Home ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಇನ್ಮುಂದೆ ಟೋಲ್ ಫ್ರೀ – ಬೈಕ್‌ಗಳಿಗೆ ಬಿಗ್ ರಿಲೀಫ್

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಇನ್ಮುಂದೆ ಟೋಲ್ ಫ್ರೀ – ಬೈಕ್‌ಗಳಿಗೆ ಬಿಗ್ ರಿಲೀಫ್

0

ಬೆಂಗಳೂರು : ನಗರದ ಸಂಚಾರ ದಟ್ಟಣೆಯ (Traffic)  ಪ್ರಮುಖ ಮಾರ್ಗವಾದ ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ (Bengaluru) ಮೇಲ್ಸೇತುವೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ (Good News) ಸಿಗುವ ಸಾಧ್ಯತೆಯಿದೆ. ಇಲ್ಲಿಯವರೆಗೆ ವಸೂಲಿ ಮಾಡಲಾಗುತ್ತಿದ್ದ ಟೋಲ್ ಶುಲ್ಕ ಶೀಘ್ರದಲ್ಲೇ ರದ್ದಾಗಲಿದ್ದು, ಬೈಕ್ ಸವಾರರು ಸಂಪೂರ್ಣ ಉಚಿತವಾಗಿ ಈ ಫ್ಲೈಓವರ್ ಮೇಲೆ ಸಂಚರಿಸಲು ಅವಕಾಶ ಸಿಗಲಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವ ನಿರೀಕ್ಷೆಯಿದೆ.

ಮುಕ್ತಾಯದ ಹಂತದಲ್ಲಿ 20 ವರ್ಷದ ಒಪ್ಪಂದ

ಕೇಂದ್ರ ಸಿಲ್ಕ್ ಬೋರ್ಡ್ ಮತ್ತು ಬೊಮ್ಮಸಂದ್ರ ನಡುವಿನ ಈ 9.9 ಕಿಲೋಮೀಟರ್ ಉದ್ದದ ಎಲಿವೇಟೆಡ್ ಫ್ಲೈಓವರ್ ಅನ್ನು ‘ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ’ (PPP) ಮಾದರಿಯಲ್ಲಿ ‘ಬೆಂಗಳೂರು ಎಲಿವೇಟೆಡ್ ಟೋಲ್ ವೇ ಲಿಮಿಟೆಡ್’ ಸಂಸ್ಥೆಯು ಬಿಲ್ಡ್, ಆಪರೇಟ್ ಅಂಡ್ ಟ್ರಾನ್ಸ್‌ಫರ್ (BOT) ಒಪ್ಪಂದದಡಿ ನಿರ್ಮಿಸಿತ್ತು. ಸುಮಾರು 1,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಯೋಜನೆಗೆ 2006ರಲ್ಲಿ ಚಾಲನೆ ಸಿಕ್ಕಿ, 2010ರ ಜನವರಿಯಲ್ಲಿ ಸಂಚಾರಕ್ಕೆ ಮುಕ್ತವಾಗಿತ್ತು. ನಿಯಮದ ಪ್ರಕಾರ ಈ ಖಾಸಗಿ ಸಂಸ್ಥೆಯೊಂದಿಗಿದ್ದ 20 ವರ್ಷಗಳ ಸುದೀರ್ಘ ನಿರ್ವಹಣಾ ಒಪ್ಪಂದದ ಅವಧಿಯು ಈಗ ಮುಕ್ತಾಯದ ಹಂತಕ್ಕೆ ತಲುಪಿದೆ.

ಒಪ್ಪಂದದ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಮೇಲ್ಸೇತುವೆ ಹಾಗೂ ಟೋಲ್ ಪ್ಲಾಜಾದ ಸಂಪೂರ್ಣ ನಿರ್ವಹಣೆಯನ್ನು ನೇರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ಎನ್‌ಎಚ್‌ಎಐ ರಸ್ತೆಯ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆಯೇ ಟೋಲ್ ದರಗಳ ದೀರ್ಘಕಾಲಿಕ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಲಿದೆ. ಪ್ರಸ್ತುತ ದ್ವಿಚಕ್ರ ವಾಹನಗಳಿಗೆ ವಿಧಿಸಲಾಗುತ್ತಿರುವ ದರವನ್ನು ಸಂಪೂರ್ಣ ಮನ್ನಾ ಮಾಡಿ ‘ಟೋಲ್ ಫ್ರೀ’ ಮಾಡಲು ಯೋಜಿಸಲಾಗಿದೆ.

ಕಾರು-ಜೀಪ್‌ಗಳ ಶುಲ್ಕದಲ್ಲಿ ಇಳಿಕೆ ಸಾಧ್ಯತೆ

ಇದರ ಜೊತೆಗೆ ಕಾರು, ಜೀಪ್, ವ್ಯಾನ್ ಹಾಗೂ ಇತರೆ ಭಾರೀ ವಾಹನಗಳಿಗೆ ನಿಗದಿಪಡಿಸಲಾಗಿರುವ ಶುಲ್ಕದಲ್ಲೂ ಗಣನೀಯ ಇಳಿಕೆಯಾಗುವ ಸಾಧ್ಯತೆಯಿದೆ. ಸದ್ಯ ಎಲೆಕ್ಟ್ರಾನಿಕ್ ಸಿಟಿ ಟೋಲ್‌ನಲ್ಲಿ ಕಾರುಗಳಿಗೆ ಏಕಮುಖ ಸಂಚಾರಕ್ಕೆ 65 ರೂಪಾಯಿ ನಿಗದಿಯಾಗಿದ್ದು, ಇತರೆ ವಾಹನಗಳಿಗೆ 25 ರೂಪಾಯಿಯಿಂದ 365 ರೂಪಾಯಿವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಪ್ರಾಧಿಕಾರವು ಹೊಸ ದರಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು, ಕೆಲವೇ ದಿನಗಳಲ್ಲಿ ಹೊಸ ದರಗಳು ಜಾರಿಗೆ ಬರಲಿವೆ. ಇದರಿಂದ ಪ್ರತಿದಿನ ಲಕ್ಷಾಂತರ ಐಟಿ ಉದ್ಯೋಗಿಗಳು ಹಾಗೂ ಸ್ಥಳೀಯ ಸವಾರರಿಗೆ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದೆ.

You cannot copy content of this page

Exit mobile version