ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ಭಾರತದ ಜಾತ್ಯತೀತ ಸ್ವರೂಪವನ್ನು ಬದಲಿಸಿ, ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ತನ್ನ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.
ಸಂಘಟನೆಯ 100ನೇ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಕಟವಾಗಿರುವ ಈ ಲೇಖನವು, ಮುಸ್ಲಿಮರು ಮತ್ತು ಕ್ರೈಸ್ತರನ್ನು ವಿದೇಶಿ ಆಕ್ರಮಣಕಾರರ ವಂಶಸ್ಥರಂತೆ ಬಿಂಬಿಸುವ ಧೋರಣೆಯಿಂದಾಗಿ ದೇಶದಲ್ಲಿ ಧಾರ್ಮಿಕ ವಿಭಜನೆ ತೀವ್ರಗೊಳ್ಳುತ್ತಿದೆ ಎಂದು ವಿಶ್ಲೇಷಿಸಿದೆ.
‘ನೆರಳುಗಳಿಂದ ಅಧಿಕಾರದವರೆಗೆ: ಹಿಂದುತ್ವ ಶಕ್ತಿಗಳು ಭಾರತವನ್ನು ಹೇಗೆ ಬದಲಿಸುತ್ತಿವೆ’ ಎಂಬ ಶೀರ್ಷಿಕೆಯಡಿ ಈ ಸುದೀರ್ಘ ವರದಿಯನ್ನು ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 11 ವರ್ಷಗಳ ಆಡಳಿತದಲ್ಲಿ ಮೊದಲ ಬಾರಿಗೆ, ಕಳೆದ ಆಗಸ್ಟ್‌ನಲ್ಲಿ ಕೆಂಪುಕೋಟೆಯ ಭಾಷಣದ ವೇಳೆ ಆರ್‌ಎಸ್‌ಎಸ್ ಅನ್ನು ಬಹಿರಂಗವಾಗಿ ಶ್ಲಾಘಿಸಿರುವುದನ್ನು ಪತ್ರಿಕೆ ಉಲ್ಲೇಖಿಸಿದೆ.
ತಮ್ಮ ಜೀವನವನ್ನು ರೂಪಿಸಿದ ಸಂಸ್ಥೆ ಎಂದು ಮೋದಿ ಸಂಘವನ್ನು ಬಣ್ಣಿಸಿರುವುದು, ಆ ಸಂಘಟನೆಗಿರುವ ‘ಕಿಂಗ್-ಮೇಕಿಂಗ್’ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ. ಆರ್‌ಎಸ್‌ಎಸ್ ಕೇವಲ ಸಾಮಾಜಿಕ ಸೇವಾ ಸಂಸ್ಥೆಯಾಗಿ ಉಳಿಯದೆ, ಸರ್ಕಾರದ ವಿವಿಧ ಇಲಾಖೆಗಳು, ನ್ಯಾಯಾಲಯಗಳು, ಪೊಲೀಸ್ ವ್ಯವಸ್ಥೆ, ಮಾಧ್ಯಮ ಮತ್ತು ಶಿಕ್ಷಣ ಸಂಸ್ಥೆಗಳಂತಹ ಎಲ್ಲಾ ವ್ಯವಸ್ಥೆಗಳಲ್ಲೂ ತನ್ನ ಬೇರುಗಳನ್ನು ಆಳವಾಗಿ ಬಿಟ್ಟಿದೆ ಎಂದು ಲೇಖನ ವಿವರಿಸಿದೆ.
ಸಂಘ ಪರಿವಾರದ ಅಂಗಸಂಸ್ಥೆಗಳ ಹೆಸರಿನಲ್ಲಿ ನಡೆಯುತ್ತಿರುವ ಧಾರ್ಮಿಕ ಕಿರುಕುಳ ಮತ್ತು ಚರ್ಚ್‌ಗಳ ಮೇಲಿನ ದಾಳಿಗಳ ಬಗ್ಗೆಯೂ ವರದಿ ಪ್ರಸ್ತಾಪಿಸಿದೆ. ನ್ಯಾಯಾಂಗದ ಮೇಲೂ ಹಿಂದುತ್ವ ಸಿದ್ಧಾಂತದ ಪ್ರಭಾವ ಬೀರುತ್ತಿದೆ ಎಂದು ಹೇಳಲು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರೊಬ್ಬರು ನೀಡಿದ ಹೇಳಿಕೆಯನ್ನು ಉದಾಹರಣೆಯಾಗಿ ನೀಡಲಾಗಿದೆ.
ವಿಶ್ವದ ಅತಿದೊಡ್ಡ ಬಲಪಂಥೀಯ ಸಂಘಟನೆಯಾಗಿ ಬೆಳೆದಿದ್ದರೂ, ಆರ್‌ಎಸ್‌ಎಸ್‌ನ ಕಾರ್ಯಕಲಾಪಗಳಲ್ಲಿ ಪಾರದರ್ಶಕತೆಯ ಕೊರತೆಯಿದೆ ಎಂದು ಪತ್ರಿಕೆ ಟೀಕಿಸಿದೆ. ಸಂಘಟನೆಯ ಆಸ್ತಿಗಳು ಹಲವಾರು ಸಣ್ಣ ಟ್ರಸ್ಟ್‌ಗಳ ರೂಪದಲ್ಲಿ ಹರಡಿಕೊಂಡಿದ್ದು, ನಿಖರವಾದ ದಾಖಲೆಗಳು ಲಭ್ಯವಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ವಿಶ್ಲೇಷಿಸಿದೆ.
