Thursday, June 20, 2024

ಸತ್ಯ | ನ್ಯಾಯ |ಧರ್ಮ

‘ತಿರಂಗಾ’ ಅಭಿಯಾನದಿಂದ ರಾಷ್ಟ್ರಧ್ವಜದ ಗೌರವಕ್ಕೆ ಧಕ್ಕೆಯಾಗಿದೆಯೇ?

ಧ್ವಜ ಸಂಹಿತೆಗೆ ತಿದ್ದುಪಡಿ ತಂದ ದಿನದಿಂದಲೇ ಬಿಜೆಪಿ ಸರ್ಕಾರದ ನಿಲುವಿನ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೆ ಈಗ ಪ್ರತಿ ದಿನವೂ ಒಂದೊಂದು ಅವಾಂತರ ಸೃಷ್ಟಿಯಾಗುತ್ತಾ ರಾಷ್ಟ್ರಧ್ವಜದ ಗೌರವಕ್ಕೆ ನಿರಂತರವಾಗಿ ಧಕ್ಕೆಯಾಗುತ್ತಿದೆ.

ಜನವರಿ 26 2002 ರಂದು ಜಾರಿಗೆ ಬಂದ ರಾಷ್ಟ್ರೀಯ ಧ್ವಜ ಸಂಹಿತೆಯಲ್ಲಿ ರಾಷ್ಟ್ರಧ್ವಜದ ಬಳಕೆ, ಅದರ ಪ್ರದರ್ಶನ ಮತ್ತು ಅದರ ಹಾರಾಟದ ಬಗೆಗೆ ಸ್ಪಷ್ಟವಾಗಿ ಕಾನೂನಿನ ಅಡಿಯಲ್ಲಿ ಅದರದ್ದೇ ಆದ ನಿಯಮಗಳನ್ನು ಅಂದಿನ ಸರ್ಕಾರ ಜಾರಿಗೆ ತಂದಿತ್ತು. ಯಾರು, ಯಾವ ಸಂದರ್ಭಕ್ಕೆ ರಾಷ್ಟ್ರಧ್ವಜ ಬಳಸಬೇಕು, ಯಾವ ಸಮಯಕ್ಕೆ ಧ್ವಜಾರೋಹಣ ಆಗಬೇಕು ಎಂಬುದರಿಂದ ಹಿಡಿದು ಯಾವ ರೀತಿಯಲ್ಲಿ ಧ್ವಜವನ್ನು ಸಂರಕ್ಷಣೆ ಮಾಡಬೇಕು ಎಂಬ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ. ಅಗತ್ಯವಿಲ್ಲದ ಬಳಕೆ ತಡೆಗಟ್ಟುವ ಕಾರಣಕ್ಕಾಗಿ ಕಾಯಿದೆ 1950 ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯಿದೆ 1971 ರಲ್ಲಿ ಒದಗಿಸಲಾದ ನಿಯಮಗಳ ಮಟ್ಟಿಗೆ ಹೊರತುಪಡಿಸಿ ಸಾರ್ವಜನಿಕರು, ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿ ಸದಸ್ಯರು ರಾಷ್ಟ್ರಧ್ವಜದ ಪ್ರದರ್ಶನಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಭಾರತದ ಧ್ವಜ ಸಂಹಿತೆ 2002ಯು ರಾಷ್ಟ್ರೀಯ ಧ್ವಜದ ಬಳಕೆ, ಪ್ರದರ್ಶನ ಮತ್ತು ಹಾರಾಟಕ್ಕಾಗಿ ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನೂ ಹೇಳಿದೆ.

ಆದರೆ ಈ ಬಾರಿ ಕೇಂದ್ರ ಬಿಜೆಪಿ ಸರ್ಕಾರ ಧ್ವಜ ಸಂಹಿತೆಗೆ ಅನೇಕ ಕಡೆ ತಿದ್ದುಪಡಿ ತಂದಿತ್ತು. ತಿದ್ದುಪಡಿಯಲ್ಲಿ ರಾಷ್ಟ್ರಧ್ವಜ ತಯಾರಿಸುವ ಹಕ್ಕನ್ನು ಯಾರು ಬೇಕಾದರೂ ತಯಾರಿಸಬಹುದು, ಎಲ್ಲಿ ಬೇಕಾದರೂ ತಯಾರಿಸಬಹುದು ಹಾಗೇ ಯಾವ ಬಟ್ಟೆ ಉಪಯೋಗಿಸಿಯೂ ತಯಾರಿಸಬಹುದು ಎಂಬ ಅಂಶಗಳನ್ನು ತರಲಾಗಿದೆ. ಕೈಯಿಂದ ನೇಯ್ದ ಅಥವಾ ಯಂತ್ರದಿಂದ ಮಾಡಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ, ಖಾದಿ ಬಂಟಿಂಗ್‌ನಿಂದ ಮಾಡಿದ ರಾಷ್ಟ್ರಧ್ವಜಗಳನ್ನು ಸಹ ಬಳಸಬಹುದಾಗಿದೆ. ಈ ಹಿಂದೆ ಧ್ವಜ ಹಾರಿಸುವ ನಿಯಮಗಳ ಪ್ರಕಾರ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಹಾರಿಸಬೇಕು. ಸೂರ್ಯಾಸ್ತದ ಮುಂಚೆ ಧ್ವಜವನ್ನು ಇಳಿದು ಅದನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ ಇಡಬೇಕಿತ್ತು. ಆದರೆ ತಿದ್ದುಪಡಿಗೊಂಡ ಸಂಹಿತೆಯಲ್ಲಿ ಯಾರು ಎಲ್ಲಿ ಬೇಕಾದರೂ ಹಗಲು ರಾತ್ರಿ ರಾಷ್ಟ್ರಧ್ವಜ ಹಾರಿಸಬಹುದು ಎಂದು ಕೇಂದ್ರ ತಂದ ನಿಯಮದಲ್ಲಿ ಉಲ್ಲೇಖವಾಗಿದೆ.

ಬಿಜೆಪಿ ಪಕ್ಷ ‘ಹರ್ ಘರ್ ತಿರಂಗಾ’ ಅಭಿಯಾನದ ಏಕೈಕ ಉದ್ದೇಶದಿಂದ ತಿದ್ದುಪಡಿ ಮಾಡಿದ ಸಂಹಿತೃಯಿಂದ ರಾಷ್ಟ್ರಧ್ವಜದ ಮೌಲ್ಯ ಕುಸಿಯಿತೇ ಎಂಬ ದೊಡ್ಡ ಅನುಮಾನ ಸೃಷ್ಟಿಯಾಗಿದೆ. ಸಧ್ಯ ಈ ತಿದ್ದುಪಡಿಯಿಂದ ಇಂದು ರಾಷ್ಟ್ರಧ್ವಜ ಕಂಡಕಂಡಲ್ಲೆಲ್ಲ ಬಿದ್ದಿರುವುದು ಕಾಣ ಸಿಗುತ್ತಿದೆ. ಧ್ವಜ ಸಂಹಿತೆ ಬಗ್ಗೆ ಕೊಂಚವೂ ಅರಿವು ಇರದವರೆಲ್ಲ ಧ್ವಜ ತಯಾರಿಗೆ ಇಳಿದು ತ್ರಿವರ್ಣದ ಸರಿಯಾದ ಜೋಡಣೆ ಇಲ್ಲದೇ, ಅಶೋಕ ಚಕ್ರವನ್ನು ಎಲ್ಲೆಂದರಲ್ಲಿ ಕೂರಿಸಿರುವುದು ಸರ್ವೇ ಸಾಮಾನ್ಯವಾಗಿ ಕಾಣ ಸಿಗುತ್ತಿದೆ. ಸಂತೆಯಲ್ಲಿ ತರಕಾರಿ, ಮೀನು ಮಾರಾಟ ಮಾಡುವ ಹಾಗೆ ಧ್ವಜವನ್ನು ಮಾರಾಟ ಮಾಡುತ್ತಿರುವುದು ಧ್ವಜಕ್ಕೆ ಇರುವ ಗೌರವ ಕಡಿಮೆಯಾದಂತಾಗಿದೆ. ಜನರಿಗೆ ರಾಷ್ಟ್ರಭಕ್ತಿ ಹೆಚ್ಚಲು ಈ ಅಭಿಯಾನ ಎಂದೆಲ್ಲಾ ಬಿಜೆಪಿ ಪಕ್ಷ ಹೇಳಿಕೊಂಡರೂ ಕೊನೆಯಲ್ಲಿ ಹಾದಿಬೀದಿಗಳಲ್ಲಿ ರಾಷ್ಟ್ರಧ್ವಜ ಕಾಣಿಸಿಕೊಂಡರೆ ಅದ್ಯಾವ ತರದ ರಾಷ್ಟ್ರಭಕ್ತಿ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ.

ರಾಷ್ಟ್ರಭಕ್ತಿ ನಮ್ಮ ಮನದೊಳಗೆ ಇರಬೇಕು. ಅದೊಂದು ಪ್ರದರ್ಶನದ ವಸ್ತುವಲ್ಲ. ಯಾವುದೇ ಅಭಿಮಾನ, ಭಕ್ತಿ ತೋರ್ಪಡಿಕೆಗೆ ಇಳಿದರೆ ಅದೊಂದು ಬೂಟಾಟಿಕೆ ಎನಿಸಿಕೊಳ್ಳುವುದೇ ಹೊರತು ಬೇರೇನಲ್ಲ ಎಂಬುದು ಈ ಅಭಿಯಾನಕ್ಕೆ ವಿರುದ್ಧವಾಗಿರುವವರ ಅಭಿಪ್ರಾಯವಾಗಿದೆ.

ಇನ್ನು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅದ್ವಾನಕ್ಕೆ ಹರ್ ಘರ್ ತಿರಂಗಾ ಅಭಿಯಾನ ದಾರಿ ಮಾಡಿಕೊಡುತ್ತಿದೆ. ಕೆಲವು ಕಡೆ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಬೇರೆ ಸಂಘಟನೆಯ ಧ್ವಜ ಹಾರಿಸುವ ಮೂಲಕ, ಕೆಲವು ಕಡೆ ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರೇ ಧ್ವಜವನ್ನು ಉಲ್ಟಾ ಇಟ್ಟುಕೊಂಡ ಫೋಟೋಗಳು ಜಾಲತಾಣಗಳಲ್ಲಿ ಸಾಮಾನ್ಯ ಎನ್ನುವಂತೆ ಹರಿದಾಡುತ್ತಿದೆ.

ಮೂಲದಿಂದ RSS ಸಂಘಟನೆಯ ಕೂಸು ಎಂದೇ ಬಿಂಬಿತವಾಗಿರುವ ಬಿಜೆಪಿ ಪಕ್ಷ ಇವನ್ನೆಲ್ಲ ಉದ್ದೇಶಪೂರ್ವಕವಾಗಿ ಮಾಡಿದೆ ಎಂಬ ಆರೋಪ ಕೂಡಾ ಇದೆ. ಸ್ವಾತಂತ್ರ್ಯ ಪೂರ್ವದಿಂದಲೂ RSS ರಾಷ್ಟ್ರಧ್ವಜವನ್ನು ವಿರೋಧಿಸಿಕೊಂಡು ಬಂದಿತ್ತು. ಸ್ವಾತಂತ್ರ್ಯ ನಂತರ ಕೇವಲ ಎರಡು ಬಾರಿ (1947 ಆಗಸ್ಟ್ 15 ಮತ್ತು 1950 ಜನವರಿ 26) RSS ಕೇಂದ್ರ ಕಛೇರಿಯಲ್ಲಿ ರಾಷ್ಟ್ರಧ್ವಜ ಹಾರಾಡಿದೆ. ಆ ನಂತರ ಐದು ದಶಕಗಳ ಕಾಲ RSS ಒಂದೇ ಒಂದು ದಿನ ರಾಷ್ಟ್ರಧ್ವಜ ಹಾರಿಸಿರಲಿಲ್ಲ.

ಇದರ ಜೊತೆಗೆ ಅಂಬಾನಿ ಒಡೆತನದ ಪಾಲಿಸ್ಟರ್ ಬಟ್ಟೆಗೆ ಎಲ್ಲೆಡೆ ಬೇಡಿಕೆ ಹೆಚ್ಚಿಸುವ ಉದ್ದೇಶ ಕೂಡಾ ಈ ಅಭಿಯಾನದ ಹಿಂದಿದೆ ಎಂಬುದು ಬಿಜೆಪಿ ಮೇಲಿರುವ ಮತ್ತೊಂದು ಆರೋಪ. ಈ ಎಲ್ಲಾ ಹಿನ್ನೆಲೆ ಗಮನಿಸಿದರೆ ಬಿಜೆಪಿ ರಾಷ್ಟ್ರಧ್ವಜದ ಮೌಲ್ಯ ಕುಸಿಯುವ ಉದ್ದೇಶದಿಂದಲೇ ಬಿಜೆಪಿ ಪಕ್ಷ ಈ ತಿರಂಗಾ ಅಭಿಯಾನ ಜಾರಿಗೆ ತಂದಿದೆ ಎಂದು ಪ್ರತಿಪಕ್ಷ ಸೇರಿದಂತೆ ಹೆಚ್ಚಿನವರು ಮಾಡುತ್ತಿರುವ ಆರೋಪವಾಗಿದೆ. ಸ್ವಾತಂತ್ರ್ಯ ದಿನಕ್ಕೆ ಮೂರ್ನಾಲ್ಕು ದಿನ ಮುಂಚೆಯೇ ಇಷ್ಟೆಲ್ಲಾ ಅದ್ವಾನಗಳು ಕಣ್ಣ ಮುಂದಿವೆ. ಇನ್ನು ಸ್ವಾತಂತ್ರ್ಯ ದಿನ ಮತ್ತು ನಂತರದ ದಿನಗಳಲ್ಲಿ ರಾಷ್ಟ್ರಧ್ವಜದ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಬಹುದು ಎಂಬುದು ಎಲ್ಲಾ ದೇಶಪ್ರೇಮಿಗಳಲ್ಲಿ ಹೆಚ್ಚಿದ ಆತಂಕವಾಗಿದೆ.

ಪ್ರಗತ್‌ ಕೆ.ಆರ್
ಪತ್ರಕರ್ತರು ಮತ್ತು ಬರಹಗಾರರು

Related Articles

ಇತ್ತೀಚಿನ ಸುದ್ದಿಗಳು