ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಟೀಸರ್ ಬಿಡುಗಡೆಗೊಂಡು ಕೇವಲ 24 ಗಂಟೆಗಳಲ್ಲೇ ಸುಮಾರು 5 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದು ದಾಖಲೆ ಬರೆದಿದೆ. ಆದರೆ ಟೀಸರ್‌ಗೆ ದೊರೆತ ಭಾರೀ ಪ್ರತಿಕ್ರಿಯೆಯ ನಡುವೆಯೇ ಇದೀಗ ಸಿನಿಮಾ ಸಂಕಷ್ಟಕ್ಕೆ ಸಿಲುಕಿದ್ದು, ಟಾಕ್ಸಿಕ್ ಟೀಸರ್ ಕುರಿತು ಪರ–ವಿರೋಧ ಚರ್ಚೆ ತೀವ್ರಗೊಂಡಿದೆ.
ಟಾಕ್ಸಿಕ್ ಟೀಸರ್‌ನಲ್ಲಿ ಅಶ್ಲೀಲ ಅಂಶಗಳಿವೆ ಎಂಬ ಆರೋಪದೊಂದಿಗೆ, ವಕೀಲ ಲೋಹಿತ್ ಹನುಮಪುರ ಅವರು ಕೇಂದ್ರ ಚಲನಚಿತ್ರ ಪ್ರಮಾಣಿಕರಣ ಮಂಡಳಿ (CBFC) ಅಧ್ಯಕ್ಷರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಟೀಸರ್‌ನಲ್ಲಿರುವ ಕೆಲವು ದೃಶ್ಯಗಳು ಸಾರ್ವಜನಿಕ ನೈತಿಕತೆಗೆ ಧಕ್ಕೆಯಾಗುವಂತಿವೆ, ವಿಶೇಷವಾಗಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಟಾಕ್ಸಿಕ್ ಚಿತ್ರವನ್ನು ‘A’ ಪ್ರಮಾಣಪತ್ರದೊಂದಿಗೆ ಮಾತ್ರ ಬಿಡುಗಡೆ ಮಾಡುವುದು ಸೂಕ್ತ ಎಂದು ಅವರು ಒತ್ತಾಯಿಸಿದ್ದಾರೆ. ಜೊತೆಗೆ, ವಯಸ್ಕ ವಿಷಯ ಹೊಂದಿರುವ ಟೀಸರ್ ಅನ್ನು ತಕ್ಷಣವೇ ತೆಗೆದುಹಾಕಲು ಅಥವಾ ಸೂಕ್ತ ತಿದ್ದುಪಡಿ ಮಾಡಲು ನಿರ್ಮಾಪಕರಿಗೆ ನಿರ್ದೇಶನ ನೀಡಬೇಕು ಎಂದು ಸೆನ್ಸಾರ್ ಮಂಡಳಿಗೆ ಮನವಿ ಮಾಡಲಾಗಿದೆ.
ಒಂದೆಡೆ, ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಮತ್ತೊಂದೆಡೆ, ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸೆನ್ಸಾರ್ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ಕೂಡ ನೀಡಲಾಗಿದೆ.
ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿರುವ ಟಾಕ್ಸಿಕ್ ಟೀಸರ್ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಸೆನ್ಸಾರ್ ಮಂಡಳಿ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.
