Home ಅಂಕಣ ನೆಲದ ತವಕ – 2 ಇಪ್ಪತ್ತೊಂದನೆ ಶತಮಾನದ ಕನ್ನಡ ಸಾಹಿತ್ಯ: ಯುವ ಬರಹಗಾರರ ವಸ್ತು ವಿಷಯ

ನೆಲದ ತವಕ – 2 ಇಪ್ಪತ್ತೊಂದನೆ ಶತಮಾನದ ಕನ್ನಡ ಸಾಹಿತ್ಯ: ಯುವ ಬರಹಗಾರರ ವಸ್ತು ವಿಷಯ

0

“..ಸಾಹಿತ್ಯ ಯಾವಾಗಲೂ ಭೂತದಿಂದ ಹೊರಬರುತ್ತಲೆ ವರ್ತಮಾನದ ಕನ್ನಡಿಯಾಗಬೇಕು. ೧೨ನೇ ಶತಮಾನದ ಬಸವಣ್ಣನ ಬವಣೆ ಎಷ್ಟಿತ್ತು, ಆತ ಕಲಿಯತನದಿಂದ ಆಗದಿದ್ದನ್ನು ಕವಿತ್ವದಿಂದ ಸಾಧ್ಯವಾಗಿಸಿದ್ದು ಇತಿಹಾಸ. ಸಾಹಿತ್ಯ ಧರ್ಮಾತೀತ, ಜಾತ್ಯಾತೀತ ನಿಲುವಿಗೆ ಬದ್ಧವಾಗಬೇಕು. ಆಗಲೇ ಸಾಹಿತ್ಯದ ನಿಜವಾದ ಕಸುವು ಕಣ್ಣೆರೆಯುವುದು. ಯುವ ಬರಹಗಾರರು ಈ ನಿಟ್ಟಿನಲ್ಲಿ ಯಶಸ್ಸು ಕಾಣಲು ಸಾಧ್ಯ..” ಲೇಖಕರಾದ ಶ್ರೀಪತಿ ಹಳಗುಂದ ಅವರ ಬರಹದಲ್ಲಿ

ಸಾಹಿತ್ಯ ಸಮಾಜದ ಪ್ರತಿಬಿಂಬ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಲೇ ಪ್ರತಿಬಿಂಬಿಸಿದ್ದು ಏನನ್ನ, ಯಾವುದನ್ನ ಮತ್ತು ಏತಕ್ಕೆ ಎಂಬ ಪ್ರಶ್ನೆಯನ್ನು ಎತ್ತಬೇಕಾದದ್ದು ಅನಿವಾರ್ಯ. ಹಲ್ಮಡಿ ಶಾಸನದಲ್ಲಿ ಅಥವಾ ಅದಕ್ಕಿಂತಲೂ ಹಿಂದೆ ಕನ್ನಡ ಪದಗಳ ಕುರುಹು ಹುಡುಕುತ್ತಲೆ ಹತ್ತನೆ ಶತಮಾನಕ್ಕೆ ಅಧಿಕೃತ ಎಂಬ ತೃಪ್ತಿಕರವಾದ ಅನನ್ಯತೆಗೆ ಸಾಕ್ಷಿ ಆಗಿದ್ದೇವೆ.

ಸಾಹಿತ್ಯವನ್ನು ಧರ್ಮ ಆಳಿದ್ದು ಇತಿಹಾಸ, ಜೈನ, ವೀರಶೈವ, ವೈದಿಕ, ಇನ್ನೊಂದು ಜಾತಿಯೊ, ಧರ್ಮವೊ ಸಾಹಿತ್ಯವನ್ನು ಆಳಲೇ ಬೇಕಿತ್ತು. ಅಷ್ಟರಲ್ಲಿ ಕ್ರಿಸ್ತ ಮಿಷನರಿಗಳು ಬಂದು ಸಾಹಿತ್ಯವನ್ನು ಧರ್ಮದಿಂದ ವಿಮುಕ್ತವಾಗಿಸಿದ್ದು ಸ್ತುತ್ಯಾರ್ಹ, ಇದು ಇಪ್ಪತ್ತೊಂದನೆ ಶತಮಾನದ ಸತ್ಯ.

ಸಾಹಿತ್ಯವೆಂದರೆ ಪ್ರಕೃತಿ, ಪ್ರೇಮ, ಪ್ರಣಯ, ಆಧ್ಯಾತ್ಮ, ವೈಭವ ಎಂದು ಪರಿಭಾವಿಸುತ್ತಿರುವ ಕಾಲದಿಂದ ಸಾಹಿತ್ಯವೆಂದರೆ ಇಷ್ಟೇ ಅಲ್ಲ. ವೇದನೆ, ನಿವೇದನೆ, ಸಂವೇದನೆ ಎಂದು ಹೇಳತೊಡಗಿತು. ಇಪ್ಪತ್ತನೆ ಶತಮಾನದ ಉತ್ತರಾರ್ಧದಲ್ಲಿ ದಲಿತ, ಬಂಡಾಯ ಕಾಲಘಟ್ಟವೂ ಒಂದರ್ಥದಲ್ಲಿ ಒಂದು ಜನಾಂಗಕ್ಕೆ ಸೀಮಿತಗೊಳ್ಳುವ ಅಪಾಯ ಕಾಣುತ್ತಿದ್ದೇವೆ.

ಹಾಗಾದರೆ ಇಪ್ಪತ್ತೊಂದನೆ ಶತಮಾನದ ಪೂವಾರ್ಧದಲ್ಲಿ ಯುವ ಬರಹಗಾರರಿಗೆ, ಸಾಹಿತ್ಯಕ್ಕೆ ವಸ್ತುವನ್ನು ಆಯ್ಕೆ ಮಾಡಿಕೊಳ್ಳುವುದೇ ಒಂದು ಸವಾಲಾಗಿದೆ. ಇಂತಹ ಸವಾಲುಗಳ ಮೂಲಕ ಸಾರ್ಥತೆಗಳ ಬಗ್ಗೆ ಗಂಭೀರವಾಗಿ ಯೋಚಿಸುವ ತುರ್ತಿದೆ.

ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಇವೆಲ್ಲವೂ ಆಧುನೀಕರಣ ಎಂಬ ಮರದ ರೆಂಬೆ ಕೊಂಬೆಗಳು. ಹೀಗಿರುವಾಗ ಒಂದು ಭಾಷೆಯ ಸಾಹಿತ್ಯವನ್ನು, ಭಾಷೆಯನ್ನು ಭಾಷಿಕರನ್ನು ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ, ಸೈದ್ಧಾಂತಿಕ, ತಾತ್ವಿಕ, ತಾರ್ಕಿಕ ವಿಚಾರಗಳನ್ನು ಸಾಹಿತ್ಯಕ್ಕೆ ವಸ್ತುವಾಗಿಸಿಕೊಳ್ಳುತ್ತಲೆ ಹೊಸ ಸಮಾಜಕ್ಕೆ ಅಥವಾ ನಾನಂದುಕೊಳ್ಳುವ ಆದರ್ಶ ಸಮಾಜಕ್ಕೆ ಕಾಣಿಕೆ ನೀಡಬೇಕಿದೆ.

ಹಳೆಯದೆಲ್ಲವೂ ಶ್ರೇಷ್ಠ: ಹೊಸದು ಕನಿಷ್ಠ ಎಂಬ ಧೋರಣೆಯಿಂದ ಹೊರಬರುವ ಜಾಯಮಾನದವರಾಗಬೇಕು. ಸಾಹಿತ್ಯದ ಎಲ್ಲಾ ಪ್ರಕಾರಗಳು ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವಂತೆ ಹೊಸ ತಲೆಮಾರಿನ ಬರಹಗಾರರು ಆಸಕ್ತಿ ವಹಿಸಬೇಕು. ಈ ಕಾರಣಕ್ಕೆ ‘ಮತ್ತೆ ಮತ್ತೆ ಪಂಪ’, ‘ಮತ್ತೆ ಮತ್ತೆ ಕುವೆಂಪು’ ಎಂಬ ಕೃತಿಗಳು ಹೊರಬರುತ್ತಿರುವುದು. ಅಂದರೆ ಹಳೆಯ ಬರಹಗಾರರ ಸಾಹಿತ್ಯವನ್ನು ಒರೆಗೆ ಹಚ್ಚಬೇಕಾಗಿದೆ. ಸಂಪ್ರದಾಯ ಸಾಹಿತ್ಯದಿಂದ, ವೈಚಾರಿಕತೆ ಸಾಹಿತ್ಯದ ಮೂಲಕ ಒಂದು ಪರಂಪರೆಯ ಬರಹಗಳನ್ನು ಕಾಪಾಡಿಕೊಳ್ಳುತ್ತಲೆ ಪಾರದರ್ಶಕತೆಯನ್ನು ತೋರಿಸಬೇಕಿದೆ.

ವೈಜ್ಞಾನಿಕವಾದ, ವೈಚಾರಿಕವಾದ ಆಲೋಚನೆಯ ಮೂಲಕ ಹೊಸ ಸಾಹಿತ್ಯದ ನೆಲೆಗಟ್ಟನ್ನು ಕಟ್ಟಬೇಕಿದೆ. ಕಾಲಕಾಲಕ್ಕೆ ಅಥವಾ ಆಧುನೀಕರಣಗೊಂಡಂತೆ ಸಾಹಿತ್ಯದ ವಸ್ತುವನ್ನು ವಿಶ್ಲೇಷಿಸಬೇಕಿದೆ. ಭೈರಪ್ಪನವರ ‘ಸಾರ್ಥ’ದ ವಸ್ತು ಗೊತ್ತು. ಅದೆ ಭೈರಪ್ಪ ‘ಯಾನ’ದಂತಹ ಕಾದಂಬರಿಗೆ ಬಳಸಿಕೊಂಡ ವಸ್ತುವನ್ನು ಗಮನಿಸಿ. ಇದೇ ಈ ಹೊತ್ತಿನ ಸವಾಲು ಎನ್ನೋಣವೇ?

ಸಾಹಿತ್ಯವೆಂದರೆ ಕಟ್ಟುವುದು ಮತ್ತು ಮುರಿದು ಕಟ್ಟುವುದು. ಈ ಮುರಿದು ಕಟ್ಟುವುದೇ ಸೃಜನಶೀಲತೆ ಅಥವಾ ವೈಚಾರಿಕತೆ ವಸ್ತು ಬದಲಾಗಬೇಕು. ಉದಾ: ಲಂಕೇಶರ ‘ಅವ್ವ’, ಮುಕುಂದರ ‘ಅವ್ವನ ಬಿಕ್ಕಳಿಕೆ ನಿಲ್ಲಿಸುವಿರಾ’ ಈ ಎರಡರ ಮೂಲವಸ್ತು ಒಂದೇ. ನಿರ್ದೇಶನದ ಶೈಲಿ ಬೇರೆ.

‘ಕಪ್ಪು ದಿನಗಳ ಬಗ್ಗೆ, ಕಷ್ಟದ ದಿನಗಳ ಬಗ್ಗೆ ಕವಿಗಳು ಹಾಡಬೇಕು’ ಇದು ಬ್ರೆಕ್ಟನ್ ಆಶಯ. ಈ ಭೂಮಿ ಬರೆದ ಕವನಗಳೆಂದರೆ ಮರಗಳು, ನಾವು ಅವುಗಳನ್ನು ಕತ್ತರಿಸಿ ಕಾಗದ ಮಾಡಿ ನಮ್ಮ ಪೊಳ್ಳುತನವನ್ನು ದಾಖಲು ಮಾಡಿಕೊಳ್ಳುತ್ತೇವೆ. (ಖಲೀಲ್ ಗಿಬ್ರಾನ್)

ಹೌದು, ಹೊಸ ತಲೆಮಾರಿನ ಲೇಖಕರ ಆಲೋಚನಾ ಕ್ರಮ ಸಂಘರ್ಷವಾಗಬೇಕಾ, ಸೌಹಾರ್ದವಾಗಬೇಕಾ, ಸಂವಹನವಾಗಬೇಕಾ ಎಂಬೆಲ್ಲಾ ಪ್ರಶ್ನೆ ಕಾಡುತ್ತದೆ. ಉದಾ: ಯೋಗೀಶ ಮಾಸ್ತರ ದುಂಡಿಯ ಬಗ್ಗೆ ಎತ್ತಿದ ಅಪಸ್ವರ. ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳಬೇಕಾ, ಪ್ರಶ್ನಿಸುವ, ಪ್ರತಿರೋಧಿಸುವ ಸಂಪ್ರದಾಯವನ್ನು ಸಂಸ್ಕರಿಸುವ ಹಕ್ಕು ಯಾರಿಗಿದೆ ಎಂಬುವುದೇ ಈ ಹೊತ್ತಿನ ಸವಾಲು.

ವೈಚಾರಿಕತೆಯ ಹಿನ್ನೆಲೆಯುಳ್ಳ ಬರಹಗಾರರಿಗೆ ಸಾಂಪ್ರಾದಾಯದವರ ವಾಗಂಡನೆ ಇರುವ ಹೊತ್ತಿನಲ್ಲಿ ಯುವ ಬರಹಗಾರರು ಆಯ್ಕೆ ಮಾಡಿಕೊಳ್ಳುವ ವಸ್ತು ಹೇಗಿರಬೇಕು ಎಂಬುದನ್ನು ನಿರ್ಧರಿಸುವ ವರ್ಗ ಯಾವುದು? ಆ ಮೂಲಕ ಹೊಸ ಬಗೆಯ ಆಲೋಚನಾಕ್ರಮಕ್ಕೆ ಹಿನ್ನಡೆಯಾಗುವುದಿಲ್ಲವೇ?

ಶಿವರಾಮ ಕಾರಂತ, ಕುವೆಂಪು, ತೇಜಸ್ವಿ, ಆನ.ಕೃ., ಕಟ್ಟಿಮನಿ, ಸಾರಾ ಅಬೂಬಕರ್, ಅನಂತಮೂರ್ತಿ, ಎಚ್.ಎಸ್. ಶಿವಪ್ರಕಾಶ್, ಲಂಕೇಶ್, ಅಡಿಗರು ಮುಂತಾದವರು ಮೆಟ್ಟಿನಿಂತ ಸಾಹಿತ್ಯದ ವಸ್ತು ಪರಿಮಿತಿಯನ್ನು ಈ ತಲೆಮಾರಿನವರು ಮೆಟ್ಟಿನಿಲ್ಲಬೇಕು. ಆಗಲೇ ಸಾತ್ವಿಕವಾದ, ಸತ್ಯವಾದ ಸಾಹಿತ್ಯ ಮತ್ತು ಸಾಹಿತಿ ಬೆಳಕಿಗೆ ಬರಲು ಸಾಧ್ಯ.

ಸಾಹಿತ್ಯ ಯಾವಾಗಲೂ ಭೂತದಿಂದ ಹೊರಬರುತ್ತಲೆ ವರ್ತಮಾನದ ಕನ್ನಡಿಯಾಗಬೇಕು. ೧೨ನೇ ಶತಮಾನದ ಬಸವಣ್ಣನ ಬವಣೆ ಎಷ್ಟಿತ್ತು, ಆತ ಕಲಿಯತನದಿಂದ ಆಗದಿದ್ದನ್ನು ಕವಿತ್ವದಿಂದ ಸಾಧ್ಯವಾಗಿಸಿದ್ದು ಇತಿಹಾಸ. ಸಾಹಿತ್ಯ ಧರ್ಮಾತೀತ, ಜಾತ್ಯಾತೀತ ನಿಲುವಿಗೆ ಬದ್ಧವಾಗಬೇಕು. ಆಗಲೇ ಸಾಹಿತ್ಯದ ನಿಜವಾದ ಕಸುವು ಕಣ್ಣೆರೆಯುವುದು. ಯುವ ಬರಹಗಾರರು ಈ ನಿಟ್ಟಿನಲ್ಲಿ ಯಶಸ್ಸು ಕಾಣಲು ಸಾಧ್ಯ. ಜಾಗತೀಕರಣದ ಈ ಹೊತ್ತಿನಲ್ಲಿ ಬಹುಭಾಷಾ ಜ್ಞಾನವನ್ನು ಅರಗಿಸಿಕೊಂಡು ಸಾಹಿತ್ಯವನ್ನು ವಿಶ್ವಾತ್ಮಕ ದೃಷ್ಟಿಯಿಂದ ಮನಗಾಣಬೇಕು.

ಕಾಲ ಕಳೆದಂತೆ ಸಮಾಜ ಎದುರಿಸುವ ಸವಾಲುಗಳು ಬದಲಾಗುತ್ತಿರುತ್ತವೆ. ಒಟೊಟ್ಟಿಗೆ ಸಾಹಿತ್ಯ ಎದುರಿಸುವ ಸವಾಲುಗಳು ಬದಲಾಗಬೇಕು. ಆಗ ಮಾತ್ರ ಸಾಹಿತ್ಯ ಸೃಜನಶೀಲತೆಗೆ, ಕ್ರಿಯಾಶೀಲತೆಗೆ, ವೈಚಾರಿಕತೆಗೆ ಸಾಕ್ಷಿಯಾಗುತ್ತದೆ. ಯುವ ಬರಹಗಾರರು ಇಂದೇಕೋ ಒಬ್ಬ ನಿರ್ದಿಷ್ಟ ಲೇಖಕನ ಓದಿಗೆ ಅವನ ಸಿದ್ಧಾಂತಕ್ಕೆ ಜೋತುಬಿದ್ದು ಒಪ್ಪಿಕೊಳ್ಳುವುದು ಕಂಡುಬರುತ್ತಿದೆ. ಬದಲಿಗೆ ಒಂದು ಸಾಹಿತ್ಯವನ್ನು ಆಸ್ವಾದಿಸುವ, ಆಲೋಚಿಸುವ ಅರ್ಹತೆಯಿದ್ದಾಗ ಮಾತ್ರ ಆ ಬುದ್ಧಿವಂತ ಯೋಚನೆ ಮಾಡಬೇಕು. ಏಕಾಏಕೀ ಆರಾಧಿಸುವುದು ಈ ಹೊತ್ತಿನಲ್ಲಿ ಅಪಾಯ.

ವೈಚಾರಿಕತೆ ಎಂದರೆ ಶತಮಾನದ ಪರಂಪರೆ ಎಲ್ಲಾ ಸಾರಾಸಗಟಾಗಿ ತಿರಸ್ಕರಿಸುವುದು ಅಲ್ಲ. ಕುವೆಂಪು ಹೇಳುವಂತೆ ‘ಆಯೋಗ್ಯವಾದ ನಂಬಿಕೆಗಳನ್ನೇ ಮಾನದಂಡವನ್ನಾಗಿ ಮಾಡಿಕೊಂಡು ಬಹುಸಂಖ್ಯಾತರನ್ನು ಶೋಷಿಸುತ್ತಿರುವ ಅಲ್ಪಸಂಖ್ಯಾತ ವರ್ಗವನ್ನು ಪ್ರಶ್ನಿಸುವುದೇ ಆಗಿದೆ’. ಆ ಮೂಲಕವೆ ಒಂದು ಸಂಕ್ರಮಣ ಸ್ಥಿತಿಗೆ ಕಾರಣವಾಗಬೇಕಿದೆ.

ಒಟ್ಟಿನಲ್ಲಿ ೨೧ನೇ ಶತಮಾನದ ಹೊತ್ತಿನಲ್ಲಿ ಇರುವ ನಾವು ಪ್ರತಿ ಶತಮಾನವು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಬೇಕಿದೆ. ಆದರೆ ಸವಾಲುಗಳು ಬೇರೆ ಬೇರೆ ಅಷ್ಟೆ. ತನ್ನತನವನ್ನು ಕಾಪಾಡಿಕೊಂಡು ತ್ರಿಕರಣಗಳನ್ನು ಎದುರಿಸಬೇಕಿದೆ. ತ್ರಿಕರಣಗಳೇ ಸವಾಲು. ತನ್ನತನವನ್ನು ಕಾಪಾಡಿಕೊಳ್ಳುವುದೇ ಸಾಧ್ಯತೆಯಾಗಿದೆ.

ತಂತ್ರಜ್ಞಾನವನ್ನು ಭಾಷೆಯ ಬೆಳವಣಿಗೆಗೆ ಬಳಸಿಕೊಳ್ಳುತ್ತಲೆ ಭಾಷೆಯನ್ನು ಬಳಸುವ ನಿಟ್ಟಿನಲ್ಲಿ ಯುವ ಬರಹಗಾರರು ಮುಂದಾಗಬೇಕಿದೆ. ಒಂದು ವರ್ಗದ ಸಂಸ್ಕೃತಿಯನ್ನು ವೈಭವೀಕರಿಸುತ್ತಾ ಬಹುಸಂಖ್ಯಾತರ ನೆಲಮೂಲದ ಸಂಸ್ಕೃತಿಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಸಾಮುದಾಯಿಕ ಸಂಸ್ಕೃತಿಯು ಇಲ್ಲವಾದರೂ ಸಾಂದರ್ಭಿಕ ಸಂಸ್ಕೃತಿಯ ಬಗ್ಗೆ ಗಂಭೀರವಾದ ಚಿಂತನೆಗೆ ತೊಡಗಿಸಿಕೊಳ್ಳಬೇಕಿದೆ.

ಯುವ ಬರಹಗಾರರು ಸ್ವತಂತ್ರವಾಗಿ ಚಿಂತಿಸಬೇಕೆ ಹೊರತು ಅದು ಶ್ವೇಚ್ಛಾಚಾರವಾಗಬಾರದು. ಹಲವು ಧರ್ಮ, ಜಾತಿ, ಜನಾಂಗ, ಭಾಷೆ ಈ ನೆಲದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಸ್ವಾಮಿ ವಿವೇಕಾನಂದರು ಹೇಳುವಂತೆ ‘ಬಡವನ ಹಸಿವನ್ನು, ವಿಧವೆಯ ಕಣ್ಣೀರನ್ನು ಒರೆಸದ ಧರ್ಮದಲ್ಲಿ ನನಗೆ ನಂಬಿಕೆಯಿಲ್ಲ’ ಅದು ಸಾಹಿತ್ಯಕ್ಕೂ ಅನ್ವಯವಾಗಬೇಕಿದೆ. ಅರ್ಥಾತ್ ಸಾಹಿತಿಯಿಂದ ತಕ್ಷಣದ ಪರಿಹಾರ ನಿರೀಕ್ಷೆ ಬೇಡ. ಮುಂದಿನ ಪಲ್ಲಟಗಳ ಆಶಯವಾದರೂ ಇರಲಿ.

ಗೊತ್ತಿದ್ದೋ ಗೊತ್ತಿಲ್ಲದೆಯೋ ಆಧುನೀಕರಣಕ್ಕೆ, ಜಾಗತೀಕರಣಕ್ಕೆ ನಮ್ಮನ್ನು ಒಪ್ಪಿಸಿಕೊಂಡಿದ್ದೇವೆ. ಅದೇ ಬೇಲಿಯಾಗದೆ, ಬಂಧನವಾಗದೆ ಬಾಂಧವ್ಯದ ನೆಲೆಗಟ್ಟಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಇಂದಿನ ಬರಹಗಾರರು ಮುಂದಾಗಬೇಕಿದೆ. ಕನ್ನಡದ ಸಂಶೋಧನೆಯ ವಿಚಾರಕ್ಕೆ ಬಂದರೆ ನಮ್ಮ ಯುವ ಪೀಳಿಗೆ ಆಯ್ಕೆ ಮಾಡಿಕೊಳ್ಳುವ ವಿಚಾರವೇ ಚರ್ಚಿಸಬೇಕಾಗಿದೆ. ಸಂಶೋಧನೆ ಎಂದರೆ ಹೇಳಿದ್ದನ್ನೇ ಇನ್ನೊಂದು ಅರ್ಥದಲ್ಲಿ ಹೇಳುವುದು ಅನ್ನುವಂತಹ ಜಾಯಮಾನದಿಂದ ಹೊರಬರಬೇಕಿದೆ.

ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಪದವಿ ಬೇಕು. ಆದರೆ ಆ ಬದುಕಿಗಾಗಿ ವಿಷಯದಲ್ಲಿ, ವಿಚಾರದಲ್ಲಿ ರಾಜಿಯಾಗುವ ಅವಶ್ಯಕತೆಯಿಲ್ಲ. ಅದು ಬಾಹ್ಯ ಮೌಲ್ಯಮಾಪನಕಾರರ ಭಯದಲ್ಲಿ ನಿಜವಾದ ಅಭಿಪ್ರಾಯಗಳನ್ನು ಹೊರತಂದ ಸಂಗತಿಗಳೇ ಹೆಚ್ಚು. ಈ ಮೊದಲೆ ಹೇಳಿದಂತೆ ನಮ್ಮ ಆಲೋಚನಾ ಕ್ರಮವನ್ನು ಮತ್ಯಾರೋ ನಿರ್ಬಂಧಿಸುವುದು ಎಷ್ಟು ಸರಿ?

ಈ ನಿಟ್ಟಿನಲ್ಲಿ ನಾವು ಚರ್ಚಿಸಬೇಕಿದೆ. ಪರಂಪರೆಯನ್ನು ಪ್ರಶ್ನಿಸುವುದೇ ಅಪರಾಧ ಎಂದಾಗ ಸಾಹಿತ್ಯ ಎತ್ತ ಸಾಗುತ್ತಿದೆ? ೨೦ನೇ ಶತಮಾನದ ಆರಂಭದಲ್ಲಿ ಈ ತೆರನಾದ ಬಿಕ್ಕಟ್ಟುಗಳಿದ್ದವು. ಇವೆಲ್ಲವನ್ನೂ ಮೀರಿ ಆಧುನಿಕ ಸಾಹಿತ್ಯ ನೆಲೆ ಕಂಡುಕೊಂಡಂತೆ ೨೧ನೆಯ ಶತಮಾನದ ಆರಂಭದ ಕಾಲಘಟ್ಟವು ಸಾಗಬೇಕಿದೆ.

ಒಟ್ಟಿನಲ್ಲಿ ವಸಾಹತುಶಾಹಿ ವ್ಯವಸ್ಥೆ, ರಾಷ್ಟ್ರೀಯತೆ, ಏಕೀಕರಣ ಪಾಶ್ಚಾತ್ಯ ಶಿಕ್ಷಣ ಕ್ರಮ, ಸಂಸ್ಕೃತಿಗಳ ವೈರುಧ್ಯ, ಭಾಷಿಕ ಬವಣೆ, ದೇಸಿತನದ ಕಾಳಜಿ, ಸಂಸ್ಕೃತಿ ಸಾಹಿತ್ಯ ಎಂದುಕೊಳ್ಳುತ್ತಲೆ ಆಧುನಿಕ ಕನ್ನಡ ಸಾಹಿತ್ಯದ ಪರಂಪರೆ ಒಂದು ಶತಮಾನದ ಅವಧಿಯನ್ನು ಪೂರ್ಣಗೊಳಿಸಿದೆ. ಒಂದಿಷ್ಟು ಪಲ್ಲಟಗಳೊಂದಿಗೆ ಹೊಸ ಹೊಸ ಸ್ವರೂಪಗಳೊಂದಿಗೆ ೨೧ನೇ ಶತಮಾನಕ್ಕೆ ಕಾಲಿರಿಸಿ ೨ ದಶಕಗಳ ಹೊಸ್ತಿಲಿನಲ್ಲಿ ನಿಂತಿದೆ. ವಿಭಿನ್ನ ಮಾದರಿಯ ಪಂಥ. ಧೋರಣೆಗಳಿಗೆ ನಿರಂತರವಾಗಿ ಮುಖಾಮುಖಿಯಾಗುತ್ತ ಬಂದ ನೆಲೆಗಳನ್ನು ನವೋದಯ, ಪ್ರಗತಿಶೀಲ, ನವ್ಯ, ನವೋತ್ತರ ಎಂಬ ಕಾಲಘಟ್ಟದ ಹೆಸರಿನಲ್ಲಿ ಕಂಡುಕೊಂಡಿದ್ದೇವೆ.

ಅಂತೆಯೇ ಅದು ಬೇರೆ ಬೇರೆ ಕಾಲಘಟ್ಟದಲ್ಲಿ ಹಲವು ಬಗೆಯ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ನಿರಂತರವಾಗಿ ಸ್ವೀಕರಿಸುತ್ತಲೇ ಬಂದಿದೆ. ಆಧುನಿಕ ಸಂದರ್ಭದಲ್ಲಿ ಕನ್ನಡದಲ್ಲಿ ನಡೆದ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿದರೆ ೨೦ನೆಯ ಶತಮಾನದ ಪೂರ್ವಾರ್ಧಕ್ಕೂ ಮತ್ತು ಉತ್ತರಾರ್ಧಕ್ಕೂ ವಸ್ತುಧೋರಣೆ ಮತ್ತು ಸಾತ್ವಿಕತೆಯ ದೃಷ್ಟಿಯಿಂದ ಸಾಕಷ್ಟು ಅಂತರಗಳು ನಿಖರವಾಗಿ ಕಂಡುಬರುತ್ತವೆ. ಕಳೆದ ಶತಮಾನದ ಉತ್ತರಾರ್ಧದಲ್ಲಿ ಪ್ರಕಟಗೊಂಡ ಕನ್ನಡ ಸಾಕಷ್ಟು ಸಾಹಿತ್ಯ ಕೃತಿಗಳು ಸಮಾಜಮುಖಿಯಾಗಿ ಪ್ರವಹಿಸಿದ್ದನ್ನು ಸಾಹಿತ್ಯ ವಿಮರ್ಶೆ ಮತ್ತು ಸಂಶೋಧನೆ ಗುರುತಿಸಿಕೊಂಡಿದೆ. ಈ ಅವಧಿಯಲ್ಲಿ ಅಂದಿನ ಸಮುದಾಯಗಳ ಮಹಿಳೆಯರ ಮೂಲಕ ಬೆಳಕು ಕಂಡ ಸಾಹಿತ್ಯ ಕೃತಿಗಳಲ್ಲಿ ಪ್ರಗತಿಪರ ಧೋರಣೆ ದಟ್ಟವಾಗಿ ಕಾಣಸಿಗುತ್ತದೆ. ಸೃಜನಶೀಲ ಮತ್ತು ವೈಚಾರಿಕ ಸಾಹಿತ್ಯ ಕೃತಿಗಳಲ್ಲಿ ದಲಿತ, ಬಂಡಾಯ, ಗ್ರಾಮೀಣ ಇಸ್ಲಾಂ ಮತ್ತು ಸ್ತ್ರೀ ಸಂವೇದನೆಗಳೂ ಆಕೃತಿ ಪಡೆದದ್ದು ಕನ್ನಡ ಸಾಹಿತ್ಯದ ಜೀವಂತಿಕೆ ಮತ್ತು ಚಲನಶೀಲ ಗುರಿಗಳಿಗೆ ಸಾಕ್ಷಿಯಾಗಿದೆ.

ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ೨೦ನೆಯ ಶತಮಾನದ ಕೊನೆ ದಶಕ ನವಯುಗವೊಂದನ್ನು ಸೃಷ್ಟಿಸಿದ ಕಾಲಘಟ್ಟ ಎನ್ನಬಹುದು. ನಿರ್ದಿಷ್ಟ ಪಂಥಗಳ ಗುರುತುಗಳಿಂದ ಬಿಡುಗಡೆಗೊಂಡು ಸಾಹಿತ್ಯವು ಬಹುಮುಖಿಯಾಗಿ ಪ್ರವಹಿಸಿದ ಕಾಲ ಅದು. ಆ ಅವಧಿಯಲ್ಲಿ ಆಧುನಿಕತೆ ಮತ್ತು ಜಾಗತೀಕರಣಕ್ಕೆ ಮುಖಾಮುಖಿಯಾಗಬಹುದಾದ ಅನೇಕ ಬರಹಗಳು ಮತ್ತು ಕೃತಿಗಳು ಪ್ರಕಟಗೊಂಡಿವೆ. ಮುಂದೆ ೨೧ನೆ ಶತಮಾನದ ಆರಂಭದ ದಶಕದಲ್ಲಿಯೂ ಇದರ ಬೆಳವಣಿಗೆಯ ನೆಲೆಗಳನ್ನು ಕಂಡುಕೊಳ್ಳಬಹುದಾಗಿದೆ. ಮುದ್ರಣ ಮಾಧ್ಯಮದೊಂದಿಗೆ ವಿದ್ಯುನ್ಮಾನ ಮತ್ತು ಅಂತರ್ಜಾಲ ಮಾಧ್ಯಮವು ಸಹ ಎಲ್ಲಾ ರೀತಿಯ ಮತ್ತು ವಯೋಮಾನದ ಬರಹಗಾರರಿಗೆ ಹೇರಳ ಅವಕಾಶಗಳನ್ನು ಒದಗಿಸಿದೆ. ಪ್ರಸ್ತುತ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳು, ಶಿಕ್ಷಣ ಸಂಸ್ಥೆಗಳು, ಅಕಾಡೆಮಿ ಪರಿಷತ್ತುಗಳು ರಚನೆ, ಪ್ರಕಟಣೆ ಮತ್ತು ಸಂಘಟನೆಯ ಕೆಲಸಗಳಿಗೆ ಹಲವು ಬಗೆಯ ಬೆಂಬಲ ನೀಡುತ್ತಿವೆ.

೨೧ನೆಯ ಶತಮಾನದ ಆರಂಭದ ದಶಕದಲ್ಲಿ ಹಿಂದೆಂದಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಮತ್ತು ವೈವಿಧ್ಯಮಯ ಸ್ವರೂಪದಲ್ಲಿ ಸಾಹಿತ್ಯ ಸೃಷ್ಟಿಯಾಗಿದೆ. ಈ ಅವಧಿಯಲ್ಲಿ ಪರಿಚಿತವಾದ ಸಾಹಿತ್ಯ ಕೃತಿಗಳು ಅಧ್ಯಯನ ಮತ್ತು ಸಂಶೋಧನೆಯ ದೃಷ್ಟಿಯಿಂದ ಕೆಲವು ಮಹತ್ವದ ಫಲಿತಗಳನ್ನು ಮುಂದಿಡುತ್ತವೆ. ಈ ಫಲಿತಗಳು ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಸಾಗಬೇಕಾಗಿರುವ ದಾರಿ ಮತ್ತು ಎದುರಿಸಬೇಕಾಗಿರುವ ಸವಾಲುಗಳ ಕುರಿತ ಮೇಲ್ನೋಟವನ್ನು ಸೂಚ್ಯವಾಗಿ ನೀಡುತ್ತವೆ. ಇಂದು ಕನ್ನಡ ಓದುಗರು ಸಹಜವಾಗಿ ತಮ್ಮ ಓದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಹಲವು ಮಂದಿ ಲೇಖಕರು ತಮ್ಮ ಓದುಗರು ಯಾರು ಎಂಬುದನ್ನು ಮೊದಲೇ ಕಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ೨೧ನೇ ಶತಮಾನ ತಮ್ಮ ಸೀಮಿತ ಅವಧಿಯಲ್ಲಿ ಕಂಡು ಅನುಭವಿಸಿದ ವಿಶಿಷ್ಟ ಬೆಳವಣಿಗೆ. ಇಂದಿನ ಸಾಮಾಜಿಕ ಸಂರಚನೆಯಲ್ಲಿ ಆಗುತ್ತಿರುವ ಬದಲಾವಣೆಯನ್ನು ಮತ್ತು ಅದಕ್ಕೆ ಕಾರಣಗಳಾಗಿರುವ ಅಂಶಗಳನ್ನು ಪ್ರಕಟಪಡಿಸುವ ಬರಹಗಳು ಮತ್ತು ಕೃತಿಗಳು ದೊಡ್ಡ ಸಂಖ್ಯೆಯ ಓದುಗರನ್ನು ತಲುಪುತ್ತಿವೆ. ಪ್ರತಿಯೊಂದು ಬರಹವು ತನ್ನ ಓದುಗರನ್ನು ತಾನೇ ಗುರುತಿಸಿಕೊಳ್ಳಬೇಕಾದ ಸಂದರ್ಭವೊಂದರ ನಡುವೆ ನಾವು ಬದುಕುತ್ತಿದ್ದೇವೆ.

೨೧ನೆಯ ಶತಮಾನದ ಆರಂಭದ ದಶಕಗಳಲ್ಲಿ ಕನ್ನಡದ ಬರವಣಿಗೆಯ ಹಟವು ಬಹು ವ್ಯಾಪಕವಾದ ಆಯಾಮವನ್ನು ಪಡೆದುಕೊಂಡಿದೆ. ನಾವು ಸಾಮಾನ್ಯವಾಗಿ ಗುರುತಿಸುವ ಸಾಹಿತ್ಯ ಪ್ರಕಾರಗಳ ಹೊರತಾಗಿ ಹಲವು ಹತ್ತು ಬಗೆಯ ವಲಯಗಳಲ್ಲಿ ಕನ್ನಡ ಪದವನ್ನು ಬಳಸುವ ಬಗೆ ವ್ಯಾಪಕವಾಗಿ ಬೆಳೆದಿದೆ. ಮಾಹಿತಿಗಾಗಿ ಕನ್ನಡದ ಬರವಣಿಗೆಯನ್ನು ಆಶ್ರಯಿಸುವುದು ಈಗ ಹೆಚ್ಚಾಗಿದೆ. ಆದ್ದರಿಂದ ಆ ವಲಯದ ಬೆಳವಣಿಗೆ ಅಧಿಕ ಪ್ರಮಾಣದಲ್ಲಿ ಸಿದ್ಧಗೊಳ್ಳುತ್ತಿದೆ. ಇಂಗ್ಲೀಷ್ ಮತ್ತು ಕನ್ನಡಗಳನ್ನು ಭಿನ್ನ ಉದ್ದೇಶಗಳಿಗಾಗಿ ಬಳಸುತ್ತಿದ್ದ ದ್ವಿಭಾಷಿಕ ಸಮುದಾಯವು ಈಗ ಮರೆಯಾಗತೊಡಗಿದೆ. ಎಲ್ಲದಕ್ಕೂ ಕನ್ನಡವನ್ನೇ ಆಶ್ರಯಿಸುವ ಏಕ ಭಾಷಿಕರು ಸಂಖ್ಯೆಯಲ್ಲಿ ಮತ್ತು ಸಾಮಾಜಿಕ ವ್ಯಾಪ್ತಿಯಲ್ಲಿ ಹೆಚ್ಚಾಗತೊಡಗಿದ್ದಾನ. ಈ ಹೊಸ ಪರಿಸ್ಥಿತಿಯನ್ನು ಎದುರಿಸಲು ಕನ್ನಡದ ಬರಹಗಾರರು ಸನ್ನದ್ಧರಾಗಬೇಕಾದ ತುರ್ತು ನಮ್ಮ ಮುಂದಿದೆ.

