ವಸೂಲಿ ಮಾಡಿದ ಹೆಚ್ಚುವರಿ ಸುಂಕದ ಹಣ ಮರಳಿಸಿ: ಟ್ರಂಪ್ ಸರ್ಕಾರಕ್ಕೆ ಟ್ರೇಡ್ ಕೋರ್ಟ್ ಆದೇಶ

ಅಮೆರಿಕದ ಸುಪ್ರೀಂ ಕೋರ್ಟ್ ಕಳೆದ ತಿಂಗಳು ನೀಡಿದ್ದ ತೀರ್ಪಿನಂತೆ, ಟ್ರಂಪ್ ಸರ್ಕಾರವು ವಿಧಿಸಿದ್ದ ಸುಂಕಗಳು ಕಾನೂನುಬಾಹಿರ ಎಂದು ಸಾಬೀತಾಗಿತ್ತು. ಇದೀಗ ಮ್ಯಾನ್‌ಹ್ಯಾಟನ್‌ನಲ್ಲಿರುವ ಅಮೆರಿಕದ ‘ಯುಎಸ್ ಕೋರ್ಟ್ ಆಫ್ ಇಂಟರ್ನ್ಯಾಷನಲ್ ಟ್ರೇಡ್’ ನ್ಯಾಯಾಧೀಶ ರಿಚರ್ಡ್ ಈಟನ್ ಅವರು, ಸುಮಾರು 13,000 ಕೋಟಿ ಡಾಲರ್ (ಅಂದಾಜು 11,90,531 ಕೋಟಿ ರೂ.) ಹಣವನ್ನು ಮರುಪಾವತಿ ಮಾಡುವ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಲು ಸರ್ಕಾರಕ್ಕೆ ಸೂಚಿಸಿದ್ದಾರೆ.

ಲಕ್ಷಾಂತರ ಶಿಪ್‌ಮೆಂಟ್‌ಗಳನ್ನು ಅಮೆರಿಕಕ್ಕೆ ತರಲು ತಗಲುವ ವೆಚ್ಚವನ್ನು ಅಂದಾಜಿಸುವುದಕ್ಕೆ ಕಾಯದೆ, ವಸೂಲಿ ಮಾಡಿದ ಸುಂಕವನ್ನು ಬಡ್ಡಿ ಸಮೇತ ಮರಳಿಸಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಸಾಮಾನ್ಯವಾಗಿ ಅಮೆರಿಕಕ್ಕೆ ಸರಕುಗಳನ್ನು ತರುವಾಗ ಆಮದುದಾರರು ಅಂದಾಜು ಮೊತ್ತವನ್ನು ಪಾವತಿಸುತ್ತಾರೆ ಮತ್ತು ಇದು ಸುಮಾರು 314 ದಿನಗಳ ನಂತರ ಅಂತಿಮಗೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ‘ಲಿಕ್ವಿಡೇಶನ್’ ಎಂದು ಕರೆಯಲಾಗುತ್ತದೆ.

ನ್ಯಾಯಾಧೀಶ ಈಟನ್ ಅವರು ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಇಲಾಖೆಗೆ ನಿರ್ದೇಶನ ನೀಡಿದ್ದು, ಸುಂಕದ ಅಂತಿಮ ಅಂದಾಜು ಮಾಡದೆಯೇ ಪ್ರವೇಶ ಬೆಲೆಯನ್ನು ನಿಗದಿಪಡಿಸಿ ಮರುಪಾವತಿ ಮಾಡಬೇಕು ಎಂದು ತಿಳಿಸಿದ್ದಾರೆ. “ಇದು ಹೇಗೆ ಮಾಡಬೇಕೆಂದು ಕಸ್ಟಮ್ಸ್ ಇಲಾಖೆಗೆ ತಿಳಿದಿದೆ. ಆಮದುದಾರರು ಹೆಚ್ಚಿನ ಸುಂಕ ಪಾವತಿಸಿದಾಗ ನಿಯಮಿತವಾಗಿ ಮರುಪಾವತಿ ನೀಡುವಂತೆ ಇಲಾಖೆಯು ತನ್ನ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು