Friday, June 14, 2024

ಸತ್ಯ | ನ್ಯಾಯ |ಧರ್ಮ

ತುಳುನಾಡ ದೈವಗಳಿಗೆ ಅಪಮಾನ: ತುಳುವರ ಮೌನ ಅತ್ಯಂತ ವಿಷಾದಕರ

ಕರಾವಳಿಯ ಭೂತಾರಾಧನೆಯಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಮೌಖಿಕ ರೂಪದಲ್ಲಿ ಮುಂದುವರೆದುಕೊಂಡು ಬರುತ್ತಿರುವ ಜನಪದ ಆರಾಧನಾ ಪದ್ಧತಿಗಳಲ್ಲಿ ಬದಲಾವಣೆಗಳಾಗುವುದು ಕೂಡಾ ಸಹಜವೇ ಹೌದು. ಆದರೆ ಭೂತಾರಾಧನೆಯು ಧಾರ್ಮಿಕ ವರ್ಗಕ್ಕೆ ಸೇರುವುದರಿಂದಾಗಿ ಅದರಲ್ಲಿಯ ಬದಲಾವಣೆಗಳು ತುಂಬ ನಿಧಾನ. ಆದರೆ ಕಳೆದ ಕೆಲವು ವರ್ಷಗಳಿಂದ ಭೂತಾರಾಧನೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಭೂತಾರಾಧನೆಯ ಚೌಕಟ್ಟಿನಲ್ಲಿಯೇ ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ, ಆದರೆ ಇದನ್ನು ರಾಜಕೀಯ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಲು ವಿಶೇಷವಾದ ತಯಾರಿಗಳೇನೂ ಬೇಡ.

ತುಳುನಾಡಿನಲ್ಲಿ ಜನಪ್ರಿಯವಾಗಿರುವ ಸಾವಿರಕ್ಕೂ ಹೆಚ್ಚು ದೈವಗಳನ್ನು ಜಾಗ್ರತೆಯಾಗಿ ಪರಿಶೀಲಿಸಿದರೆ, ಅವು ಹಿಂದೂ ಧರ್ಮವು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯಗಳ ಹೊರಗೇ ನಿಲ್ಲುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಿಂದೂ ಧರ್ಮವು ಆಚರಿಸಿಕೊಂಡು ಬರುತ್ತಿರುವ ವರ್ಣಾಶ್ರಮ ಧರ್ಮದ ಹೊರಗಿರುವ ದಲಿತರಲ್ಲಿ ಕೆಲವರು ಭೂತಾರಾಧನೆಯ ಸಂದರ್ಭದಲ್ಲಿ ತಾವೇ ದೈವಗಳಾಗಿ, ತಾತ್ಕಾಲಿಕವಾಗಿ ನಿರ್ಮಿತವಾದ ಕಾಲ, ಸ್ಥಳ ಮತ್ತು ಸಮುದಾಯಗಳ ಒಗ್ಗೂಡುವಿಕೆಯ ಸಂದರ್ಭದಲ್ಲಿ ಜಾತಿ ಸಮಾಜದ ಶ್ರೇಣೀಕರಣದ ಮೇಲ್ತುದಿಗೆ ಚಲಿಸುತ್ತಾರೆ. ಆರಾಧನೆ ಮುಗಿದ ಮೇಲೆ ಮತ್ತೆ ಯಥಾಸ್ಥಿತಿ ಮುಂದುವರೆಯುತ್ತದೆ. ತುಳುನಾಡಿನ ದೈವಾರಾಧನೆಯ ಕೇಂದ್ರದಲ್ಲಿರುವ ಸಾಂಸ್ಕೃತಿಕ ನಾಯಕರ ಸಂಖ್ಯೆಯು ಸಾವಿರಕ್ಕೂ ಮೀರಿದೆ ಎಂದು ವಿದ್ವಾಂಸರು ಹೇಳಿದ್ದಾರೆ. ಇದರಲ್ಲಿ ಬಬ್ಬರ್ಯ, ಆಲಿ , ಬ್ಯಾರ್ತಿ ಮೊದಲಾದ ಮುಸ್ಲಿಮರೂ ಇದ್ದಾರೆ. ಮುಸಲ್ಮಾನರಲ್ಲಿ ದೈವಾರಾಧನೆ ಇಲ್ಲ. ಹಿಂದೂ ದೇವರುಗಳಲ್ಲಿ ಮುಸಲ್ಮಾನರು ಇರುವುದು ಸಾಧ್ಯವಿಲ್ಲ. ಅಂಥ ದೈವಗಳನ್ನು ಪೂಜಿಸಲು ಬೇಕಾದ ಶಾಸ್ತ್ರೋಕ್ತ ಮಂತ್ರಗಳೂ ಇರಲಾರವು. ಆದರೆ ಭೂತಾರಾಧನೆಯಲ್ಲಿ ಇವೆರಡೂ ಸಾಧ್ಯವಾಗಿರುವುದೇ ಅದರಲ್ಲಿ ಕುತೂಹಲ ಹುಟ್ಟಲು ಕಾರಣ. ಈ ದೈವಗಳ ಕತೆಗಳನ್ನು ಪಾಡ್ದನಗಳು ನಿರೂಪಿಸುತ್ತವೆ. ಪಾಡ್ದನಗಳ ಲೋಕ ಅದ್ಭುತವಾಗಿದ್ದು ಕ್ಲಾಸಿಕಲ್‌ ಸಂಪ್ರದಾಯಕ್ಕಿಂತ ಭಿನ್ನವಾಗಿವೆ. ಉದಾಹರಣೆಗೆ, ಗುಳಿಗ ದೈವವು ತಾಯಿಯ ಬಲದ ಸಿರಿಮೊಲೆ ಒಡೆದು ಹೊರಬಂದು ಎಡದ ಮೊಲೆ ತಿಂದು ಕೈ ತಟ್ಟಿ ನಗುವುದನ್ನು ಗಮನಿಸಬೇಕು. ಪಾಡ್ದನಗಳ ಭಾಷೆ, ವಸ್ತು, ನಿರೂಪಣಾ ವಿಧಾನ ಇತ್ಯಾದಿಗಳ ಬಗ್ಗೆ ದೇಶ ವಿದೇಶಗಳ ವಿದ್ವಾಂಸರು ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಈಗ ಇಂಥ ಸ್ವತಂತ್ರವಾದ ದೈವ ಪರಂಪರೆಯನ್ನು ಪರಶುರಾಮನ ಕಾಲ ಕೆಳಗೆ ಕುಳ್ಳಿರಿಸಿ ಅವಮಾನಿಸಲಾಗಿದೆ. ಪರಶುರಾಮ ಮತ್ತು ತುಳು ದೈವಗಳ ಕೆಲವು ಭಿನ್ನತೆಗಳನ್ನು ಈ ಮುಂದಿನಂತೆ ಸಂಕ್ಷಿಪ್ತವಾಗಿ ಪಟ್ಟಿ ಮಾಡಬಹುದು-

1.            ದೈವದ ಕಥೆಗಳು ಬಹುಮಟ್ಟಿಗೆ ದುಃಖಾಂತವಾಗಿರುತ್ತವೆ. ಆದರೆ ಪರಶುರಾಮನು ಕ್ಷತ್ರಿಯರನ್ನು ಕೊಂದು ಚಿರಂಜೀವಿಯಾಗಿ ಉಳಿಯುತ್ತಾನೆ.

2.            ಭೂತಾರಾಧನೆಯ ಸಾಂಸ್ಕೃತಿಕ ನಾಯಕರು ದೈವಗಳಾಗಲು ಅವರ ಜಾತಿ ಅಥವಾ ಪೂರ್ವಜನ್ಮದ ಪುಣ್ಯ ವಿಶೇಷಗಳು ಕಾರಣವಾಗುವುದಿಲ್ಲ. ಆದರೆ ಪರಶುರಾಮನು ಸಾಕ್ಷಾತ್‌ ವಿಷ್ಣುವಿನ ಅವತಾರ.

3.            ಹೆಚ್ಚಿನ ದೈವಗಳು ತಮ್ಮ ಮಧ್ಯವಯಸ್ಸಿನಲ್ಲಿ ಮಹತ್ ಸಾಧನೆ ಮಾಡಿ, ಇಲ್ಲವೇ ಸ್ಥಾಪಿತ ಮೌಲ್ಯಗಳಿಗೆ ಮುಖಾಮುಖಿಯಾಗಿ, ಸಾಯುತ್ತಾರೆ. ಕಾರ್ಕಳದಲ್ಲಿ ಗೊಮ್ಮಟನನ್ನು ಕೆತ್ತಿದ ಕಲ್ಕುಡನು ಅರಸನ ಕಾರಣದಿಂದ ತನ್ನ ಬಲದ ಕೈಯನ್ನೂ ಎಡದ ಕಾಲನ್ನೂ ಕಳಕೊಳ್ಳಬೇಕಾಗುತ್ತದೆ. ಆದರೆ ಪರಶುರಾಮನು ೨೧ ಸಲ ಭೂಪ್ರದಕ್ಷಿಣೆ ಮಾಡಿ ದಿಗ್ವಿಜಯ ಮಾಡುತ್ತಾನೆ. ಅವನು ಸಾಯುವುದೇ ಇಲ್ಲ.

   ೪. ಕ್ಲಾಸಿಕಲ್‌ ಸಂಪ್ರದಾಯಕ್ಕೆ ಸೇರಿದ ಪರಶುರಾಮನಿಗೆ ದೇವತೆಗಳ ಬೆಂಬಲವಿದೆ. ಆದರೆ ದೈವಗಳಿಗೆ ಯಾವ ದೇವತೆಗಳ         ಬೆಂಬಲವೂ ಇಲ್ಲ.  ಅವರು ಕೇವಲ ಸಾಮಾನ್ಯರು.

   ೫. ದೈವಗಳು ವೀರರಾಗಲು ಅವರು ಬೇರೊಂದು ದೈವದ ಅವತಾರವಾಗಿರುವುದು ಕಾರಣ ಅಲ್ಲ. ಈ ಜನ್ಮದಲ್ಲಿ ಅವರು ಸಾಧಿಸಿದ್ದೇ ಅಂತಿಮ. ಅವರ ಸಾಮಾಜಿಕ ಸ್ಥಾನಮಾನಗಳು ಅವರ ವೀರತ್ವವನ್ನು ನಿರ್ಧರಿಸುವುದಿಲ್ಲ. ಆದರೆ ಪರಶುರಾಮನು ಮಹರ್ಷಿ, ವಿಷ್ಣುವಿನ ಅವತಾರ.

 6. ದೈವಗಳಾಗಿರುವ ತುಳುನಾಡಿನ ಸಾಂಸ್ಕೃತಿಕ ನಾಯಕರು ಎಲ್ಲರಂತೆ ಜನಿಸಿ, ಬೆಳೆಯುತ್ತಾ ಬಗೆ ಬಗೆಯ ಒತ್ತಡಕ್ಕೆ ಒಳಗಾಗುತ್ತಾರೆ. ತಮ್ಮ ಪ್ರಾಮಾಣಿಕತೆ, ಬುದ್ಧಿಮತ್ತೆ, ಮತ್ತು ಸಾಹಸಗಳಿಂದ ಜನಾನುರಾಗಿಯಾಗಿರುವ ಅವರು ಸಮಾಜ ಒಡ್ಡುವ ಸವಾಲುಗಳಿಗೆ ದಿಟ್ಟವಾಗಿ ಉತ್ತರಿಸುತ್ತಾರೆ ಮತ್ತು ಅದೇ ಕಾರಣಕ್ಕೆ ಸತ್ತು ದೈವಗಳಾಗುತ್ತಾರೆ. ಪರಶುರಾಮನು ಹುಟ್ಟುವಾಗಲೇ ಶೂರ. ಆತ ತಾಯಿಯ ತಲೆಯನ್ನೂ ಕಡಿಯಬಲ್ಲ, ಆಕೆಯನ್ನು ಬದುಕಿಸಬಲ್ಲ.

7. ಪರಶುರಾಮನು ಇತರ ಕ್ಲಾಸಿಕಲ್‌ ಕಥನಗಳಲ್ಲಿರುವ ಹಾಗೆ, ನೇರವಾಗಿಯೋ ಪರೋಕ್ಷವಾಗಿಯೂ ವರ್ಣಾಶ್ರಮ ಧರ್ಮದ ಪರವಾಗಿಯೇ ನಿಲ್ಲುತ್ತಾನೆ. ಕರ್ಣನಿಗೆ ಅವನು ವಿದ್ಯೆ ಕಲಿಸಲು ನಿರಾಕರಿಸುತ್ತಾನೆ. ಆದರೆ ತುಳುನಾಡಿನ ದೈವ ಕಥನಗಳು ಜಾತಿ ಸಮಾಜದ ಒಳಗಿನ ಸಂಘರ್ಷಗಳನ್ನು ಬಹಿರಂಗಕ್ಕೆ ತರುತ್ತವೆ.

ಹೀಗೆ ಪರಶುರಾಮನ ಕಥನ ಮತ್ತು ಭೂತಾರಾಧನೆಯ ಕಥನಗಳು ಎರಡು ಭಿನ್ನ ಸಂಪ್ರದಾಯಗಳಾಗಿದ್ದು ಭಾರತೀಯ ಸಂಸ್ಕೃತಿಯ ಸಶಕ್ತವಾದ ಭಾಗಗಳಾಗಿ ಉಳಿದುಕೊಂಡು ಬಂದಿವೆ. ಆದರೆ ಈಗ ಕರಾವಳಿಯ ದೈವಗಳನ್ನು ಪರಶುರಾಮನ ಕಾಲಕೆಳಗೆ ಕುಳ್ಳಿರಿಸಿ, ಅವುಗಳನ್ನು ಅವಮಾನಿಸಲಾಗಿದೆ. ಇದು ನಮ್ಮ ಜಾತಿಗಳ ಶ್ರೇಣೀಕರಣ ವ್ಯವಸ್ಥೆಯನ್ನು ಮತ್ತೆ ಹೊಸ ರೂಪದಲ್ಲಿ ಸ್ಥಾಪಿಸುವ ಕೆಲಸವಾಗಿದೆ. ಭೂತಗಳನ್ನು ನಂಬಿಕೊಂಡು ಬಂದವರು ಇದನ್ನು ಮೌನವಾಗಿ ಒಪ್ಪಿಕೊಳ್ಳುತ್ತಿರುವುದು ಅತ್ಯಂತ ವಿಷಾದದ ಸಂಗತಿ.

ಪುರುಷೋತ್ತಮ ಬಿಳಿಮಲೆ

(ಲೇಖಕರು ಹಿರಿಯ ಸಂಸ್ಕೃತಿ ವಿದ್ವಾಂಸರು, ದೆಹಲಿ ಜೆಎನ್‌ಯು ಕನ್ನಡ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ)

Related Articles

ಇತ್ತೀಚಿನ ಸುದ್ದಿಗಳು