ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಓವೈಸಿ, 26/11ರ ಮುಂಬೈ ಉಗ್ರ ದಾಳಿಯ ಮಾಸ್ಟರ್‌ಮೈಂಡ್ ಮಸೂದ್ ಅಜರ್ ಹಾಗೂ ಲಷ್ಕರ್-ಎ-ತೊಯ್ಬಾ ಉಗ್ರರನ್ನು ಪಾಕಿಸ್ತಾನದಿಂದ ಭಾರತಕ್ಕೆ ಎಳೆತಂದು ಶಿಕ್ಷಿಸಬೇಕು ಎಂದು ಒತ್ತಾಯಿಸಿದರು. ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಭಾರತ ಏಕೆ ಹಿನ್ನಡೆ ಅನುಭವಿಸುತ್ತಿದೆ ಎಂದು ಅವರು ಇದೇ ವೇಳೆ ಪ್ರಶ್ನಿಸಿದರು.
“ಅಮೆರಿಕದ ಪಡೆಗಳು ಮದುರೊ ಅವರನ್ನು ಅವರ ದೇಶದಿಂದಲೇ ಅಪಹರಿಸಿ ಅಮೆರಿಕಕ್ಕೆ ಕರೆದೊಯ್ದಿವೆ ಎಂದು ನಾವು ಕೇಳುತ್ತಿದ್ದೇವೆ. ಟ್ರಂಪ್ ಇದನ್ನು ಮಾಡಲು ಸಾಧ್ಯವಿದ್ದರೆ, ಪ್ರಧಾನಿ ಮೋದಿ ಅವರಿಗೂ ಇದು ಸಾಧ್ಯವಿದೆ. ಸೈನ್ಯವನ್ನು ಪಾಕಿಸ್ತಾನಕ್ಕೆ ಕಳುಹಿಸಿ, ಮಸೂದ್ ಅಜರ್ ಮತ್ತು ಇತರ ಉಗ್ರರನ್ನು ಭಾರತಕ್ಕೆ ಹಿಡಿದು ತನ್ನಿ” ಎಂದು ಓವೈಸಿ ಸವಾಲು ಹಾಕಿದರು.
ಈ ಹಿಂದೆ ಮೋದಿ ಅವರು ನೀಡಿದ್ದ “ಅಬ್ ಕಿ ಬಾರ್, ಟ್ರಂಪ್ ಸರ್ಕಾರ್” ಎಂಬ ಘೋಷಣೆಯನ್ನು ನೆನಪಿಸಿದ ಓವೈಸಿ, “ಟ್ರಂಪ್ ಅವರಿಗಿಂತ ನೀವೇನೂ ಕಡಿಮೆ ಇಲ್ಲ. ಅವರು ಮಾಡಿದ್ದನ್ನು ನೀವು ಕೂಡ ಮಾಡಬೇಕು” ಎಂದು ಮಾರ್ಮಿಕವಾಗಿ ಹೇಳಿದರು. 2008ರ ಮುಂಬೈ ದಾಳಿಯಲ್ಲಿ ಸುಮಾರು 170 ಜನರು ಬಲಿಯಾಗಿದ್ದು, ಆ ನೋವು ಇಂದಿಗೂ ಮಾಸಿಲ್ಲ ಎಂದು ಅವರು ತಿಳಿಸಿದರು.
