Home ದೆಹಲಿ ಅಮೆರಿಕ-ಇಸ್ರೇಲ್‌ನ ಸಾಮ್ರಾಜ್ಯಶಾಹಿ ಯುದ್ಧೋನ್ಮಾದ: ಪ್ರಧಾನಿ ಮೋದಿ ಮಾತನಾಡುವುದು ಯಾವಾಗ?

ಅಮೆರಿಕ-ಇಸ್ರೇಲ್‌ನ ಸಾಮ್ರಾಜ್ಯಶಾಹಿ ಯುದ್ಧೋನ್ಮಾದ: ಪ್ರಧಾನಿ ಮೋದಿ ಮಾತನಾಡುವುದು ಯಾವಾಗ?

0

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಭೀಕರ ದಾಳಿಯು ಜಾಗತಿಕ ಶಾಂತಿ ಮತ್ತು ಸಾರ್ವಭೌಮತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾಮ್ರಾಜ್ಯಶಾಹಿ ಧೋರಣೆ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಇರಾನ್ ಮೇಲೆ ಅತ್ಯಂತ ಪಾಶವಿ ದಾಳಿ ನಡೆಯುತ್ತಿದೆ.

ಫೆಬ್ರವರಿ 28ರ ಮುಂಜಾನೆ ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ನಗರಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಏಕಕಾಲದಲ್ಲಿ ಬಾಂಬ್‌ಗಳ ಮಳೆಗರೆದಿವೆ. ಈ ದಾಳಿಯ ಮೊದಲ ದಿನವೇ ಇರಾನ್‌ನ ಸುಪ್ರೀಂ ನಾಯಕ ಸೇರಿದಂತೆ ಆಡಳಿತ ಯಂತ್ರದ 40ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳನ್ನು ಹತ್ಯೆ ಮಾಡಲಾಗಿದೆ. ಈ ದಾಳಿಯು ಕೇವಲ ಮಿಲಿಟರಿ ಗುರಿಗಳಿಗೆ ಸೀಮಿತವಾಗದೆ, ನಾಗರಿಕರನ್ನೂ ಬಲಿ ತೆಗೆದುಕೊಳ್ಳುತ್ತಿದೆ.

ಶೈಕ್ಷಣಿಕ ಸಂಸ್ಥೆಗಳನ್ನೂ ಬಿಡದ ಈ ದಾಳಿಯಲ್ಲಿ, ಹೆಣ್ಣು ಮಕ್ಕಳ ಶಾಲೆಯೊಂದರ ಮೇಲೆ ಬಾಂಬ್ ಎಸೆದ ಪರಿಣಾಮ 160ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಅಲ್ಲದೆ, ವಿಶಾಖಪಟ್ಟಣಂನಲ್ಲಿ ನಡೆದ ಐಎಫ್‌ಆರ್ (IFR) ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದ ಇರಾನ್ ನೌಕೆಯ ಮೇಲೆ ಶ್ರೀಲಂಕಾ ಸಮುದ್ರ ವ್ಯಾಪ್ತಿಯಲ್ಲಿ ಅಮೆರಿಕ ದಾಳಿ ನಡೆಸಿದೆ. ಈ ಘಟನೆಯಲ್ಲಿ ಸುಮಾರು 100 ಮಂದಿ ಇರಾನ್ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಈವರೆಗೆ ಸುಮಾರು 1300ಕ್ಕೂ ಹೆಚ್ಚು ಇರಾನ್ ನಾಗರಿಕರು ಈ ಯುದ್ಧದಲ್ಲಿ ಬಲಿಯಾಗಿದ್ದು, ಸಾವಿರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳು ನಾಶವಾಗುತ್ತಿವೆ. ಈ ದೌರ್ಜನ್ಯವು ಸೆಪ್ಟೆಂಬರ್ ವರೆಗೂ ಮುಂದುವರಿಯಲಿದೆ ಎಂದು ಟ್ರಂಪ್ ಹೇಳುತ್ತಿದ್ದರೆ, ಇರಾನ್‌ನ ಹೊಸ ನಾಯಕರನ್ನೆಲ್ಲ ನಿರ್ನಾಮ ಮಾಡುವುದಾಗಿ ನೆತನ್ಯಾಹು ಯುದ್ಧೋನ್ಮಾದದ ಎಚ್ಚರಿಕೆ ನೀಡುತ್ತಿದ್ದಾರೆ.

ಆಧುನಿಕ ಇತಿಹಾಸದಲ್ಲಿ ಕಳೆದ ಫೆಬ್ರವರಿ ತಿಂಗಳು ಅತ್ಯಂತ ಕರಾಳ ಅಧ್ಯಾಯವಾಗಿ ದಾಖಲಾಗಿದೆ. ಫೆಬ್ರವರಿ 3ರಂದು ಅಮೆರಿಕ ಸೈನ್ಯವು ವೆನಿಜುವೆಲಾ ಅಧ್ಯಕ್ಷರ ಭವನಕ್ಕೆ ನುಗ್ಗಿ, ಅಧ್ಯಕ್ಷರನ್ನು ಅವರ ಪತ್ನಿಯೊಂದಿಗೆ ಅಪಹರಿಸಿ ಬಂಧಿಸಿದೆ. ಇದಾದ ನಂತರ 28ರಂದು 80 ವರ್ಷ ವಯಸ್ಸಿನ ಇರಾನ್ ಸುಪ್ರೀಂ ನಾಯಕ ಮತ್ತು ಅವರ ಕುಟುಂಬವನ್ನು ಹತ್ಯೆ ಮಾಡಲಾಗಿದೆ. ಈ ಘಟನೆಗಳು ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆಗೆ ಸಾಕ್ಷಿಯಾಗಿವೆ.

ಒಮನ್ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿದ್ದ ಸಂಧಾನ ಮಾತುಕತೆಗಳು ಸಫಲವಾಗುತ್ತಿವೆ ಎಂಬ ಸುಳ್ಳು ಸುದ್ದಿಯನ್ನು ಹರಡುವ ಮೂಲಕ ಸಾಮ್ರಾಜ್ಯಶಾಹಿ ಮಾಧ್ಯಮಗಳು ಜಗತ್ತನ್ನು ವಂಚಿಸಿವೆ. ಇರಾನ್ ಜನರು ಈ ಸುದ್ದಿಯನ್ನು ನಂಬಿ ನಿಶ್ಚಿಂತರಾಗಿದ್ದಾಗ, ಟ್ರಂಪ್ ಮತ್ತು ನೆತನ್ಯಾಹು ಬೆನ್ನಿಗೆ ಇರಿಯುವ ಕೆಲಸ ಮಾಡಿದ್ದಾರೆ. ಇದು ವ್ಯವಸ್ಥಿತವಾಗಿ ರೂಪಿಸಿದ ದಗಾಕೋರ ತಂತ್ರವಾಗಿದೆ.

ವೆನಿಜುವೆಲಾ ಮತ್ತು ಇರಾನ್‌ನ ತೈಲ ಸಂಪನ್ಮೂಲಗಳನ್ನು ಲೂಟಿ ಮಾಡಿ ಜಗತ್ತಿನ ಮೇಲೆ ಆಧಿಪತ್ಯ ಸಾಧಿಸುವುದು ಅಮೆರಿಕದ ಮುಖ್ಯ ಉದ್ದೇಶವಾಗಿದೆ. ಇತ್ತ ಇಸ್ರೇಲ್, ಪ್ಯಾಲೆಸ್ತೀನ್‌ನಲ್ಲಿ ನಡೆಸುತ್ತಿರುವ ಜನಾಂಗೀಯ ಹತ್ಯಾಕಾಂಡವನ್ನು ಇಡೀ ಪ್ರದೇಶಕ್ಕೆ ವಿಸ್ತರಿಸಲು ಈ ಯುದ್ಧವನ್ನು ಬಳಸಿಕೊಳ್ಳುತ್ತಿದೆ. ಆದರೆ, ಟ್ರಂಪ್ ಅವರ ಈ ಕ್ರಮವನ್ನು ಸ್ವತಃ ಅಮೆರಿಕದ ಜನರೇ ತೀವ್ರವಾಗಿ ವಿರೋಧಿಸುತ್ತಿದ್ದಾರೆ.

ಸಿಎನ್‌ಎನ್ ಮತ್ತು ರಾಯಿಟರ್ಸ್ ನಡೆಸಿದ ಸಮೀಕ್ಷೆಗಳ ಪ್ರಕಾರ, ಶೇ. 60ಕ್ಕೂ ಹೆಚ್ಚು ಅಮೆರಿಕನ್ನರು ಟ್ರಂಪ್ ಅವರ ಯುದ್ಧದ ನಿರ್ಧಾರವನ್ನು ವಿರೋಧಿಸಿದ್ದಾರೆ. ಟ್ರಂಪ್ ಅವರ ಆದ್ಯತೆಗಳು ತಪ್ಪಾಗಿವೆ ಎಂದು ಶೇ. 68ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಡೆಮೋಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷದ ಅನೇಕ ನಾಯಕರು ಕೂಡ ಈ ದಾಳಿಯನ್ನು ಖಂಡಿಸುತ್ತಿದ್ದಾರೆ.

ಆದರೆ, ಭಾರತದ ಕೇಂದ್ರ ಸರ್ಕಾರವು ಈ ವಿಷಯದಲ್ಲಿ ನಿಗೂಢ ಮೌನ ತಾಳಿರುವುದು ಆತಂಕಕಾರಿಯಾಗಿದೆ. ವೆನಿಜುವೆಲಾ ಮತ್ತು ಇರಾನ್ ಭಾರತದ ದೀರ್ಘಕಾಲದ ಮಿತ್ರ ರಾಷ್ಟ್ರಗಳಾಗಿವೆ. ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲದ ಬಹುಪಾಲು ಈ ದೇಶಗಳಿಂದಲೇ ಸರಬರಾಜಾಗುತ್ತದೆ. ಇಂತಹ ರಾಷ್ಟ್ರಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸದಿರುವುದು ಭಾರತದ ಸಾರ್ವಭೌಮತ್ವಕ್ಕೆ ಸಲ್ಲದ ಕೆಲಸವಾಗಿದೆ.

ಅಮೆರಿಕ ಮತ್ತು ಇಸ್ರೇಲ್ ನಾಯಕರೊಂದಿಗೆ ಭಾರತದ ಆಡಳಿತಗಾರರು ಹೊಂದಿರುವ ಕಾರ್ಪೊರೇಟ್ ಪರ ಮತ್ತು ಮತಾಧಾರಿತ ಸಂಬಂಧವೇ ಈ ಮೌನಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಅಮೆರಿಕವು ಇಂದು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದೆ. 2021ರಲ್ಲಿ ಶೇ. 6.2ರಷ್ಟಿದ್ದ ಅಲ್ಲಿನ ಆರ್ಥಿಕ ಬೆಳವಣಿಗೆಯು 2025ರ ವೇಳೆಗೆ ಶೇ. 2ಕ್ಕೆ ಕುಸಿಯುವ ಭೀತಿಯಲ್ಲಿದೆ. ಈ ಬಿಕ್ಕಟ್ಟಿನಿಂದ ಹೊರಬರಲು ಅದು ಯುದ್ಧದ ಹಾದಿ ಹಿಡಿದಿದೆ.

ಅಮೆರಿಕವು ಇಂದು ಜಗತ್ತಿನ ಅತಿ ದೊಡ್ಡ ಸಾಲಗಾರ ರಾಷ್ಟ್ರವಾಗಿ ಬದಲಾಗಿದೆ. ತನ್ನ ಡಾಲರ್ ಪೆತ್ತನವನ್ನು ಉಳಿಸಿಕೊಳ್ಳಲು ಅದು ಸೈನಿಕ ಬಲವನ್ನು ಬಳಸುತ್ತಿದೆ. ಅನೇಕ ರಾಷ್ಟ್ರಗಳು ಅಮೆರಿಕವನ್ನು ದೂರವಿಟ್ಟು ಪ್ರಾದೇಶಿಕ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುವುದು ಅದನ್ನು ಕಂಗೆಡಿಸಿದೆ. ಹೀಗಾಗಿಯೇ ಅದು ವಿಶ್ವಸಂಸ್ಥೆ ಮತ್ತು ಜಾಗತಿಕ ನ್ಯಾಯದ ಸೂತ್ರಗಳನ್ನು ಗಾಳಿಗೆ ತೂರುತ್ತಿದೆ.

ಹಿಟ್ಲರ್‌ನಂತೆ ಇಂದು ಟ್ರಂಪ್ ಸಾಮ್ರಾಜ್ಯಶಾಹಿ ದುರಾಕ್ರಮಣಕ್ಕೆ ಸಿದ್ಧರಾಗಿದ್ದಾರೆ. ಇರಾನ್, ಲೆಬನಾನ್, ವೆನಿಜುವೆಲಾ, ಕ್ಯೂಬಾ ಸೇರಿದಂತೆ ಸುಮಾರು 11 ದೇಶಗಳ ಮೇಲೆ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದ್ದಾರೆ. ಪ್ಯಾಲೆಸ್ತೀನ್‌ನ ಗಾಜಾವನ್ನು ಈಗಾಗಲೇ ಸರ್ವನಾಶ ಮಾಡಿರುವ ನೆತನ್ಯಾಹು ಜೊತೆಗೂಡಿ ಈಗ ಇರಾನ್ ಮೇಲೆ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ.

ಕಳೆದ ಮೂರೂವರೆ ದಶಕಗಳಿಂದ ಪಶ್ಚಿಮ ಏಷ್ಯಾ ದೇಶಗಳ ನಡುವೆ ಕಲಹ ಸೃಷ್ಟಿಸಿ ಅಮೆರಿಕ ಲಾಭ ಪಡೆಯುತ್ತಿದೆ. ಈ ಹಿಂದೆ ಇರಾಕ್‌ನಲ್ಲಿ ಜೈವಿಕ ಅಸ್ತ್ರಗಳಿವೆ ಎಂಬ ಸುಳ್ಳು ನೆಪವೊಡ್ಡಿ ಸದ್ದಾಂ ಹುಸೇನ್ ಅವರನ್ನು ಹತ್ಯೆ ಮಾಡಲಾಗಿತ್ತು. ಈಗ ಇರಾನ್ ಬಳಿ ಅಣ್ವಸ್ತ್ರಗಳಿವೆ ಎಂಬ ಹಳೆಯ ರಾಗವನ್ನೇ ಹಾಡುತ್ತಾ ಯುದ್ಧವನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ.

ಪ್ರಧಾನಿ ಮೋದಿ ಅವರು ಈ ದುಷ್ಕೃತ್ಯಗಳನ್ನು ಖಂಡಿಸುವ ಬದಲು ಅಮೆರಿಕ ಮತ್ತು ಇಸ್ರೇಲ್ ನಾಯಕರನ್ನು ಅಪ್ಪಿಕೊಳ್ಳುತ್ತಾ ಕಾಲ ಕಳೆಯುತ್ತಿರುವುದು ವಿಷಾದನೀಯ. ಅಮೆರಿಕದ ಒತ್ತಡಕ್ಕೆ ಮಣಿದು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿರುವುದು ಭಾರತದಂತಹ ಸ್ವತಂತ್ರ ರಾಷ್ಟ್ರಕ್ಕೆ ಶೋಭೆ ತರುವಂತದ್ದಲ್ಲ. ನಮ್ಮ ದೇಶದ ಪೂರೈಕೆಯ ಶೇ. 20ರಷ್ಟು ತೈಲ ನೀಡುವ ಇರಾನ್ ಸಂಕಷ್ಟದಲ್ಲಿದ್ದಾಗ ಮೌನವಾಗಿರುವುದು ಅನ್ಯಾಯವಾಗಿದೆ.

ಅಮೆರಿಕ ಮತ್ತು ಇಸ್ರೇಲ್‌ನ ಈ ದಾಳಿಗಳನ್ನು ಆರ್‌ಎಸ್‌ಎಸ್ ಸೇರಿದಂತೆ ಕೆಲವು ಮತಾಂದ ಸಂಘಟನೆಗಳು ಬೆಂಬಲಿಸುತ್ತಿವೆ. ಆದರೆ ಈ ಯುದ್ಧ ಮುಂದುವರಿದರೆ ಭಾರತದಲ್ಲಿ ತೈಲ ಬೆಲೆ ಗಗನಕ್ಕೇರಿ ಜನಸಾಮಾನ್ಯರ ಬದುಕು ದುಸ್ತರವಾಗಲಿದೆ. ನಾಳೆ ದಿನ ಬೇರೆ ರಾಷ್ಟ್ರಗಳ ನಾಯಕರನ್ನು ಅಪಹರಿಸುವ ಸಂಸ್ಕೃತಿ ನಮ್ಮ ದೇಶಕ್ಕೂ ಅನ್ವಯವಾಗುವ ಅಪಾಯವಿದೆ. ಹೀಗಾಗಿ, ನಾವು ಅಮೆರಿಕದ ಶರಣಾಗತಿ ನೀತಿಯನ್ನು ವಿರೋಧಿಸಿ, ಸಾಮ್ರಾಜ್ಯಶಾಹಿ ವಿರುದ್ಧ ಧ್ವನಿ ಎತ್ತಬೇಕಿದೆ.

You cannot copy content of this page

Exit mobile version