ಚೆನ್ನೈ: ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಚಪ್ಪಲಿಗಳು… ಹರಿದುಹೋಗಿರುವ ಪಕ್ಷದ ಧ್ವಜಗಳು… ಮುರಿದ ಕಂಬಗಳು… ನಜ್ಜುಗುಜ್ಜಾದ ನೀರಿನ ಬಾಟಲಿಗಳು… ತಮಿಳುನಾಡಿನ ಕರೂರ್‌ನ ವೇಲುಚ್ಚಾಮಿಪುರಂ ಪ್ರದೇಶದಲ್ಲಿ ಭಾನುವಾರ ಕಂಡುಬಂದ ಪರಿಸ್ಥಿತಿ ಇದು. ಚಲನಚಿತ್ರ ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರ ಪ್ರವಾಸದ ಸಂದರ್ಭದಲ್ಲಿ ಶನಿವಾರ ರಾತ್ರಿ ನಡೆದ ನೂಕುನುಗ್ಗಲಿನಲ್ಲಿ ಮೃತರ ಸಂಖ್ಯೆ 40ಕ್ಕೆ ಏರಿದೆ.
ಕರೂರ್ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕವಿನ್ (31) ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಮತ್ತಷ್ಟು 50 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಮತ್ತು ಗಾಯಗೊಂಡವರನ್ನು ವಿಚಾರಿಸಲು ಅನುಮತಿ ನೀಡಬೇಕೆಂದು ವಿಜಯ್ ಪೊಲೀಸರನ್ನು ಕೋರಿದ್ದಾರೆ. ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಿಎಂ ಸ್ಟಾಲಿನ್ ಅವರು ಶನಿವಾರ ರಾತ್ರಿ 11 ಗಂಟೆಗೆ ಸಚಿವಾಲಯಕ್ಕೆ ತೆರಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಭಾನುವಾರ ಮುಂಜಾನೆ ಕರೂರ್ ಸರ್ಕಾರಿ ಆಸ್ಪತ್ರೆಗೆ ತಲುಪಿದರು. ಮರಣೋತ್ತರ ಪರೀಕ್ಷೆ ವಿಭಾಗದ ಬಳಿ ಮೃತರ ಅಂತಿಮ ದರ್ಶನ ಪಡೆದರು. ಸಂತ್ರಸ್ತ ಕುಟುಂಬಗಳನ್ನು ಓಲೈಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನೂ ಸಿಎಂ ವಿಚಾರಿಸಿದರು. ಇನ್ನು, ಮೃತರಿಗೆ ಗೌರವ ಸೂಚಿಸಿ ಕರೂರ್‌ನಲ್ಲಿ ವ್ಯಾಪಾರಿಗಳು ಭಾನುವಾರ ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಿದರು.
ವರದಿ ಕೋರಿದ ಅಮಿತ್ ಶಾ
ಕರೂರ್ ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಘಟನೆಗೆ ಸಂಬಂಧಿಸಿದ ಸಮಗ್ರ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಹೊರಡಿಸಿದ್ದಾರೆ. ಸಭೆಗಾಗಿ ಸ್ಥಳದ ಆಯ್ಕೆ, ಪೊಲೀಸರು ಒದಗಿಸಿದ ಭದ್ರತಾ ವ್ಯವಸ್ಥೆಗಳು, TVK ಪಕ್ಷಕ್ಕೆ ವಿಧಿಸಲಾದ ನಿಯಮಗಳು, ನೂಕುನುಗ್ಗಲು ಸಂಭವಿಸಲು ಕಾರಣಗಳು ಸೇರಿದಂತೆ ವಿವರಗಳೊಂದಿಗೆ ಸಮಗ್ರ ವರದಿಯನ್ನು ಕಳುಹಿಸುವಂತೆ ರಾಜ್ಯಪಾಲ ಆರ್.ಎನ್. ರವಿ ಕೂಡ ಸರ್ಕಾರಕ್ಕೆ ಸೂಚಿಸಿದ್ದಾರೆ.
ಹೇಗೆ ಸಮಾಧಾನಪಡಿಸಬೇಕೆಂದು ಗೊತ್ತಾಗುತ್ತಿಲ್ಲ: ವಿಜಯ್
ಕರೂರ್ ಪ್ರವಾಸದ ವೇಳೆ ನಡೆದ ನೂಕುನುಗ್ಗಲಿನಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ₹20 ಲಕ್ಷ ಮತ್ತು ಗಾಯಗೊಂಡವರಿಗೆ ₹2 ಲಕ್ಷದಂತೆ ಆರ್ಥಿಕ ನೆರವು ನೀಡುವುದಾಗಿ ವಿಜಯ್ ಘೋಷಿಸಿದ್ದಾರೆ. ಈ ಅಪಘಾತ ತಮಗೆ ತೀವ್ರ ಆಘಾತ ಮತ್ತು ಮಾನಸಿಕ ಯಾತನೆಯನ್ನು ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ. ಆತ್ಮೀಯರನ್ನು ಕಳೆದುಕೊಂಡು ನೊಂದವರನ್ನು ನೆನೆದು ತೀವ್ರವಾಗಿ ದುಃಖಿಸುತ್ತಿದ್ದೇನೆ ಮತ್ತು ಅವರನ್ನು ಹೇಗೆ ಸಮಾಧಾನಪಡಿಸಬೇಕೆಂದು ತಿಳಿಯದೆ ಕಣ್ಣೀರು ಹಾಕುತ್ತಿದ್ದೇನೆ ಎಂದರು. ಈ ದುರ್ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಅವರು, ಸಂತ್ರಸ್ತ ಕುಟುಂಬಗಳಿಗೆ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದರು. ಇನ್ನು ತಮಿಳುನಾಡು ಕಾಂಗ್ರೆಸ್ ಪಕ್ಷವೂ ಕೂಡ ಮೃತರ ಕುಟುಂಬದವರಿಗೆ ಮತ್ತು ಗಾಯಾಳುಗಳಿಗೆ ಒಟ್ಟು ₹1 ಕೋಟಿ ನೆರವು ಘೋಷಿಸಿದೆ.
ರಾಜಕೀಯ ಬೇಡ: ಸಿಎಂ ಸ್ಟಾಲಿನ್
ಕರೂರ್ ದುರಂತದ ಬಗ್ಗೆ ರಾಜಕೀಯ ಹೇಳಿಕೆಗಳನ್ನು ನೀಡಲು ನಾನು ಬಯಸುವುದಿಲ್ಲ ಎಂದು ಸಿಎಂ ಸ್ಟಾಲಿನ್ ಹೇಳಿದರು. ಬಾಧಿತರನ್ನು ರಕ್ಷಿಸುವುದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ, ಅವರಿಗೆ ಎಲ್ಲ ರೀತಿಯಿಂದಲೂ ನೆರವು ನೀಡುವುದೇ ತಮ್ಮ ಕರ್ತವ್ಯವೆಂದು ಭಾವಿಸಿದ್ದೇನೆ ಎಂದರು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದರು.
ಈ ಮಧ್ಯೆ, ಚೆನ್ನೈನ ನೀಲಾಂಕರೈನಲ್ಲಿರುವ TVK ನಾಯಕ ವಿಜಯ್ ಅವರ ನಿವಾಸವನ್ನು ಭಾನುವಾರ ಬೆಳಿಗ್ಗೆ ಡಿಎಂಕೆ ವಿದ್ಯಾರ್ಥಿ ವಿಭಾಗದ ಕಾರ್ಯಕರ್ತರು ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ 50 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಇನ್ನು ಕರೂರ್‌ನಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಮತ್ತು ಸಾಕಷ್ಟು ಭದ್ರತೆಯನ್ನು ಒದಗಿಸಲಿಲ್ಲ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಆರೋಪಿಸಿದರು.
ಸಿಬಿಐ ತನಿಖೆಗೆ ಆದೇಶಿಸಿ: TVK ಅರ್ಜಿ
ಕರೂರ್ ದುರಂತದ ಬಗ್ಗೆ ಸಿಬಿಐ (CBI) ತನಿಖೆಗೆ ಆದೇಶಿಸುವಂತೆ TVK ಪಕ್ಷವು ಕೋರಿದೆ. ಚೆನ್ನೈನ ಹೈಕೋರ್ಟ್‌ನ ಮಧುರೈ ವಿಭಾಗೀಯ ಪೀಠದ ನ್ಯಾಯಮೂರ್ತಿ ಜಸ್ಟಿಸ್ ದಂಡಪಾಣಿ ಅವರ ನಿವಾಸಕ್ಕೆ ತೆರಳಿದ ಆ ಪಕ್ಷದ ಉಪಕಾರ್ಯದರ್ಶಿ ನಿರ್ಮಲ್‌ಕುಮಾರ್ ಈ ಕುರಿತು ಅರ್ಜಿ ಸಲ್ಲಿಸಿದರು. ವಿಜಯ್ ಅವರ ಪ್ರವಾಸದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದಿವೆ ಮತ್ತು ಪೊಲೀಸರು ಸಾಕಷ್ಟು ಭದ್ರತೆ ಒದಗಿಸಿಲ್ಲ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಆ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ಸೋಮವಾರ ಮಧ್ಯಾಹ್ನ ಹೈಕೋರ್ಟ್ ಮಧುರೈ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಸಲು ಒಪ್ಪಿದ್ದಾರೆ ಎಂದು ನಿರ್ಮಲ್‌ಕುಮಾರ್ ತಿಳಿಸಿದ್ದಾರೆ.