ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಭಾನುವಾರ ತೃಣಮೂಲ ಕಾಂಗ್ರೆಸ್ (TMC) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮೇಲೆ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (BJP) ಕಾರ್ಯಕರ್ತರು ಎನ್ನಲಾದ ಗುಂಪಿನಿಂದ ದಾಳಿ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಹಿಂದಿನ ದಿನವಷ್ಟೇ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೂ ಇಂತಹುದೇ ಹಲ್ಲೆ ನಡೆದಿತ್ತು.
ಹೂಗ್ಲಿಯ ಚಂಡಿತಾಲ ಪೊಲೀಸ್ ಠಾಣೆಯ ಸಮೀಪವೇ ಕಲ್ಯಾಣ್ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆದಿದ್ದು, ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯ ನಂತರ ಪೊಲೀಸರು ಬಂಧಿಸಿರುವ ಟಿಎಂಸಿ ಕಾರ್ಯಕರ್ತರ ಬಂಧನವನ್ನು ಪ್ರತಿಭಟಿಸಲು ಮತ್ತು ಮನವಿ ಪತ್ರ ಸಲ್ಲಿಸಲು ಅವರು ಪೊಲೀಸ್ ಠಾಣೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಈ ಘಟನೆಯ ನಂತರ ಕಲ್ಯಾಣ್ ಬ್ಯಾನರ್ಜಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ ಟಿಎಂಸಿ ಸುಪ್ರೀಮೋ ಮಮತಾ ಬ್ಯಾನರ್ಜಿ, “ಬಿಜೆಪಿ ಪಕ್ಷವು ಪ್ರಜಾಪ್ರಭುತ್ವವನ್ನು ಹತ್ಯೆ ಮಾಡುತ್ತಿದೆ” ಎಂದು ಎಕ್ಸ್ (X) ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಶನಿವಾರ ಸೋನಾರ್‌ಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದಿದ್ದ ಹಲ್ಲೆಯನ್ನು ಖಂಡಿಸಿದ್ದ ಅವರು, “ಆಡಳಿತಗಾರರೇ ಕೊಲೆಗಡುಕರಾಗಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ಕೆಲವೇ ವಾರಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡಿರುವ ಟಿಎಂಸಿ, ಅಭಿಷೇಕ್ ಮತ್ತು ಕಲ್ಯಾಣ್ ಬ್ಯಾನರ್ಜಿ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ಸೋಮವಾರದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಟಿಎಂಸಿ ನಾಯಕರು ಮತ್ತು ಬೆಂಬಲಿಗರ ಮೇಲಿನ ದಾಳಿ ಹಾಗೂ ಪೊಲೀಸ್ ಕ್ರಮಗಳನ್ನು ವಿರೋಧಿಸಿ, ಜೊತೆಗೆ ರಾಜ್ಯಾದ್ಯಂತ ರೈಲ್ವೆ ನಿಲ್ದಾಣಗಳು ಸೇರಿದಂತೆ ವಿವಿಧೆಡೆ ಇರುವ ಬೀದಿ ಬದಿಯ ವ್ಯಾಪಾರಿಗಳ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಿರುವುದನ್ನು ಪ್ರತಿಭಟಿಸಿ ಮಮತಾ ಬ್ಯಾನರ್ಜಿ ಅವರೇ ಖುದ್ದಾಗಿ ಮಂಗಳವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಕುನಾಲ್ ಘೋಷ್ ತಿಳಿಸಿದ್ದಾರೆ.
ಸುಮಾರು 15 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದ ಟಿಎಂಸಿ ಸದ್ಯ ಆಂತರಿಕ ಭಿನ್ನಮತವನ್ನೂ ಎದುರಿಸುತ್ತಿದೆ. ಭಾನುವಾರ ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಕರೆದಿದ್ದ ಪಕ್ಷದ ಶಾಸಕರ ಸಭೆಗೆ ಒಟ್ಟು 80 ಶಾಸಕರ ಪೈಕಿ ಕೇವಲ 20 ಶಾಸಕರು ಮಾತ್ರ ಹಾಜರಾಗಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕುನಾಲ್ ಘೋಷ್, “ಬಿಜೆಪಿ ಗೂಂಡಾಗಳ” ಹಲ್ಲೆ ಮತ್ತು ಪೊಲೀಸರ “ಸುಳ್ಳು ಮೊಕದ್ದಮೆ”ಗಳಿಂದ ತೊಂದರೆಗೊಳಗಾಗಿರುವ ಸ್ಥಳೀಯ ಕಾರ್ಯಕರ್ತರ ಪರವಾಗಿ ನಿಲ್ಲಲು ಶಾಸಕರು ತಮ್ಮ ಕ್ಷೇತ್ರಗಳಲ್ಲೇ ಕಾರ್ಯನಿರತರಾಗಿದ್ದಾರೆ. ಹಾಗಾಗಿ ಅವರು ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿಯನ್ನು ಪಕ್ಷದ ನಾಯಕತ್ವಕ್ಕೆ ಮೊದಲೇ ತಿಳಿಸಿದ್ದಾರೆ ಎಂದಿದ್ದಾರೆ.
“ಅವರು ನಿನ್ನೆ ಅಭಿಷೇಕ್ ಬ್ಯಾನರ್ಜಿ ಅವರನ್ನು ಗುರಿ ಮಾಡಿದ್ದರು, ಇಂದು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿ ನಮ್ಮನ್ನು ಹೆದರಿಸಲು ಮತ್ತು ನಮ್ಮ ಪ್ರತಿಭಟನೆಯ ಧ್ವನಿಯನ್ನು ಅಡಗಿಸಲು ಬಯಸಿದೆ. ಆದರೆ ಬಿಜೆಪಿ ಸರ್ಕಾರದ ರಾಜಕೀಯ ದ್ವೇಷದ ಸಂಸ್ಕೃತಿ, ಸರ್ಕಾರಿ ಯಂತ್ರದ ದುರುಪಯೋಗ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಕುಸಿತದ ವಿರುದ್ಧ ನಮ್ಮ ಹೋರಾಟ ಯಾವುದೇ ಪರಿಸ್ಥಿತಿಯಲ್ಲೂ ಮುಂದುವರಿಯುತ್ತದೆ,” ಎಂದು ಕಲ್ಯಾಣ್ ಬ್ಯಾನರ್ಜಿ ಪತ್ರಕರ್ತರಿಗೆ ತಿಳಿಸಿದ್ದಾರೆ. ಚಂಡಿತಾಲ ಪೊಲೀಸ್ ಠಾಣೆಯ ಮುಂದೆಯೇ ಪೊಲೀಸರ ಸಮ್ಮುಖದಲ್ಲೇ ಬಿಜೆಪಿ ದುಷ್ಕರ್ಮಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಆದರೆ, ಶನಿವಾರ ಮತ್ತು ಭಾನುವಾರ ನಡೆದ ಈ ದಾಳಿಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟವಾಗಿ ನಿರಾಕರಿಸಿದೆ. ರಾಜ್ಯದ ನೂತನ ಬಿಜೆಪಿ ಸರ್ಕಾರದ ಸಚಿವೆ ಅಗ್ನಿಮಿತ್ರಾ ಪಾಲ್ ಮಾತನಾಡಿ, ಟಿಎಂಸಿ ಸಂಸದರ ಮೇಲಿನ ಈ ದಾಳಿಗಳು ಮಮತಾ ಮತ್ತು ಅಭಿಷೇಕ್ ನೇತೃತ್ವದ ಭ್ರಷ್ಟ ಆಡಳಿತದ ವಿರುದ್ಧ ಸಾರ್ವಜನಿಕರಲ್ಲಿ ಉಂಟಾಗಿರುವ ಆಕ್ರೋಶದ ಪ್ರತಿಫಲವಾಗಿದೆ ಎಂದು ಹೇಳಿದ್ದಾರೆ.
ಶನಿವಾರ ಅಭಿಷೇಕ್ ಅವರ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಐದು ಜನರನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ರೂಪಾ ಗಂಗೂಲಿ ಎದುರು ಸೋತಿದ್ದ ಟಿಎಂಸಿಯ ಮಾಜಿ ಶಾಸಕಿ ಅರುಂಧತಿ ಮೈತ್ರಾ ಅವರ ಬೆಂಬಲಿಗರು ಎಂದು ಅಗ್ನಿಮಿತ್ರಾ ಪಾಲ್ ಆರೋಪಿಸಿದ್ದಾರೆ. ಆದರೆ ಟಿಎಂಸಿ ಈ ಆರೋಪವನ್ನು ತಳ್ಳಿಹಾಕಿದ್ದು, ದಾಳಿಕೋರರಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
“ಭಾರತದ ಆತ್ಮವನ್ನು ರಕ್ಷಿಸಲು, ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಕಾಪಾಡಲು ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ನಮ್ಮ ಹೋರಾಟ ಸ್ಥಿರವಾಗಿರುತ್ತದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಭಿಷೇಕ್ ಬ್ಯಾನರ್ಜಿ, ತಮ್ಮ ಮೇಲಿನ ದಾಳಿಯನ್ನು ಖಂಡಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರ ವಿರೋಧ ಪಕ್ಷದ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ. 2025ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತವು ಕೈಗೊಂಡಿದ್ದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಭಾಗವಾಗಿ ತಾವು ಸರ್ವಪಕ್ಷ ನಿಯೋಗದೊಂದಿಗೆ ಐದು ದೇಶಗಳಿಗೆ ಭೇಟಿ ನೀಡಿ ಭಾರತವನ್ನು ಪ್ರತಿನಿಧಿಸಿದ್ದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.
“ಅಂದು ನಾನು ಭಯೋತ್ಪಾದನೆಯ ವಿರುದ್ಧ ದೇಶವನ್ನು ರಕ್ಷಿಸಲು ನಿಂತಿದ್ದೆ. ಆದರೆ ಇಂದು ನಾನೇ ರಾಜಕೀಯ ಹಿಂಸಾಚಾರ ಮತ್ತು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಗೆ ಬಲಿಪಶುವಾಗಿದ್ದೇನೆ. ಬಿಜೆಪಿಯನ್ನು ಬೆಂಬಲಿಸಿದರೆ ಮಾತ್ರ ದೇಶಭಕ್ತ, ಪ್ರಶ್ನಿಸಿದರೆ ಇಂತಹ ದಾಳಿಗಳಿಗೆ ಗುರಿಯಾಗಬೇಕಾಗುತ್ತದೆ ಎಂಬುದು ಇಂದಿನ ಕಟು ವಾಸ್ತವ,” ಎಂದು ಅಭಿಷೇಕ್ ಕಿಡಿಕಾರಿದ್ದಾರೆ.
