ಟಿಎಂಸಿ ಬಂಡಾಯ ಗುಂಪಿನಲ್ಲಿ ಭಿನ್ನಮತ: ಮಮತಾ ಬ್ಯಾನರ್ಜಿ ಅವರೇ ಪಕ್ಷದ ಅಧ್ಯಕ್ಷರಾಗಿರಲಿ ಎಂದು ರೆಬೆಲ್ ಶಾಸಕರ ಪಟ್ಟು!

ಕೋಲ್ಕತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯ ಸಂಕ್ಷೋಭೆಯು ಭಾರಿ ನಾಟಕೀಯ ತಿರುವು ಪಡೆದುಕೊಂಡಿದೆ. ಮಮತಾ ಬ್ಯಾನರ್ಜಿ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಶಾಸಕರ ಗುಂಪಿನಲ್ಲೇ ಇದೀಗ ಮತ್ತೊಂದು ಸೀಳು ಉಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪಕ್ಷದ ಸರ್ವೋಚ್ಚ ನಾಯಕಿಯಾಗಿ ಮಮತಾ ಬ್ಯಾನರ್ಜಿ ಅವರ ಮುಂದುವರಿಕೆಯ ಕುರಿತು ರೆಬೆಲ್ ಶಾಸಕರಲ್ಲಿ ಭಿನ್ನಾಭಿಪ್ರಾಯಗಳು ತಲೆದೂರಿವೆ.

ಹಿರಿಯ ನಾಯಕ ರಿತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ 58 ಶಾಸಕರು ಮಮತಾ ವಿರುದ್ಧ ಸಿಡಿದೆದ್ದು ಪ್ರತ್ಯೇಕ ಬಣ ರಚಿಸಿಕೊಂಡಿರುವುದು ವರದಿಯಾಗಿತ್ತು. ಆದರೆ, ಇತ್ತೀಚೆಗೆ ನಡೆದ ಬಂಡಾಯ ಶಾಸಕರ ಪ್ರಮುಖ ಸಭೆಗೆ ಕೇವಲ 32 ಶಾಸಕರು ಮಾತ್ರ ಹಾಜರಾಗುವ ಮೂಲಕ ರಿತಬ್ರತ ಅವರಿಗೆ ಆರಂಭಿಕ ಆಘಾತ ನೀಡಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರ ಪೈಕಿ 16 ಮಂದಿ, ರಿತಬ್ರತ ಪ್ರಸ್ತಾಪಿಸಿದಂತೆ ಮಮತಾ ಬ್ಯಾನರ್ಜಿ ಅವರನ್ನು ಕೇವಲ ‘ಮುಖ್ಯ ಸಲಹೆಗಾರ’ ಹುದ್ದೆಗೆ ಸೀಮಿತಗೊಳಿಸದೆ, ಅವರನ್ನೇ ಪಕ್ಷದ ‘ಚೇರ್‌ಪರ್ಸನ್’ (ಅಧ್ಯಕ್ಷರು) ಎಂದು ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಒಪ್ಪದಿದ್ದರೆ ತಾವು ಬಂಡಾಯ ಬಣದಲ್ಲಿ ಉಳಿಯುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ನಮ್ಮನ್ನು ರಾಜಕೀಯವಾಗಿ ಬೆಳೆಸಿದ್ದು ಮಮತಾ ಅವರೇ ಎಂದು ಈ ಶಾಸಕರು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಡಾಯಗಾರರ ಗುಂಪಿನಲ್ಲಿ ಉಂಟಾಗಿರುವ ಈ ಆಂತರಿಕ ಅಸಮಾಧಾನವನ್ನು ತಮಗೆ ಪೂರಕವಾಗಿ ಬಳಸಿಕೊಳ್ಳಲು ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ. ಟಿಎಂಸಿ ಟಿಕೆಟ್ ಮೇಲೆ ಗೆದ್ದಿರುವ ಒಟ್ಟು 80 ಶಾಸಕರ ಪೈಕಿ 31 ಮಂದಿ ಮುಸ್ಲಿಂ ಶಾಸಕರಾಗಿದ್ದಾರೆ. ಇವರಲ್ಲಿ ಬಂಡಾಯ ಬಣ ಸೇರಿದ್ದರೂ ಪ್ರಸ್ತುತ ಅತೃಪ್ತರಾಗಿರುವ ಕೆಲವು ಶಾಸಕರೊಂದಿಗೆ ಮಮತಾ ನೇರವಾಗಿ ಮಾತುಕತೆ ನಡೆಸುತ್ತಿದ್ದು, ಅವರನ್ನು ತಮ್ಮತ್ತ ಸೆಳೆದುಕೊಂಡು ಬಂಡಾಯ ಬಣವನ್ನೇ ಧ್ವಂಸಗೊಳಿಸಲು ಸ್ಕೆಚ್ ಹಾಕಿದ್ದಾರೆ.

ಮತ್ತೊಂದೆಡೆ, ಪಕ್ಷದ 23 ಸಂಸದರು ಬಂಡಾಯ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳು ಬಂದಿವೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯಶೈಲಿಯ ವಿರುದ್ಧ ಹಲವು ಸಂಸದರು ತೀವ್ರ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಪಾರ್ಲಿಮೆಂಟ್‌ನಲ್ಲಿ ಪ್ರತ್ಯೇಕ ಗುಂಪು ರಚಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆಯೂ ಇವರು ಚರ್ಚಿಸುತ್ತಿದ್ದಾರೆ. ಪ್ರಸ್ತುತ ಟಿಎಂಸಿ ಲೋಕಸಭೆಯಲ್ಲಿ 29 ಮತ್ತು ರಾಜ್ಯಸಭೆಯಲ್ಲಿ 13 ಸಂಸದರನ್ನು ಹೊಂದಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಲೋಕಸಭೆಯಲ್ಲಿ ಪ್ರತ್ಯೇಕ ಗುಂಪಾಗಿ ಗುರುತಿಸಿಕೊಳ್ಳಬೇಕಾದರೆ ಕನಿಷ್ಠ 22 ಸಂಸದರ ಬಲ ಬೇಕಾಗುತ್ತದೆ. ಡಜನ್‌ಗೂ ಹೆಚ್ಚು ಸಂಸದರು ಈ ಪ್ರಸ್ತಾಪಕ್ಕೆ ಒಲವು ತೋರಿದ್ದಾರೆ ಎನ್ನಲಾಗಿದೆ.

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಎದುರು ಅನುಭವಿಸಿದ ಭೀಕರ ಸೋಲಿನ ಹಿನ್ನೆಲೆಯಲ್ಲಿ, ಮಮತಾ ಬ್ಯಾನರ್ಜಿ ಅವರು ಪ್ರಸ್ತುತ ರಾಷ್ಟ್ರೀಯ ರಾಜಕಾರಣದತ್ತ ಮುಖ ಮಾಡಲು ಗಂಭೀರವಾಗಿ ಯೋಚಿಸುತ್ತಿದ್ದಾರೆ. ಲೋಕಸಭೆ ಪ್ರವೇಶಿಸುವ ಮೂಲಕ ಕೇಂದ್ರದಲ್ಲಿ ಸಕ್ರಿಯರಾಗಲು ಅವರು ಯೋಜಿಸುತ್ತಿದ್ದು, ಇದಕ್ಕಾಗಿ ಬಹರಾಂಪುರ ಲೋಕಸಭಾ ಕ್ಷೇತ್ರದ ಟಿಎಂಸಿ ಸಂಸದ ಯೂಸುಫ್ ಪಠಾಣ್ ಅವರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡುವಂತೆ ಕೋರುವ ಸಾಧ್ಯತೆಯಿದೆ. ಮಮತಾ ಬ್ಯಾನರ್ಜಿ ಅವರು ಈ ಹಿಂದೆ ಕೋಲ್ಕತಾ ದಕ್ಷಿಣ ಕ್ಷೇತ್ರದಿಂದ ಆರು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು ಎಂಬುದು ಗಮನಾರ್ಹ.

Related Articles

ಇತ್ತೀಚಿನ ಸುದ್ದಿಗಳು