Thursday, October 3, 2024

ಸತ್ಯ | ನ್ಯಾಯ |ಧರ್ಮ

ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗ 2027ರ ಜನವರಿಯೊಳಗೆ ರೈಲು ಸಂಚಾರಕ್ಕೆ ಕ್ರಮ; ವಿ.ಸೋಮಣ್ಣ

ದಾವಣಗೆರೆ.ಅ.2. (ಕರ್ನಾಟಕ ವಾರ್ತೆ): ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯುವ ಹಂತದಲ್ಲಿದ್ದು ಮುಂದಿನ ನಾಲ್ಕೈದು ತಿಂಗಳು ಇದೇ ಆರ್ಥಿಕ ವರ್ಷಾಂತ್ಯದಲ್ಲಿ ಹಲವು ಕಡೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ತಿಳಿಸಿದರು.


ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನೇರ ರೈಲು ಮಾರ್ಗವು ನಿಧಾನಗತಿಯಲ್ಲಿ ಸಾಗುತ್ತಿದ್ದು ಕಳೆದ ಎರಡೂವರೆಗೆ ತಿಂಗಳಿಂದ ಇದರ ಪ್ರಗತಿ ವೇಗ ಹೆಚ್ಚಿಸಲಾಗಿದೆ. ಒಟ್ಟು ಈ ಯೋಜನೆಗೆ 2406.73 ಎಕರೆ ಭೂಮಿ ಬೇಕಾಗಿದ್ದು ಈಗಾಗಲೇ 2119.16 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. 287.54 ಎಕರೆ ಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು ದಾವಣಗೆರೆ ಜಿಲ್ಲೆಯಲ್ಲಿ ಹಾದುಹೋಗುವ 263.78 ಎಕರೆ ಜಮೀನಿನಲ್ಲಿ 246.20 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು 17.58 ಎಕರೆಯ ಸ್ವಾಧೀನ ಪ್ರಕ್ರಿಯೆ ವಿವಿಧ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಪೂರ್ಣವಾಗಲಿದೆ ಎಂದರು.


ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಯೋಜನೆಯನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದ್ದು 2027 ರ ಜನವರಿಯೊಳಗಾಗಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲು ಉದ್ದೇಶಿಸಲಾಗಿದೆ. ರೈಲ್ವೆ ಕಾಮಗಾರಿಯನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದ ಅಭಿವೃದ್ದಿ ಮಾಡಲಾಗುತ್ತದೆ. ಇದೇ ಆರ್ಥಿಕ ವರ್ಷದ ಕೊನೆಯಾಗುವ ವೇಳೆಗೆ ಕನಿಷ್ಠ 4 ರಿಂದ 5 ಕಡೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದರು.


ರಾಜ್ಯದಲ್ಲಿ ಒಟ್ಟು 21 ರೈಲ್ವೆ ಯೋಜನೆಗಳು ನಡೆಯುತ್ತಿದ್ದು ಇದಕ್ಕಾಗಿ 43 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತದೆ. ಈ ಎಲ್ಲಾ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ರಾಜ್ಯವನ್ನು ರೈಲ್ವೆ ಸೌಕರ್ಯ ಹೊಂದಿದ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೆ ಯೋಜನೆಗೆ ಈಗಾಗಲೇ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ 115.11.08 ಎಕರೆ ಜಮೀನು ಸ್ವಾಧೀನ ಮಾಡಲಾಗಿದೆ ಎಂದರು.


ರೈಲ್ವೆ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ; ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಕಡೆ ರೈಲ್ವೆ ಇಲಾಖೆಯಿಂದಲೇ ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ದಾವಣಗೆರೆ ನಗರದ ಅಶೋಕ ಟಾಕೀಸ್ ಹತ್ತಿರ ರೈಲ್ವೆ ಲೈನ್ ಕೆಳಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣದ ಭೂ ನೇರ ಖರೀದಿಗೆ ರೂ.23.09 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಆದಷ್ಟು ಬೇಗ ಈ ಕಾಮಗಾರಿ ಮಾಡಲು ಅನುವು ಮಾಡಿಕೊಡಲಾಗುತ್ತದೆ ಎಂದರು.


