Monday, March 16, 2026

ಸತ್ಯ | ನ್ಯಾಯ |ಧರ್ಮ

ಮಾಧ್ಯಮಗಳ ಮೇಲೆ ಟ್ರಂಪ್ ಕೆಂಗಣ್ಣು: ʼರಾಷ್ಟ್ರದ ಭದ್ರತೆಗೆ ಅಪಾಯ ತರುವʼ ಸುದ್ದಿ ಬಿತ್ತರಿಸಿದರೆ ಲೈಸೆನ್ಸ್ ರದ್ದು ಮಾಡುವುದಾಗಿ ಎಚ್ಚರಿಕೆ

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕಾ ನಡುವಿನ ಸಂಘರ್ಷದ ಕುರಿತು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ ಎಂದು ಡೊನಾಲ್ಡ್ ಟ್ರಂಪ್ ಸರ್ಕಾರ ಆರೋಪಿಸಿದೆ. ಇಂತಹ ಸುದ್ದಿ ಸಂಸ್ಥೆಗಳ ಪ್ರಸಾರ ಪರವಾನಗಿಯನ್ನು (Broadcasting License) ರದ್ದುಗೊಳಿಸುವುದಾಗಿ ಸರ್ಕಾರ ಬೆದರಿಕೆ ಹಾಕಿದೆ.

ಫೆಡರಲ್ ಕಮ್ಯೂನಿಕೇಷನ್ಸ್ ಕಮಿಷನ್ (FCC) ಅಧ್ಯಕ್ಷ ಬ್ರೆಂಡನ್ ಕಾರ್ ಮಾತನಾಡಿ, “ಮಾಧ್ಯಮ ಸಂಸ್ಥೆಗಳು ಕಡ್ಡಾಯವಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವರದಿಗಳನ್ನು ಪ್ರಸಾರ ಮಾಡಬೇಕು. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಅಥವಾ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದರೆ ಲೈಸೆನ್ಸ್ ಕಳೆದುಕೊಳ್ಳಬೇಕಾಗುತ್ತದೆ,” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಕಳೆದ ವರ್ಷವೂ ಟ್ರಂಪ್ ಅವರನ್ನು ಟೀಕಿಸಿದ್ದ ಎಬಿಸಿ (ABC) ಚಾನೆಲ್ ವಿರುದ್ಧ ಕಾರ್ ಇಂತಹದ್ದೇ ಕ್ರಮ ಕೈಗೊಂಡಿದ್ದರು ಎಂಬುದು ಇಲ್ಲಿ ಗಮನಾರ್ಹ.

ಸೌದಿ ಅರೇಬಿಯಾದಲ್ಲಿ ಇರಾನ್ ನಡೆಸಿದ ದಾಳಿಯಲ್ಲಿ ಅಮೆರಿಕಾದ ‘ರೀಫ್ಯುಯಲಿಂಗ್’ (Re-fueling) ವಿಮಾನಗಳು ಧ್ವಂಸವಾಗಿವೆ ಎಂಬ ಸುದ್ದಿಯು ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಇದರಿಂದ ಕೆರಳಿದ ಅಧ್ಯಕ್ಷ ಟ್ರಂಪ್, “ನಮ್ಮ ಯಾವುದೇ ವಿಮಾನಗಳಿಗೆ ಹಾನಿಯಾಗಿಲ್ಲ ಅಥವಾ ಅವು ಧ್ವಂಸಗೊಂಡಿಲ್ಲ. ಮಾಧ್ಯಮಗಳು ಬೇಕಂತಲೇ ತಪ್ಪು ಮಾಹಿತಿ ನೀಡುತ್ತಿವೆ,” ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ ಈ ನಡೆಯನ್ನು ರಾಜಕೀಯ ನಾಯಕರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಹೋರಾಟಗಾರರು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರದ ವಿರುದ್ಧದ ಟೀಕೆಗಳನ್ನು ಹತ್ತಿಕ್ಕಲು ಈ ರೀತಿಯ ಸೆನ್ಸಾರ್‌ಶಿಪ್ ಹೇರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಯುದ್ಧದ ಸಮಯದಲ್ಲಿ ಸತ್ಯ ಸಂಗತಿಗಳನ್ನು ಮುಚ್ಚಿಡಲು ಸರ್ಕಾರ ಮಾಧ್ಯಮಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಹೋರಾಟಗಾರರು ದೂರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page