ದೆಹಲಿ: ನಾನು ಬೌದ್ಧ ಧರ್ಮವನ್ನು ಆಚರಿಸುತ್ತೇನೆ, ಆದರೆ ನಾನು ಎಲ್ಲಾ ಧರ್ಮಗಳನ್ನು ನಂಬುವ ನಿಜವಾದ ಜಾತ್ಯತೀತವಾದಿ (secularist) ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ ಹೇಳಿದರು.
ಈ ತಿಂಗಳ 23 ರಂದು ನಿವೃತ್ತರಾಗಲಿರುವ ಅವರಿಗೆ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ ವತಿಯಿಂದ ಗುರುವಾರ ವಿದಾಯ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಗವಾಯಿ ಅವರು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ, ದೇಶದ ನ್ಯಾಯಾಂಗ ವ್ಯವಸ್ಥೆಯು ತನಗೆ ಬಹಳಷ್ಟು ನೀಡಿದೆ ಎಂದು ಹೇಳಿದರು.
ತಾನು ಬೌದ್ಧ ಧರ್ಮವನ್ನು ಆಚರಿಸುತ್ತೇನೆಯಾದರೂ, ಧಾರ್ಮಿಕ ಆಚರಣೆಗಳ ಬಗ್ಗೆ ತನಗೆ ಆಳವಾದ ಅರಿವಿಲ್ಲ ಎಂದು ಅವರು ಹೇಳಿದರು. ತಾನು ನಿಜವಾದ ಜಾತ್ಯತೀತವಾದಿ, ಆದ್ದರಿಂದ ತನಗೆ ಬೌದ್ಧ, ಕ್ರಿಶ್ಚಿಯನ್, ಇಸ್ಲಾಂ, ಸಿಖ್ ಧರ್ಮ ಹೀಗೆ ಪ್ರತಿಯೊಂದು ಧರ್ಮದ ಮೇಲೂ ವಿಶ್ವಾಸವಿದೆ ಎಂದು ಅವರು ತಿಳಿಸಿದರು. ಅಂಬೇಡ್ಕರ್ ಮತ್ತು ಸಂವಿಧಾನದ ಕಾರಣದಿಂದಾಗಿಯೇ ತಾನು ಈ ಉನ್ನತ ಸ್ಥಾನವನ್ನು ತಲುಪಲು ಸಾಧ್ಯವಾಯಿತು ಎಂದು ಅವರು ಹೇಳಿದರು.
