Home Uncategorized ಅಯೋಧ್ಯೆಯ ರಾಮನ ಹುಂಡಿಗೆ 70 ಬಾರಿ ಕಳ್ಳತನ ಟ್ರಸ್ಟಿಗಳ – ರಾಜೀನಾಮೆ

ಅಯೋಧ್ಯೆಯ ರಾಮನ ಹುಂಡಿಗೆ 70 ಬಾರಿ ಕಳ್ಳತನ ಟ್ರಸ್ಟಿಗಳ – ರಾಜೀನಾಮೆ

ಉತ್ತರ ಪ್ರದೇಶ : ಅಯೋಧ್ಯೆಯ(Ayodhya) ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇಣಿಗೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ(Uttar Pradesh) ನಾಟಕೀಯ ಬೆಳವಣಿಗೆಗಳು ನಡೆದಿವೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಜನರನ್ನು ಬಂಧಿಸಿ, ಸುಮಾರು 80 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಪ್ರಮುಖ ಸದಸ್ಯ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಎಸ್ಐಟಿ ವರದಿ ಬೆನ್ನಲ್ಲೇ ಸಿಎಂ ಯೋಗಿ ಆಕ್ಷನ್

ರಾಮಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಹಾಗೂ ದೇಣಿಗೆ ನಿರ್ವಹಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಜೂನ್ 7 ರಂದು ಸಮಾಜವಾದಿ ಪಕ್ಷದ ನಾಯಕ ತೇಜ್ ನಾರಾಯಣ್ ಪವನ್ ಪಾಂಡೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಜೂನ್ 13 ರಂದು ರಾಜ್ಯ ಸರ್ಕಾರ ಪ್ರತ್ಯೇಕ ವಿಶೇಷ ತನಿಖಾ ದಳ (SIT) ರಚಿಸಿತ್ತು. ಎಸ್ಐಟಿ ಅಧಿಕಾರಿಗಳು ಅಯೋಧ್ಯೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳು, ಬ್ಯಾಂಕ್ ಖಾತೆಗಳು ಮತ್ತು ನಗದು ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಪ್ರಾಥಮಿಕ ವರದಿ ಸಲ್ಲಿಸಿದ್ದರು. ವರದಿ ಸಲ್ಲಿಕೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.

“ಭಕ್ತರ ಶ್ರದ್ಧೆ ಮತ್ತು ನಂಬಿಕೆಯೊಂದಿಗೆ ಆಟವಾಡುವುದನ್ನು ಸರ್ಕಾರ ಸಹಿಸುವುದಿಲ್ಲ. ಎಸ್ಐಟಿ ವರದಿ ಬಂದ ತಕ್ಷಣವೇ ಕ್ರಮ ಆರಂಭವಾಗಿದೆ, ಸತ್ಯ ಹೊರಬರಲಿದೆ,” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇವರಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಗುಡುಗಿದ್ದಾರೆ.

ನೈತಿಕ ಹೊಣೆ ಹೊತ್ತು ಚಂಪತ್ ರಾಯ್ ರಾಜೀನಾಮೆ?
ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ ಎನ್ನಲಾಗಿದೆ. “ಪ್ರಕರಣದ ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆಗೆ ಅನುಕೂಲ ಮಾಡಿಕೊಡಲು ಹಾಗೂ ಪ್ರಭು ಶ್ರೀರಾಮನ ಪವಿತ್ರತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ನಾನು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ” ಎಂದು ರಾಯ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ರಾಜೀನಾಮೆ ಕುರಿತು ವಿಶ್ವ ಹಿಂದೂ ಪರಿಷತ್ (VHP) ಅಥವಾ ಟ್ರಸ್ಟ್‌ನಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಪ್ರಕರಣದ ತನಿಖೆ ವೇಳೆ ಆರೋಪಿಗಳು ಅತ್ಯಂತ ವ್ಯವಸ್ಥಿತವಾಗಿ ಕಳ್ಳತನ ನಡೆಸಿರುವುದು ಬಹಿರಂಗವಾಗಿದೆ. ದೇವಸ್ಥಾನದ ಭದ್ರತಾ ವ್ಯವಸ್ಥೆಯನ್ನು ಚಾಣಾಕ್ಷತನದಿಂದ ಬಳಸಿಕೊಂಡು, ಸಿಸಿಟಿವಿ ಕ್ಯಾಮೆರಾಗಳ ಕಣ್ತಪ್ಪಿಸಿ ಹಲವು ಬಾರಿ ಹಣ ಕಳವು ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ವರದಿಗಳ ಪ್ರಕಾರ, ಸುಮಾರು 70 ಬಾರಿ ಹುಂಡಿ ಹಣವನ್ನು ಕಳವು ಮಾಡಲಾಗಿದೆ ಎನ್ನಲಾಗಿದೆ.

ಕಳ್ಳತನ ನಡೆಸಿದ್ದು ಹೇಗೆ?
ತನಿಖೆಯ ಮಾಹಿತಿ ಪ್ರಕಾರ, ಹುಂಡಿ ತೆರೆಯುವ ವೇಳೆ ಒಬ್ಬ ಆರೋಪಿ ಸಿಸಿಟಿವಿ ಕ್ಯಾಮೆರಾಗೆ ಅಡ್ಡವಾಗಿ ನಿಂತು ದೃಶ್ಯಗಳು ದಾಖಲಾಗದಂತೆ ಮಾಡುತ್ತಿದ್ದ. ಇದೇ ವೇಳೆ ಮತ್ತೊಬ್ಬ ಆರೋಪಿ ಎಣಿಕೆಗೆ ತೆಗೆದಿದ್ದ ಹಣವನ್ನು ಕದ್ದುಕೊಳ್ಳುತ್ತಿದ್ದ.

ಇದಲ್ಲದೆ, ಹಣದ ಕಂತುಗಳಲ್ಲಿ ಹೆಚ್ಚುವರಿ ನೋಟುಗಳನ್ನು ಸೇರಿಸಿ ಲೆಕ್ಕದಲ್ಲಿ ವ್ಯತ್ಯಾಸ ಉಂಟುಮಾಡಿ, ಉಳಿದ ಹಣವನ್ನು ಕಳವು ಮಾಡಲಾಗುತ್ತಿತ್ತು. ಕದ್ದ ಹಣವನ್ನು ದೇವಾಲಯದ ಶೌಚಾಲಯದಲ್ಲಿ ಅಡಗಿಸಿಟ್ಟು ನಂತರ ತಂಡದ ಸದಸ್ಯರು ಹಂಚಿಕೊಳ್ಳುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಬಂಧಿತ ೮ ಮಂದಿ ಆರೋಪಿಗಳ ಪೈಕಿ ಓರ್ವ ಕದ್ದ ಹಣವನ್ನು ಸಗಣಿ ಕೆಳಗೆ ಬಚ್ಚಿಡುತ್ತಿದ್ದ. ಅಲ್ಲದೇ ಮತ್ತೋರ್ವ ಆರೋಪಿ ಕದ್ದ ಹಣವನ್ನು ಶೌಚಾಲಯದ ಮೂಲಕ ಸಾಗಿಸುತ್ತಿದ್ದನು.

80 ಲಕ್ಷ ನಗದು ಜಪ್ತಿ, ನ್ಯಾಯಾಂಗ ಬಂಧನ
ಟ್ರಸ್ಟ್ ನೀಡಿದ ದೂರಿನನ್ವಯ ಪೊಲೀಸರು ಚಂಪತ್ ರಾಯ್ ಆಪ್ತ ರಾಮ್ ಶಂಕರ್ ಯಾದವ್ ಸೇರಿದಂತೆ ಎಂಟು ಜನರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಕಳ್ಳತನ ಮತ್ತು ಕ್ರಿಮಿನಲ್ ಪಿತೂರಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ಬಂಧಿತ ಎಂಟೂ ಆರೋಪಿಗಳನ್ನು ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಅವರಿಗೆ ಸೋಮವಾರದವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಗಳಿಂದ ಒಟ್ಟು 79,85,893 ರೂಪಾಯಿ (ಸುಮಾರು 80 ಲಕ್ಷ ರೂ.) ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಹಣದ ಮೂಲ ಪತ್ತೆ ಹಚ್ಚಲು ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.

You cannot copy content of this page

Exit mobile version