ವಿಶ್ವ ಟ್ರಾನ್ಸ್‌ಜೆಂಡರ್‌ ದಿನ: ಹಕ್ಕುಗಳಿಂದ ವಂಚಿತವಾದ ಸಮುದಾಯ!

ನಮ್ಮ ಸಮಾಜದಲ್ಲಿ ಹಕ್ಕುಗಳ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತವೆ. ಆದರೆ, ಸಮಾಜದ ಅಂಚಿನಲ್ಲಿ ಬದುಕುವವರಿಗೆ ಈ ಹಕ್ಕುಗಳು ನಿಜವಾಗಿಯೂ ದೊರೆಯುತ್ತವೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಜಾತಿ, ಮತ, ಲಿಂಗ ತಾರತಮ್ಯದ ಜೊತೆಗೆ, ಲೈಂಗಿಕತೆಯ (Gender) ಹೆಸರಿನಲ್ಲಿ ಅನೇಕರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಹೀಗೆ ಸಮಾಜದ ಅಂಚಿಗೆ ತಳ್ಳಲ್ಪಟ್ಟವರಲ್ಲಿ ಟ್ರಾನ್ಸ್‌ಜೆಂಡರ್‌ ಸಮುದಾಯವರು ಮುಖ್ಯರು. ಅವರ ಜೀವನ ಇತರರಿಗಿಂತ ಬಹಳ ಭಿನ್ನವಾಗಿರುತ್ತದೆ.

ಟ್ರಾನ್ಸ್‌ಜೆಂಡರ್‌ ಎಂದಾಗ ತಕ್ಷಣಕ್ಕೆ ಕಣ್ಣಿನ ಮುಂದೆ ಬರುವುದು ಟ್ರಾನ್ಸ್‌ಮಹಿಳೆಯವರು ಮಾತ್ರ. ಟ್ರಾನ್ಸ್‌ಜೆಂಡರ್‌ ಸಮುದಾಯದಲ್ಲಿ ಹೆಚ್ಚು ನಿರ್ಲಕ್ಷಿಸಲ್ಪಟ್ಟವರು ಟ್ರಾನ್ಸ್‌ಪುರುಷರು. ಹೆಣ್ಣಿನ ದೇಹವನ್ನು ಹೊಂದಿ, ಅದರಿಂದ ಹೊರಬಂದು ಗಂಡಾದವರು.

“ದೇಹ ನನ್ನದಲ್ಲ, ಮನಸ್ಸು ಗಂಡಸದ್ದಲ್ಲ, ಹೆಣ್ಣಾಗಬೇಕೆಂಬ ಹಂಬಲ… ಸಮಾಜ ನನ್ನನ್ನು ಕಂಡು ಹೀಯಾಳಿಸುತ್ತದೆ. ನಾನೂ ಮನುಷ್ಯಳೇ, ನನಗೂ ಆತ್ಮಗೌರವ ಬೇಕು,” ಎಂದು ಕವಯಿತ್ರಿಯೊಬ್ಬರು ಹೇಳುತ್ತಾರೆ. 

ಪುರುಷ ದೇಹದಲ್ಲಿ ಹುಟ್ಟಿ ಸ್ತ್ರೀ ಮನಸ್ಸು ಹೊಂದುವುದು ಸಹಜ ಮತ್ತು ನೈಸರ್ಗಿಕ. ರೇವತಿ ಎಂಬ ಟ್ರಾನ್ಸ್‌ಮಹಿಳೆ ಬರೆದಿರುವ ಆತ್ಮಕತೆಯನ್ನು ದು.ಸರಸ್ವತಿಯವರು “ಬದುಕು-ಬಯಲು, ಹಿಜ್ರಾ ಒಬ್ಬಳ ಆತ್ಮಕಥೆ ಇದು” ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಮಾಜದಿಂದ ಎದುರಾಗುವ ತಾರತಮ್ಯ, ಅವಮಾನ, ವೇದನೆ, ಕುಟುಂಬದಿಂದ ಹೊರಹಾಕಲ್ಪಡುವಿಕೆ, ಆತ್ಮಗೌರವಕ್ಕಾಗಿ ನಡೆಸುವ ಹೋರಾಟ ಮತ್ತು ಪ್ರೀತಿಗಾಗಿ ಹಂಬಲಿಸುವ ಅವರ ಒಳಗಿನ ಕಥೆಯನ್ನು ರೇವತಿ ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ. ಇದು ಕೇವಲ ರೇವತಿಯ ಕಥೆಯಲ್ಲ, ಎಲ್ಲಾ ಟ್ರಾನ್ಸ್‌ಜೆಂಡರ್‌ಗಳ ಕಥೆಯಾಗಿದೆ.

Your Stick Will Not Break My Strength” ಎಂಬ ತಮ್ಮ ಆತ್ಮಕಥೆಯಲ್ಲಿ ಸುನೀಲ್‌ ಮೋಹನ್‌ ಅವರು ಟ್ರಾನ್ಸ್‌ಪುರುಷರ ಬಗ್ಗೆ ಬೆಳಕು ಚೆಲ್ಲಿದ್ದಾರೆ. 

ಲಿಂಗತ್ವ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಹಳ ಮುಖ್ಯ ಭಾಗ. ಇದನ್ನು ಇತರರು ಅಥವಾ ವೈದ್ಯಕೀಯ ಪ್ರಮಾಣಪತ್ರಗಳು ನಿರ್ಧರಿಸುವುದು ಸರಿಯಲ್ಲ. ವ್ಯಕ್ತಿ ತಾನು ತನ್ನನ್ನು ಹೇಗೆ ಭಾವಿಸುತ್ತಾನೋ ಅದೇ ಅವನ ಅಥವಾ ಅವಳ ನಿಜವಾದ ಗುರುತು.

ಇತ್ತೀಚೆಗೆ ಭಾರತದ ಪಾರ್ಲಿಮೆಂಟ್ ‘ಟ್ರಾನ್ಸ್‌ಜೆಂಡರ್ ಹಕ್ಕುಗಳ ರಕ್ಷಣೆ’ ಹೆಸರಿನಲ್ಲಿ ಒಂದು ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಆದರೆ ಈ ಮಸೂದೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ಇದರ ವಿರುದ್ಧ ಧ್ವನಿ ಎತ್ತಿವೆ. ಆದರೂ ಸರ್ಕಾರ ಸಂಖ್ಯಾಬಲದಿಂದ ಈ ಕಾನೂನನ್ನು ಜಾರಿಗೊಳಿಸಿದೆ.

ಈ ಹೊಸ ಕಾನೂನಿನಲ್ಲಿ ಸಮಸ್ಯೆಗಳಿವೆ: 

  • ವ್ಯಕ್ತಿಯು ತನ್ನನ್ನು ತಾವು ಟ್ರಾನ್ಸ್‌ಜೆಂಡರ್‌ ಎಂದು ಸ್ವಯಂ ಘೋಷಿಸಿಕೊಳ್ಳುವ ಹಕ್ಕನ್ನು ಕಳೆದುಕೊಳ್ಳುತ್ತಾಳೆ/ನೆ. 
  • ಕಿನ್ನರ್‌, ಹಿಜ್ರಾ, ಅರವನಿ, ಜೋಗತಿ- ಈ ನಾಲ್ಕು ಸಾಂಪ್ರದಾಯಿಕ ಸಮುದಾಯಗಳ ಹೊರಗೆ ಬದುಕುವ ಟ್ರಾನ್ಸ್‌ಜೆಂಡರ್‌ಗಳನ್ನು ಈ ಮಸೂದೆ ತಿರಸ್ಕರಿಸುತ್ತದೆ.
  • ಟ್ರಾನ್ಸ್‌ಜೆಂಡರ್‌ ಎಂದು ಕರೆಸಿಕೊಳ್ಳಲು ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ ಅನುಮತಿ ಕಡ್ಡಾಯವಾಗಿದೆ.  ಹೀಗಾಗಿ ದೈಹಿಕ ಪರೀಕ್ಷೆಗೆ ಒಳಪಡಬೇಕು. ಇದು ದೈಹಿಕ, ಮಾನಸಿಕ ಹಿಂಸೆಗೆ ಕಾರಣವಾಗಬಹುದು.
  • ಶಸ್ತ್ರಚಿಕಿತ್ಸೆಯ ವಿವರಗಳನ್ನು ಅಧಿಕಾರಿಗಳಿಗೆ ತಿಳಿಸಬೇಕು ಎಂಬ ನಿಯಮವಿದೆ.  

ಇದರಿಂದ ಅವರ ವೈಯಕ್ತಿಕ ಗೌಪ್ಯತೆಗೆ ಧಕ್ಕೆ ಉಂಟಾಗುತ್ತದೆ. 2014ರಲ್ಲಿ ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ನಲ್ಸಾ ತೀರ್ಪಿನಲ್ಲಿ (NALSA v. Union of India) ‘ಸ್ವಯಂ ಗುರುತಿಸಿಕೊಳ್ಳುವಿಕೆ’ ಎಂಬುದು ಸಾಂವಿಧಾನಿಕ ಮೂಲಭೂತ ಹಕ್ಕು ಎಂದು ಹೇಳಿತ್ತು. ಒಬ್ಬ ವ್ಯಕ್ತಿಗೆ ತನ್ನ ಲಿಂಗತ್ವವನ್ನು ತಾನೇ ನಿರ್ಧಿಸುವ ಹಕ್ಕು ಇರುತ್ತದೆ, ಆತನ/ಅವಳ ಲಿಂಗತ್ವ ನಿರ್ಧರಿಸಲು ವೈದ್ಯಕೀಯ ಪರೀಕ್ಷೆ ನಡೆಸುವುದು ತಪ್ಪು ಎಂದು ಆ ತೀರ್ಪಿನಲ್ಲಿ ಹೇಳಲಾಗಿತ್ತು. ಆದರೆ ಈ ಹೊಸ ಕಾನೂನು ಆ ಹಕ್ಕನ್ನು ಇಲ್ಲವಾಗಿಸುತ್ತದೆ.  ಈ ಕಾಯಿದೆಯ ದೃಷ್ಟಿಯಲ್ಲಿ ಟ್ರಾನ್ಸ್‌ಪುರುಷರು ಅಸ್ತಿತ್ವದಲ್ಲಿಯೇ ಇಲ್ಲದಂತಾಗಿದೆ.

ಟ್ರಾನ್ಸ್‌ಜೆಂಡರ್‌ ಸಮುದಾಯ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಬಹಳ ಅವಮಾನಗಳನ್ನು ಎದುರಿಸುತ್ತಾರೆ. ಅನೇಕರು ಕುಟುಂಬದಿಂದ ಹೊರಹಾಕಲ್ಪಟ್ಟು ಬೀದಿಗಳಲ್ಲಿ ಬದುಕಬೇಕಾಗುತ್ತದೆ. ಅವರಿಗೆ ಉತ್ತಮ ಜೀವನೋಪಾಯವಿಲ್ಲದೆ ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಗೆ ಮಾತ್ರ ಸೀಮಿತವಾಗುತ್ತಿದೆ. ಇದು ಅವರ ಇಚ್ಛೆಯಲ್ಲ, ಅನಿವಾರ್ಯವಾಗುತ್ತಿದೆ.

ಪ್ರತಿ ವರ್ಷ ಮಾರ್ಚ್ 31ರಂದು ‘ಅಂತರಾಷ್ಟ್ರೀಯ ಟ್ರಾನ್ಸ್‌ಜೆಂಡರ್‌ಗಳ ದಿನ’ವನ್ನು ಆಚರಿಸಲಾಗುತ್ತದೆ. ಈ ದಿನ ಅವರ ಸಾಧನೆಗಳನ್ನು ಗುರುತಿಸುವುದರ ಜೊತೆಗೆ, ಅವರು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ.

ಟ್ರಾನ್ಸ್‌ಜೆಂಡರ್‌ಗಳು ಕೂಡ ಸಾಮಾನ್ಯ ಮನುಷ್ಯರಂತೆ ಆತ್ಮಗೌರವದಿಂದ ಬದುಕುವ ಹಕ್ಕು ಹೊಂದಿದ್ದಾರೆ. ಸಮಾನತೆಯನ್ನು ಬಯಸುವ ಪ್ರತಿಯೊಬ್ಬರೂ ಅವರ ಹಕ್ಕುಗಳ ರಕ್ಷಣೆಗೆ ಕೈಜೋಡಿಸಬೇಕು. ಸಮಾಜವು ಸಹೃದಯದಿಂದ ಅವರ ಕಷ್ಟಗಳನ್ನು ಅರ್ಥಮಾಡಿಕೊಂಡು, ಅವರಿಗೆ ಸಮಾನ ಅವಕಾಶಗಳನ್ನು ನೀಡಬೇಕು.

(ಇಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೆ ರೂಡಿಗತವಾಗಿ ಬಳಸುವ ತೃತೀಯಲಿಂಗಿ ಎಂಬ ಪದವನ್ನು ಬಳಸಿಲ್ಲ. ಪ್ರಥಮಲಿಂಗಿಗಳು ಯಾರು? ದ್ವಿತೀಯಲಿಂಗಿಗಳು ಯಾರು? ಈ ಪ್ರಶ್ನೆಗೆ ಉತ್ತರವಿಲ್ಲದಿರುವಾಗ ಟ್ರಾನ್ಸ್‌ಜೆಂಡರ್‌ಗಳನ್ನು ತೃತೀಯಲಿಂಗಿಗಳನ್ನು ಕರೆಯುವುದು ಸರಿಯಲ್ಲ.)

Related Articles

ಇತ್ತೀಚಿನ ಸುದ್ದಿಗಳು