ಸಹಪಾಠಿ ಟ್ರೈನಿ ಐಪಿಎಸ್‌ ಅಧಿಕಾರಿಗೆ ಲೈಂಗಿಕ ಕಿರುಕುಳ: ಆತ್ಮಹತ್ಯೆ ನಾಟಕವಾಡಿದ ಆರೋಪಿ ಟ್ರೈನಿ ಐಪಿಎಸ್‌ ಉದಯ್ ಕೃಷ್ಣಾರೆಡ್ಡಿ

ಸಂಚಲನ ಸೃಷ್ಟಿಸಿದ್ದ ಮಹಿಳಾ ಟ್ರೈನಿ ಐಪಿಎಸ್ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಮತ್ತೊಂದು ಮರುಜೀವ ಪಡೆದುಕೊಂಡಿದೆ. ಆರೋಪಿ ಟ್ರೈನಿ ಐಪಿಎಸ್ ಉದಯ್ ಕೃಷ್ಣಾರೆಡ್ಡಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸೋಮವಾರ ದಿನವಿಡೀ ಪ್ರಚಾರ ನಡೆದಿತ್ತಾದರೂ, ಅದೆಲ್ಲವೂ ನಾಟಕ ಹಾಗೂ ಸಾಲಿನಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಎಂದು ಪೊಲೀಸರು ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ.

ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉದಯ್ ಕೃಷ್ಣಾರೆಡ್ಡಿ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಟ್ರೈನಿ ಐಪಿಎಸ್ ದೂರು ನೀಡಿದ್ದರಿಂದ ಶನಿವಾರ ರಾತ್ರಿ ಅತ್ತಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದರಿಂದ ಆತಂಕಗೊಂಡ ಉದಯ್ ಕೃಷ್ಣಾರೆಡ್ಡಿ ಭಾನುವಾರ ಅಮೀರಪೇಟೆಯಲ್ಲಿರುವ ಗೆಳತಿಯ ಕೊಠಡಿಗೆ ತೆರಳಿದ್ದರು. ಅಲ್ಲಿ ಆಹಾರ ಸೇವಿಸದೆ ಅತಿಯಾಗಿ ಮದ್ಯ ಸೇವಿಸಿದ್ದರಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.

ಸೋಮವಾರ ಬೆಳಿಗ್ಗೆ ಎಬ್ಬಿಸಲು ಯತ್ನಿಸಿದರೂ ಯಾವುದೇ ಫಲ ಸಿಗಲಿಲ್ಲ. ಹಾಸಿಗೆಯ ಪಕ್ಕದಲ್ಲೇ ಮದ್ಯದ ಬಾಟಲಿ ಹಾಗೂ ಸ್ಯಾನಿಟೈಸರ್ ಇರುವುದನ್ನು ಕಂಡು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಭಾವಿಸಿ ಆತನ ಸಹೋದರ ಪ್ರಣಯ್ ಕೃಷ್ಣಾರೆಡ್ಡಿ ಹಾಗೂ ಕೆಲವು ಸ್ನೇಹಿತರು ಬೆಳಿಗ್ಗೆ 9.30ಕ್ಕೆ ಎಸ್‌ಆರ್ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ತಕ್ಷಣವೇ ಆತನಿಗೆ ತುರ್ತು ಚಿಕಿತ್ಸೆ ನೀಡಿದ ವೈದ್ಯರು, ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದರು.

ರಕ್ತದಲ್ಲಿ ಯಾವುದೇ ವಿಷಕಾರಿ ಅಂಶವಿಲ್ಲ ಎಂದು ವರದಿ ಬಂದಿದ್ದರಿಂದ, ತನ್ನ ಮೇಲಿದ್ದ ಕಿರುಕುಳ ಪ್ರಕರಣವನ್ನು ಪಕ್ಕಕ್ಕೆ ತಳ್ಳಲು ಉದಯ್ ಕೃಷ್ಣಾರೆಡ್ಡಿ ನಾಟಕವಾಡಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಮದ್ಯದ ಅಮಲಿನಲ್ಲೇ ಸೂಸೈಡ್ ನೋಟ್ ಬರೆದಿರಬಹುದು ಎಂದು ಭಾವಿಸಲಾಗಿದೆ.

ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಘಟನೆಯ ಕುರಿತು ತನಿಖೆ ನಡೆಸಲು ಅಧಿಕಾರಿಗಳು ಆಂತರಿಕ ಸಮಿತಿಯೊಂದನ್ನು ರಚಿಸಿದ್ದಾರೆ. ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಉದಯ್ ಕೃಷ್ಣಾರೆಡ್ಡಿ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು. ತನಿಖೆಯ ಭಾಗವಾಗಿ ಅತ್ತಾಪುರ ಪೊಲೀಸರು ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಿಸಿಟಿವಿ ಕ್ಯಾಮೆರಾ ಫುಟೇಜ್‌ಗಳನ್ನು ಸಂಗ್ರಹಿಸಲಿದ್ದಾರೆ.

ಮಹಿಳಾ ಟ್ರೈನಿ ಐಪಿಎಸ್ ಜೊತೆ ತನಗೆ ವರ್ಷದಿಂದ ಸ್ನೇಹವಿತ್ತು ಮತ್ತು ಆತ್ಮಹತ್ಯೆಗೆ ಯತ್ನಿಸಲು ಆಕೆಯೂ ಸೇರಿದಂತೆ ನಾಲ್ವರು ಕಾರಣ ಎಂದು ಉದಯ್ ಕೃಷ್ಣಾರೆಡ್ಡಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆಕೆ ತನ್ನೊಂದಿಗೆ ವಾಟ್ಸಾಪ್‌ನಲ್ಲಿ ಚಾಟ್ ಮಾಡಿರುವ ಆಧಾರಗಳಿವೆ ಎಂದು ಹೇಳಿದ್ದಾರೆ. ತಾವಿಬ್ಬರೂ ಜೊತೆಗಿದ್ದ ವೀಡಿಯೊಗಳನ್ನು ಆಕೆಯ ಪತಿಗೆ ಕಳುಹಿಸಿರುವುದಾಗಿಯೂ ತಿಳಿಸಿದ್ದಾರೆ. ಆಕೆ ತನ್ನ ಮೇಲೆ ನಿರಾಧಾರ ಆರೋಪಗಳನ್ನು ಮಾಡಿದ್ದಾಳೆ ಎಂದು ಹೇಳಿದ್ದಾರೆ. ಆಕೆಯ ಪರಿಚಯವಾದಂದಿನಿಂದ ನಡೆದ ಘಟನೆಗಳ ಎಲ್ಲ ಸಾಕ್ಷ್ಯಗಳು ತನ್ನ ಫೋನ್‌ನಲ್ಲಿವೆ ಎಂದಿದ್ದಾರೆ.

ಇದಕ್ಕೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ ಉದಯ್ ಕೃಷ್ಣಾರೆಡ್ಡಿ, ತನ್ನ ಮೇಲಿನ ದೂರುಗಳು ನಿರಾಧಾರವಾಗಿದ್ದು, ನ್ಯಾಯಕ್ಕೆ ಗೆಲುವಾಗುತ್ತದೆ ಎಂದು ನಂಬಿರುವುದಾಗಿ ಹೇಳಿದ್ದರು. ತನ್ನ ಸಹೋದರನ ಕುರಿತು ನಡೆಯುತ್ತಿರುವ ಪ್ರಚಾರಗಳೆಲ್ಲವೂ ಅಸತ್ಯ ಎಂದು ಉದಯ್ ಸಹೋದರ ಪ್ರಣಯ್ ಕೃಷ್ಣಾರೆಡ್ಡಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು