Sunday, January 11, 2026

ಸತ್ಯ | ನ್ಯಾಯ |ಧರ್ಮ

ಅಂದಿನ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರವನ್ನು ಕೆಡವಿದ್ದು ಇಂದಿನ ಮುಖ್ಯಮಂತ್ರಿ: ಎಚ್.ಡಿ.ದೇವೇಗೌಡ

ಬೆಂಗಳೂರು: ಜೆಡಿಎಸ್‌ ಪಕ್ಷ ಬೆಳ್ಳಿಹಬ್ಬದ ಮುನ್ನಾ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗಿದ್ದು, ಇಂದು ಏನೇನು ನಡೆಯುತ್ತಿದೆಯೋ ಅದರ ಬಗ್ಗೆ ಚರ್ಚಿಸಲು ಹೋಗುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್‌ನಲ್ಲಿನ ಒಳಬೇಗುದಿ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಜೆಡಿಎಸ್‌ನಲ್ಲೇ ಇದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ಮಾತಿಗೆ ತಿರುಗೇಟು ಕೊಟ್ಟಂತೆ ಮಾತನಾಡಿರುವ ಎಚ್‌ಡಿಡಿ, ಎಲ್ಲಿಯೂ ಸಿದ್ದರಾಮಯ್ಯ ಹೆಸರು ಬಳಸದೆ ಪರೋಕ್ಷವಾಗಿಯೇ ಮಾತಿನ ಬಾಣ ಬಿಟ್ಟರು.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರ ತೆಗೆದದ್ದು ದುರಂತ. ಇಂದು ಯಾರು ಸಿಎಂ ಆಗಿದ್ದಾರೋ ಅದೇ ಮಹಾನುಭಾವ ಸರ್ಕಾರ ತೆಗೆದದ್ದು. ಯಾರ್‍ಯಾರನ್ನು ದೆಹಲಿಗೆ ಕಳುಹಿಸಿ ಏನೇನು ಮಾಡಿದರು ಎಂಬುದೆಲ್ಲ ನನಗೆ ಗೊತ್ತಿದೆ ಎಂದು ಗುಡುಗಿದರು.

ಇಂದು ಏನೇನು ನಡೆಯುತ್ತಿದೆಯೋ ಅದನ್ನು ಚರ್ಚಿಸಲ್ಲ. ಆದರೆ, ಸತ್ಯಕ್ಕೆ ಬೆಲೆ ಇದೆ. ಸತ್ಯ ಮುಚ್ಚಿಡಲು ಆಗಲ್ಲ. ಒಂದಲ್ಲ ಒಂದು ದಿನ ಹೊರಬರಲೇಬೇಕು. ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೈವದ ಆಟ ಇದ್ದೇ ಇರುತ್ತದೆ. ಈ ಕಟ್ಟಡ ಕಟ್ಟಲು ಎಷ್ಟು ಶ್ರಮ ಆಯಿತು ಎಂಬುದನ್ನೆಲ್ಲ ವಿಶ್ಲೇಷಣೆ ಮಾಡಲು ಹೋಗಲ್ಲ ಎನ್ನುವ ಮೂಲಕ ರೇಸ್‌ಕೋರ್ಸ್‌ ರಸ್ತೆಯ ಕಟ್ಟಡ ಕಿತ್ತುಕೊಂಡಿದ್ದನ್ನೂ ನೆನಪಿಸಿಕೊಂಡರು.

ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆಗಳು ನಡೆದಿವೆ. ಪಂಚರತ್ನ ಕಾರ್ಯಕ್ರಮ, ಜಲಧಾರೆ ಘೋಷಿಸಿದರು. 1 ವರ್ಷ ರಾಜ್ಯ ಸುತ್ತಿ, ಹಗಲು-ರಾತ್ರಿ ಸಭೆಗಳನ್ನು ಮಾಡಿದರು. ಉತ್ಸಾಹದಲ್ಲಿ ಜನ ಬೆಂಬಲ ತೋರಿದ್ದರು. ಆದರೆ, ಚುನಾವಣೆಗೆ ಕೆಲ ದಿನ ಮುಂಚೆ ಗ್ಯಾರಂಟಿ ಘೋಷಣೆ ಆಯಿತು. ಬಡವರ ಸಮಸ್ಯೆಗಳೆಲ್ಲ ಮುಗಿದು ಹೋಗಿ, ಜನ ಆನಂದವಾಗಿದ್ದಾರೆ ಎನ್ನುವಂತೆ ಆಳುವ ಪಕ್ಷದವರು ಹೇಳಿಕೊಳ್ಳುತ್ತಿದ್ದಾರೆ. ಹಳ್ಳಿಗಳಿಗೆ ಹೋಗಬೇಕು. ಬಡವರ ಸ್ಥಿತಿ ಏನಿದೆ? ಸಂಕಷ್ಟಗಳು ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ದೇವೇಗೌಡರು ಕುಟುಕಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page