ರೈಲ್ವೆ ವೇಗ ಹೆಚ್ಚಿಸಲು ಕ್ರಮ; ರೈಲ್ವೆ ಇಂಜಿನ್‍ಗಳು ಬಹುತೇಕ ಶೇ 98 ರಷ್ಟು ವಿದ್ಯುತ್ ಚಾಲಿತವಾಗಿದ್ದು ಶೇ 2 ರಷ್ಟು ಮಾತ್ರ ಡೀಸೆಲ್ ಇಂಜಿನ್‍ಗಳಿವೆ. ರೈಲ್ವೆ ಪ್ರಯಾಣದ ವೇಗ ಪ್ರಸ್ತುತ 110 ಕಿ.ಮೀ ಇದ್ದು ಇದನ್ನು 135 ಕಿ.ಮೀ ವರೆಗೆ ವೇಗ ಹೆಚ್ಚಿಸುವ ಗುರಿಯೊಂದಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಮಾಡಲಾಗುತ್ತಿದೆ. ವಂದೇ ಭಾರತ್ ರೈಲು ಬಡುವರು, ಮಧ್ಯಮ ವರ್ಗದವರಿಗೆ ತುರ್ತು ಪ್ರಯಾಣಕ್ಕಾಗಿ ಕೈಗೆಟಕುವ ದರದಲ್ಲಿ ಟಿಕೆಟ್ ಇದ್ದು ಇದರಲ್ಲಿ ನೀಡಲಾಗಿರುವ ಸೌಲಭ್ಯಗಳ ಬಗ್ಗೆ ಅರಿಯಲು ಪ್ರಯಾಣಿಸಬೇಕೆಂದರು.


ಕನ್ನಡದಲ್ಲೆ ರೈಲ್ವೆ ಪರೀಕ್ಷೆ; ರೈಲ್ವೆ ಇಲಾಖೆಯಲ್ಲಿ ಒಟ್ಟು 12 ಲಕ್ಷ ಹುದ್ದೆಗಳಿದ್ದು 15 ಲಕ್ಷ ಜನರು ಪಿಂಚಣಿ ಪಡೆಯುತ್ತಿದ್ದಾರೆ. ಖಾಲಿ ಇರುವ 16 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಆದೇಶ ನೀಡಲಾಗಿದ್ದು ನಮ್ಮ ರಾಜ್ಯದ ಯುವಕರು ಇದರ ಉಪಯೋಗ ಪಡೆದುಕೊಳ್ಳಬೇಕು, ಮುಂದಿನ ದಿನಗಳಲ್ಲಿ ಖಾಲಿ ಇರುವ 46 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುತ್ತದೆ ಎಂದರು.


ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಸಭೆಯಲ್ಲಿ ಮಾತನಾಡಿ ದಾವಣಗೆರೆ ನಗರದಲ್ಲಿನ ಮೀನು ಮಾರುಕಟ್ಟೆ ಬಳಿ ರೈಲ್ವೆ ಮೇಲ್ಸೇತುವೆ ಅಥವಾ ಕೆಳಸೇತುವೆ ಅಗತ್ಯವಾಗಿದೆ. ಅಶೋಕ ಟಾಕೀಸ್ ಹತ್ತಿರ ರಸ್ತೆ ಕಿರಿದಾಗಿದ್ದು ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು, ಲಿಂಗೇಶ್ವರ ದೇವಸ್ಥಾನದ ಹತ್ತಿರ ಪಾದಚಾರಿ ಮಾರ್ಗ ನಿರ್ಮಿಸಲು, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ಮಾರ್ಗದಲ್ಲಿ ಸೂರಗೊಂಡನಕೊಪ್ಪ ಅಥವಾ ನ್ಯಾಮತಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಅವಕಾಶ ಮಾಡಲು, ಹರಿಹರದಲ್ಲಿನ ರೈಲ್ವೆ ಆಸ್ಪತ್ರೆ, ಸ್ಕೂಲ್ ಮೇಲ್ದರ್ಜೆಗೇರಿಸಲು ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.


ಹರಿಹರ ಶಾಸಕರಾದ ಬಿ.ಪಿ.ಹರೀಶ್ ಹೊಸಪೇಟೆ ಹೋಗುವ ಹೆದ್ದಾರಿಯಲ್ಲಿ ಒಂದೇ ರೈಲ್ವೆ ಸೇತುವೆ ಇದ್ದು ಮತ್ತೊಂದು ಬ್ರಿಡ್ಜ್ ನಿರ್ಮಾಣ ಮಾಡಬೇಕು, ಮಳೆ ಬಂದಾಗ ಈ ಮಾರ್ಗದ ವಾಹನಗಳಿಗೆ ತೊಂದರೆಯಾಗುವುದರಿಂದ ರೈಲ್ವೆ ಸೇತುವೆಯ ಅವಶ್ಯಕತೆ ಇದೆ ಎಂದರು.


ಸಭೆಯಲ್ಲಿ ಮೇಯರ್ ಚಮನ್ ಸಾಬ್, ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ರೈಲ್ವೆ ಹಿರಿಯ ಅಧಿಕಾರಿ ಶರ್ಮಾ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page