Friday, June 14, 2024

ಸತ್ಯ | ನ್ಯಾಯ |ಧರ್ಮ

ಪತಿಯಿಂದಲೇ ಬುಡಕಟ್ಟು ಮಹಿಳೆಯ ಬೆತ್ತಲೆ ಮೆರವಣಿಗೆ!

ಜೈಪುರ,ಸಪ್ಟೆಂಬರ್.2: ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಯೊಬ್ಬರನ್ನು ಆಕೆಯ ಪತಿ ಅಗಸ್ಟ್‌ 31, ಗುರುವಾರದಂದು ಹಲ್ಲೆ ನಡೆಸಿ ವಿವಸ್ತ್ರಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ಪ್ರಕರಣ ವರದಿಯಾಗಿದೆ. ಈ ವೀಡಿಯೋದಲ್ಲಿ ಆಕೆಯ ಪತಿ ಎಂದು ಹೇಳಲಾದ ವ್ಯಕ್ತಿ 21 ವರ್ಷದ ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುತ್ತಾನೆ ಮತ್ತು ಆಕೆ ಸಹಾಯಕ್ಕಾಗಿ ಕೂಗಾಡುವುದು ಕಂಡು ಬಂದಿದೆ
ಪರಪುರುಷನ ಜೊತೆಗೆ ಸಂಬಂಧ ಹೊಂದಿದ್ದರು ಎಂದು ಆರೋಪಿಸಿ ಆಕೆಯ ಪತಿ ಈ ಕೃತ್ಯ ಎಸಗಿದ್ದಾನೆ. ಈ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ.

ಮದುವೆ ನಂತರವೂ ಮತ್ತೊಬ್ಬ ಪುರುಷನೊಂದಿಗೆ ವಾಸವಿದ್ದದ್ದಕ್ಕೆ ಆ ಮಹಿಳೆಯ ಗಂಡನ ಮನೆಯವರು ಅಪಹರಿಸಿ ತಮ್ಮ ಗ್ರಾಮಕ್ಕೆ ಕರೆದೊಯ್ದು ಹಲ್ಲೆ ನಡೆಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ ಎಂದು ರಾಜಸ್ಥಾನದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರಾ ಹೇಳಿದ್ದಾರೆ.

ಆರೋಪಿಗಳನ್ನು ಬಂಧಿಸಲು ಆರು ತಂಡಗಳನ್ನು ರಚಿಸಲಾಗಿದ್ದು, ಪ್ರತಾಪಗಢದ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕೃತ್ಯವನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಖಂಡಿಸಿ “ಪ್ರತಾಪ್‌ಗಢ ಜಿಲ್ಲೆಯಲ್ಲಿ ಕೌಟುಂಬಿಕ ಕಲಹವೊಂದರಲ್ಲಿ ಮಹಿಳೆಯೊಬ್ಬರನ್ನು ಆಕೆಯ ಅತ್ತೆ ಹಾಗೂ ಇತರರು ವಿವಸ್ತ್ರಗೊಳಿಸಿರುವ ವೀಡಿಯೊ ಹೊರಬಂದಿದೆ. ಎಡಿಜಿ (ಕ್ರೈಮ್) ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ.ಸುಸಂಸ್ಕೃತ ಸಮಾಜದಲ್ಲಿ ಇಂತಹ ಅಪರಾಧಿಗಳಿಗೆ ಜಾಗವಿಲ್ಲ.ಆದಷ್ಟು ಬೇಗ ಈ ಅಪರಾಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ನಡೆಸಲಾಗುವುದು. ತ್ವರಿತ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲಾಯಿತು,” ಎಂದು ಟ್ವೀಟ್‌ ಮಾಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಮತ್ತು ಇತರ ಕಾಂಗ್ರೆಸ್ ಸಚಿವರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, “ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ರಾಜಸ್ಥಾನದ ಜನರು ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ” ಎಂದು ಟ್ವೀಟ್‌ ಮಾಡಿದ್ದಾರೆ.
ಈ ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.

“ರಾಜಸ್ಥಾನದ ಪ್ರತಾಪ್‌ಗಢದಿಂದ ಬಂದಿರುವ ವಿಡಿಯೋ ಆಘಾತಕಾರಿಯಾಗಿದೆ. ರಾಜಸ್ಥಾನದಲ್ಲಿ ಆಡಳಿತವು ಸಂಪೂರ್ಣವಾಗಿ ಗೈರುಹಾಜವಾಗಿದೆ. ಮುಖ್ಯಮಂತ್ರಿ ಮತ್ತು ಮಂತ್ರಿಗಳು ಬಣ ಜಗಳಗಳನ್ನು ಇತ್ಯರ್ಥಪಡಿಸುವಲ್ಲಿ ನಿರತರಾಗಿದ್ದಾರೆ ಮತ್ತು ಉಳಿದ ಸಮಯವನ್ನು ದೆಹಲಿಯಲ್ಲಿ ಒಂದು ರಾಜವಂಶವನ್ನು ಸಮಾಧಾನಪಡಿಸುತ್ತಿದ್ದಾರೆ. ಇದು ಆಶ್ಚರ್ಯವೇನಿಲ್ಲ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ, ಪ್ರತಿದಿನ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ, ರಾಜಸ್ಥಾನದ ಜನತೆ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಪಿ ನಡ್ಡಾ ಟ್ವೀಟ್ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು