Tuesday, October 29, 2024

ಸತ್ಯ | ನ್ಯಾಯ |ಧರ್ಮ

ಪುನೀತ್ ಅಗಲಿಕೆಗೆ ಮೂರು ವರ್ಷ : ಅಪ್ಪು ಜನಪದ: ಪುನೀತ್ ಬಗ್ಗೆ ಜನಪದರು ಪದ ಕಟ್ಟಿದ್ಯಾಕೆ? – ಅರುಣ್ ಜೋಳದಕೂಡ್ಲಿಗಿ

ಹಾಗೆ ನೋಡಿದರೆ ನಿಜಕ್ಕೂ ಪುನೀತ್ ಜಾನಪದ’ ರೂಪುಗೊಂಡಿತು. ಪುನೀತ್ ಬಗೆಗಿನ ಕಥನಗಳು, ಪುನೀತ್ ಬಗೆಗಿನ ಹಾಡುಗಳು, ಕಣ್ಣೀರ ಧಾರೆಯ ನುಡಿನಮನಗಳು, ಕರ್ನಾಟಕದ ಬಹುಪಾಲು ಹಳ್ಳಿಗಳಲ್ಲಿ ಪುನೀತ್ ನಮನದ ಪೋಷ್ಟರ್ಸ್ ಹೋಲ್ಡಿಂಗ್ಸ್, ಪೂಜೆಗಳು ನಡೆದವು. ಪುನೀತ್ ಹೆಸರಿನ ಬಗೆಗೆ ನುಡಿಗಟ್ಟುಗಳು ಹುಟ್ಟಿಕೊಂಡವು. ಇವುಗಳನ್ನೆಲ್ಲಾ ಆಧರಿಸಿಪುನೀತ್ ಜಾನಪದ’ ಕುರಿತು ದೀರ್ಘವಾಗಿ ಬರೆಯಬಹುದು. ನಾನಿಲ್ಲಿ ಪುನೀತ್ ಬಗ್ಗೆ ಜನಪದ ಹಾಡಿಕೆ ತಂಡಗಳು ಹಾಡಿದ ಹಾಡುಗಳನ್ನು ಮಾತ್ರ ಕೇಂದ್ರೀಕರಿಸಿ ಟಿಪ್ಪಣಿ ಮಾಡಿರುವೆ.

ಪುನೀತ್ ರಾಜಕುಮಾರ್ ಬೌತಿಕವಾಗಿ ನಮ್ಮನ್ನು ಅಗಲಿ ಮೂರು ವರ್ಷವಾಯ್ತು. ಆದರೆ ರ‍್ಹೆ.. ಮೂರು ವರ್ಷ ಆಯ್ತಾ..? ಎನ್ನುವ ಅನುಮಾನ ಮೂಡುವಷ್ಟು ಪುನೀತ್ ಜೀವಂತವಾಗಿದ್ದಾರೆ. ಪುನೀತ್ ಬೌತಿಕವಾಗಿ ಇಲ್ಲದೆ ಇದ್ದರೂ ನೂರಾರು ಹಳ್ಳಿಗಳಲ್ಲಿ ಪುನೀತ್ ಹೆಸರಿನ ರಕ್ತಧಾನ, ನೇತ್ರದಾನ ಶಿಭಿರಗಳಾಗಿ..ಇದೀಗ ಗಂಧದ ಗುಡಿ ಸಿನೆಮಾದ ಕುರುಹಾಗಿ, ಹಲವು ಬಗೆಗಳಲ್ಲಿ ನೆನಪಾಗಿ ಉಳಿದಿದ್ದಾರೆ. ದೇವರ ಕೋಣೆಗಳಲ್ಲಿ ಪುನೀತ್ ಫೋಟೋ ಸೇರಿಕೊಂಡಿದೆ.

ಕರ್ನಾಟಕದ ಸಂದರ್ಭದಲ್ಲಿ ಬಹುಶಃ 2021 ಒಂದು ರೀತಿಯ ಪುನೀತ ಅವರ ದುಃಖದ ವರ್ಷವಾಗಿಯೇ ದಾಖಲಾಗಿದೆ.

ದುಃಖದ ಕಟ್ಟೆಯೊಡೆದು ಪುನೀತ್ ಅವರಿಗೆ ಇಡೀ ದೇಶದ ಜನತೆ ಕಣ್ಣೀರು ಹಾಕಿತು. ಬಹುಶಃ ಬಾಲನಟನಾಗಿ ಜನಮನದಲ್ಲಿ ನೆಲೆಗೊಂಡಿದ್ದರಿಂದ, ಪುನೀತ್ ಮನೆಯ ಮಗನಂತೆ ಬೆಳೆದ ಅನುಭವ ಜನರಿಗೆ ಆಗಿರಬೇಕು. ಹಾಗಾಗಿ ಸಿನೆಮಾದ ಮೂಲಕ ದೀರ್ಘಕಾಲೀನ ಪುನೀತ್ ಒಡನಾಟಕ್ಕೆ ಅವರ ಸಾವು ದಿಡೀರ್ ಶಾಕ್ ಕೊಟ್ಟಂತಿದೆ. ಪುನೀತ್ ನಗುವಿನ, ಲವಲವಿಕೆಯ ನಡೆ ಬಹುಜನರನ್ನು ಆಕರ್ಷಿಸಿತ್ತು. ಹೀಗಾಗಿ ಪುನೀತ್ ಅವರ ದಿಡೀರ್ ಅಗಲಿಕೆ ಬಹಳ ಜನರನ್ನು ದುಃಖದ ಕಡಲಿನಲಿ ಮುಳುಗಿಸಿತು. ಹೀಗೆ ಪುನೀತ್ ಜನಮಾನಸದಲ್ಲಿ ನೆಲೆಗೊಂಡಿದ್ದರು ಎನ್ನುವುದಕ್ಕೆ 50 ಕ್ಕಿಂತ ಹೆಚ್ಚಿನ ಜನಪದ ವೃತ್ತಿಗಾಯಕ ತಂಡಗಳು ಪದ ಕಟ್ಟಿದ್ದು ಮತ್ತೊಂದು ಸಾಕ್ಷಿ. ಜನಪದ ಕವಿಗಳು ಯಾಕೆ ಪದ ಕಟ್ಟಿದರು? ಹಾಡಿಕೆ ತಂಡಗಳು ಯಾಕೆ ಪುನೀತ್ ಪದವನ್ನು ಹಾಡಿದರು ಎನ್ನುವುದು ಕುತೂಹಲಕಾರಿ ಸಂಗತಿ.

ಹಾಗೆ ನೋಡಿದರೆ ನಿಜಕ್ಕೂ ಪುನೀತ್ ಜಾನಪದ’ ರೂಪುಗೊಂಡಿತು. ಪುನೀತ್ ಬಗೆಗಿನ ಕಥನಗಳು, ಪುನೀತ್ ಬಗೆಗಿನ ಹಾಡುಗಳು, ಕಣ್ಣೀರ ಧಾರೆಯ ನುಡಿನಮನಗಳು, ಕರ್ನಾಟಕದ ಬಹುಪಾಲು ಹಳ್ಳಿಗಳಲ್ಲಿ ಪುನೀತ್ ನಮನದ ಪೋಷ್ಟರ್ಸ್ ಹೋಲ್ಡಿಂಗ್ಸ್, ಪೂಜೆಗಳು ನಡೆದವು. ಪುನೀತ್ ಹೆಸರಿನ ಬಗೆಗೆ ನುಡಿಗಟ್ಟುಗಳು ಹುಟ್ಟಿಕೊಂಡವು. ಇವುಗಳನ್ನೆಲ್ಲಾ ಆಧರಿಸಿಪುನೀತ್ ಜಾನಪದ’ ಕುರಿತು ದೀರ್ಘವಾಗಿ ಬರೆಯಬಹುದು. ನಾನಿಲ್ಲಿ ಪುನೀತ್ ಬಗ್ಗೆ ಜನಪದ ಹಾಡಿಕೆ ತಂಡಗಳು ಹಾಡಿದ ಹಾಡುಗಳನ್ನು ಮಾತ್ರ ಕೇಂದ್ರೀಕರಿಸಿ ಟಿಪ್ಪಣಿ ಮಾಡಿರುವೆ.

ಜನಪದ ಸಾಮೂಹಿಕ ರಚನೆ ಎಂದಾಗ ವರ್ತಮಾನದ ವಿದ್ಯಮಾನಗಳು ಪ್ರವೇಶ ಪಡೆಯುವುದು ಕಡಿಮೆ. ಸಾಮೂಹಿಕ ರಚನೆಗಳು ತಲತಲಾಂತರದಿಂದ ಹರಿದು ಬಂದಿರಬೇಕು. ಹಾಗಾಗಿ ಈ ಸಾಮೂಹಿಕ ರಚನೆಗಳಲ್ಲಿ ವರ್ತಮಾನ ಸ್ಥಾನ ಪಡೆಯಲಾರದು. ಆದರೆ ಜನಪದ ಕವಿ ರಚನೆಗಳಿಗೆ ಮಾತ್ರ ತನ್ನ ಕಾಲದ ವರ್ತಮಾನವನ್ನು ಹಾಡಿಕೆಯಲ್ಲಿ ತರುವ ಸಾಧ್ಯತೆ ಇದೆ. ಹಾಗಾಗಿ ಜನಪದ ಕವಿಗಳು ವರ್ತಮಾನದ ಕುರಿತೇ ಪದ ಕಟ್ಟುತ್ತಾರೆ, ಹಾಡುತ್ತಾರೆ. ಹೀಗಿರುವಾಗ ಪುನೀತ್ ಅಗಲಿಕೆಯ ದುಃಖ ಜನಪದ ಕವಿ-ಹಾಡುಗಾರರನ್ನು ಕಾಡಿದೆ. ಹಾಡಿಕೆ ತಂಡಗಳು ಹಳ್ಳಿಗಳಿಗೆ ಹಾಡಲು ಹೋದಾಗ ಪುನೀತ್ ಪದ’ ಹೇಳಿ ಎಂದು ಯುವಜನರು ಒತ್ತಾಯಿಸಿದ್ದೂ ಬಹುತೇಕ ಭಜನಾ ತಂಡಗಳು ಪುನೀತ್ ಪದ ಕಟ್ಟಿ ಹಾಡಲು ಪ್ರೇರಣೆ ಒದಗಿಸಿರಬಹುದು.ಪುನೀತಣ್ಣ ಅಂದ್ರ ಬಾಳ ಕೇಳತಾರೀ ಜನ.. ಜನಕ್ಕ ಬಾಳ ಹಿಡಿಸೇತಿ ನಮ್ ಹಾಡು..ಹಾಡಿಕೆಗೆ ಹೋದ್ಕಡೆ ಪುನೀಣ್ಣನ ಪದ ಹಾಡರಿ ಅಂತ ಕೇಳತಾರ’ ಎಂದು ಸಾಂಗ್ಲಿ ಜಿಲ್ಲಾ ಜತ್ತಾ ತಾಲೂಕಿನ ಅಂಕಲಗಿಯ ಜನಪದ ಹಾಡುಗಾರ್ತಿ ರಾಜೇಶ್ವರಿ ಅಂಕಲಗಿ ಅವರು ಹೇಳುತ್ತಾರೆ.

ಆರಂಭಕ್ಕೆ ಜನಪದ ಹಾಡುಗಾರ ಎಪ್ಪತ್ತು ವರ್ಷದ ಆಸುಪಾಸಿನ ಬಸಪ್ಪ ಲಂಗೋಟಿ ಹಾಡಿದ `ಎಲ್ಲಿ ಹುಡುಕಲಿ ಅಪ್ಪು ಅಣ್ಣ ನಿನ್ನ’ ಪುನೀತ್ ಪದ ಹೆಚ್ಚು ವೈರಲ್ ಆಯ್ತು. ವಾಟ್ಸಪ್‌ಗಳಲ್ಲಿ ಹರಿದಾಡಿತ್ತು. ಮುರುಗನೂರ ಜನಪದ ಕವಿ ಚಂದ್ರು ಮಾಸ್ತರ ಈ ಪದವನ್ನು ಕಟ್ಟಿದ್ದರು. ಈ ಪದವನ್ನು ಹತ್ತಕ್ಕಿಂತ ಹೆಚ್ಚು ಜನಪದ ಹಾಡಿಕೆ ತಂಡಗಳು ಹಾಡಿದ್ದಾರೆ. ಈ ಪದದ ಪೂರ್ಣ ಪಠ್ಯ ಹೀಗಿದೆ:

ಎಲ್ಲಿ ಹುಡುಕಲಿ ಅಪ್ಪು ಅಣ್ಣ ನಿನ್ನ
ಎಲ್ಲಿ ಹುಡುಕಲಿ ಪುನೀತಣ್ಣ ನಿನ್ನ
ಅಗಲಿ ಹೋದೀ ನೀ ನಮ್ಮಣ್ಣ
ತಾಯಿ ಇಲ್ಲದ ತಬ್ಬಲಿ ಆಯ್ತೋ
ಕರುನಾಡಿನ ಜನಾ||

ಗಾಜನೂರ ಹುಟ್ಟಿದ ಸ್ಥಾನ
ತಾಯಿ ಪಾರ್ವತಿ ತಂದಿ ರಾಜಣ್ಣಾ
ಅವರ ಮುದ್ದಿನ ಮೂರನೆ ಮಗನಾಗಿ
ಹುಟ್ಟಿಬಂದಿ ನೀ ತರುಣಾ..
ಜಾತಿ ಬೇದ ಮಾಡಲಿಲ್ಲ ನೀನು
ಎಲ್ಲರಿಗೂ ಅಂದೆ ನಮ್ಮ ತಮ್ಮ ಅಂತ
ಅಭಿಮಾನಿಗಳೇ ದೇವರು ಅಂದು ಮಾಡಿ ಹೋದೆ ಜೀವನಾ..

ಬಡವರ ಮೇಲೆ ಬಾಳ ಅಂತಃಕರುಣ
ಕಷ್ಟಸುಖ ಕೇಳವ ನೀನಾ
ನಿನ್ನ ನಂಬಿ ಬಂದವರ ಮಾಡಿದಿ ಕಲ್ಯಾಣ
ಎಂಥದಪ್ಪಾ ಸದ್ಗುಣಾ..
ಮಾಡಿದಿ ಎಲ್ಲರಿಗೂ ಉಪಕರುಣ

ಕರುನಾಡ ಕಣ್ಮಣಿಯಾಗಿ ಮರೆಯಾದಿ ಯುವರತ್ನ
ಹಳ್ಳಿಯಿಂದ ದಿಲ್ಲಿಯ ತನಕ ಬೆಳೆದಿತ್ತೋ ನಿನ್ನ ವಾಹೀನಾ
ಅಪ್ಪು ಅಣ್ಣ ಅಂದರೆ ಎಲ್ಲರಿಗಿ ಬಾಳ ಪಂಚ ಪ್ರಾಣ
ಮಾತಿನಲ್ಲಿ ಬಲು ಜಾಣ, ಬುದ್ದಿಯಲ್ಲಿ ಬಸವಣ್ಣ
ನಿನ್ನಂತ ಅಣ್ಣನ ನಾ ಹೆಂಗ ಮರೀಲಿ ನನ್ನ ಜೀವ ಇರೋತನ..

ದೇವರೆ ನಿನಗ್ಯಾಕ ಬರಲಿಲ್ಲ ಕರುಣಾ
ಕರಕೊಂಡ್ ಹೋದೀ ನಮ್ಮಣ್ಣನ್ನಾ
ರೆಕ್ಕೆ ಇಲ್ಲದ ಹಕ್ಕಿಯಂತೆ ಮಾಡಿ ಇಟ್ಟಿದಿ ನಮ್ಮನ್ನಾ
ಹೇಳೋ ದೇವರ ನೀನನ್ನ ಅಪ್ಪು ಅಣ್ಣ ಸಿಗುತಾನಾ
ತಾಯಿ ಇಲ್ಲದ ಪರದೇಶಿ ಮಾಡಿದಿ ಅಭಿಮಾನಿ ಜನರನ್ನಾ..
ಎಷ್ಟು ಹೇಳಲಿ ಅಣ್ಣಾ ನಿನ್ನ ವರನಾ
ತೀರಿಸಲಾಗದು ನಿನ್ನಯ ಋಣಾನಾ
ಕರುನಾಡ ಜನರ ಪರವಾಗಿ ಮತ್ತೆ ಹುಟ್ಟಿ ಬಾ ನೀನು
ಮುರಗನೂರು ಕವಿ ಮನಸ್ಥಾನ
ಚಂದ್ರು ಮಾಸ್ತರ ಬರದನೋ ಕವನಾ
ಮಾಲಾ ಊರ ಶೋಭ ಹಾಡಿ ತಿಳಿಸ್ಯಾಳೋ
ಮಾಡಿಕೊಟ್ಟು ನಮನ
ಇಟ್ಟು ಅವರ ಮೇಲೆ ಅಭಿಮಾನ

ಬಸಪ್ಪ ಲಂಗೋಟಿ ಪದ ಕೇಳಿ: https://youtu.be/Abo4gawOmK8


ಧಾರವಾಡ ಜಿಲ್ಲೆಯ ಹೊಸ ಯಲ್ಲಾಪುರದ ಶ್ರೀ ವಾಲ್ಮೀಕಿ ಭಜನಾ ಸಂಘದ ಮಾರುತಿ ಮಾಸ್ತರ್ ಕಣವಿ ಹೊನ್ನಾಪುರ, ಆನಂದ ಮಾಸ್ತರ ಹೊಸಾ ಯಲ್ಲಾಪುರ `ಉರುಳಿ ಹೋತೋ ಕರುನಾಡ ಕಳಸ’ ಎಂದು ಹಾಡಿದ್ದಾರೆ. ಇವರು 1800 ಮಕ್ಕಳ ಶಾಲೆ ನಡೆಸುವ ಬಗ್ಗೆ ಉಲ್ಲೇಖಸುತ್ತಾರೆ..

ಉರುಳಿ ಹೋತೋ ಕರುನಾಡ ಕಳಸ
ಅಭಿಮಾನಿಗಳಿಗಾಯ್ತೋ ದೊಡ್ಡ ಮೋಸ
ಯಾರಿಗೂ ಹೇಳಲಿಲ್ಲ ನಿನ್ನ ಈ ಸಾಹಸ
ಶ್ರೀಮಂತರ ಜೋಡಿ ಕಡಿಮಿ ನಿನ್ನ ಸಹವಾಸ
ಕಡು ಬಡವರ ಜೋಡಿ ಹೆಚ್ಚು ನಿನ್ನ ಹವ್ಯಾಸ
ನೇತ್ರದಾನ ಮಾಡಿದಿ ನರದಾಸ
ಶಿವನ ಸರದಿನೊಳಗೆ ಮಾಡಿದಿ ನಿನ್ನ ವಾಸ
ನಗುಮುಖದ ರಾಜ ನೀ ಮತ್ತೆ ಜನುಸಾ
ಅಭಿಮಾನಿಗಳ ಕಣ್ಣೀರು ಒರೆಸಾ
ಹಾಲಿನಂಗ ಇತ್ತ ಅಪ್ಪು ನಿನ್ನ ಮನಸಾ
ನಮ್ಮನ್ನ ಅಗಲಿ ಸೇರಿದಿ ಕೈಲಾಸ

ಈ ಭಜನೆ ಕೇಳಿ: https://youtu.be/Aery1wIfQuM

ಪ್ರೀತಿಯ ಪರಿವಾಳ ಹಾಡಿನ ಮೂಲಕ ಹೆಚ್ಚು ಜನಪ್ರಿಯರಾದ ಜನಪದ ಹಾಡುಗಾರ ರಮೇಶ ಕುರುಬಗಟ್ಟಿ ಅವರು ಹಾಡಿದ ಹಾಡು..

ಪುನೀತ್ ರಾಜಕುಮಾರ್
ಏನಿತ್ ನಿನಗ ಅವಸಾರಾ
ಸರಳ ಸಜ್ಜನ ನೀ ಸಾಹುಕಾರ
ಬಡ ಮಕ್ಕಳ ಶಿಕ್ಷಣಕ್ಕಾಗಿದ್ದೀ ಆಧಾರ
ಮುದುಕರ ಮ್ಯಾಗ ನಿನ ಕನಿಕಾರ
ಅಭಿಮಾನಿ ಬಳಗ ನಿನಗ ಆಭಾರ
ಅಪ್ಪು ಅಂತ ಬಿಕ್ಕಳಿಸಿ ಅಳತಾರ

ಕನ್ನಡ ನಾಡಿನ ವರಸುದಾರ
ಕನ್ನಡ ನಾಡಿಂದಿ ಆದಿ ನೀ ದೂರ

ಇದ್ದಾಗೂ ನೀನು ದಾನಶೂರ
ಸತ್ಮ್ಯಾಗೂ ಮಾಡಿದಿ ನಿನ್ನ ನೇತ್ರದಾನ
ಅಭಿಮಾನಿಗಳು ನಿನ್ನ ದೇವರಾ
ತಂದಿಯಿಂದ ಬಂದಂತ ಸಂಸ್ಕಾರ
ಬರೆಯುವಾದ ಬ್ರಹ್ಮ ಹಣೆಬರಾ
ಮಾಡಬೇಕಿತ್ತು ಸ್ವಲ್ಪ ನೀ ಬೇಜಾರಾ
ವಿಧಿಯಣ್ಣಾ ಕೊಲೆ ಮಾಡಿದ ನೀ ಕೊಲೆಗಾರ

ಪದ ಕೇಳಿ: https://youtu.be/f4Uw7fdXiO8

ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಗುರುಗುಂಟಾದ ಅಮರಲಿಂಗೇಶ್ವರ ಭಜನಾ ಮಂಡಳಿಯು ಶಾಂತಯ್ಯ ಹಿರೇಮಠ ಕ್ಯಾತನಾಳ ಅವರು ರಚಿಸಿದ ಪದವನ್ನು ಸೋಮನಾಥ ಮತ್ತು ಸಂಗಡಿಗರು ಹಾಡಿದ್ದಾರೆ.

ಕನ್ನಡ ನಾಡಿನ ಕಲಾಭಿಮಾನಿಗಳೆ ಕಳೆಯಿತು ಯುವರತ್ನ
ಜಾತಿಮತ ಕುಲಗೋತ್ರಕೂ ಮೀರಿದ ದೇವತಾ ಮನುಷ್ಯಾನ
ಪುನೀತನೆಂಬ ನಾಮವ ಧರಿಸಿ
ಮೆರೆದನು ಪರಮಾತ್ಮ
ಹೃದಯದಲ್ಲಿ ಮೆರೆದನೋ ಪರಮಾತ್ಮ
ಬಾಲ ನಟನಾಗಿ ಬೆಟ್ಟದ ಹೂವಾಗಿ ಮೆರೆದವನೋ

ಪದ ಕೇಳಿ: https://youtu.be/L_Z2qFtEejA

ಅಥಣಿಯ ಎಂ.ಕೆ ಶ್ರಾವಣ್ ಬರೆದು, ಪಂಚಾಕ್ಷರಿ ವಟ್ಟಣ್ಣನವರ್ ಹಾಡಿದ ಹಾಡು ಹೆಚ್ಚು ಜನಪ್ರಿಯವಾಗಿದೆ. ಆ ಪದದ ಮೊದಲ ಸಾಲುಗಳು ಹೀಗಿವೆ..

ನಟ ಸಾವ್ರಭೌಮನೇ ರಾಜಕುಮಾರನೇ..
ಅಭಿಮಾನಿ ದೇವರೆಂದವನೇ.
ಅಗಲಿ ಹೋದೆ ನೀನಿಂದೂ
ಕಂಬನಿ ಮಿಡಿಯಿತು ನಮಗಿಂದೂ
ಕರುನಾಡ ಕಂದನೇ..
ಪುನಿತಾ ರಾಜನೇ ||

ಪ್ರೇಮದ ಕಾಣಿಕೆಯ ಚಿತ್ರದಿ ನೀ ಬಂದೆ
ನಟನೆಯಲ್ಲಿ ನೀ ನಟರಾಜ ನೀನಾದೆ
ಸನಾದಿ ಅಪ್ಪಣ್ಣ ತಾಯಿಗೆ ತಕ್ಕ ಮಗನೂ
ವಸಂತ ಗೀತಾ ಚಿತ್ರದ ಕಂದನೂ
ಹೊಸಬೆಳಕೂ ಭಾಗ್ಯವಂತಾ ಭೂಮಿಗೆ ಬಂದ ಭಗವಂತಾ

ಪದ ಕೇಳಿ: https://youtu.be/x0R8svVfTVs

ನಾಗರಾಜ ಬಿ. ನಾಡಗೌಡರ ಪದಕಟ್ಟಿ ಹಾಡಿದ ಹಾಡು ಹೀಗಿದೆ:

ಅಪ್ಪುನ ನೆನಪು ಮರೆಯದು ಮರೆಯದು ಮನಸು ಕಾಡ್ತೈತಿ
ಕಾಡ್ತೈತಿ ಕರುಳಾ ಉರಿತೈತಿ..ಮನಸು ಮರುಗತೈತಿ
ಹೇ ರಾಜಕುಮಾರಾ ಬೇಗನೆ ಬಾರಾ
ನೀನಿಲ್ಲದ ಚಂದನವು ಕೋಗಿಲೆ ಇಲ್ಲದ ಮಾಮರ ||
ಬಡವರ ಬಂಧು ಪ್ರೇಮದ ಸಿಂಧು ನಮ್ಮ ಬಸವಾ
ವಂಶಿಯಾಗಿ ಆಕಾಶದೆತ್ತರ ಬೆಳೆದವಾ
ಹೇ ಜಾಕೀ ನೀನು ಮರೆಯಾದೆಯೇನು?
ದೊಡ್ಮನೆ ಹುಡುಗ ವೀರ ಕನ್ನಡಿಗಾ ಯಾರಿವನು?
ಹೇಯ್..ಅಣ್ಣಾ ಬಾಂಡ್ ಅಣ್ಣನ ಮುದ್ದಿನ ಮಗನಿವನು..

