Friday, July 4, 2025

ಸತ್ಯ | ನ್ಯಾಯ |ಧರ್ಮ

ತುಳಸಿ ವೃಂದಾ – ಪುರಾಣ ಕಥೆಯ ಗೊಂದಲ !?

ಇಂದು ತುಳಸೀ ಹಬ್ಬ. ದೀಪಾವಳಿ ಹಬ್ಬದ ಬೆನ್ನಲೇ ಬರುವ ಹಬ್ಬ ಇದು. ಈ ಹಬ್ಬದ ಕುರಿತು ಪುರಾಣ ಕತೆಗಳಲ್ಲಿ ಇರುವ ಗೊಂದಲಗಳ ಕುರಿತು ಚಿಂತಕ ಪ್ರವೀಣ್ ಎಸ್ ಶೆಟ್ಟಿ ಅವರು ಬರೆದ ಈ ವೈಚಾರಿಕ ಲೇಖನ ಓದಿ…

ಈಗ ತುಳಸಿ ಹಬ್ಬ ಬಂದಾಗ ಪತ್ರಿಕೆಗಳಲ್ಲಿ ತುಳಸಿಯ ಕುರಿತ ಹಲವಾರು ಪುರಾಣ ಕಥೆಗಳು ಹೊರಬರುತ್ತವೆ. ಎಲ್ಲಾ ಬ್ರಾಹ್ಮಣರ ಮನೆಯ ಎದುರು ತುಲಸಿ ಕಟ್ಟೆ ಇದ್ದೇ ಇರುತ್ತದೆ. ಆದರೆ ಬ್ರಾಹ್ಮಣರು ತುಲಸಿ ಕಟ್ಟೆಯ ಸುತ್ತ ಬಲಿ ಬರುತ್ತಾರೆಯೇ ವಿನ: ಅದಕ್ಕೆ ಕೈ ಮುಗಿಯುವುದಿಲ್ಲ! ಅವರು ಆಕಾಶ ನೋಡಿ ಸೂರ್ಯನಿಗೆ ಕೈಮುಗಿಯುತ್ತಾರೆ. ಯಾಕೆಂದರೆ ತುಲಸಿ ಕಟ್ಟೆಯು ವೃಂದಾಳ ಸಮಾಧಿ. ಹಾಗಾಗಿ ಅದಕ್ಕೆ ವೃಂದಾವನ ಎಂದು ಕರೆಯುವುದು. ತುಲಸಿ-ವೃಂದಾ ಇವರು ಅಸುರ-ರಾಕ್ಷಸ ಕುಲದವರು. ಅಸುರ-ರಾಕ್ಷಸ ಕುಲದವರಿಗೆ ಬ್ರಾಹ್ಮಣರು ಎಂದೂ ಕೈಮುಗಿಯುವುದಿಲ್ಲ. ಅಸುರ ಕುಲದ ಬಲಿಚಕ್ರವರ್ತಿಯನ್ನು ದೀಪಾವಳಿಯ ಮರುದಿನ ಎಲ್ಲ ಶೂದ್ರರೂ ಪೂಜಿಸುತ್ತಾರೆ ಆದರೆ ಬ್ರಾಹ್ಮಣರು ಪೂಜಿಸುವುದಿಲ್ಲ. ಅಸುರ ತುಲಸಿ-ವೃಂದಾ ಸತ್ತಾಗ ಅವಳ ದೇಹವನ್ನು ಸಮಾಧಿ ಮಾಡಿ ಅದರ ಸುತ್ತ ಕಟ್ಟೆ ಕಟ್ಟಿ ಅದರ ಮೇಲೆ ತುಳಸಿ ಎಂಬ ಔಷಧ ಗಿಡ ನೆಡಲಾಯಿತು. ಅದಕ್ಕೆ ವೃಂದಾವನ ಅರ್ಥಾತ್ ತುಳಸಿಕಟ್ಟೆ ಎಂಬ ಹೆಸರು ಬಿತ್ತು. ಮಂತ್ರಾಲಯ ಮತ್ತು ಉಡುಪಿ ಮಠದಲ್ಲಿ ದಿವಂಗತ ಸ್ವಾಮಿಗಳ ಸಮಾಧಿಗೆ ವೃಂದಾವನ ಎಂದೇ ಕರೆಯುವುದು. ಅದೇ ರೀತಿ ತುಲಸಿ ಕಟ್ಟೆಯೂ ಸಮಾಧಿಯ ಪ್ರತೀಕ. ಹಾಗಾಗಿ ಬ್ರಾಹ್ಮಣರು ಅದಕ್ಕೆ ಕೈಮುಗಿಯುವುದಿಲ್ಲ!

ತುಳಸಿಗೆ ಪೌರಾಣಿಕ ಕಥೆಯ ಲೇಪನ ಬೇಕಿಲ್ಲ…

ತುಳಸಿ ಗಿಡದಲ್ಲಿ ಅದ್ಭುತ ಔಷಧ ಗುಣಗಳು ಇರುವುದು ನಿಜ. ಅದು ಅನೇಕ ರೋಗಗಳಿಗೆ ದಿವ್ಯ ಔಷಧವೆಂಬುದೂ ನಿಜ. ಈ ಗಿಡದ ಗಾಳಿಯಲ್ಲಿ ಕೀಟನಾಶಕ ಗುಣವೂ ಇರುವುದು ನಿಜ. ಇದು ಸಂಶೋಧನೆಯಲ್ಲೂ ಧೃಡಪಟ್ಟಿದೆ. ಹಾಗಾಗಿ ತುಳಸಿ ಎಲೆಗಳ ಮತ್ತು ಕಡ್ಡಿಯ ಸೇವನೆಯಿಂದ ಮತ್ತು ಗಿಡದ ಹತ್ತಿರದ ಗಾಳಿಯ ಸೇವನೆಯಿಂದ ನಿಜವಾಗಿ ನಮ್ಮ ಆರೋಗ್ಯಕ್ಕೆ ಆಗುವ ಲಾಭದ ಬಗ್ಗೆ ಜನರಿಗೆ ತಿಳಿ ಹೇಳುವ ಬದಲು ಮೌಢ್ಯ ಭರಿತ ಪುರಾಣಗಳನ್ನು ಜೋಡಿಸುವ ಅಗತ್ಯವಿದೆಯೇ? ನೇರವಾಗಿ ಗಿಡದ ಔಷಧೀಯ ಗುಣದ ಬಗ್ಗೆ ಹೇಳಿದರೆ ಅದು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುವುದಿಲ್ಲ ಎಂಬ ಕಾರಣಕ್ಕೆ ಹಿಂದಿನ ಕಾಲದಲ್ಲಿ ಪೌರಾಣಿಕ ಕಥೆಯ ಲೇಪನ ಕೊಟ್ಟಿರಬಹುದು. ಆದರೆ ಈ ಆಧುನಿಕ ಕಾಲದಲ್ಲಿ ಅದರ ಅವಶ್ಯಕತೆ ಇಲ್ಲ. ಋತುಮತಿಯಾದ ಮಹಿಳೆಗೆ ನಿಜವಾಗಿ ಆ ಸಮಯದಲ್ಲಿ ತುಳಸಿಯ ಗಾಳಿ ಮತ್ತು ಅದರ ಎಲೆಗಳ ಸೇವನೆ ಅತಿ ಅಗತ್ಯ. ಆ ಸಮಯದಲ್ಲಿ ಅವಳ ರಕ್ತಹೀನತೆ ನಿವಾರಿಸಲು ಬೇಕಾಗುವ ಅನೇಕ ವಿಟಮಿನ್ ಮತ್ತು ಖನಿಜ ತುಳಸಿಯಿಂದ ಸಿಗುತ್ತದೆ. ವಿಪರ್ಯಾಸವೆಂದರೆ ಋತುಮತಿಯಾದ ಮಹಿಳೆ ತುಳಸಿಯ ಎಲೆಯನ್ನು ಮುಟ್ಟಬಾರದು ಗಿಡದ ಹತ್ತಿರವೂ ಹೋಗಬಾರದು ಎಂಬ ಮೂಢ ನಂಬಿಕೆಯನ್ನು ವೈದಿಕರು ಹುಟ್ಟು ಹಾಕಿದ್ದಾರೆ. ಮನೆಯಲ್ಲಿ ಜನನ-ಮರಣದ ಸೂತಕವಿದ್ದರೂ ಆ ಮನೆಯವರು ತುಳಸಿ ಗಿಡವನ್ನು ಮುಟ್ಟಬಾರದು ನೀರು ಹಾಕಬಾರದು ಎಂಬ ಮೌಢ್ಯವನ್ನೂ ಯಾರೋ ಶತಮೂರ್ಖರು ಹುಟ್ಟು ಹಾಕಿದ್ದಾರೆ. ಬೇಸಿಗೆಯಲ್ಲಿ ಸೂತಕದ ಹದಿಮೂರು ದಿನ ನೀರಿಲ್ಲದಿದ್ದರೆ ಗಿಡ ಬದುಕುವುದೇ?  

ತುಳಸಿಗೆ ಮಾಂಸಾಹಾರದ ಗೊಬ್ಬರ ಹಾಕಬಾರದೇ?

ತುಳಸಿಯೂ ಸಹಾ ಒಂದು ಸಸ್ಯ. ಹಾಗಾಗಿ ಇತರ ಸಸ್ಯಗಳಂತೆ ಅದಕ್ಕೂ ಗೊಬ್ಬರ ಮತ್ತು ಸೂರ್ಯ ರಶ್ಮಿ ಬೇಕು.  ಆದರೆ ನಗರ ಪ್ರದೇಶದ ಫ್ಲಾಟುಗಳಲ್ಲಿ ವಾಸಿಸುವವರು ಬಾಲ್ಕನಿಯಲ್ಲಿ ತುಳಸಿ ಗಿಡ ನೆಡುತ್ತಾರೆ. ಆದರೆ ಅದಕ್ಕೆ ನೀರು ಬಿಟ್ಟು ಬೇರೆ ಏನೂ ಹಾಕುವುದಿಲ್ಲ. ಹಾಗಾಗಿ ನಗರದ ಫ್ಲಾಟುಗಳ ತುಳಸಿ ಗಿಡ ಯಾವಾಗಲೂ ಸೊರಗಿಕೊಂಡೇ ಇರುತ್ತದೆ. ಯಾವುದೇ ಸಸ್ಯಕ್ಕೆ ದೈವತ್ವ ಆರೋಪಿಸಿದರೂ ಅದಕ್ಕೆ ಗೊಬ್ಬರ ಹಾಗೂ ಸೂರ್ಯನ ಬೆಳಕು ಬೇಕೆಂಬ ಸಾಮಾನ್ಯ ಜ್ಞಾನ ಅನೇಕರಿಗಿಲ್ಲ. ಗೊಬ್ಬರ ಹಾಕಿದರೂ ತರಕಾರಿ ತ್ಯಾಜ್ಯದ ಗೊಬ್ಬರ ಮಾತ್ರ ಹಾಕಬೇಕು ಮೀನು-ಕೋಳಿಯ ತ್ಯಾಜ್ಯದ ಗೊಬ್ಬರ ಹಾಕಬಾರದು ಎಂಬ ಮಡಿವಂತ ಮೂಢನಂಬಿಕೆ ಕೆಲವರು ಹೊತ್ತಿದ್ದಾರೆ. ಪುರಾಣ ಕಥೆಯಂತೆ ತುಳಸಿ ಮತ್ತು ವೃಂದಾ ಇಬ್ಬರೂ ರಾಕ್ಷಸ ಪುತ್ರಿಯರು ಹಾಗೂ ರಾಕ್ಷಸರದೇ ಪತಿವ್ರತಾ ಪತ್ನಿಯರು. ಹಾಗಾಗಿ ಅವರು ಮಾಂಸಾಹಾರ ಸೇವಿಸಿರಲೇ ಬೇಕು. ಹಾಗಿರುವಾಗ ತುಲಸಿ- ವೃಂದಾ ಇಬ್ಬರೂ ಗಿಡವಾಗಿ ಹುಟ್ಟಿರುವಾಗ ಅವರಿಗೆ ಮಾಂಸಾಹಾರದ ಗೊಬ್ಬರ ಹಾಕಬಾರದು ಎಂಬ ನಿಯಮವೇ ತರ್ಕವಿಹೀನ.

