Sunday, June 23, 2024

ಸತ್ಯ | ನ್ಯಾಯ |ಧರ್ಮ

ತಿರುವು ಪಡೆದುಕೊಳ್ಳುತ್ತಿರುವ ಬಿಜೆಪಿ ನಾಯಕಿ ಸಾವಿನ ಪ್ರಕರಣ

ಬಿಜೆಪಿ ನಾಯಕಿ, ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಪೋಗಟ್ ಸಾವಿನ ಸುತ್ತ ಪ್ರತಿ ದಿನ ಒಂದಿಲ್ಲೊಂದು ಹೊಸ ತಿರುವುಗಳು ಪಡೆದುಕೊಳ್ಳುತ್ತಿದೆ. ಸೋನಾಲಿ ಪೋಗಟ್ ಸಾವಿನ ಶುರುವಿನಲ್ಲಿ ಹೃದಯಾಘಾತ ಎಂದು ಕುಟುಂಬ ಸದಸ್ಯರಿಂದ ಮಾಹಿತಿ ಬಂದಿತ್ತು ನಂತರ ಸಾವಿನ ಸುತ್ತಲಿನ ಕೆಲವು ಬೆಳವಣಿಗೆಗಳಿಂದ ಇದೊಂದು ಅಸಹಜ ಸಾವು ಎಂಬ ಅಂಶವು ಬೆಳಕಿಗೆ ಬಂದಿದೆ‌.

ಮೂಲತಃ ಹರ್ಯಾಣದ ಫತೇಹಾಬಾದ್ ಭಾಗದವರಾದ ಸೋನಾಲಿ ಪೋಗಟ್ ಟಿಕ್ ಟಾಕ್ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆಗುವ ಮುಂಚೆ ಸಾವಿರಾರು ಫಾಲೋವರ್ ಗಳನ್ನು ಹೊಂದಿದ್ದ ಸೋನಾಲಿ ಪೋಗಟ್ ಟಿಕ್ ಟಾಕ್ ಪ್ರಚಾರದ ಉತ್ತುಂಗದಲ್ಲಿ ಇದ್ದಾಗಲೇ ಬಿಗ್ ಬಾಸ್ 14 ಕ್ಕೆ ಆಯ್ಕೆ ಆಗಿ ಒಂದಷ್ಟು ದಿನ ಸ್ಪರ್ಧೆಯಲ್ಲಿ ಮಿಂಚಿದ್ದರು.

ಆ ನಂತರದ ದಿನಗಳಲ್ಲಿ 2019 ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಕುಲದೀಪ್ ಬಿಷ್ಣೋಯ್ ವಿರುದ್ಧ ಕಣಕ್ಕಿಳಿದಿದ್ದರು. ಕುಲದೀಪ್ ಬಿಷ್ಣೋಯ್ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮಗನಾಗಿದ್ದಾರೆ. ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸೋನಾಲಿ ಪೋಗಟ್ ಸಕ್ರಿಯವಾಗುತ್ತಾರೆ. ಹಾಗೆಯೇ ಬಿಜೆಪಿ ಪಕ್ಷದ ಪ್ರಚಾರಗಳಲ್ಲೂ ಸಹ ತಾವು ತೊಡಗಿಸಿಕೊಂಡಿದ್ದರು.

ಕಳೆದ ಸೋಮವಾರ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಗೋವಾದ ರೆಸಾರ್ಟ್ ಒಂದರಲ್ಲಿ ತಂಗಿದ್ದ ಸೋನಾಲಿ ಪೋಗಟ್ ಸಾವಿನ ಸುದ್ದಿ ಹೊರಬಿದ್ದಿದೆ. ಮೊದಮೊದಲು ಇದು ಸಹಜ ಸಾವು ಎಂದು ಕುಟುಂಬದ ಮೂಲದಿಂದ ಮಾಹಿತಿ ಬಂದರೂ ನಂತರ ಸಾವಿನ ಬಗ್ಗೆ ಅನುಮಾನಗಳು ಸೃಷ್ಟಿಯಾಗಿವೆ. ಅವರ ಕುಟುಂಬದ ಮೂಲಗಳು ಅವರ ಸಾವಿನ ತನಿಖೆ ಮಾಡಬೇಕು ಎಂದು ಗೋವಾ ಸರ್ಕಾರವನ್ನು ಒತ್ತಾಯಿಸಿದ್ದವು.

ತನಿಖೆಯ ನಂತರ ಹಲವಷ್ಟು ಆಘಾತಕಾರಿ ಅಂಶಗಳು ಹೊರಬಿದ್ದಿವೆ. ಮೃತ ಸೋನಾಲಿ ದೇಹದ ಮೇಲೆ ಗಾಯಗಳು ಕಂಡು ಬಂದಿದ್ದು ಇದು ಸಹಜ ಸಾವಲ್ಲ, ಇದೊಂದು ಕೊಲೆ ಪ್ರಕರಣ ಎಂದು ಗೋವಾ ಪೊಲೀಸ್ ಇಲಾಖೆ ದಾಖಲಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸೋನಾಲಿ ಪೋಗಟ್ ಸಹಚರರಾದ ಸುಧೀರ್ ಮತ್ತು ಸುಖ್ವಿಂದರ್ ಮೇಲೆ ಪ್ರಕರಣ ದಾಖಲಾಗಿದೆ.

ಸಾವಿನ ಕೆಲ ಗಂಟೆಗಳ ಮೊದಲು ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದು, ಸೋನಾಲಿ ಮಾತು ದುಗುಡದಿಂದ ಕೂಡಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಜೊತೆಗೆ ಸೋನಾಲಿ ಗೋವಾಕ್ಕೆ ಹೋಗುವ ಯಾವುದೇ ಕೆಲಸಗಳು ಶೂಟಿಂಗ್ ಏನೂ ಇರಲಿಲ್ಲ. ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಕುಟುಂಬದ ಮೂಲಗಳು ಆರೋಪಿಸಿವೆ.

ಸಧ್ಯ ಈ ಪ್ರಕರಣ ತನಿಖೆಯ ಹಂತದಲ್ಲಿದ್ದು ಪ್ರಾಥಮಿಕ ವೈದ್ಯಕೀಯ ವರದಿ ಮತ್ತು ಪೊಲೀಸರ ತನಿಖೆ ಮೂಲಕ ಅಸಲಿ ಕಾರಣ ಏನು ಎಂಬುದು ಹೊರಬರಬೇಕಿದೆ. ಈಗಾಗಲೇ ಬಂಧನವಾಗಿರುವ ಸೋನಾಲಿ ಸಹಚರರಾದ ಸುಧೀರ್ ಮತ್ತು ಸುಖ್ವಿಂದರ್ ಅವರ ವಿಚಾರಣೆ ನಂತರ ಸತ್ಯಾಸತ್ಯತೆ ಹೊರಬೀಳುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು