ಬಿಜೆಪಿಯಿಂದ ಇವಿಎಂ ಟ್ಯಾಂಪರಿಂಗ್: ವಿಡಿಯೋ ಬಿಡುಗಡೆ ಮಾಡಿದ ಟಿಎಂಸಿ

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದು ಮೇ 4ರ ಫಲಿತಾಂಶಕ್ಕಾಗಿ ಕಾಯುತ್ತಿರುವ ಬೆನ್ನಲ್ಲೇ ಹೊಸ ವಿವಾದವೊಂದು ಭುಗಿಲೆದ್ದಿದೆ. ಚುನಾವಣಾ ಆಯೋಗ ಮತ್ತು ಬಿಜೆಪಿ ಪರಸ್ಪರ ಶಾಮೀಲಾಗಿವೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗಂಭೀರ ಆರೋಪ ಮಾಡಿದೆ. ಯಾವುದೇ ಪಕ್ಷದ ನಾಯಕರು ಇಲ್ಲದ ಸಮಯದಲ್ಲಿ ಸ್ಟ್ರಾಂಗ್ ರೂಮ್‌ಗಳಲ್ಲಿರುವ ಇವಿಎಂಗಳನ್ನು ಕೆಲವರು ತೆರೆಯುತ್ತಿದ್ದಾರೆ ಎನ್ನಲಾದ ವಿಡಿಯೋವೊಂದನ್ನು ಟಿಎಂಸಿ ‘ಎಕ್ಸ್’ (ಟ್ವಿಟ್ಟರ್) ನಲ್ಲಿ ಹಂಚಿಕೊಂಡಿದ್ದು, ಇದು ದೊಡ್ಡ ಮಟ್ಟದ ಚುನಾವಣಾ ವಂಚನೆ ಎಂದು ದೂರಿದೆ.

ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವುದು ಮತ್ತು ಬೆದರಿಕೆ ಹಾಕುವುದರಿಂದ ಹಿಡಿದು ಇವಿಎಂ ಟ್ಯಾಂಪರಿಂಗ್ ಮಾಡುವವರೆಗೆ ಚುನಾವಣಾ ಅಕ್ರಮಗಳು ನಡೆಯುತ್ತಿವೆ ಎಂದು ಟಿಎಂಸಿ ಟೀಕಿಸಿದೆ. ಈ ಬೆಳವಣಿಗೆಯಿಂದ ಆಕ್ರೋಶಗೊಂಡ ಟಿಎಂಸಿ ನಾಯಕರಾದ ಶಶಿ ಪಂಜಾ ಮತ್ತು ಕುನಾಲ್ ಘೋಷ್ ಅವರು ಕೋಲ್ಕತ್ತಾದ ನೇತಾಜಿ ಇಂದೋರ್ ಸ್ಟೇಡಿಯಂ ಎದುರು ಧರಣಿ ಆರಂಭಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಮತ್ತು ದಕ್ಷಿಣ ಕೋಲ್ಕತ್ತಾದ ಬ್ಯಾಲೆಟ್ ಬಾಕ್ಸ್‌ಗಳನ್ನು ಇರಿಸಲಾಗಿರುವ ಶೇಖಾವತ್ ಮೆಮೋರಿಯಲ್ ಗರ್ಲ್ಸ್ ಹೈಸ್ಕೂಲ್‌ಗೆ ಭೇಟಿ ನೀಡಿದ್ದಾರೆ.

ಮೇ 4ರ ಮತ ಎಣಿಕೆಯ ದಿನದವರೆಗೆ ಕಾರ್ಯಕರ್ತರು ಸ್ಟ್ರಾಂಗ್ ರೂಮ್‌ಗಳ ಬಳಿ ನಿರಂತರವಾಗಿ ನಿಗಾ ವಹಿಸಬೇಕು ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ. ಈ ಚುನಾವಣೆಯಲ್ಲಿ 226 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಇತ್ತ ಟಿಎಂಸಿಯ ಆರೋಪಗಳನ್ನು ಚುನಾವಣಾ ಆಯೋಗವು ಗುರುವಾರ ತಳ್ಳಿಹಾಕಿದ್ದು, ಎಲ್ಲಾ ಇವಿಎಂಗಳು ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದೆ. ಟಿಎಂಸಿ ಬಿಡುಗಡೆ ಮಾಡಿದ ವಿಡಿಯೋದಲ್ಲಿರುವುದು ಪೋಸ್ಟಲ್ ಬ್ಯಾಲೆಟ್‌ಗಳಿಗಾಗಿ ಮೀಸಲಿಟ್ಟ ಮತ್ತೊಂದು ಸ್ಟ್ರಾಂಗ್ ರೂಮ್ ಎಂದು ಆಯೋಗ ವಿವರಣೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು