Home ವಿದೇಶ ಒಪ್ಪಂದಕ್ಕೆ ಬಾರದಿದ್ದರೆ ಇರಾನ್ ಮೂಲಸೌಕರ್ಯಗಳ ಮೇಲೆ ದಾಳಿ: ಟ್ರಂಪ್ ಬೆದರಿಕೆ

ಒಪ್ಪಂದಕ್ಕೆ ಬಾರದಿದ್ದರೆ ಇರಾನ್ ಮೂಲಸೌಕರ್ಯಗಳ ಮೇಲೆ ದಾಳಿ: ಟ್ರಂಪ್ ಬೆದರಿಕೆ

0

ವಾಷಿಂಗ್ಟನ್, ಏಪ್ರಿಲ್ 20: ಪಶ್ಚಿಮಾ ಏಷ್ಯಾದ ಸಂಘರ್ಷವನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸೋಮವಾರ ಸಂಜೆ ನಡೆಯಲಿರುವ ಎರಡನೇ ಹಂತದ ಶಾಂತಿ ಮಾತುಕತೆಗಳಿಗೆ ತಮ್ಮ ಪ್ರತಿನಿಧಿಗಳು ತೆರಳುತ್ತಿದ್ದಾರೆ ಎಂದು ತಿಳಿಸಿರುವ ಟ್ರಂಪ್, ಒಂದು ವೇಳೆ ತಾವು ಪ್ರಸ್ತಾಪಿಸಿರುವ ನ್ಯಾಯಯುತ ಒಪ್ಪಂದವನ್ನು ಇರಾನ್ ತಿರಸ್ಕರಿಸಿದರೆ, ಆ ದೇಶದ ಪ್ರಮುಖ ಮೂಲಸೌಕರ್ಯಗಳ ಮೇಲೆ ಭಾರಿ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಹೊರ್ಮುಜ್ ಜಲಸಂಧಿಯಲ್ಲಿ ಅಂತರಾಷ್ಟ್ರೀಯ ನೌಕೆಗಳ ಮೇಲೆ ಇರಾನ್ ಗುಂಡಿನ ದಾಳಿ ನಡೆಸುವ ಮೂಲಕ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಹಡಗುಗಳ ಸಂಚಾರಕ್ಕೆ ಮುಕ್ತವಾಗಿರಬೇಕಾದ ಹೊರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ನೀಡಿರುವ ಹೇಳಿಕೆಯನ್ನು ಟ್ರಂಪ್ ವ್ಯಂಗ್ಯವಾಡಿದ್ದು, ಇಂತಹ ಕ್ರಮಗಳಿಂದ ಅಮೆರಿಕವನ್ನು ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಂಕಷ್ಟದ ಸಮಯದಲ್ಲಿ ಇಸ್ರೇಲ್ ಅಮೆರಿಕದೊಂದಿಗೆ ದೃಢವಾಗಿ ನಿಂತಿದೆ ಎಂದು ಪ್ರಶಂಸಿಸಿರುವ ಟ್ರಂಪ್, ಇಸ್ರೇಲಿಗಳು ಬಹಳ ಧೈರ್ಯಶಾಲಿಗಳು ಮತ್ತು ಬುದ್ಧಿವಂತರು ಎಂದು ಬಣ್ಣಿಸಿದ್ದಾರೆ. ಯುದ್ಧವನ್ನು ಹೇಗೆ ಗೆಲ್ಲಬೇಕು ಎಂಬುದು ಇಸ್ರೇಲ್‌ಗೆ ಚೆನ್ನಾಗಿ ತಿಳಿದಿದೆ ಎಂದು ಅವರು ಶ್ಲಾಘಿಸಿದ್ದಾರೆ.

ಇರಾನ್ ಮಣಿಯದ ಹಿನ್ನೆಲೆಯಲ್ಲಿ ಅಮೆರಿಕ ಹೊಸ ತಂತ್ರವನ್ನು ರೂಪಿಸುತ್ತಿದೆ. ಪ್ರಪಂಚದಾದ್ಯಂತವಿರುವ ಇರಾನ್‌ನ ವಾಣಿಜ್ಯ ನೌಕೆಗಳು ಮತ್ತು ತೈಲ ಟ್ಯಾಂಕರ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಇರಾನ್‌ನ ಬಂದರುಗಳನ್ನು ದಿಗ್ಬಂಧನ ಮಾಡಿರುವ ಅಮೆರಿಕ, ಇರಾನ್‌ನ ಜಲ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಲು ಮುಂದಾಗಿದೆ.

ಅಮೆರಿಕದ ಇಂತಹ ಕ್ರಮಗಳು ಶಾಂತಿ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿವೆ ಎಂದು ಆರೋಪಿಸಿರುವ ಯೆಮೆನ್‌ನ ಹೌತಿ ಬಂಡುಕೋರರ ಗುಂಪಿನ ಹಿರಿಯ ಅಧಿಕಾರಿಯೊಬ್ಬರು, ಅಮೆರಿಕದ ಧೋರಣೆ ಹೀಗೆಯೇ ಮುಂದುವರಿದರೆ ಬಾಬ್ ಅಲ್-ಮಾಂಡೇಬ್ ಜಲಸಂಧಿಯನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಇಂಧನ ಸಾಗಣೆಗೆ ಅತಿಮುಖ್ಯವಾದ ಹೊರ್ಮುಜ್ ಮತ್ತು ಅಲ್-ಮಾಂಡೇಬ್ ಜಲಸಂಧಿಗಳನ್ನು ಮುಚ್ಚಿದರೆ ಜಾಗತಿಕ ಇಂಧನ ಬಿಕ್ಕಟ್ಟು ತೀವ್ರಗೊಳ್ಳುವ ಆತಂಕ ಎದುರಾಗಿದೆ.

You cannot copy content of this page

Exit mobile version