ತುಳಸಿಯ ವಿಷಯದಲ್ಲಿ ಅನೇಕ ಗೊಂದಲಗಳಿವೆ

ತುಳಸಿ ಮತ್ತು ವೃಂದ ಇಬ್ಬರೂ ಒಂದೆಯೇ ಅಥವಾ ಬೇರೆ ಬೇರೆ ವ್ಯಕ್ತಿಗಳೇ ಎಂಬ ಗೊಂದಲವಿದೆ. ಶಿವ ಪುರಾಣದ ಪ್ರಕಾರ ಶಿವನ ಕೋಪಾಗ್ನಿ ಸಮುದ್ರದಲ್ಲಿ ಬಿದ್ದು ಜಲಂಧರ ರಾಕ್ಷಸ ಹುಟ್ಟುತ್ತಾನೆ. ಅವನೇ ಮುಂದೆ ಪತಿವ್ರತೆ ವೃಂದಾಳನ್ನು ಮದುವೆಯಾಗಿ ಅವಳ ಪಾತಿವ್ರತ್ಯದ ಕವಚದಿಂದ ಬಲಿಷ್ಟನಾಗುತ್ತಾನೆ. ಆದರೆ ವಿಷ್ಣು ಭಾಗವತದ ಪ್ರಕಾರ ಕೃಷ್ಣನ ಗೆಳೆಯ ಸುದಾಮನೇ ರಾಧೆಯ ಶಾಪದಿಂದ ಇನ್ನೊಂದು ಜನ್ಮದಲ್ಲಿ ಶಂಕಚೂಡ ಎಂಬ ರಾಕ್ಷಸನಾಗಿ ಹುಟ್ಟಿ ಪತಿವ್ರತೆ ತುಳಸಿಯನ್ನು ಮದುವೆಯಾಗಿ ಬಲಿಷ್ಟನಾಗುತ್ತಾನೆ. ಆದರೆ ಎರಡೂ ಕಥೆಯಲ್ಲಿ ವಿಷ್ಣುವೇ ಅಸುರಿ ವೃಂದಾ ಹಾಗೂ ತುಳಸಿಯ ಶೀಲವನ್ನು ಮೋಸದಿಂದ ಕೆಡಿಸುತ್ತಾನೆ ಮತ್ತು ಶಿವನು ಅವರಿಬ್ಬರ ರಾಕ್ಷಸ ಗಂಡಂದಿರನ್ನೂ ಕೊಲ್ಲುತ್ತಾನೆ. ಹಾಗಾದರೆ ಸರಿಯಾದ ಕಥೆ ಯಾವುದು? ಎರಡೂ ಕಥೆಯಲ್ಲಿ ವೃಂದಾ ಮತ್ತು ತುಳಸಿ ಇಬ್ಬರೂ ಲಕ್ಷ್ಮೀದೇವಿಯ ಅಂಶದಿಂದ ಹುಟ್ಟಿದವರು.  ಹಾಗಾಗಿ ವಿಷ್ಣುವಿನಿಂದ ಕೆಡಿಸಲ್ಪಟ್ಟಿದ್ದರಲ್ಲಿ ತಪ್ಪಿಲ್ಲ ಎಂಬ ಕುತರ್ಕವಿದೆ. ಹಾಗಾದರೆ ವಿಷ್ಣುವಿನ ಪತ್ನಿ ಲಕ್ಷ್ಮೀದೇವಿಯೇ ತುಲಸಿ-ವೃಂದಾ ಎಂಬ ಅಸುರ ರೂಪದಲ್ಲಿ ಬಂದು ಎರಡೆರಡು ರಾಕ್ಷಸರೊಂದಿಗೆ ಸಂಸಾರ ನಡೆಸಿದ್ದರಿಂದ ಲಕ್ಷ್ಮೀದೇವಿಯ ಶೀಲದ ಪಾವಿತ್ರ್ಯ ನಷ್ಟವಾದಂತೆ ಆಯಿತಲ್ಲವೇ?

ಗಣಪತಿಯ ಶಾಪ-ಕಮ್-ವರ

ಇನ್ನೊಂದು ಪುರಾಣ ಕಥೆಯ ಪ್ರಕಾರ ಗಣಪತಿ ದೇವರಿಗೆ ತುಳಸಿ ದಳ ಈಗಲೂ ಅರ್ಪಿಸದೇ ಇರುವುದಕ್ಕೆ ಕಾರಣ ರಾಕ್ಷಸಿಯಾಗಿದ್ದ ತುಳಸಿಯು ಗಣಪತಿಯನ್ನು ಮೋಹಿಸಿ ಮದುವೆಯಾಗುವಂತೆ ಪೀಡಿಸಿ ಅವನ ತಪಸ್ಸು ಭಂಗ ಮಾಡುತ್ತಾಳೆ. ಅದರಿಂದ ಕುಪಿತನಾದ ಗಣಪತಿ ಅವಳು ಸಸ್ಯವಾಗಿ ಹೋಗಲಿ ಎಂದು ಶಪಿಸುತ್ತಾನೆ. ಅವಳು ಕ್ಷಮೆ ಕೇಳಿದ ನಂತರ ನನ್ನ ಹೊರತು ಎಲ್ಲಾ ದೇವರ ಪೂಜೆಗೆ ತುಳಸಿ ಅರ್ಹವಾಗಲಿ ಎಂದು ಗಣಪತಿ ಶಾಪ-ಕಮ್-ವರ ಕೊಡುತ್ತಾನೆ. ಹಾಗಾಗಿ ಗಣಪತಿ ಪೂಜೆಗೆ ತುಳಸಿ ದಳ ನಿಷಿದ್ಧವಂತೆ.    

ಶಿವಪುರಾಣದ ಪ್ರಕಾರ…

ಅಸುರ ಜಲಂಧರ ಸತ್ತ ಮೇಲೆ ಅವನ ಹೆಂಡತಿ ವೃಂದಾ ಸತಿಸಹಗಮನ ಮಾಡಿ ಸಾಯುತ್ತಾಳೆ ಹಾಗೂ ಅವಳ ಚಿತೆಯ ಬೂದಿಯಲ್ಲಿ ಪಾರ್ವತಿ, ಸರಸ್ವತಿ, ಲಕ್ಷ್ಮಿಯರು ತುಳಸಿ, ನೆಲ್ಲಿಕಾಯಿ ಮತ್ತು ಮಧುಮಾಲತಿ ಗಿಡಗಳ ಬೀಜ ನೆಡುತ್ತಾರೆ. ಅದಕ್ಕಾಗಿ ಈ ಮೂರು ಗಿಡಗಳನ್ನು ಈಗಲೂ ಒಟ್ಟಾಗಿ ಪೂಜಿಸಲಾಗುತ್ತದೆ ಮತ್ತು ಇವು ಮೂರೂ ಅಪಾರ ಔಷಧಿ ಗುಣ ಹೊಂದಿವೆಯಂತೆ. ಇದರ ಅರ್ಥ ವೃಂದಾ ಸಾಯುವುದಕ್ಕೆ ಮೊದಲೇ ತುಳಸಿ ಬೀಜ ಇತ್ತು ವೃಂದಾಳೇ ತುಳಸಿ ಗಿಡವಾಗಿ ಜನಿಸಿದ್ದಲ್ಲ ಎಂದಂತಾಯಿತು.

ಭಾಗವತ ಪುರಾಣದ ಪ್ರಕಾರ…

ಶಂಕಚೂಡನ ಚರಿತ್ರೆಯಲ್ಲಿ- ತುಳಸಿ ಸತ್ತ ನಂತರ ಗಂಡಕಿ ನದಿಯ ರೂಪದಲ್ಲಿ ಹುಟ್ಟುತ್ತಾಳೆ ಮತ್ತು ಕೇವಲ ಅವಳ ತಲೆಕೂದಲು ಗಂಡಕಿ ದಡದಲ್ಲಿ ತುಳಸಿ ಗಿಡವಾಗಿ ಹುಟ್ಟುತ್ತದೆ. ಹಾಗಾದರೆ ನಾವು ಈಗ ಪೂಜಿಸುವ ತುಳಸಿ ಗಿಡ ಕೇವಲ ತುಳಸಿದೇವಿಯ ಕೂದಲೇ ಅಥವಾ ಇಡಿ ಶರೀರವೇ ಎಂಬ ಗೊಂದಲವಿದೆ. 

ಸಾಲಿಗ್ರಾಮ ನಿಜವಾಗಿ ಕಲ್ಲು ಅಲ್ಲ! 

ಪತಿವ್ರತೆ ತುಳಸಿಯ ಶಾಪದಿಂದ ವಿಷ್ಣು ಗಂಡಕಿ ನದಿಯಲ್ಲಿ ಸಾಲಿಗ್ರಾಮ ಕಲ್ಲಾಗಿ ಹುಟ್ಟುತ್ತಾನೆ. ಅದಕ್ಕಾಗಿ ಈಗಲೂ ವೈಷ್ಣವರು ಸಾಲಿಗ್ರಾಮವನ್ನು ತಮ್ಮ ಮನೆಯಲ್ಲಿ ಪೂಜಿಸುತ್ತಾರೆ, (ಕರಾವಳಿಯ ದೇವಸ್ಥಾನದಲ್ಲಿಯ ಮಾಧ್ವ ಅರ್ಚಕರು ಯಾವಾಗಲೂ ತಮ್ಮ ಸೊಂಟದಲ್ಲಿ ಕಟ್ಟಿಕೊಂಡಿರುವ ಸಾಲಿಗ್ರಾಮವನ್ನು ಶಿವ ದುರ್ಗಾ ದೇವಸ್ಥಾನದಲ್ಲೂ ಗುಟ್ಟಾಗಿ ಪೂಜಿಸಿ ದಿನಾಲೂ ಶಿವ-ದುರ್ಗೆಯರನ್ನು ಅವಮಾನಿಸುತ್ತಾರೆ). ಆದರೆ ಈ ಸಾಲಿಗ್ರಾಮ ನಿಜವಾಗಿ ಕಲ್ಲು ಅಲ್ಲ!  ಅದು ಬಸವನ ಹುಳದ ಜಾತಿಯ ಒಂದು ಹುಳದ ದೇಹದ ಪಳೆಯುಳಿಕೆ!  ಲಕ್ಷಾಂತರ  ವರ್ಷಗಳ ಹಿಂದೆ ಈ ಹುಳುಗಳು ಗಂಡಕಿ ನದಿಯ ಭಾಗದಲ್ಲಿ ಮಾತ್ರ ವಾಸಿಸುತ್ತಿದ್ದು ಆಗ ಸತ್ತ ಈ ಹುಳುಗಳ ದೇಹ ನದಿಯ ತಳ ಸೇರಿ ಭೂಮಿಯ ಒತ್ತಡ ಹಾಗೂ ಶಾಖದಿಂದ ಕಲ್ಲಿನಂತಾದವು. ಹಾಗಾಗಿ ಈಗ ವೈಷ್ಣವರು  ಪೂಜಿಸುತ್ತಿರುವ ಸಾಲಿಗ್ರಾಮ ಒಂದು ಹುಳದ ಶವ ಅನ್ನಬಹುದು. ಶಿವಪುರಾಣ ಮತ್ತು ಭಾಗವತ ಬರೆದು ಹೆಚ್ಚೆಂದರೆ ಮೂರು ಸಾವಿರ ವರ್ಷಗಳಾಗಿವೆ.

