Monday, June 17, 2024

ಸತ್ಯ | ನ್ಯಾಯ |ಧರ್ಮ

ತುರ್ತು ಚಿಕಿತ್ಸೆ ನಿರಾಕರಿಸಿದರೆ ಕ್ರಿಮಿನಲ್‌ ಮೊಕದ್ದಮೆ: ಆರೋಗ್ಯ ಇಲಾಖೆ ಎಚ್ಚರಿಕೆ

ಬೆಂಗಳೂರು: ಸಾರ್ವಜನಿಕ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ರೋಗಿಗಳಿಗೆ ತುರ್ತು ಚಿಕಿತ್ಸೆ ನಿರಾಕರಿಸಿ, ಏನಾದರೂ ಅಹಿತಕರ ಘಟನೆ ಸಂಭವಿಸಿದಲ್ಲಿ, ಸಂಬಂಧಪಟ್ಟ ಅಧಿಕಾರಿ, ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗುವುದಲ್ಲದೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ.

ತುಮಕೂರಿನಲ್ಲಿ ಇತ್ತೀಚಿಗೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿ ಮಹಿಳೆಗೆ ತಾಯಿ ಕಾರ್ಡ್‌, ಆಧಾರ್‌ ಕಾರ್ಡ್‌ ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿದ ಪರಿಣಾಮವಾಗಿ ಆಕೆ ಮತ್ತು ಆಕೆಯ ಅವಳಿ ಶಿಶುಗಳು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೊಸ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಚಿಕಿತ್ಸೆ ನಿರಾಕರಿಸುವ ವೈದ್ಯರು, ಶುಶ್ರೂಷಕರಿಗೆ ಗಂಭೀರ ಎಚ್ಚರಿಕೆ ನೀಡಿದೆ.

ತುರ್ತುಪರಿಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ಬಳಿ ಯಾವುದೇ ದಾಖಲೆ ಇಲ್ಲದೇ ಇದ್ದರೂ ತಕ್ಷಣ ಚಿಕಿತ್ಸೆ ನೀಡಬೇಕು. ಆಧಾರ್‌ ಕಾರ್ಡ್‌, ತಾಯಿ ಕಾರ್ಡ್‌, ರೇಷನ್‌ ಕಾರ್ಡ್‌ ಇಲ್ಲದೇ ಇದ್ದರೂ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಚಿಕಿತ್ಸೆ ನೀಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ರೋಗಿಗಳಿಗೆ ಚಿಕಿತ್ಸೆ ನೀಡುವಾಗ ರೋಗಿಯ ರಾಷ್ಟ್ರೀಯತೆ, ವರ್ಗ, ಜಾತಿ ಮತ್ತು ಆರ್ಥಿಕ ಸ್ಥಿತಿಯನ್ನು ಪರಿಗಣಿಸಬಾರದು. ತುರ್ತು ಪರಿಸ್ಥಿತಿಗೆ ರೋಗಿಗೆ ಚಿಕಿತ್ಸೆ ಅವಶ್ಯಕವಾಗಿರುವುದರಿಂದ, ವೈದ್ಯರು, ಶುಶ್ರೂಷಕರು ಮತ್ತು ಇತರೆ ಸಿಬ್ಬಂದಿಗಳು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆ ತಿಳಿಸಿದೆ.

ತುರ್ತು ಚಿಕಿತ್ಸೆಗೆ ಸಂಬಂಧಿಸಿದಂತೆ, ರೋಗಿಗಳಿಂದ ಯಾವುದೇ ರೀತಿಯ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸಬಾರದು, ದಾಖಲೆಗಳು ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿ ಅಹಿತಕರ ಘಟನೆಗಳು ನಡೆದಲ್ಲಿ ಅಧಿಕಾರಿ, ನೌಕರರನ್ನು ಹೊಣೆ ಮಾಡಿ, ಸೇವೆಯಿಂದ ವಜಾಗೊಳಿಸಲಾಗುವುದು. ಅಷ್ಟೇ ಅಲ್ಲದೆ ಅವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು