Friday, June 14, 2024

ಸತ್ಯ | ನ್ಯಾಯ |ಧರ್ಮ

ತುಮಕೂರಿನಲ್ಲಿ ಗರ್ಭಿಣಿ ಸಾವು : ಮೂವರು ಸಿಬ್ಬಂದಿಗಳ ಅಮಾನತು

ತುಮಕೂರು : ಹೆರಿಗೆ ನೋವಿನಿಂದ ನರಳುತ್ತಿದ್ದ ಬಳಲುತ್ತಿದ್ದ ತುಮಕೂರಿನ ಭಾರತೀನಗರದ ಶ್ರೀಮತಿ ಕಸ್ತೂರಿ (30) ಎಂಬ ಮಹಿಳೆ ವೈದ್ಯೆಯ ನಿರ್ಲಕ್ಷ್ಯದ ಕಾರಣದಿಂದ ಸಾವನ್ನಪ್ಪಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸಂಬಂಧಪಟ್ಟ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು ಹಾಗೂ ಕರ್ತವ್ಯ ನಿರತ ಮೂರು ಶುಶ್ರೂಷಾಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.

ಹೆರಿಗೆ ಬಳಲುತ್ತಿದ್ದ ತುಮಕೂರಿನ ಭಾರತೀನಗರದ ಶ್ರೀಮತಿ ಕಸ್ತೂರಿ (30) ಎಂಬ ಮಹಿಳೆಯನ್ನು ನಿನ್ನೆ ತಡರಾತ್ರಿ ಸ್ಥಳೀಯರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಕರ್ತವ್ಯದಲ್ಲಿದ್ದ ವೈದ್ಯೆ, ಆ ಗರ್ಭಿಣಿಗೆ ಹೆರಿಗೆ ಮಾಡಿಸದೆ ತಾಯಿ ಕಾರ್ಡ್ ಮಾಡಿಸಿಲ್ಲ ಎನ್ನುವ ನೆಪ ಹೇಳಿ ನಿರ್ದಯವಾಗಿ ವಾಪಸ್ ಕಳಿಸಿದ್ದಾರೆ. ಬೇರೆ ದಾರಿ ಇಲ್ಲದೆ, ಹಣವೂ ಇಲ್ಲದೆ ಹೊಟ್ಟೆ ನೋವಿನಲ್ಲೇ ಮನೆಗೆ ವಾಪಸ್ ಬಂದಿದ್ದ ಆ ಮಹಿಳೆ, ಇಡೀ ರಾತ್ರಿ ನರಳಿನರಳಿ ಬೆಳಗಿನಜಾವ ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ ಎರಡು ಮಕ್ಕಳ ಜತೆಗೆ ತಾನೂ ಸಾವನ್ನಪ್ಪಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ವೈದ್ಯರು ಮತ್ತು ಶುಶ್ರೂಷಕರ ಕರ್ತವ್ಯ ಲೋಪ, ನಿರ್ಲಕ್ಷತೆಯು ಗಂಭೀರ ಸ್ವರೂಪದ್ದಾಗಿರುವುದರಿಂದ ಆಯುಕ್ತರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಸಂಬಂಧಪಟ್ಟ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು ಹಾಗೂ ಕರ್ತವ್ಯ ನಿರತ ಮೂರು ಶುಶ್ರೂಷಾಧಿಕಾರಿಗಳನ್ನು ತನಿಖೆ ಹಾಗೂ ಶಿಸ್ತುಕ್ರಮ ಬಾಕಿ ಇರಿಸಿ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ತುಮಕೂರಿನ ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆಸ್ಪತ್ರೆಗೆ 24 ಗಂಟೆಯೊಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಬೇಕು ಎಂದು ನೋಟಿಸ್‌ ಜಾರಿ ಮಾಡಿದೆ.

ಘಟನೆಯ ನಂತರ  ಸಾರ್ವಜನಿಕರಿಗೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ಆಯುಕ್ತರು ಕೆಲವೊಂದು ಅಂಶಗಳನ್ನು ತಿಳಿಸಿದ್ದು ಅವುಗಳು ಈ ಕೆಳಗಿನಂತಿವೆ.

  • ಕರ್ನಾಟಕ ರಾಜ್ಯವು ಸಾರ್ವಜನಿಕ ಆರೋಗ್ಯ ಪದ್ಧತಿಯಲ್ಲಿ ಇದುವರೆಗೂ ರೋಗಿಗಳಿಗೆ ತಾಯಿ ಕಾರ್ಡ್‌, ಆಧಾರ್‌ ಕಾರ್ಡ್‌, ಪಡಿತರ ಚೀಟಿ ಇಲ್ಲದೆಯೂ ಆರೋಗ್ಯ ಸೇವೆಗಳನ್ನು ನೀಡುತ್ತಾ ಬಂದಿದೆ. ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆಯನ್ನು ನೀಡುವ ಸಂದರ್ಭದಲ್ಲಿ ಯಾವುದೇ ದಾಖಲೆಗಳಲು ಅಗತ್ಯವಿರುವುದಿಲ್ಲ.
  • ರೋಗಿಯು ಯಾವುದೇ ದಾಖಲೆಯು ಅಂದರೆ ತಾಯಿ ಕಾರ್ಡ್‌, ಆಧಾರ್‌ ಕಾರ್ಡ್‌, ಪಡಿತರ ಚೀಟಿ ಇತರೆ ದಾಖಲೆಗಳು ಇಲ್ಲದೇ ಇದ್ದರೂ ಸಹ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆಯನ್ನು ನೀಡುವುದು ಆಸ್ಫತ್ರಗಳ/ಆರೋಗ್ಯ ಕೇಂದ್ರಗಳ ಆದ್ಯ ಕರ್ತವ್ಯವಾಗಿರುತ್ತದೆ.

ಅಷ್ಟಲ್ಲದೇ, ದಿ.02/11/2022ರಂದು ತುಮಕೂರಿನಲ್ಲಿ ನಡೆದ ಘಟನೆಯ ಆಧಾರದ ಮೇಲೆ ಈ ಕೆಳಕಂಡ ಅಂಶಗಳನ್ನುಆರೋಗ್ಯ ಇಲಾಖೆ ಮತ್ತೊಮ್ಮೆ ಪುನರುಚ್ಛರಿಸಿದೆ.

  • ಆರೋಗ್ಯ ಸೇವೆಯನ್ನುನೀಡುವಾಗ ರೋಗಿಯ ರಾಷ್ಟ್ರೀಯತೆ/ಜಾತಿ/ವರ್ಗ ಆರ್ಥಿಕ ಸ್ಥಿತಿಯನ್ನು ಅವಲಂಭಿಸಬಾರದು.
  • ತುರ್ತು ಪರಿಸ್ಥಿತಿಯಲ್ಲಿ ರೋಗಿಯ ನೋವು ಸಂಕಟವನ್ನು ನಿವಾರಿಸುವುದು ವೈದ್ಯರ ಶುಶ್ರೂಷಕರ ಮತ್ತು ಇತರೆ ಸಿಬ್ಬಂದಿ ವರ್ಗದವರ ಆದ್ಯ ಕರ್ತವ್ಯವಾಗಿರುತ್ತದೆ.
  • ಆದುದರಿಂದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ತುರ್ತು ಪರಿಸ್ಥಿತಿಯಲ್ಲಿ ರೋಗಿಯು ಯಾವುದೇ ರೀತಿಯ ದಾಖಲೆಗಳನ್ನು ಒದಗಿಸಲು ಒತ್ತಾಯಿಸಬಾರದು.

