ಸಾಮಾಜಿಕ ತಲ್ಲಣಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಟೆಲೆಕ್ಸ್ ರವಿಕುಮಾರ್ ಎಂದೇ ಖ್ಯಾತರಾಗಿರುವ ರವಿಕುಮಾರ್ ಎನ್ ಅವರ ಒಂದು ಭಾವ ತೀವ್ರ ಕವಿತೆ ನಿಮ್ಮ ಭಾನುವಾರದ ಓದಿಗಾಗಿ
ನೋಡು; ನೀನು
ಒಂದು ತೊಟ್ಟು ಪ್ರೇಮವನ್ನು
ಕುಡಿಸಿದ್ದರಿಂದಲೆ ಈಗ ನನಗೆ
ರೆಕ್ಕೆಗಳು ಮೂಡಿವೆ
ಗಾಳಿಯಲ್ಲಿ ತೇಲುವುದು
ನಿದ್ದೆಯಲ್ಲಿ ಮಾತಾಡುವುದು
ಕನ್ನಡಿಯೆ ನಾಚುವಂತೆ ನುಲಿಯುವುದು
ಅಷ್ಟೇ…ಅಲ್ಲ;
ಬೀದಿಯ ನಿರ್ಗತಿಕರನ್ನು ಕಂಡಾಗ
ಕಣ್ಣೀರಿನಲಿ ಮುಳುಗುವುದು
ಗೋಪುರದಲ್ಲೋ ಮಸೀದಿಯ ಬುರುಜು…ಸಿಲುಬೆಯಲ್ಲೋ
ರಕ್ತ ಜಿನುಗುವುದಾ ಕಂಡಾಗ ಈ ರೆಕ್ಕೆಗಳು ಸುಟ್ಟಂತೆ ವಿಲ ವಿಲನೆ ಒದ್ದಾಡುತ್ತೇನೆ..
ಏನೆಲ್ಲಾ ಆಗುತ್ತಿದೆಯೋ ಅದಕ್ಕೆಲ್ಲಾ
ನೀನೇ ಕಾರಣ
ಅಲ್ಲೆಲ್ಲೋ..
ಪ್ರೇಮಿಗಳನ್ನು ಕೊಂದರಂತೆ
ಅವರಿಗಿದ್ದ ರೆಕ್ಕೆಗಳ ಕತ್ತರಿಸಿ
ದೇವರ ತುರುಬಿಗೆ ಶೃಂಗರಿಸಿ
ಮೆರವಣಿಗೆ ಕರೆದೊಯ್ದಿದ್ದಾರೆ
ಮರ್ಯಾದಸ್ತರು
ಯಾರು ಹೆತ್ತ ಮಗನೋ/ ಮಗಳೋ
ಈ ದೇವರು
ಊರ ಪಾಪವೆಲ್ಲಾ ಹೊತ್ತು ತಿರುಗುತ್ತಾನೆ/ ಳೆ
ಆ ದೇವರಿಗೂ ಒಂದು ತೊಟ್ಟು
ಪ್ರೇಮವ ಕುಡಿಸಬಾರದೆ,
ರೆಕ್ಕೆಗಳು ಮೂಡಿ ಎತ್ತದಾರೂ
ಹಾರಿ ಹೋಗಲಿ
ಕೇಡುಗಳಿಂದ ದೂ….ರ
ನಮ್ಮಂತೆ
ದೇಶಾವರಿ ದೊರೆಯ ಮಾತಲ್ಲದೆ
ಕೇಳುವ ಮಾತಾದರೂ ಯಾವುದು
ಪ್ರಜೆಗಳ ನಾಲಿಗೆಗಳ ಸಿಗಿದು
ಸುಡುವ ಸೂತಕದ ಕಾಲದಲಿ
ಹೆರಿಗೆ ಕೋಣೆಗಳೂ ಉಸಿರುಗಟ್ಟಿವೆ
ಎಂದಾದರೂ ಒಂದು ದಿನ
ನಾವು ಭೇಟಿ ಆಗೋಣ
ಯುದ್ಧಗಳಿಲ್ಲದ ಭೂಮಿಯಲ್ಲೋ
ದುಃಖಗಳಿಲ್ಲದ ಕಾಡಿನಲ್ಲೋ
ಮತ್ತೂ..;
ರಾಜಕೀಯವಿಲ್ಲದ ನಾಡಿನಲ್ಲಿ
ಆಗ ಬತ್ತದ ನನ್ನ – ನಿನ್ನ ಪ್ರೇಮದ
ಕುರಿತು ಮಾತಾಡೋಣ
ಮತ್ತೂ….
ಕ್ಷುದ್ರ ರಾಜಕಾರಣ ದ ಕುಲುಮೆಯಲಿ
ಬೇಯುತ್ತಿರುವ ಧರ್ಮದ ಕುರಿತೂ…

– ಎನ್.ರವಿಕುಮಾರ್