Sunday, January 25, 2026

ಸತ್ಯ | ನ್ಯಾಯ |ಧರ್ಮ

ಚೀನಾದೊಂದಿಗೆ ವ್ಯಾಪಾರ ಒಪ್ಪಂದ: ಕೆನಡಾಗೆ 100% ಸುಂಕ ವಿಧಿಸುವ ಬೆದರಿಕೆ ನೀಡಿದ ಟ್ರಂಪ್

ಕೆನಡಾ ಚೀನಾದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ, ಕೆನಡಾದ ಎಲ್ಲಾ ಸರಕುಗಳ ಮೇಲೆ ಶೇಕಡಾ 100 ರಷ್ಟು ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಮಾತನಾಡಿದ ಟ್ರಂಪ್, ಕೆನಡಾದ ಪ್ರಧಾನಿ ಮಾರ್ಕ್ ಕಾರ್ನೆ ಅವರನ್ನು ಗುರಿಯಾಗಿಸಿಕೊಂಡು, ಚೀನಾದೊಂದಿಗೆ ಒಪ್ಪಂದ ಮುಂದುವರೆದರೆ ಬೀಜಿಂಗ್ “ಕೆನಡಾವನ್ನು ಜೀವಂತವಾಗಿ ತಿನ್ನುತ್ತದೆ” ಎಂದು ಕಟುವಾಗಿ ಟೀಕಿಸಿದರು. ಈ ಮೂಲಕ ಕೆನಡಾದ ಆರ್ಥಿಕತೆ, ವ್ಯವಹಾರಗಳು ಹಾಗೂ ಸಾಮಾಜಿಕ ರಚನೆಗೆ ಭಾರೀ ಹಾನಿಯಾಗಲಿದೆ ಎಂದು ಅವರು ಹೇಳಿದರು.

ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಚೀನಾ ತನ್ನ ಸರಕುಗಳನ್ನು ಅಮೆರಿಕಕ್ಕೆ ರಫ್ತು ಮಾಡಲು ಕೆನಡಾವನ್ನು ‘ಡ್ರಾಪ್ ಆಫ್ ಪೋರ್ಟ್’ ಆಗಿ ಬಳಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. “ಚೀನಾ ಯುನೈಟೆಡ್ ಸ್ಟೇಟ್ಸ್‌ಗೆ ಸರಕು ಕಳುಹಿಸಲು ಕೆನಡಾವನ್ನು ಬಳಸಲು ನಾನು ಎಂದಿಗೂ ಅನುಮತಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ, ಕೆನಡಾ ಅಮೆರಿಕದ 51ನೇ ರಾಜ್ಯವಾಗಬೇಕು ಎಂದು ಕಳೆದ ವರ್ಷ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಟ್ರಂಪ್ ಮತ್ತೆ ನೆನಪಿಸಿಕೊಂಡಿದ್ದಾರೆ. ಚೀನಾದೊಂದಿಗೆ ಯಾವುದೇ ಒಪ್ಪಂದ ನಡೆದರೆ, ಅಮೆರಿಕಕ್ಕೆ ಬರುವ ಎಲ್ಲಾ ಕೆನಡಾದ ಉತ್ಪನ್ನಗಳ ಮೇಲೆ ತಕ್ಷಣವೇ 100% ಸುಂಕ ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಬೆಳವಣಿಗೆಗಳು ಉತ್ತರ ಅಮೆರಿಕದ ವ್ಯಾಪಾರ ಸಂಬಂಧಗಳಲ್ಲಿ ಹೊಸ ಉದ್ವಿಗ್ನತೆಯನ್ನುಂಟುಮಾಡಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page