೨೧ನೆಯ ಶತಮಾನದ ಸಾಹಿತ್ಯ ಸಂವೇದನೆ ಗಟ್ಟಿಯಾಗಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವ್ಯಾಖ್ಯೆಗಳಲ್ಲಿ ಬದಲಾಗುತ್ತಿದೆ. ಲೈಂಗಿಕತೆಗೆ ಸಂಬಂಧಪಟ್ಟ ದೃಷ್ಟಿಯಿಂದ ಹೆಣ್ಣು ಗಂಡುಗಳನ್ನು ನೋಡುವ ಕ್ರಮ ಬಿಟ್ಟು ಸಮಾನತೆಯ ಎಡೆಗೆ ಸಾಗುತ್ತಿದೆ. ಸಮಕಾಲೀನ ಸ್ತ್ರೀಯರು ಜ್ಞಾನ ಪರಂಪರೆಯನ್ನು ಮುನ್ನೆಲೆಗೆ ತರುತ್ತಿದ್ದಾರೆ. ಈವರೆಗೂ ಅನಾವರಣಗೊಳ್ಳದ ಸಣ್ಣ ಸಣ್ಣ ಸಮುದಾಯದ ಅನುಭವವನ್ನು ಈ ಶತಮಾನದ ಸಾಹಿತ್ಯ ಒಳಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ.

ಒಂದು ವಸಾಹತುಶಾಹಿ-ರಾಷ್ಟ್ರೀಯತೆಗಳ ಮುಖಾಮುಖಿ ವಿಮರ್ಶಾ ಚೌಕಟ್ಟುಗಳು ಮುರಿದುಬಿದ್ದು ನವ ವಸಾಹತುಶಾಹಿ ನವ ಉದಾರೀಕರಣದ ಶಕೆ ಪ್ರಾರಂಭವಾಗಿದೆ. ಇದನ್ನೆ ಸ್ಕೂಲವಾಗಿ ಮೂರನೆ ಜಗತ್ತಿಗೆ ಕಾಲಿಟ್ಟ ಜಾಗತೀಕರಣದ ಪರಿಣಾಮ ಎನ್ನಬಹುದು.

ಕನ್ನಡದ ಸಂದರ್ಭದಲ್ಲಿ ೨೦ನೆಯ ಶತಮಾನದ ಕೊನೆಯ ದಶಕ ಮತ್ತು ೨೧ನೆಯ ಶತಮಾನದ ಆರಂಭದ ದಶಕಗಳಲ್ಲಿ ಸೃಜನಶೀಲ ಮತ್ತು ವೈಚಾರಿಕ ಸಾಹಿತ್ಯದ ಅಧ್ಯಯನಕ್ಕೆ ಸಂಬಂಧಿಸಿದಂತೆ ಹಲವು ಸ್ಥಿತ್ಯಂತರಗಳನ್ನು ಕಾಣಬಹುದಾಗಿದೆ. ಮುಖ್ಯವಾಗಿ ಅಧ್ಯಯನದ ಆಸಕ್ತಿ ಮತ್ತು ಮಾದರಿಗಳಲ್ಲಿ ಈ ಬಗೆಯ ಸ್ಥಿತ್ಯಂತರಗಳನ್ನು ಗುರುತಿಸಿಕೊಳ್ಳಲು ಸಾಧ್ಯವಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆಧುನಿಕ ಸಾಹಿತ್ಯದ ಮತ್ತೊಂದು ಸಂಕ್ರಮಣ ಕಾಲ ಎನ್ನಬಹುದು. ಈ ಅವಧಿಯಲ್ಲಿ ಕನ್ನಡ ಸಾಹಿತ್ಯ ಮತ್ತು ವಿಮರ್ಶೆಯ ಕ್ಷೇತ್ರದಲ್ಲಿ ತೀವ್ರ ಸ್ವರೂಪದ ಮತ್ತು ಕ್ರಾಂತಿಕಾರಕವಾದ ಬೆಳವಣಿಗೆಗಳು ಸಂಭವಿಸುತ್ತಿವೆ. ೨೧ನೆಯ ಶತಮಾನ ಎದುರುಗೊಳ್ಳುತ್ತಿರುವ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸವಾಲುಗಳಿಗೆ ಕನ್ನಡ ಸೃಜನಶೀಲ ಮತ್ತು ವೈಚಾರಿಕ ಕೃತಿಗಳು ಹೇಗೆ ಪ್ರತಿಕ್ರಿಯಿಸುತ್ತಿವೆ ಎಂಬುದು ಗಮನಾರ್ಹ.

You cannot copy content of this page

Exit mobile version