ಡೆಹ್ರಾಡೂನ್: ಉತ್ತರಾಖಂಡ ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರತ್ಯೇಕ ಘಟನೆಗಳಲ್ಲಿ ಅಪ್ರಾಪ್ತ ವಯಸ್ಕ ಸೇರಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಸುಮಾರು 40 ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಭೂಕುಸಿತ ಹಾಗೂ ಜಲಾವೃತ ಸಮಸ್ಯೆಗಳು ತಲೆದೋರಿವೆ.
ಪಿಥೋರಗಢ ಜಿಲ್ಲೆಯ ಧಾರ್ಚುಲಾ-ತವಾಘಾಟ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೇತುವೆಯ ಮೇಲೆ ಬಂಡೆಗಳು ಮತ್ತು ಕಲ್ಲುಗಳು ಉರುಳಿಬಿದ್ದ ಪರಿಣಾಮ ಸೇತುವೆಗೆ ಹಾನಿಯಾಗಿದ್ದು, ಪ್ರಮುಖ ಗಡಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಳೆಯಿಂದಾಗಿ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಕೈಲಾಸ ಮಾನಸ ಸರೋವರ ಯಾತ್ರೆ ಮಾರ್ಗದಲ್ಲಿರುವ ಕೂಲಗಡ ಸೇತುವೆ ಭೂಕುಸಿತದಿಂದ ಹಾನಿಗೊಳಗಾಗಿದ್ದು, ಯಾತ್ರಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಗಡಿ ರಸ್ತೆಗಳ ಸಂಘಟನೆಯ (ಬಿಆರ್‌ಒ) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ.
ಹಾನಿಗೊಳಗಾದ ಮಾರ್ಗದಲ್ಲಿ ಸಂಚಾರ ಪುನಃಾರಂಭಿಸಲು ಪರ್ಯಾಯ ರಸ್ತೆ ನಿರ್ಮಾಣ ಕಾರ್ಯವನ್ನು ಬಿಆರ್‌ಒ ಕೈಗೊಂಡಿದ್ದು, ಸಂಜೆಯ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಧ್ಯವಾದಷ್ಟು ಬೇಗ ಸಂಚಾರವನ್ನು ಸಾಮಾನ್ಯ ಸ್ಥಿತಿಗೆ ತರಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕೈಲಾಸ ಮಾನಸ ಸರೋವರ ಯಾತ್ರೆಯ ಹಿನ್ನೆಲೆಯಲ್ಲಿ ಆಡಳಿತವು ವಿಶೇಷ ನಿಗಾ ವಹಿಸಿದೆ. 48 ಯಾತ್ರಿಕರು ಹಾಗೂ ಮೂವರು ಕೆಎಂವಿಎನ್ ಅಡುಗೆಯವರನ್ನು ಒಳಗೊಂಡ ಒಂಬತ್ತನೇ ಬ್ಯಾಚ್ ಬುಧವಾರ ಭಾರತಕ್ಕೆ ಪ್ರವೇಶಿಸಲಿದ್ದು, 44 ಯಾತ್ರಿಕರು ಮತ್ತು ಮೂವರು ಅಡುಗೆಯವರನ್ನು ಒಳಗೊಂಡ ಹತ್ತನೇ ಬ್ಯಾಚ್ ಪ್ರಸ್ತುತ ಟಿಬೆಟ್‌ನಲ್ಲಿ ಇದ್ದು, ಆಗಸ್ಟ್ 23ರಂದು ಭಾರತ ಪ್ರವೇಶಿಸುವ ನಿರೀಕ್ಷೆಯಿದೆ.
ಧಾರ್ಚುಲಾ-ತವಾಘಾಟ್ ಮಾರ್ಗವು ಗಡಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಮಳೆಗಾಲದಲ್ಲಿ ಭೂಕುಸಿತ ಮತ್ತು ಬಂಡೆಗಳು ಉರುಳಿಬೀಳುವ ಘಟನೆಗಳು ಸಾಮಾನ್ಯವಾಗಿವೆ. ಯಾತ್ರಿಕರ ಸುರಕ್ಷತೆ ಮತ್ತು ಸಂಪರ್ಕ ವ್ಯವಸ್ಥೆ ಪುನಃಸ್ಥಾಪನೆಗೆ ಆದ್ಯತೆ ನೀಡಲಾಗಿದ್ದು, ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
