ನಿನ್ನ ಬಿಸಿ ಅಪ್ಪುಗೆಗೆ ಕರಗಲೊಲ್ಲೆ ತಾತ
ಅಪ್ಪನ ಭಾವುಣಿಕೆಗೆ ಕರಗಿದಂತೆ
ನೀ ಅಡ್ಡಲಾಗಿ ನೆಟ್ಟ ಬೇಲಿ ಹಾರಲೇ ಹರುಷ
ನನಗೂ ನನ್ನಪ್ಪನಂತೆ
ನಿನ್ನ ವಯಸ್ಸಿಗೆ ತಾತನೆಂದೆ ಅಷ್ಟೆ
ಕರುಳುಬಳ್ಳಿಯ ಸಂಬಂಧ ಹುಡುಕಬೇಡ
ಪಾಯಿಖಾನೆ ತೊಳೆದದ್ದು ಪಶ್ಚಾತ್ತಾಪವೆ
ಹಾಗೆಂದು ಸ್ವತಃ ಬೆನ್ನು ತಟ್ಟಿಕೊಳ್ಳಬೇಡ
ರೈಲಿನಿಂದ ಹೊರದಬ್ಬಿದರೆಂದು
ರೈಲ್ವೇ ಹಳಿಯ ಮೇಲೆ ಕೋಪಗೊಂಡೆಯಾ?
ಎಲ್ಲವನ್ನೂ ಬಿಟ್ಟ ನೀನು
ಬಿರ್ಲಾ ಮನೆ ಬಾಗಿಲು ತಟ್ಟಿದ್ದು ಸರಿಯಾ?
ಏನೋ ನೀನೊಂದು ನಿಗೂಢ ತಾತ
ಅಪ್ಪನಂತೆ ತಿಳಿ ನೀರಲ್ಲ
ಸಂತನಂತಿದ್ದ ನಿನ್ನಲ್ಲೊಬ್ಬ
ರಾಜಕಾರಣಿ ಸದಾ ಮನೆ ಮಾಡಿದ್ದ
ತಾಯ್ನಾಡಿಲ್ಲ ಎಂದವರ ಮುಂದೆ
ಪ್ರಾಣ ಪಣಕ್ಕಿಟ್ಟು ಕುಂತೆ
ಅದೇ ತಾಯ್ನಾಡಿಲ್ಲದವರ ತಾಯ್ತನದಿ
ಮರುಜನ್ಮ ಪಡೆದೆ
ಸಬರಮತಿಯಿಂದ ಸೇವಾಗ್ರಾಮದವರೆಗೆ
ತಲೆ ಬಾಗುವೆನು ನೀ ಬೆಳೆದ ಪರಿಗೆ
ನಿನ್ನೊಳಗೆ ನನ್ನಪ್ಪ ಬಿತ್ತಿದ
ಶತಮಾನದ ಅರಿವಿಗೆ
ಅದರೂ ನಿನ್ನ ಕೊಂದ ಗೋಡ್ಸೆಗಳು
ಮತ್ತೆ ಮತ್ತೆ ನಿನ್ನ ಕೊಲ್ಲುತ್ತಿರುವಾಗ
ರಣರಂಗದಲ್ಲಿ ನಾ ನಿನ್ನ ಪಕ್ಕ, ದಮ್ಮಯ್ಯ
ಮತ್ತೆ ಗೀತೆ ಹಿಡಿದು ಅಹಿಂಸೆ ಎನಬೇಡ
- ವಿಕಾಸ್ ಆರ್ ಮೌರ್ಯ