ಪಟ್ನಾ: ಬಿಹಾರದ ರೋಹ್‌ತಾಸ್ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ (ಸಂ. 19) ಮೇಲೆ ರೋಹ್‌ತಾಸ್‌ನಿಂದ ಔರಂಗಾಬಾದ್‌ವರೆಗೆ ಬರೋಬ್ಬರಿ 65 ಕಿಲೋಮೀಟರ್ ದೂರದವರೆಗೆ ವಾಹನಗಳು ಸ್ತಬ್ಧವಾಗಿ ನಿಂತಿವೆ. ಕೇವಲ 5 ಕಿಲೋಮೀಟರ್ ದೂರ ಕ್ರಮಿಸಲು 24 ಗಂಟೆಗಳ ಕಾಲಾವಕಾಶ ಬೇಕಾಗುತ್ತಿದ್ದು, ಅಂಬ್ಯುಲೆನ್ಸ್‌ಗೂ ದಾರಿ ಬಿಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಟ್ರಕ್ ಚಾಲಕರು, ಪ್ರವಾಸಿಗರು ಮತ್ತು ಇತರ ವಾಹನ ಸವಾರರು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದಲೂ ವಾಹನಗಳು ರಸ್ತೆಯಲ್ಲೇ ನಿಂತಿದ್ದರೂ, ಆಡಳಿತ ಯಂತ್ರವು ಯಾವುದೇ ಸಹಾಯ ಕ್ರಮಗಳನ್ನು ಕೈಗೊಳ್ಳದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ನಿರ್ಮಿಸಲಾಗಿದ್ದ ಪರ್ಯಾಯ ಸರ್ವಿಸ್ ರಸ್ತೆಗಳು ಮತ್ತು ಇತರೆ ಮಾರ್ಗಗಳು ಸಹ ಪ್ರವಾಹದ ನೀರಿನಲ್ಲಿ ಮುಳುಗಿರುವುದು ಈ ಭಾರಿ ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣವಾಗಿದೆ.