Saturday, December 27, 2025

ಸತ್ಯ | ನ್ಯಾಯ |ಧರ್ಮ

‘ಚಿಂಕಿ’, ‘ನೇಪಾಳಿ’ ಮೊದಲಾಗಿ ಜನಾಂಗೀಯ ನಿಂದನೆ: ಡೆಹ್ರಾಡೂನ್‌ನಲ್ಲಿ ಚಾಕು ಇರಿತಕ್ಕೆ ಒಳಗಾಗಿದ್ದ ತ್ರಿಪುರಾ ವಿದ್ಯಾರ್ಥಿ ಸಾವು

ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಜನಾಂಗೀಯ ನಿಂದನೆ ಮತ್ತು ಕ್ರೂರ ಹಲ್ಲೆಗೆ ಒಳಗಾಗಿ ಕಳೆದ ಎರಡು ವಾರಗಳಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ತ್ರಿಪುರಾದ ವಿದ್ಯಾರ್ಥಿ ಅಂಜೆಲ್ ಚಕ್ಮಾ (Anjel Chakma) ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ.

ಅಂಜೆಲ್ ಚಕ್ಮಾ ಡೆಹ್ರಾಡೂನ್‌ನ ಜಿಜ್ಞಾಸಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು. ಡಿಸೆಂಬರ್ 9 ರ ಸಂಜೆ ಅಂಜೆಲ್ ಮತ್ತು ಆತನ ಸಹೋದರ ಮೈಕೆಲ್ ಚಕ್ಮಾ ದಿನಸಿ ಖರೀದಿಸಲು ಸೆಲಾಕುಯಿ ಎಂಬಲ್ಲಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಮೈಕೆಲ್ ಪ್ರಕಾರ, ಮದ್ಯಪಾನ ಮಾಡಿದ್ದ ಗುಂಪೊಂದು ಇವರನ್ನು ತಡೆದು ನಿಲ್ಲಿಸಿ, ಅವರ ರೂಪವನ್ನು ನೋಡಿ ‘ನೇಪಾಳಿ’, ‘ಚೈನೀಸ್’, ‘ಚಿಂಕಿ’ ಮತ್ತು ‘ಮೋಮೋಸ್’ ಎಂದು ಜನಾಂಗೀಯವಾಗಿ ಅವಹೇಳನ ಮಾಡಲಾರಂಭಿಸಿದರು.

ನಿಂದನೆಯನ್ನು ಪ್ರತಿಭಟಿಸಿದಾಗ ಉದ್ರಿಕ್ತಗೊಂಡ ಗುಂಪು ಸಹೋದರರ ಮೇಲೆ ಹಲ್ಲೆ ನಡೆಸಿದೆ. ಮೈಕೆಲ್ ಅವರ ತಲೆಗೆ ಕಡಗದಿಂದ ಹೊಡೆಯಲಾಗಿದ್ದರೆ, ಅಂಜೆಲ್ ಅವರ ಕುತ್ತಿಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿತ್ತು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ 4 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರನ್ನು ಅವಿನಾಶ್ ನೇಗಿ, ಶೌರ್ಯ ರಜಪೂತ್, ಸೂರಜ್ ಖವಾಸ್, ಆಯುಷ್ ಬದೋನಿ ಮತ್ತು ಸುಮಿತ್ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಮತ್ತೊಬ್ಬ ಅಪ್ರಾಪ್ತ ಆರೋಪಿ ನೇಪಾಳಕ್ಕೆ ಓಡಿಹೋಗಿದ್ದಾನೆ ಎಂದು ಶಂಕಿಸಲಾಗಿದ್ದು, ಆತನ ಪತ್ತೆಗೆ 25,000 ರೂ. ಬಹುಮಾನ ಘೋಷಿಸಲಾಗಿದೆ. ವಿದ್ಯಾರ್ಥಿಯ ಸಾವಿನ ನಂತರ ಪೊಲೀಸರು ಈ ಪ್ರಕರಣವನ್ನು ಕೊಲೆ ಕೇಸ್ ಆಗಿ ಪರಿವರ್ತಿಸಿದ್ದಾರೆ.

ಟಿಪ್ರಾ ಮೋದಾ ಪಕ್ಷದ ಮುಖ್ಯಸ್ಥ ಪ್ರದ್ಯೋತ್ ಕಿಶೋರ್ ದೆಬ್ಬರ್ಮನ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಜಗತ್ತೆಲ್ಲಾ ಕ್ರಿಸ್‌ಮಸ್ ಆಚರಿಸುತ್ತಿದ್ದಾಗ ನಾವು ಅಂಜೆಲ್ ಚಕ್ಮಾ ಅವರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು” ಎಂದು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page