ಇದರ ಅರ್ಥ ವೃಂದಾ-ತುಳಸಿಯ ಕಥೆ ಅಥವಾ ಗಂಡಕಿ ನದಿ-ಸಾಲಿಗ್ರಾಮ ಕಲ್ಲಿನ ಕತೆಯೂ ಕೇವಲ ಮೂರು ಸಾವಿರ ವರ್ಷ ಹಳೆಯದು ಮಾತ್ರ. ಆದರೆ ನಿಜದಲ್ಲಿ ಗಂಡಕಿ ನದಿ ಮತ್ತು ಸಾಲಿಗ್ರಾಮ ಹುಳುಗಳು ಕೋಟ್ಯಾಂತರ ವರ್ಷಗಳ ಹಿಂದೆಯೇ ಡೈನೋಸಾರ್ ಯುಗದಲ್ಲಿಯೇ ಇದ್ದವು. ತುಳಸಿ-ನೆಲ್ಲಿಕಾಯಿ-ಮಧುಮಾಲತಿ ಗಿಡಗಳು ಲಕ್ಷಾಂತರ ವರ್ಷ ಹಿಂದೆಯೇ ಇದ್ದವು. ಆಗ ಮನುಷ್ಯ ಜಾತಿಯೇ ಭೂಮಿ ಮೇಲೆ ಇರಲಿಲ್ಲ. ಅಂದರೆ ಈ ಗೊಂದಲಮಯ ತುಳಸಿ ಪುರಾಣಕ್ಕೆ ವೈಜ್ಞಾನಿಕ ಆಧಾರವೇ ಇಲ್ಲ ಅನ್ನಬಹುದು. ಹಾಗಾಗಿ ಕಹಿಬೇವು, ಅಶ್ವಥ ನೆಲ್ಲಿಕಾಯಿ, ಮಧುಮಾಲತಿ ಗಿಡದಂತೆ ತುಳಸಿಯೂ ಒಂದು ಅದ್ಭುತ ಔಷದಿ ಸಸ್ಯ ಹಾಗೂ ಪ್ರಾಕೃತಿಕ ಕೀಟನಾಶಕ ಎಂದು ಪರಿಗಣಿಸಬೇಕು. ಅದಕ್ಕಾಗಿ ತುಳಸಿಯನ್ನು ಕುರುಡಾಗಿ ಪೂಜಿಸುವ ಬದಲು ಅದರ ಗಾಳಿ ಮತ್ತು ಎಲೆ ಸೇವಿಸಬೇಕು. ದೇವಸ್ಥಾನದಲ್ಲಿ ಅರ್ಚಕರು ಕೊಡುವ ತುಳಸಿ ದಳವನ್ನು ಕಿವಿಗೆ ಇಟ್ಟುಕೊಂಡು ಹಾಳು ಮಾಡುವ ಬದಲು ಅದನ್ನು ತೊಳೆದು ತಿಂದರೆ ಆರೋಗ್ಯಕ್ಕೆ ಉತ್ತಮ. 

ವೈದಿಕರಿದ್ದಲ್ಲಿ ಲೈಂಗಿಕ ರಸಿಕತೆ ಇರಲೇಬೇಕು ತಾನೇ. ಅದರಂತೆ ಶೂದ್ರರೆಲ್ಲ ಇದಕ್ಕೆ ‘ತುಳಸಿ ಪೂಜೆ’ ಎಂದು ಕರೆದರೆ ವೈದಿಕರೆಲ್ಲಾ ಅದಕ್ಕೆ ‘ತುಳಸಿ-ವಿವಾಹ’ ಎಂದು ಕರೆದು ತುಳಸಿ ಗಿಡ ಮತ್ತು ಸಾಲಿಗ್ರಾಮ ಕಲ್ಲಿಗೆ ಪ್ರತಿವರ್ಷ ಮದುವೆ ಶಾಸ್ತ್ರ ಮಾಡಿ ತಮ್ಮ ರಸಿಕತನ ತೋರುತ್ತಾರೆ. ಎಷ್ಟಾದರೂ ವೈದಿಕ ಪುರಾಣಗಳ ಕೇಂದ್ರ ಬಿಂದುವೇ ರಸಿಕ ಲೀಲೆ ತಾನೇ !   

ಪ್ರವೀಣ್ ಎಸ್ ಶೆಟ್ಟಿ

ಚಿಂತಕರು

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲಾ ಅಭಿಪ್ರಾಯಗಳು ಲೇಖಕರದ್ದೇ ಆಗಿರುತ್ತದೆ)

Related Articles

ಇತ್ತೀಚಿನ ಸುದ್ದಿಗಳು

You cannot copy content of this page