Friday, January 3, 2025

ಸತ್ಯ | ನ್ಯಾಯ |ಧರ್ಮ

ಮೆಗಾ ಫುಡ್ ಪಾರ್ಕ್ಗೆ ಒಟ್ಟು ₹450 ಕೋಟಿ ಬಂಡವಾಳ – ಅಶೋಕ್ ಹೇಳಿಕೆ

ಹಾಸನ: ಜಿಲ್ಲೆಯಲ್ಲಿ ಮೆಗಾ ಫುಡ್ ಪಾರ್ಕ್ಗೆ ಒಟ್ಟು ವಿದೇಶಿ ನೇರ ಬಂಡವಾಳ ಹಣ ಮೊದಲ ಹಂತ 100 ಕೋಟಿ ಎರಡನೇ ಹಂತ 350 ಕೋಟಿ ಒಟ್ಟು 450 ಕೋಟಿ ರೂಗಳು ಹರಿದು ಬರುತ್ತಿದ್ದು, ಈ ನಿಟ್ಟಿನಲ್ಲಿ ಆಸಕ್ತ ರೈತರಿಗೆ ವಿದೇಶ ಪ್ರಯಾಣ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಶೋಕ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ನಾವು ಈಗಾಗಲೇ ನಾವು ನಮ್ಮ ಸಂಸ್ಥೆಗೆ ಹೂಡಿಕೆ ಬರುವುದಾಗಿ ನವೆಂಬರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದೆವು. ಆದರೆ ಎಷ್ಟು ಹಣ ಹೂಡಿಕೆ ಆಗುತ್ತಿದೆ ಎಂಬುವುದರ ಬಗ್ಗೆ ನಾನು ತಿಳಿಸಿರಲಿಲ್ಲ. ಹಾಸನ ಮೆಗಾ ಫುಡ್ ಪಾರ್ಕ್”ಗೆ ಹರಿದು ಬರುತ್ತಿರುವ ಒಟ್ಟು ವಿದೇಶಿ ನೇರ ಬಂಡವಾಳ ಹಣ ಮೊದಲ ಹಂತ 100 ಕೋಟಿ ಎರಡನೇ ಹಂತ 350 ಕೋಟಿ ಒಟ್ಟು 450 ಕೋಟಿ ರೂಗಳಾಗಿವೆ. ಕರ್ನಾಟಕ ಸರ್ಕಾರ ನಡೆಸುತ್ತಿರುವ ವಿಶ್ವ ಹೂಡಿಕೆ ಸಮ್ಮೇಳನ 2025 ರಲ್ಲಿ ಸಹಿ ಹಾಕುತ್ತಿರುವುದು ಮೊದಲ ಹಂತ 100 ಕೋಟಿ ಹೂಡಿಕೆಗೆ ಮಾತ್ರ. ಈಗಾಗಲೇ ಇದನ್ನೂ ಡಿಸೆಂಬರ್ ಮೊದಲ ವಾರದಲ್ಲಿಯೇ ರಾಜ್ಯ ಸರ್ಕಾರದ ಆಯುಕ್ತರು “ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ”, ಖನಿಜ ಭವನ ಮತ್ತು “ಇನ್ವೆಸ್ಟ್ ಕರ್ನಾಟಕ ಫೋರಮ್” ಗಮನಕ್ಕೆ ತಂದಿರುತ್ತೇನೆ. ಆದರೆ ಸೂಕ್ತ ರೀತಿಯ ಬೆಂಬಲ ಸಿಕ್ಕಿರುವುದಿಲ್ಲ ಎಂದರು. ಕೊನೆಯ ಬಾರಿ ಅಂದರೆ ನವೆಂಬರ್ 2022 ರಲ್ಲಿ ನಡೆದ ಹೂಡಿಕೆ ಸಮ್ಮೇಳನದಲ್ಲಿ ಅಕ್ಟೋಬರ್ ಮೂರನೇ ವಾರ ಆಹ್ವಾನ ಪತ್ರಿಕೆ ಸಿಕ್ಕಿದ ಕಾರಣ ಹೂಡಿಕೆ ಕೈ ತಪ್ಪಿತ್ತು. ಆದರೆ ಈಗ ಹಿಂದೆ ಮಾಡಿದ ತಪ್ಪನ್ನು ಸರಿ ಪಡಿಸಿಕೊಂಡು ಇರುತ್ತೇನೆ. ಆದರೆ ಸರ್ಕಾರದ ಕಡೆಯಿಂದ ಸೂಕ್ತ ಬೆಂಬಲ ದೊರೆಯುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಅಡಿಯಲ್ಲಿ ಬರುವ “ವ್ಯವಸ್ಥಾಪಕ ನಿರ್ದೇಶಕರು”, “ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು, ನಿಗಮ ನಿಯಮಿತ ಎಂಡಿ, ಕೆ.ಎ.ಪಿ.ಪಿ.ಇ.ಸಿ. ಗಮನಕ್ಕೂ ಇಮೇಲ್ ಮೂಲಕ ತಂದಿರುತ್ತೇನೆ. ಅವರಿಂದ ಧನಾತ್ಮಕ ಉತ್ತರ ಸಿಕ್ಕಿ ಎರಡು ದಿನ ಕಾದು ನೋಡುವ ನಿರ್ಧಾರಕ್ಕೆ ಬಂದಿರುತ್ತೇನೆ ಎಂದು ಹೇಳಿದರು.
“ಹಾಸನ ಮೆಗಾ ಫುಡ್ ಪಾರ್ಕ್” ರಫ್ತು ಮಾಡುತ್ತಿದ್ದೇವೆ ಎಂದು ಎಷ್ಟೋ ಬಾರಿ ಹಿಂದೆ ನಡೆದ ಸುದ್ದಿಗೋಷ್ಠಿ ಗಳಲ್ಲಿ ಹೇಳಿರುತ್ತೇನೆ, ಆದನ್ನು ನೀವು ಕೂಡ ಸುದ್ದಿ ಮಾಡಿರುತ್ತೀರಾ, ಕೆಲ ರೈತರು ನಮ್ಮ ಬಗ್ಗೆ ಕಳ್ಳರು ದುಡ್ಡು ಎತ್ತಿಕೊಂಡು ಹೋಗುವುದಕ್ಕೆ ಬಂದಿದ್ದಾರೆ ಎಂದು ಅಪ ಪ್ರಚಾರ ಮಾಡಿರುತ್ತಾರೆ. ಆದರೆ ಈಗ ನಾನು ಹಿಂದೆ ಹೇಳಿದ್ದು ನಿಜನಾ ಅಥವಾ ಸುಳ್ಳೇ ಎಂದು ನನ್ನನ್ನು ನಾನೇ ಪರೀಕ್ಷಿಸಿ ಕೊಳ್ಳುವ ಸಮಯ ಬಂದಿದೆ ಮತ್ತು ಮುಂದೆ ನಮ್ಮ ಫುಡ್ ಪಾರ್ಕ್ ಗೆ ಅವಶ್ಯ ಇರುವ ಧಾನ್ಯಗಳು ರೈತರೇ ಬೆಳೆದು ಕೊಡಬೇಕು ಮತ್ತು ರೈತರ ಜೊತೆ ಒಪ್ಪಂದ ಕೃಷಿ ಜಾರಿ ಮಾಡಬೇಕಾಗಿರುವ ಕಾರಣ ಆಸಕ್ತ ಪತ್ರಕರ್ತರಿಗೆ ಮತ್ತು ಕೆಲ ರೈತರಿಗೆ ನಾವು ಯಾವ ಯಾವ ದೇಶಗಳಲ್ಲಿ ಮಾರುಕಟ್ಟೆ ಹೊಂದಿದ್ದೇವೆ ಎಂದು ಪರಿಶೀಲಿಸುವ ಸಲುವಾಗಿ ಆಯ್ದ ದೇಶಗಳಿಗೆ ವಿದೇಶ ಪ್ರಯಾಣ ಏರ್ಪಡಿಸಲಾಗಿದೆ. ಎಷ್ಟು ಜನಕ್ಕೆ ಏರ್ಪಡಿಸಬೇಕು ಎಂದು ಮುಂದೆ ನಿರ್ಧರಿಸುತ್ತೇನೆ. ಆಸಕ್ತರು ನಮ್ಮ ಜೊತೆ ಬರಬಹುದು ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page