ಎಂದು ತಿಳಿಸುವುದರ ಜೊತೆಗೆ ತುಮಕೂರಿನಲ್ಲಿ ನಡೆದಂತಹ ಘಟನೆಗಳು ಮರುಕಳಿಸಿದಲ್ಲಿ ಸಂಬಂಧಪಟ್ಟ ನೌಕರರನ್ನು ಇಲಾಖೆಯು ಸೇವೆಯಿಂದ ವಜಾಗೊಳಿಸಿ ಅವರುಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಯನ್ನು ಹಾಕಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟಂತೆ ನೆನ್ನೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿಯವರು, ʼ ʼಆರೋಗ್ಯ ಇಲಾಖೆ ಅದೆಷ್ಟು ಹಾಳಾಗಿ ಹೋಗಿದೆ ಎನ್ನುವುದಕ್ಕೆ ಇದಕ್ಕಿಂತ ದುರಂತ ಸಾಕ್ಷಿ ಇನ್ನೊಂದಿಲ್ಲ. ಈ ಹದಗೆಟ್ಟ ಆರೋಗ್ಯ ವ್ಯವಸ್ಥೆ ತುಮಕೂರಿನಲ್ಲಿ ಅನಾಥ ಬಾಣಂತಿಯ ಜತೆಗೇ ಹುಟ್ಟಿದೊಡನೆ ಎರಡು ಹಸುಗೂಸುಗಳನ್ನು ಬಲಿ ತೆಗೆದುಕೊಂಡಿದೆ. ಅಭಿವೃದ್ಧಿ, ಆವಿಷ್ಕಾರ ಎಂದೆಲ್ಲ ಬೀಗುವ ಈ ಸರಕಾರ ನಾಚಿಕೆಯಿಂದ ತಲೆ ತಗ್ಗಿಸಬೇಕಿದೆ. ಈ ಸರಕಾರಿ ಕೊಲೆಗಳಿಗೆ ಆರೋಗ್ಯ ಸಚಿವರು ನೈತಿಕ ಹೊಣೆ ಹೊರಲೇಬೇಕು, ಡಾ.ಕೆ.ಸುಧಾಕರ್ ಅವರು ಕೂಡಲೇ ರಾಜೀನಾಮೆ ನೀಡಲೇಬೇಕು, ಇಲ್ಲವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು. ತಬ್ಬಲಿಯಾದ ಮಗುವಿನ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಬೇಕು ʼ ಎಂದು ಕಿಡಿಕಾರಿದ್ದರು.

ಈ ಕುರಿತು ಟ್ವೀಟ್‌ ಮಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆ ಸಚಿವರಾದ ಡಾ.ಕೆ.ಸುಧಾಕರ್, ʼಮೇಲ್ನೋಟಕ್ಕೆ ಹೆರಿಗೆ ವಾರ್ಡ್ ನ ಮೂವರು ದಾದಿಯರು ಹಾಗೂ ಕರ್ತವ್ಯ ನಿರತ ವೈದ್ಯರ ಕರ್ತವ್ಯಲೋಪ ಕಂಡುಬಂದಿದ್ದು, ತನಿಖೆಗೆ ಆದೇಶ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಲ್ವರನ್ನೂ ಅಮಾನತು ಮಾಡಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಯ ನೋವು, ಸಂಕಟವನ್ನು ನಿವಾರಿಸುವುದು ವೈದ್ಯರ, ಶುಶ್ರೂಷಕರ ಮತ್ತು ಇತರೆ ಸಿಬ್ಬಂದಿ ವರ್ಗದವರ ಆದ್ಯ ಕರ್ತವ್ಯವಾಗಿದೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರೋಗಿಯ ಯಾವುದೇ ದಾಖಲಾತಿಗಳನ್ನು ನೀಡಲು ಒತ್ತಾಯಿಸಬಾರದು ಎಂದು ಈಗಾಗಲೇ ಸರ್ಕಾರದ ಆದೇಶವಿದ್ದು, ಮತ್ತೊಮ್ಮೆ ಅದೇಶವನ್ನು ಪ್ರಕಟಿಸಲಾಗಿದೆʼ ಎಂದು ತಿಳಿದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು