Friday, January 23, 2026

ಸತ್ಯ | ನ್ಯಾಯ |ಧರ್ಮ

ಗ್ರೀನ್‌ಲ್ಯಾಂಡ್ ವಶದ ನೆಪದಲ್ಲಿ ವಿರೋಧಿಸಿದ ರಾಷ್ಟ್ರಗಳಿಗೆ ಸುಂಕ ಬೆದರಿಕೆ: ಟ್ರಂಪ್‌ನ ಆರ್ಥಿಕ ಒತ್ತಡ ರಾಜತಾಂತ್ರಿಕತೆಗೆ ತೀವ್ರ ಟೀಕೆ

ಗ್ರೀನ್‌ಲ್ಯಾಂಡ್ ಸ್ವಾಧೀನ ಎಂಬ ತನ್ನ ವಿವಾದಾತ್ಮಕ ಮಹತ್ವಾಕಾಂಕ್ಷೆಯನ್ನು ಮುಂದಿಟ್ಟು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿರೋಧಿ ರಾಷ್ಟ್ರಗಳ ಮೇಲೆ ಸುಂಕ ಹೆಚ್ಚಿಸುವ ಬೆದರಿಕೆ ಹಾಕಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ. ಸ್ವಾಯತ್ತ ರಾಷ್ಟ್ರಗಳ ಸಾರ್ವಭೌಮತೆಗೆ ಗೌರವ ತೋರದೆ ಆರ್ಥಿಕ ಒತ್ತಡದ ಮೂಲಕ ರಾಜಕೀಯ ಉದ್ದೇಶ ಸಾಧಿಸಲು ಟ್ರಂಪ್ ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಡೆನ್ಮಾರ್ಕ್ ನಿಯಂತ್ರಣದಲ್ಲಿರುವ ಸ್ವ-ಆಡಳಿತ ಪ್ರದೇಶ ಗ್ರೀನ್‌ಲ್ಯಾಂಡ್ ಕುರಿತಾಗಿ ಅಮೆರಿಕದ ನಿಲುವಿಗೆ ಬೆಂಬಲ ನೀಡದ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಶ್ವೇತಭವನದಲ್ಲಿ ಟ್ರಂಪ್ ಹೇಳಿರುವುದು, ಆರ್ಥಿಕ ದಂಡನೆಯ ಮೂಲಕ ರಾಜತಾಂತ್ರಿಕ ಒಪ್ಪಿಗೆ ಬಲವಂತವಾಗಿ ಪಡೆಯುವ ಪ್ರಯತ್ನ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

ಅಧಿಕಾರಕ್ಕೆ ಬರುವ ಮುಂಚಿನಿಂದಲೂ ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅವಿಭಾಜ್ಯವೆಂದು ಬಿಂಬಿಸುತ್ತಿರುವ ಟ್ರಂಪ್, ಅದರ ಕಾರ್ಯತಂತ್ರದ ಭೌಗೋಳಿಕ ಸ್ಥಾನ ಹಾಗೂ ಖನಿಜ ಸಂಪನ್ಮೂಲಗಳನ್ನು ಕಾರಣವಾಗಿ ಉಲ್ಲೇಖಿಸುತ್ತಿದ್ದಾರೆ. ಆದರೆ ಈ ನೆಪದಲ್ಲಿ ಸ್ವಾಯತ್ತ ಪ್ರದೇಶದ ಭವಿಷ್ಯವನ್ನು ಆರ್ಥಿಕ ಬೆದರಿಕೆಯ ಮೂಲಕ ನಿರ್ಧರಿಸಲು ಮುಂದಾಗಿರುವುದು ಅಂತರರಾಷ್ಟ್ರೀಯ ಕಾನೂನು ಹಾಗೂ ರಾಜತಾಂತ್ರಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಟ್ರಂಪ್‌ನ ಈ ನಿಲುವಿಗೆ ಡೆನ್ಮಾರ್ಕ್ ಸೇರಿದಂತೆ ಯುರೋಪಿನ NATO ರಾಷ್ಟ್ರಗಳು ಸ್ಪಷ್ಟ ವಿರೋಧ ವ್ಯಕ್ತಪಡಿಸಿದ್ದು, ಗ್ರೀನ್‌ಲ್ಯಾಂಡ್ ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶವಾಗಿದ್ದು, ಅದರ ಮೇಲೆ ಯಾವುದೇ ಒತ್ತಡ ಅಥವಾ ಬೆದರಿಕೆಯನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಹೇಳಿವೆ. ಗ್ರೀನ್‌ಲ್ಯಾಂಡ್ ಪ್ರಧಾನಮಂತ್ರಿ ಜೆನ್ಸ್–ಫ್ರೆಡೆರಿಕ್ ನೀಲ್ಸೆನ್ ಕೂಡ ಅಮೆರಿಕದ ಕ್ರಮಗಳನ್ನು ಬಲವಾಗಿ ತಿರಸ್ಕರಿಸಿದ್ದಾರೆ.

ವಿಶೇಷವಾಗಿ ಸುಂಕ ಏರಿಕೆ ಎಂಬ ಆರ್ಥಿಕ ಆಯುಧವನ್ನು ರಾಜಕೀಯ ಒತ್ತಡಕ್ಕೆ ಬಳಸುವುದು ಜಾಗತಿಕ ವ್ಯಾಪಾರ ವ್ಯವಸ್ಥೆಗೆ ಹಾನಿಕಾರಕವಾಗಿದ್ದು, ಮುಕ್ತ ವ್ಯಾಪಾರ ತತ್ವಗಳಿಗೆ ಧಕ್ಕೆ ತರಲಿದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಇಂತಹ ನೀತಿಗಳು ಅಂತಾರಾಷ್ಟ್ರೀಯ ನಂಬಿಕೆ ಹಾಗೂ ಸಹಕಾರವನ್ನು ಕುಗ್ಗಿಸುವುದರ ಜೊತೆಗೆ, ಭವಿಷ್ಯದಲ್ಲಿ ವ್ಯಾಪಾರ ಸಂಘರ್ಷಗಳಿಗೆ ದಾರಿ ಮಾಡಿಕೊಡಬಹುದೆಂಬ ಆತಂಕ ವ್ಯಕ್ತವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page