Saturday, January 24, 2026

ಸತ್ಯ | ನ್ಯಾಯ |ಧರ್ಮ

ಮಹಾರಾಷ್ಟ್ರದ ಅಕೋಟ್ ಪುರಸಭೆಯಲ್ಲಿ ಒಂದಾದ ಮೂರು ಪಕ್ಷಗಳು: ಬಿಜೆಪಿ, ಕಾಂಗ್ರೆಸ್, ಎಂಐಎಂ ಮೈತ್ರಿ!

ಮುಂಬೈ: ಮಹಾರಾಷ್ಟ್ರದ ಮುನ್ಸಿಪಲ್ (ಪುರಸಭೆ) ಚುನಾವಣೆಗಳಲ್ಲಿ ಒಂದು ಆಶ್ಚರ್ಯಕರ ಬೆಳವಣಿಗೆ ನಡೆದಿದೆ.

ರಾಜಕೀಯವಾಗಿ ಬದ್ಧ ವೈರಿಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಎಐಎಂಐಎಂ (AIMIM) ಮೈತ್ರಿ ಮಾಡಿಕೊಂಡಿವೆ. ಅಮರಾವತಿ ಜಿಲ್ಲೆಯ ಅಚಲ್ಪುರ್ ಪುರಸಭೆಯಲ್ಲಿ ವಿವಿಧ ಸಮಿತಿಗಳ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲು ಈ ಮೂರು ಪಕ್ಷಗಳು ಒಪ್ಪಂದ ಮಾಡಿಕೊಂಡಿವೆ. ಅಕೋಟ್ ಪುರಸಭೆಯಲ್ಲಿ ಬಿಜೆಪಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಜೊತೆ ಮತ್ತು ಅಂಬರ್‌ನಾಥ್ ಪುರಸಭೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಒಂದು ದಿನದ ನಂತರ, ಅಚಲ್ಪುರದಲ್ಲೂ ಇಂತಹದ್ದೇ ಬೆಳವಣಿಗೆ ನಡೆದಿದೆ.

ಅಚಲ್ಪುರದಲ್ಲಿ ಒಟ್ಟು 41 ಸ್ಥಾನಗಳಲ್ಲಿ ಕಾಂಗ್ರೆಸ್ 15, ಬಿಜೆಪಿ 9, ಎಐಎಂಐಎಂ 3, ಪಕ್ಷೇತರರು 10, ಪ್ರಹಾರ್ ಜನಶಕ್ತಿ 2, ಎನ್‌ಸಿಪಿ 2 ಸ್ಥಾನಗಳನ್ನು ಗೆದ್ದಿವೆ. ಇತ್ತೀಚೆಗೆ ಮೂರು ಪಕ್ಷಗಳ ನಡುವೆ ನಡೆದ ಒಪ್ಪಂದದ ಪ್ರಕಾರ, ಎಐಎಂಐಎಂ ಕೌನ್ಸಿಲರ್ ಒಬ್ಬರು ಶಿಕ್ಷಣ ಮತ್ತು ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ನೀರು ಸರಬರಾಜು ಸಮಿತಿಗೆ ಕಾಂಗ್ರೆಸ್ ಕೌನ್ಸಿಲರ್ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ಬಿಜೆಪಿ ಕೌನ್ಸಿಲರ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೈದ್ಧಾಂತಿಕವಾಗಿ ತೀವ್ರ ಭಿನ್ನಾಭಿಪ್ರಾಯವಿರುವ ಎಐಎಂಐಎಂ ಜೊತೆ ಈ ಚುನಾವಣೆಯಲ್ಲಿ ಹೇಗೆ ಮೈತ್ರಿ ಮಾಡಿಕೊಂಡಿರಿ ಎಂದು ಅಚಲ್ಪುರ್ ಬಿಜೆಪಿ ಶಾಸಕ ಪ್ರವೀಣ್ ತಯಡೆ ಅವರನ್ನು ಮಾಧ್ಯಮಗಳು ಪ್ರಶ್ನಿಸಿದವು. ಅದಕ್ಕೆ ಅವರು, “ನಾನು ಹಿಂದುತ್ವದ ತತ್ವಗಳನ್ನು ಹೊಂದಿರುವ ಶಾಸಕ. ನಮ್ಮ ಪಕ್ಷ ಕೂಡ ಅದೇ ತತ್ವಗಳನ್ನು ಅನುಸರಿಸುತ್ತದೆ. ಹಾಗಾಗಿ ನಾನು ಎಂದಿಗೂ ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ. ಆದರೆ ಈ ವಿಷಯದಲ್ಲಿ ನಮ್ಮ ಪಕ್ಷದ ಹಿರಿಯರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದನ್ನು ನಾವು ಒಪ್ಪುತ್ತೇವೆ ಮತ್ತು ಪಾಲಿಸುತ್ತೇವೆ,” ಎಂದು ಹೇಳಿದರು.

ಕಳೆದ ತಿಂಗಳು ಸ್ಥಳೀಯ ಚುನಾವಣೆ ಮುಗಿದ ನಂತರ ಅಕೋಲಾ ಜಿಲ್ಲೆಯ ಅಕೋಟ್ ಪುರಸಭೆಯಲ್ಲಿ ಬಿಜೆಪಿ ಎಐಎಂಐಎಂ ಜೊತೆ ಪಾಲುದಾರಿಕೆ ಮಾಡಿಕೊಂಡಿತ್ತು. ಆದರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತರಾಟೆಗೆ ತೆಗೆದುಕೊಂಡ ನಂತರ ಅದು ರದ್ದಾಗಿತ್ತು. ಅಂಬರ್‌ನಾಥ್ ಪುರಸಭೆಯಲ್ಲಿ ಕೂಡ ಶಿವಸೇನೆಯನ್ನು ದೂರವಿಡಲು ಬಿಜೆಪಿ ಮತ್ತು ಕಾಂಗ್ರೆಸ್ ಕೈಜೋಡಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page