೆಯ ನಡುವೆ ಸಚಿವರ ‘ದುರಹಂಕಾರ’ ಕ್ಕೆ ವಿಪಕ್ಷಗಳಿಂದ ಸಭಾತ್ಯಾಗ!

ಕಳೆದ ತಿಂಗಳು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾಲ್ತುಳಿತದ ನಂತರ ಸಂಸತ್ತಿನಲ್ಲಿ ತಮ್ಮ ಮೊದಲ ಭಾಷಣದಲ್ಲಿ, ಹೆಚ್ಚುತ್ತಿರುವ ರೈಲ್ವೆ ಅಪಘಾತಗಳ ಬಗ್ಗೆ ಟೀಕೆಗಳನ್ನು ಎದುರಿಸುತ್ತಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಸುರಕ್ಷತೆಯನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದರು. ಕುಸಿಯುತ್ತಿರುವ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿರೋಧ ಪಕ್ಷದ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ ವೈಷ್ಣವ್, ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಆಡಳಿತವನ್ನು ಮುಂದಿಟ್ಟುಕೊಂಡು, ಮೋದಿ ಆಡಳಿತದಲ್ಲಿ ರೈಲ್ವೆ ಹೂಡಿಕೆ ಹೆಚ್ಚಾಗಿದೆ ಎಂದು ಹೇಳಿದರು. ಅಭಿವೃದ್ಧಿ ಹೊಂದಿದ ದೇಶಗಳು ಸಾಧಿಸಲು 20 ವರ್ಷಗಳ ಅಗತ್ಯವಿರುವ ರೈಲು ಸುರಕ್ಷತೆಯ ಮಟ್ಟವನ್ನು ಭಾರತ ಐದು ವರ್ಷಗಳಲ್ಲಿ ಸಾಧಿಸುತ್ತದೆ ಮತ್ತು ಇದನ್ನು ಇದಕ್ಕ ಬೆಂಬಲ ನೀಡದವರಿಗೆ ದೇಶವು “ವಿದಾಯ” ಹೇಳುತ್ತದೆ ಎಂದು ಅವರು ಹೇಳಿದರು.

ಸೋಮವಾರ (ಮಾರ್ಚ್ 10) ರೈಲ್ವೆ ತಿದ್ದುಪಡಿ ಮಸೂದೆ (2024) ಮೇಲಿನ ಚರ್ಚೆಗೆ ಉತ್ತರಿಸುವಾಗ ರಾಜ್ಯಸಭೆಯಲ್ಲಿ ವೈಷ್ಣವ್ ಅವರು ಈ ಹೇಳಿಕೆ ನೀಡಿದರು. ಡಿಸೆಂಬರ್‌ನಲ್ಲಿ ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ ಈ ಮಸೂದೆಯು ಭಾರತೀಯ ರೈಲ್ವೆ ಮಂಡಳಿ ಕಾಯ್ದೆ, 1905 ಅನ್ನು ರದ್ದುಗೊಳಿಸುತ್ತದೆ ಮತ್ತು ರೈಲ್ವೆ ಮಂಡಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಅಧಿಕಾರಗಳು ಹಾಗೂ ಕಾರ್ಯಗಳ ನಿಬಂಧನೆಗಳನ್ನು ರೈಲ್ವೆ ಕಾಯ್ದೆ, 1989 ರಲ್ಲಿ ಸೇರಿಸುತ್ತದೆ. ಸೋಮವಾರ ಸಂಜೆ ರಾಜ್ಯಸಭೆಯು ಈ ಮಸೂದೆಯನ್ನು ಅಂಗೀಕರಿಸಿತು. ಇದನ್ನು ಸಚಿವರ “ದುರಹಂಕಾರ” ಎಂದು ಟೀಕಿಸಿ ಅವರು ಉತ್ತರ ನೀಡುವ ಸಮಯದಲ್ಲಿ ವಿರೋಧ ಪಕ್ಷವು ಸಭಾತ್ಯಾಗ ಮಾಡಿತು, ಆದರೆ ಕೆಲವು ಸದಸ್ಯರು ನಂತರ ತಿದ್ದುಪಡಿಗಳನ್ನು ಮಂಡಿಸಬೇಕಾದಾಗ ಹಿಂತಿರುಗಿದರು.

“ಹೌದು, ನಾನು ಒಬ್ಬ ಅಧಿಕಾರಿ ಮತ್ತು ತಂತ್ರಜ್ಞ. ಆದರೆ ನಾನು ದೇಶದ ಯಾವುದೇ ರಾಜಕಾರಣಿಗಿಂತ ಕಡಿಮೆ ಬದ್ಧನಲ್ಲ. ನನ್ನ ಬದ್ಧತೆಯಲ್ಲಿ ಸಮಸ್ಯೆ ಇದ್ದರೆ, ಬೆರಳು ಎತ್ತಿ ತೋರಿಸಿ, ಇಲ್ಲದಿದ್ದರೆ ನಿಮಗೆ ಬೆರಳು ತೋರಿಸುವ ಹಕ್ಕಿಲ್ಲ” ಎಂದು ವೈಷ್ಣವ್ ತಮ್ಮ ಉತ್ತರದ ಸಮಯದಲ್ಲಿ ಹೇಳಿದರು.

‘ನಿಮಗೆ ಅಧಿಕಾರಶಾಹಿ ಮನಸ್ಥಿತಿ ಇದೆ’

ಚರ್ಚೆಯ ಮೊದಲು, ಕಾಂಗ್ರೆಸ್ ಸಂಸದ ವಿವೇಕ್ ತಂಖಾ ಅವರು ಇತ್ತೀಚಿನ ರೈಲ್ವೆ ಅಪಘಾತಗಳನ್ನು – 2023 ರಲ್ಲಿ 200 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಬಾಲಸೋರ್‌ನಲ್ಲಿ ಸಂಭವಿಸಿದ ಅಪಘಾತದಿಂದ ಹಿಡಿದು ಕಳೆದ ತಿಂಗಳು ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದವರೆಗೆ – ಎತ್ತಿ ತೋರಿಸಿದರು ಮತ್ತು ಸಚಿವರು ಒಬ್ಬ ಅಧಿಕಾರಿಯಾಗಿ ರಾಜಕೀಯ ಮುಕ್ತತೆಯ ಕೊರತೆಯನ್ನು ಹೊಂದಿದ್ದಾರೆ ಎಂದು ಹೇಳಿದರು.

“ನೀವು ತಂತ್ರಜ್ಞಾನವನ್ನು ಪ್ರೀತಿಸುತ್ತೀರಿ. ನೀವು ಟ್ವಿಟರ್‌ನಲ್ಲಿ ತಕ್ಷಣ ಪ್ರತಿಕ್ರಿಯಿಸುತ್ತೀರಿ [ಈಗ X]. ನೀವು ಅಧಿಕಾರಶಾಹಿ ಮನಸ್ಥಿತಿ ಮತ್ತು ಇನೋವೇಟಿವ್ ಮನಸ್ಥಿತಿಯನ್ನು ಹೊಂದಿದ್ದೀರಿ. ಆದರೆ ನಿಮಗೆ ರಾಜಕೀಯ ಮುಕ್ತತೆಯ ಕೊರತೆಯಿದೆ‌,” ಎಂದು ತಂಖಾ ಹೇಳಿದರು.