ಪದ ಕೇಳಿ: https://youtu.be/Fq5iaqTFArs

ಬಿಜಾಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ರಬಿನಾಳ ಭಜನ ಮಂಡಳಿಯ, ಬಂಗಾರಗುಂಡ ಈಶ್ವರ ಅವರ ಸಾಹಿತ್ಯವನ್ನು ಭಾರತಿ ರಬಿನಾಳ ಹಾಡಿದ್ದಾರೆ. ಈ ಭಜನ ಮಂಡಳಿನ ಮಾಲಕ ಪ್ರಕಾಶ ಚಲವಾದಿ `ಎಲ್ಲಿ ಹೋದಕಡೆ ಹೊಳ್ಳಿ ಹೊಳ್ಳಿ ಹಾಡಸ್ತಾರ’ ಎಂದು ಈ ಹಾಡಿನ ಜನಪ್ರಿಯತೆಯನ್ನು ಹೇಳುತ್ತಾರೆ.

ಎಲ್ಲೀ ಹೋದಿ ಅಪ್ಪು ಅಣ್ಣಾ
ಮರೆಯಲಿ ಹೆಂಗಾ ನಿನ್ನಾ
ಗಾಜನೂರಾಗ ಗಂಡಾಗಿ ಹುಟ್ಟಿದಿ
ನುಮುಖದ ಚಿನ್ನಾ..||

ಪಾರ್ವತಿಯ ಸುತನಾ ತಂದಿ ನಮ್ಮ ರಾಜಣ್ಣಾ
ಮುತ್ತಿನ ಮಗನಾಗಿ
ಹುಟ್ಟಿದಿ ನೀನೂ ಧರಣೀಗೀ
ಚನ್ನೈನ ಆಸ್ಪತ್ರೆಯಲ್ಲಿ ಹುಟ್ಟಿದಿ
ಸೋಮವಾರದ ದಿನಾ
ಮಾರ್ಚ 17 ಕ್ಕೆ ಭಗವಂತ ಭವಕ ಕೊಟ್ಟಾನೋ ನಿನ್ನಾ

ಪದ ಕೇಳಿ: https://youtu.be/Fq5iaqTFArs

ಸಾಂಗ್ಲಿ ಜಿಲ್ಲಾ ಜತ್ತ ತಾಲೂಕಿನ ಅಂಕಲಗಿ ಜೈ ಹನುಮಾನ್ ಭಜನಾ ಮಂಡಳಿ, ಅಥಣಿ ತಾಲೂಕು ಕೊಟ್ಟಲಗಿಯ ಮಲ್ಲು ಕೊಟ್ಟಲಗಿ ರಚಿಸಿ, ರಾಜೇಶ್ವರಿ ಅಂಕಲಗಿ ಹಾಡಿದ ಹಾಡಿನ ಚರಣ:

ಕೋಟಿ ಕೋಟಿ ಅಭಿಮಾನಿ ಬಳಗಕ್ಕೆ ತುಂಬಲಾರದ ನೋವಾ
ಮಾಡಿ ಹೋಯಿತು ಬೆಟ್ಟದ ಹೂವಾ..
ಪುನಿತಣ್ಣಗ ಬಂತ್ಯಾಕೋ ಸಾವಾ
ದೊಡ್ಡ ಮನೆಯಲ್ಲಿ ಹುಟ್ಟಿ ಬಂದನಾ
ಕನ್ನಡಾಂಬೆಯ ಮಗುವಾ
ರಾಜಕುಮಾರ ಪಾರ್ವತಮ್ಮರ ಒಡಲಲಿ ಮೂಡಿದಾ ಹೂವಾ

