Saturday, October 18, 2025

ಸತ್ಯ | ನ್ಯಾಯ |ಧರ್ಮ

ಪಾಕ್ ವೈಮಾನಿಕ ದಾಳಿ: ಅಫ್ಗಾನಿಸ್ತಾನದ ಮೂವರು ಕ್ರಿಕೆಟಿಗರು ಬಲಿ

ಕಾಬೂಲ್: ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ಗಡಿ ಭಾಗಗಳಲ್ಲಿನ ಸಂಘರ್ಷ ಮುಂದುವರಿದಿದ್ದು, ಇತ್ತೀಚೆಗೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಅಫ್ಗಾನಿಸ್ತಾನದ ಮೂವರು ಸ್ಥಳೀಯ ಕ್ರಿಕೆಟಿಗರು ಮೃತಪಟ್ಟಿದ್ದಾರೆ.

ಈ ದುರಂತದ ಕುರಿತು ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿಯು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಅಧಿಕೃತವಾಗಿ ಮೃತರಾದ ಸ್ಥಳೀಯ ಕ್ರಿಕೆಟಿಗರನ್ನು ಖಚಿತಪಡಿಸಿ, ತೀವ್ರ ಶೋಕ ವ್ಯಕ್ತಪಡಿಸಿದೆ.

ಸೌಹಾರ್ದ ಪಂದ್ಯಕ್ಕೆ ತೆರಳುತ್ತಿದ್ದ ಆಟಗಾರರ ಮೇಲೆ ದಾಳಿ:

ಅಫ್ಗಾನಿಸ್ತಾನದ ಕ್ಲಬ್ ಮಟ್ಟದ ಯುವ ಆಟಗಾರರು ಸೌಹಾರ್ದ ಪಂದ್ಯದಲ್ಲಿ ಭಾಗವಹಿಸಲು ಪಾಕಿಸ್ತಾನ ಗಡಿಗೆ ಸಮೀಪವಿರುವ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್‌ನಿಂದ ಶರಾನಾ ಕಡೆಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ವೈಮಾನಿಕ ದಾಳಿ ನಡೆದಿದೆ. ಈ ದಾಳಿಯಿಂದ ಮೂವರು ಕ್ರಿಕೆಟಿಗರು ಹಾಗೂ ಐವರು ನಾಗರಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ದಾಳಿಯಲ್ಲಿ ಮೃತಪಟ್ಟ ಕ್ರಿಕೆಟಿಗರನ್ನು ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್ ಎಂದು ಗುರುತಿಸಲಾಗಿದೆ. ಈ ದಾಳಿಯ ವಿರುದ್ಧ ಅಫ್ಗಾನಿಸ್ತಾನದ ಪ್ರಮುಖ ಕ್ರಿಕೆಟಿಗರು ಧ್ವನಿಯೆತ್ತಿದ್ದಾರೆ. ಸ್ಟಾರ್ ಕ್ರಿಕೆಟಿಗ ರಶೀದ್ ಖಾನ್ ಸೇರಿದಂತೆ ಹಲವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶ ಹೊರಹಾಕಿದ್ದು, ನಾಗರಿಕರ ಮೇಲೆ ದಾಳಿ ನಡೆಸುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ.

https://x.com/ACBofficials/status/1979285528626282613

ಪ್ರತೀಕಾರ ಮತ್ತು ಗಡಿ ಸಮಸ್ಯೆ:

ಅಫ್ಗಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಭಾರತಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಪಾಕಿಸ್ತಾನವು ಕಾಬೂಲ್ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಅಫ್ಗಾನಿಸ್ತಾನವು ಡ್ಯುರಾಂಡ್ ಲೈನ್ ಗಡಿಯಲ್ಲಿ 12 ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿತ್ತು. ಇದೀಗ ಮತ್ತೊಮ್ಮೆ ಪಾಕ್ ಸೇನೆಯು ಗಡಿ ಭಾಗದಲ್ಲಿ ದಾಳಿ ನಡೆಸಿದೆ, ಇದರಿಂದ ಅಫ್ಘಾನಿಸ್ತಾನದ ಮೂವರು ಯುವ ಕ್ರಿಕೆಟಿಗರು ಪ್ರಾಣ ಕಳೆದುಕೊಂಡಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ, ಪಾಕಿಸ್ತಾನದಿಂದ 14 ಲಕ್ಷಕ್ಕೂ ಹೆಚ್ಚು ಅಫ್ಗಾನ್ ನಿರಾಶ್ರಿತರನ್ನು ವಾಪಸ್ ಕಳುಹಿಸಲಾಗಿದೆ ಎಂದು ಪಾಕ್ ಸರ್ಕಾರ ಶುಕ್ರವಾರ ಹೇಳಿದೆ. ಇನ್ನೂ ದೇಶದಲ್ಲೇ ಉಳಿದಿರುವ ನಿರಾಶ್ರಿತರಿಗೆ ಸಮಯಾವಕಾಶ ವಿಸ್ತರಣೆ ನೀಡಲಾಗುವುದಿಲ್ಲ ಮತ್ತು ಅವರು ಕೂಡ ಶೀಘ್ರವಾಗಿ ವಾಪಸಾಗುವುದನ್ನು ಖಚಿತಪಡಿಸಲಾಗುವುದು ಎಂದು ಪಾಕ್ ಸ್ಪಷ್ಟಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page