“ಎಲ್ಲ ತಂತ್ರಜ್ಞಾನಗಳಿದ್ದರೂ, ಈ ಘಟನೆಗಳು ಹೇಗೆ ನಡೆಯುತ್ತಿವೆ? ಹೋಳಿ ಬರುತ್ತಿದೆ, ಪ್ರತಿ ಹಬ್ಬದಲ್ಲೂ ನಾವು ಇದನ್ನು ನೋಡುತ್ತೇವೆಯೇ? ಕಳೆದ 11 ವರ್ಷಗಳಲ್ಲಿ ನೀವು ಏನು ಸಾಧಿಸಿದ್ದೀರಿ? ಜವಾಬ್ದಾರಿ ಕೆಲವು ಅಧಿಕಾರಿಗಳಿಗೆ ಸೀಮಿತವಾಗಿದೆಯೇ? ಕುಂಭಮೇಳಕ್ಕೆ ಲಕ್ಷಾಂತರ ಜನರು ಹೋಗುತ್ತಿದ್ದಾರೆಂದು ಎಲ್ಲರಿಗೂ ತಿಳಿದಿತ್ತು ಆದರೆ ಬೇರೆ ಯಾರೂ ಹೇಗೆ ಜವಾಬ್ದಾರರಾಗಲು ಸಾಧ್ಯವಿಲ್ಲ?” 

ತಾನು ಯಾರ ರಾಜೀನಾಮೆಯನ್ನೂ ಕೇಳುತ್ತಿಲ್ಲ, ಆದರೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರಂತಹ ಹಿಂದಿನ ರೈಲ್ವೆ ಸಚಿವರು ರೈಲು ಅಪಘಾತಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು ಎಂದು ತಂಖಾ ಹೇಳಿದರು.

‘ಜವಾಬ್ದಾರಿಗಾಗಿ ಕರೆ’

ಚರ್ಚೆಯ ಸಮಯದಲ್ಲಿ ವಿರೋಧ ಪಕ್ಷದ ಸದಸ್ಯರು ಮಸೂದೆಯು ಭಾರತೀಯ ರೈಲ್ವೆಯನ್ನು ಸುಧಾರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದರು ಮತ್ತು ಹೆಚ್ಚುತ್ತಿರುವ ರೈಲ್ವೆ ಅಪಘಾತಗಳಿಗೆ ಹೊಣೆಗಾರಿಕೆಯನ್ನು ಹೊರುವಂತೆ ಒತ್ತಾಯಿಸಿದರು ಮತ್ತು ಶಾಸನದ ಮೂಲಕ ರೈಲ್ವೆ ಮಂಡಳಿಯ ಕೇಂದ್ರೀಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದರು, ಸರ್ಕಾರವು ಅದರ ನಿಯಂತ್ರಣವನ್ನು ವಹಿಸಿಕೊಂಡಿದೆ ಎಂದು ಆರೋಪಿಸಿದರು.

ತೃಣಮೂಲ ಕಾಂಗ್ರೆಸ್ ಸಂಸದೆ ಸುಶ್ಮಿತಾ ದೇವ್, ಈ ಮಸೂದೆಯು ಎನ್‌ಡಿಎ ಸರ್ಕಾರವು “ನಿರ್ಲಕ್ಷ್ಯ ಮತ್ತು ಅದಕ್ಷತೆಗೆ ಹೊಣೆಗಾರಿಕೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ, ಅವರು ಭಾರತದ ಜನರಿಗೆ ಆದ್ಯತೆ ನೀಡುವುದಿಲ್ಲ,” ಎಂಬ ರಾಜಕೀಯ ಸಂದೇಶವನ್ನು ನೀಡುತ್ತದೆ ಎಂದು ಹೇಳಿದರು.