ಹಾಡಿಕೆ ಕೇಳಿ : https://youtu.be/Fq5iaqTFArs

ಇಲ್ಲಿ ಕೆಲವು ಆಯ್ದ ಭಜನಾ ಗೀತೆಗಳನ್ನು ಕೊಟ್ಟಿದ್ದೇನೆ. ನೀವು ಯೂಟೂಬ್ ಸರ್ಚ್ ಪುನೀತ್ ಜನಪದ ಗೀತೆ. ಅಪ್ಪು ಜನಪದ ಸಾಂಗ್ ಎಂದು ಹುಡುಕಿದರೆ ಇನ್ನಷ್ಟು ಕೇಳಲು ಸಿಗುತ್ತವೆ. ಮುಖ್ಯವಾಗಿ ಜನಪದ ಕವಿ ರಚೆನೆಯ ಪರಂಪರೆ ಉಳಿದಿರುವುದು ಉತ್ತರ ಕರ್ನಾಟಕ ಭಾಗದಲ್ಲಿ. ಹಾಗಾಗಿಯೇ ಮೇಲಿನ ಹಾಡುಗಳೆಲ್ಲಾ ಉತ್ತರ ಕರ್ನಾಟಕದ ಜನಪದ ಕವಿಗಳು ಹಾಡಿರುವುದು, ಪದ ಕಟ್ಟಿರುವುದು. ಎಲ್ಲಾ ಜನಪದ ಹಾಡುಗಳು ಪುನೀತ್ ಅವರ ಸಿನೆಮಾ ಉಲ್ಲೇಖಕ್ಕಿಂತ ನಿಜ ಜೀವನದ ಉಲ್ಲೇಖವನ್ನು ಹೆಚ್ಚು ಮಾಡಿದ್ದಾರೆ. ಅಂತೆಯೇ ಪುನೀತ್ ಜನರಿಗಾಗಿ ಮಾಡಿದ ಕೆಲಸಗಳನ್ನು ಉಲ್ಲೇಖಿಸಿದ್ದಾರೆ. ಪುನೀತ್ ಬಡವರ ಬಗ್ಗೆ ಕನಿಕರ ಹೊಂದಿದ್ದ ಎನ್ನುವುದು ಎಲ್ಲಾ ಹಾಡುಗಾರರ ಮನದಿಂಗಿತ. ಅಂದರೆ ಸಿನೆಮಾ ಸ್ಟಾರ್ ಆಗಿದ್ದರೂ ಬಡ ಜನರಿಗೆ ಸಹಾಯ ನೆರವು ಮಾಡಿದರೆ ಜನಮನದಲ್ಲಿ ಹೆಚ್ಚುಕಾಲ ನಿಲ್ಲುತ್ತಾರೆ ಎನ್ನುವುದು ಜನಪದ ಹಾಡಿಕೆಯ ಆಶಯ ಇದ್ದಂತಿದೆ. ಅಂತೆಯೇ ಪುನೀತ್ ಶಿಕ್ಷಣಕ್ಕಾಗಿ ವಹಿಸಿದ ಕಾಳಜಿಯನ್ನು ಕೊಂಡಾಡಿದ್ದಾರೆ. ಜಾತಿ ಮತ ಮಾಡಲಿಲ್ಲ ಎಂದಿದ್ದಾರೆ. ಜಾತಿಮತ ಮೀರಿದ ವ್ಯಕ್ತಿತ್ವ ಜನಪದರ ಪ್ರಕಾರ ಒಳ್ಳೆಯತನದ ಅಳತೆಗೋಲು ಇದ್ದಂತಿದೆ. ಸಾವಿನ ನಂತರವೂ ನೇತ್ರದಾನ ಮಾಡುವ ಮೂಲಕ ನೀನು ಮಹಾಧಾನಿಯಾದೆ ಎಂದಿದ್ದಾರೆ. ಕೊನೆಯದಾಗಿ ಬರೆಯುವಾಗ ಬ್ರಹ್ಮ ಹಣೆಬರಾ/ಮಾಡಬೇಕಿತ್ತು ಸ್ವಲ್ಪ ನೀ ಬೇಜಾರಾ/ವಿಧಿಯಣ್ಣಾ ಕೊಲೆ ಮಾಡಿದ ನೀ ಕೊಲೆಗಾರ’ ಎಂದು ವಿಧಿಯನ್ನೂ ಶಪಿಸಿದ್ದಾರೆ. ಎಲ್ಲಾ ಪದಕಾರರುಮತ್ತೆ ಹುಟ್ಟಿ ಬಾ ಪುನೀತಣ್ಣಾ..’ ಎಂದು ಒಕ್ಕೊರಲಿನಿಂದ ಅಭಿಮಾನ ತೋರಿದ್ದಾರೆ. ಹೀಗೆ ಜನಪದರಲ್ಲಿ ಪುನೀತ್ ಪುನರ್ ಸೃಷ್ಠಿಯಾದದ್ದು ನಿಜಕ್ಕೂ ದೊಡ್ಡ ಸಂಗತಿ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page