Thursday, July 31, 2025

ಸತ್ಯ | ನ್ಯಾಯ |ಧರ್ಮ

ತಿರುನೆಲ್ವೇಲಿ ಜಾತಿ ಹತ್ಯೆ: ಯುವತಿಯ ತಂದೆ, ಪೊಲೀಸ್‌ ಅಧಿಕಾರಿ ಸರವಣ ಬಂಧನ

ತಿರುನೆಲ್ವೇಲಿ: ದಲಿತ ಯುವಕ ಕವಿನ್ ಸೆಲ್ವಗಣೇಶ್ ಅವರ ಹತ್ಯೆ ಪ್ರಕರಣದಲ್ಲಿ ಮುಖ್ಯ ಆರೋಪಿಯ ತಂದೆ ಸರವಣನನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ. ತನ್ನ ಮಗಳು ಮತ್ತು ಕವಿನ್ ಅವರ ಸಂಬಂಧಕ್ಕೆ ವಿರೋಧವಿದ್ದ ಕಾರಣ ಈ ಕೊಲೆ ನಡೆದಿತ್ತು.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಉಪ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಸರವಣನ್ ಅವರನ್ನು ಕ್ರೈಮ್ ಬ್ರಾಂಚ್ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್‌ಮೆಂಟ್ (CBCID) ಬಂಧಿಸಿದೆ.

ಜುಲೈ 27ರಂದು ತಿರುನೆಲ್ವೇಲಿಯ ಕೆಟಿಸಿ ನಗರದಲ್ಲಿ ಕವಿನ್‌ನನ್ನು ಮುಖ್ಯ ಆರೋಪಿ ಸುರ್ಜಿತ್ ಕೊಚ್ಚಿ ಹತ್ಯೆ ಮಾಡಿದ್ದ. ಪ್ರಾಥಮಿಕ ತನಿಖೆಯ ಪ್ರಕಾರ, ಪರಿಶಿಷ್ಟ ಜಾತಿಗೆ ಸೇರಿದ ಕವಿನ್ ಮತ್ತು ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಸುರ್ಜಿತ್‌ನ ಸಹೋದರಿ ಸುಭಾಷಿಣಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸುಭಾಷಿಣಿಯ ಕುಟುಂಬವು ಜಾತಿ ಭೇದದ ಕಾರಣದಿಂದ ಈ ಸಂಬಂಧವನ್ನು ವಿರೋಧಿಸಿತ್ತು.

ಈ ಪ್ರಕರಣದಲ್ಲಿ ಇದು ಎರಡನೇ ಬಂಧನವಾಗಿದೆ. ಕವಿನ್‌ನನ್ನು ಕೊಲೆ ಮಾಡಿದ ಆರೋಪದ ಮೇಲೆ ಸುರ್ಜಿತ್ ಈಗಾಗಲೇ ಬಂಧನದಲ್ಲಿದ್ದಾನೆ ಮತ್ತು ಆತನನ್ನು ಗೂಂಡಾ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿದೆ. ಸುರ್ಜಿತ್‌ನ ತಂದೆ ಸರವಣನ್ ಮತ್ತು ತಾಯಿ ಕೃಷ್ಣಕುಮಾರಿ ಇಬ್ಬರೂ ಪೊಲೀಸ್ ಅಧಿಕಾರಿಗಳಾಗಿದ್ದು, ಪ್ರಕರಣದಲ್ಲಿ ಸಹ-ಆರೋಪಿಗಳಾಗಿ ಹೆಸರಿಸಲ್ಪಟ್ಟಿದ್ದಾರೆ. ನ್ಯಾಯಯುತ ಮತ್ತು ಪಾರದರ್ಶಕ ತನಿಖೆ ಖಚಿತಪಡಿಸಿಕೊಳ್ಳಲು ಜುಲೈ 29ರಂದು ಅವರಿಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಪೊಲೀಸ್ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಇದ್ದ ಕಾರಣ, ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸಲಾಗಿದೆ. ಸರವಣನನ್ನು ಬಂಧಿಸಿರುವ ಹಿನ್ನೆಲೆಯಲ್ಲಿ, ನ್ಯಾಯಕ್ಕಾಗಿ ಆಗ್ರಹಿಸಿ ಇಲ್ಲಿಯವರೆಗೆ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದ ಕವಿನ್ ಕುಟುಂಬ ಈಗ ಅಂತ್ಯಕ್ರಿಯೆ ನಡೆಸಲು ಒಪ್ಪುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ಇಂತಹ ಜಾತಿ ಆಧಾರಿತ ಹತ್ಯೆಗಳನ್ನು ತಡೆಗಟ್ಟಲು ಪ್ರತ್ಯೇಕ ಕಾನೂನು ಜಾರಿಗೆ ತರಬೇಕು ಎಂದು ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page