Home ರಾಜ್ಯ ವಿಷಯವಾರು 40ಕ್ಕಿಂತಲೂ ಕಡಿಮೆ ಮಕ್ಕಳಿರುವ ಕಾಲೇಜಿಗೂ ವರ್ಗಾವಣೆ ನೀಡಿ: ಉಪನ್ಯಾಸಕರ ಆಗ್ರಹ

ವಿಷಯವಾರು 40ಕ್ಕಿಂತಲೂ ಕಡಿಮೆ ಮಕ್ಕಳಿರುವ ಕಾಲೇಜಿಗೂ ವರ್ಗಾವಣೆ ನೀಡಿ: ಉಪನ್ಯಾಸಕರ ಆಗ್ರಹ

0

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ ಈ ಸಾಲಿನ ಸಾರ್ವತ್ರಿಕ ವರ್ಗಾವಣೆ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆ.11ರಿಂದ 24ರವರೆಗೆ ನಡೆಯಲಿದೆ. ಆದರೆ, ವರ್ಗಾವಣೆಗೆ ನಿಗದಿ ಪಡಿಸಿರುವ ಷರತ್ತಿನ ಬಗ್ಗೆ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

2023ನೇ ಸಾಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆಯಲ್ಲಿ ವಿಷಯವಾರು 40 ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗದಿಗೊಳಿಸಿ, 40ಕ್ಕಿಂತ ಕಡಿಮೆ ಇರುವ ವಿಷಯಗಳ ಉಪನ್ಯಾಸಕ ಹುದ್ದೆಗಳನ್ನು, ಉಪನ್ಯಾಸಕರ ಕೌನ್ಸಿಲಿಂಗ್‌ನಲ್ಲಿ ತೋರಿಸದಂತೆ ಇಲಾಖೆಯ ನಿರ್ದೇಶಕರು ಜಿಲ್ಲಾ ಉಪನಿರ್ದೇಶಕರಿಗೆ ಮೌಖಿಕ ನಿರ್ದೇಶನ ನೀಡಿದ್ದಾರೆ. ಇದರಿಂದ ಪರೋಕ್ಷವಾಗಿ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಇಲ್ಲದಂತೆ ಮಾಡುವುದು ಇಲಾಖೆ ಉದ್ದೇಶವಾಗಿದೆ. ಇದು ಸರಿಯಾದ ಕ್ರಮವಲ್ಲವೆಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

ಈ ಪೀಪಲ್‌ ಮೀಡಿಯಾ ಜೊತೆ ಮಾತನಾಡಿದ ಉಪನ್ಯಾಸಕರೊಬ್ಬರು “ಸ್ಟ್ರೆಂತ್‌ ಕಡಿಮೆಯಿದೆಯೆನ್ನುವ ಕಾರಣಕ್ಕೆ ಆ ಕಾಲೇಜನ್ನು ಲಿಸ್ಟಿನಲ್ಲಿ ಸೇರಿಸದಿರುವುದು ಸರಿಯಲ್ಲ. ಇದರಿಂದಾಗಿ ಅಂತಹ ಕಾಲೇಜಿನ ಮಕ್ಕಳು ಪಾಠದಿಂದ ವಂಚಿತರಾಗುತ್ತಾರೆ ಹಾಗೂ ಆ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಕ್ಕೆ ಇದು ತಡೆಯಾಗುತ್ತದೆ” ಎಂದರು.

ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ಎಲ್ಲಾ ವಿಷಯಗಳಿಗೂ 40ಕ್ಕಿಂತಲೂ ಹೆಚ್ಚಿನ ಮಕ್ಕಳು ಇರುವುದು ಅಸಾಧ್ಯ. ನಗರ ಪ್ರದೇಶಗಳಲ್ಲಿ, ತಾಲೂಕು ಕೇಂದ್ರಗಳ ಕಾಲೇಜಿನಲ್ಲಾದರೆ ಇದು ಸಾಧ್ಯ. ಉಪನ್ಯಾಸಕರ ಕೊರತೆಯಿಂದ ಗ್ರಾಮೀಣ ವಿಭಾಗದ ಕಾಲೇಜುಗಳಿಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿ ಕ್ರಮೇಣ ಆ ಕಾಲೇಜು ಮುಚ್ಚಿಯೇ ಹೋಗುವ ಸಾಧ್ಯತೆಯಿರುತ್ತದೆ. ಹೀಗಿರುವಾಗ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಆಘಾತಕಾರಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇಂತಹ ಆದೇಶವನ್ನು ಜಾರಿಗೆ ತಂದಲ್ಲಿ ರಾಜ್ಯದಲ್ಲಿನ 1232 ಕಾಲೇಜುಗಳ ಪೈಕಿ ಶೇಕಡಾ 30ರಷ್ಟು ಕಾಲೇಜುಗಳನ್ನು ಮುಚ್ಚಬೇಕಾಗಿ ಬರುತ್ತದೆ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಈಗಾಗಲೇ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಉಪನ್ಯಾಸಕರು ಚರ್ಚೆ ನಡೆಸಿದ್ದು, ಗ್ರಾಮಾಂತರ ಪ್ರದೇಶದ ಕಾಲೇಜುಗಳು ಉಳಿಯಬೇಕಾದರೆ, ಷರತ್ತು ತೆಗೆಯಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಾಲಿನ ವರ್ಗಾವಣೆಗೆ 82 ಪ್ರಾಂಶುಪಾಲರು, 2397 ಉಪನ್ಯಾಸಕರು ವಿವಿಧ ಆದ್ಯತೆಗಳಡಿ ಅಡಿ ಅರ್ಜಿ ಸಲ್ಲಿಸಿದ್ದಾರೆ.

You cannot copy content of this page

Exit mobile version