“ಒಂದು ಅಪಘಾತ ಸಂಭವಿಸಿದಾಗ, ಜನರು ಸಾಯುವುದನ್ನು ಮತ್ತು ಗಾಯಗೊಳ್ಳುವುದನ್ನು ನಾವು ನೋಡಿದಾಗ, ‘ಗೌರವಾನ್ವಿತ ಸಚಿವರ ಹೊಣೆಗಾರಿಕೆ ಏನು?’ ಎಂದು ನಾವು ಯೋಚಿಸುವ ಸಮಯ ಅದು. ಇಂದು 1989 ರ ಕಾಯ್ದೆಯು ಸಾರ್ವಭೌಮ ವಿನಾಯಿತಿಯಿಂದಾಗಿ ಸಚಿವರ ವಿರುದ್ಧವಲ್ಲ, ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡಲು ನಿಮಗೆ ಅವಕಾಶ ನೀಡುತ್ತದೆ. ಈ ಸಂದರ್ಭಗಳಲ್ಲಿ, ಪ್ರಜಾಪ್ರಭುತ್ವದಲ್ಲಿ ಭಾರತದ ಪ್ರಧಾನ ಮಂತ್ರಿಗಳು ಗೌರವಾನ್ವಿತ ರೈಲ್ವೆ ಸಚಿವರ ರಾಜೀನಾಮೆಯನ್ನು ಕೇಳಬೇಕಿತ್ತು. 2014 ಮತ್ತು 2023 ರ ನಡುವೆ 678 ರೈಲ್ವೆ ಅಪಘಾತಗಳು, 781 ಜೀವಗಳು ಬಲಿಯಾಗಿವೆ, ನೌಕರರು ಸೇರಿದಂತೆ 1500 ಗಾಯಗಳು. ಇದು ನಮ್ಮಂತಹ ಪ್ರಜಾಪ್ರಭುತ್ವ ದೇಶದಲ್ಲಿ ಹೊಣೆಗಾರಿಕೆಯನ್ನು ಬಯಸುವುದಿಲ್ಲವೇ?”

ಕಳೆದ ತಿಂಗಳು ನವದೆಹಲಿಯಲ್ಲಿ ನಡೆದ ಕಾಲ್ತುಳಿತದ ಬಗ್ಗೆ ನ್ಯಾಯಯುತ ತನಿಖೆ ನಡೆಸಲಾಗುತ್ತಿದೆ ಎಂದು ವೈಷ್ಣವ್ ಹೇಳಿದರು, ಆದರೆ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿದೆ ಎಂದು ಆರೋಪಿಸಿದ್ದ ರಾಷ್ಟ್ರೀಯ ಜನತಾದಳ ಸಂಸದ ಮನೋಜ್ ಕುಮಾರ್ ಝಾ ಅವರನ್ನು ಖಂಡಿಸಿದರು.

“ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ನಡೆದಾಗ, ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿತ್ತು. ಅದನ್ನು ಹೇಗೆ ಸರಿಪಡಿಸುವುದು ಎಂಬುದರ ಬದಲು ಜನರು ಯಾವುದನ್ನೂ ಕಂಡುಹಿಡಿಯಬಾರದು ಎಂದು ನಡೆದುಕೊಂಡಿರುವುದು ಕಳವಳಕಾರಿ,” ಎಂದು ಝಾ ತಮ್ಮ ಭಾಷಣದ ಸಮಯದಲ್ಲಿ ಹೇಳಿದ್ದರು.

“ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿದೆ ಎಂಬ ಆರೋಪವನ್ನು ನಾನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ. ನಾನು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ದೇನೆ ಮತ್ತು ಅದು ನನ್ನ ಬಳಿ ಇದೆ. ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ,” ಎಂದು ವೈಷ್ಣವ್ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

“ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಜೀವವೂ ಮುಖ್ಯ. ಪ್ರತಿಯೊಂದು ಅಪಘಾತವೂ ದುರದೃಷ್ಟಕರ. ಇದರಲ್ಲಿ ನಾವು ರಾಜಕೀಯ ಮಾಡಬಾರದು. ಇದು ಮತ್ತೆ ಸಂಭವಿಸದಂತೆ ನಾವು ಕ್ರಮಗಳನ್ನು ತೆಗೆದುಕೊಳ್ಳಬೇಕು,” ಎಂದು ವೈಷ್ಣವ್‌ ಹೇಳಿದರು.

‘ಯುಪಿಎ ಹೊಣೆ’

ಯುಪಿಎ ಆಡಳಿತದಲ್ಲಿ anti-collision devices ಗಳನ್ನು ವಿಫಲವೆಂದು ಘೋಷಿಸಲಾಗಿತ್ತು ಮತ್ತು ವಿರೋಧ ಪಕ್ಷದ ಸದಸ್ಯರು ಅವುಗಳ ಬಗ್ಗೆ ಉಲ್ಲೇಖ ಮಾಡುವುದೇ ಇಲ್ಲ ಎಂದು ವೈಷ್ಣವ್ ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿದರು.

“ಯುಪಿಎ ಸರ್ಕಾರದ ಅವಧಿಯಲ್ಲಿ, ಘರ್ಷಣೆ ತಡೆ ಸಾಧನ (anti-collision devices) ಗಳನ್ನು ಅಧಿಕೃತವಾಗಿ ವೈಫಲ್ಯ ಎಂದು ಕರೆಯಲಾಗುತ್ತಿತ್ತು; 2012 ರಲ್ಲಿ ಅವುಗಳನ್ನು ತೆಗೆದುಹಾಕಲು ನಿರ್ಧರಿಸಲಾಯಿತು. ಟಿಎಂಸಿ ಸಂಸದರು ಎಸಿಡಿಯನ್ನು ಉಲ್ಲೇಖಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಅದು ಅವರ ಅಧಿಕಾರಾವಧಿಯಲ್ಲಿ ತರಲಾಯಿತು ಮತ್ತು ನಂತರ ಅದನ್ನು ವಿಫಲವೆಂದು ಘೋಷಿಸಲಾಯಿತು,” ಎಂದು ಅವರು ಹೇಳಿದರು.

ಮೋದಿ ಸರ್ಕಾರವು ಕವಚ್ ಮೂಲಕ ರೈಲ್ವೆ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ ಮತ್ತು ಅಭಿವೃದ್ಧಿ ಹೊಂದಿದ ದೇಶಗಳು ಇಪ್ಪತ್ತು ವರ್ಷಗಳಲ್ಲಿ ಮಾಡಿದ್ದನ್ನು ಐದು ವರ್ಷಗಳಲ್ಲಿ ಮಾಡಲಿದೆ ಮತ್ತು ಈ ಪ್ರಯತ್ನವನ್ನು ಬೆಂಬಲಿಸುವವರಿಗೆ ಸರ್ಕಾರ ಕೃತಜ್ಞರಾಗಿರಬೇಕು ಆದರೆ ಬೆಂಬಲಿಸದವರಿಗೆ ದೇಶವು “ವಿದಾಯ ಹೇಳುತ್ತದೆ” ಎಂದು ವೈಷ್ಣವ್ ಹೇಳಿದರು.

“2016 ರಲ್ಲಿ ಮೋದಿ ಅವರು ಕವಚ್ ಅನ್ನು ಪೂರ್ಣಗೊಳಿಸಿದರು ಮತ್ತು ಅಭಿವೃದ್ಧಿಪಡಿಸಿದರು, ಇದು ಸುರಕ್ಷತಾ ಸಮಗ್ರತೆಯ ಅತ್ಯುನ್ನತ ಮಟ್ಟ 4 ಅನ್ನು ಹೊಂದಿದೆ. ಇದು ಮೂರು ವರ್ಷಗಳನ್ನು ತೆಗೆದುಕೊಂಡಿತು. ಕೋವಿಡ್ ವರ್ಷಗಳ ಹೊರತಾಗಿಯೂ, ಎಲ್ಲಾ ಭೂಪ್ರದೇಶಗಳಲ್ಲಿ ಪ್ರಯೋಗಗಳನ್ನು ಮಾಡಲಾಯಿತು. ಎಲ್ಲಾ ವೈಶಿಷ್ಟ್ಯಗಳನ್ನು ಡಿವೈಸ್‌ ಒಳಗೆ ತರಲಾಯಿತು. 2021-24 ರಿಂದ ಎಲ್ಲಾ ವೈಶಿಷ್ಟ್ಯಗಳನ್ನು ಪರೀಕ್ಷಿಸಲಾಯಿತು ಮತ್ತು ಕವಚ್ 4.0 ಅನ್ನು 2024 ರಲ್ಲಿ ಅನುಮೋದಿಸಲಾಯಿತು. ಈಗ 10,000 ಲೋಕೋಮೋಟಿವ್ ಆರ್ಡರ್‌ಗಳನ್ನು ನೀಡಲಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು 20 ವರ್ಷಗಳಲ್ಲಿ ಮಾಡಿದ್ದನ್ನು ನಾನು ಜವಾಬ್ದಾರಿಯಿಂದ ಹೇಳುತ್ತಿದ್ದೇನೆ, ನಾವು ಅದನ್ನು ಐದು ವರ್ಷಗಳಲ್ಲಿ ಮಾಡುತ್ತೇವೆ,” ಎಂದು ವೈಷ್ಣವ್‌ ಹೇಳಿದ್ದಾರೆ.

“ಈ ಪ್ರಯತ್ನದಲ್ಲಿ ನಮ್ಮನ್ನು ಬೆಂಬಲಿಸುವವರಿಗೆ ನಾವು ಧನ್ಯವಾದ ಹೇಳುತ್ತೇವೆ ಮತ್ತು ಬೆಂಬಲಿಸದವರಿಗೆ ದೇಶವು ವಿದಾಯ ಹೇಳುತ್ತದೆ,” ಎಂದು ಅವರು ಹೇಳಿದರು.

ಇದು’ರೈಲು, ರೀಲ್ ಅಲ್ಲ’

ಚರ್ಚೆಯ ಸಮಯದಲ್ಲಿ, ಸಿಪಿಐ ಸಂಸದ ಪಿ. ಸಂದೋಷ್ ಕುಮಾರ್ ಅವರು ಸಚಿವರನ್ನು “ರೀಲ್ಸ್ ಗಿಂತ ರೈಲಿನ ಕಡೆಗೆ ಹೆಚ್ಚು ಗಮನ ಕೊಡಿ,” ಎಂದು ಕೇಳಿದರು ಮತ್ತು ಎನ್‌ಡಿಎ ಆಡಳಿತದ 10 ವರ್ಷಗಳಲ್ಲಿ 678 ರೈಲ್ವೆ ಅಪಘಾತಗಳು ಸಂಭವಿಸಿವೆ – ಅಂದರೆ ವರ್ಷಕ್ಕೆ 68 ಅಪಘಾತಗಳು.

“ರೈಲ್ವೆ ಸುರಕ್ಷತಾ ಹುದ್ದೆಗಳಲ್ಲಿ ಕನಿಷ್ಠ 15% ಖಾಲಿ ಇವೆ” ಎಂದು ಅವರು ಹೇಳಿದರು, ಸಚಿವರು ಇದನ್ನು ಪರಿಶೀಲಿಸುವಂತೆ ಕೇಳಿಕೊಂಡರು.

ತಮ್ಮ ಉತ್ತರದಲ್ಲಿ, ವೈಷ್ಣವ್ ಅವರು ಯುಪಿಎ ಆಡಳಿತದಲ್ಲಿ ಆಗಿರುವ ಹೂಡಿಕೆಯನ್ನು ಬೆಟ್ಟು ಮಾಡಿ ಮಾತನಾಡಿ, ಕಳೆದ ದಶಕದಲ್ಲಿ ಮೋದಿ ಸರ್ಕಾರವು ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳು, ಸುರಕ್ಷತಾ ಸಾಧನಗಳು ಮತ್ತು ಟ್ರ್ಯಾಕ್ ನವೀಕರಣ ಸೇರಿದಂತೆ ಸುರಕ್ಷತೆಯನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

“ಯುಪಿಎ ಆಡಳಿತದಲ್ಲಿ, ಸುರಕ್ಷತೆಯನ್ನು ಹೆಚ್ಚಿಸಲು ಹೂಡಿಕೆ 8,000-10,000 ಕೋಟಿ ರೂ.ಗಳಷ್ಟಿತ್ತು. ಇಂದು ನಾವು ಸುರಕ್ಷತೆಯನ್ನು ಹೆಚ್ಚಿಸಲು ಪ್ರತಿ ವರ್ಷ 1.14 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆ ಮಾಡುತ್ತಿದ್ದೇವೆ. ಈ ಮಟ್ಟವನ್ನು ತಲುಪಿದ ನಂತರವೂ ನಾವು ತೃಪ್ತರಾಗಿಲ್ಲ. ಸಮಸ್ಯೆಗಳನ್ನು ಪರಿಹರಿಸಲು ನಾವು ಸಮಸ್ಯೆಯ ಮೂಲ ಕಾರಣಕ್ಕೆ ಹೋಗಬೇಕಾಗುತ್ತದೆ,” ಎಂದು ಅವರು ಹೇಳಿದರು.

ಅವರ ಉತ್ತರದ ಸಮಯದಲ್ಲಿ, ವಿರೋಧ ಪಕ್ಷದ ಸದಸ್ಯರು ಸಚಿವರ ಮೇಲೆ ದುರಹಂಕಾರದ ಆರೋಪ ಹೊರಿಸಿ ಪ್ರತಿಭಟನೆ ನಡೆಸಿದರು ಮತ್ತು ಸಭಾತ್ಯಾಗ ಮಾಡಿದರು.

“ಅಶ್ವಿನಿ ವೈಷ್ಣವ್ ಜಿ ಮತ್ತು ಪ್ರಧಾನಿ ಮೋದಿ ಅವರ ಅವಧಿಯಲ್ಲಿ 670 ಕ್ಕೂ ಹೆಚ್ಚು ರೈಲು ಅಪಘಾತಗಳು ಸಂಭವಿಸಿವೆ, 1,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂಬ ಸರಳ ಕಾರಣಕ್ಕಾಗಿ ವಿರೋಧ ಪಕ್ಷವು ಸಭಾತ್ಯಾಗ ಮಾಡಿತು. ಇತ್ತೀಚೆಗೆ ದೆಹಲಿಯಲ್ಲಿ ಕಾಲ್ತುಳಿತದಲ್ಲಿ 18 ಜನರು ಸಾವನ್ನಪ್ಪಿದರು. ಆದರೆ ಸಚಿವರು ನಮ್ಮ ಕಳವಳಗಳಿಗೆ ಉತ್ತರಿಸುತ್ತಿದ್ದ ರೀತಿ ದುರಹಂಕಾರದಿಂದ ಕೂಡಿತ್ತು ಮತ್ತು ಅದು ಅವರ ಅಜ್ಞಾನ,” ಎಂದು ಟಿಎಂಸಿ ಸಂಸದ ದೇವ್ ಸಂಸತ್ತಿನ ಹೊರಗೆ ವರದಿಗಾರರಿಗೆ ಹೇಳಿದರು.

“ರೈಲ್ವೆ ಸಚಿವಾಲಯದ ನಿರ್ಲಕ್ಷ್ಯದಿಂದಾಗಿ ಭಾರತದಲ್ಲಿ ಸಾರ್ವಜನಿಕ ಆಸ್ತಿ ಮತ್ತು ಜೀವಕ್ಕೆ ಆಗಿರುವ ಹಾನಿಯನ್ನು ಅವರು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಅವರು ನಮಗೆ ರಚನಾತ್ಮಕ ಟೀಕೆಗೆ ಅವಕಾಶ ನೀಡಲಿಲ್ಲ, ಇದರಿಂದಾಗಿ ನಾವು ಹೊರನಡೆದಿದ್ದೇವೆ ಮತ್ತು ಈ ಮಸೂದೆಯನ್ನು ಬೆಂಬಲಿಸಲು ನಿರಾಕರಿಸುತ್ತೇವೆ,” ಎಂದು ಅವರು ಹೇಳಿದರು.

ಈ ಲೇಖನವು ದಿ ವೈರ್‌ನಲ್ಲಿ ಪ್ರಕಟವಾದ ಶ್ರಾವಸ್ತಿ ದಾಸಗುಪ್ತ ಅವರ Reels, Arrogance, Accountability: What the Railway Bill Debate Between Ashwini Vaishnaw and Opposition Was About ದ ಕನ್ನಡಾನುವಾದ

Related Articles

ಇತ್ತೀಚಿನ ಸುದ್ದಿಗಳು

You cannot copy content of this page