Sunday, June 16, 2024

ಸತ್ಯ | ನ್ಯಾಯ |ಧರ್ಮ

ಜೀವ ತೆಗೆದ ಜಿಪಿಎಸ್… ಇಬ್ಬರು ವೈದ್ಯರ ಪ್ರಾಣ ತೆಗೆದ ಗೂಗಲ್ ಮ್ಯಾಪ್

ಕೊಚ್ಚಿ, ಅಕ್ಟೋಬರ್ 2: ಭಾರೀ ಮಳೆಯಲ್ಲಿ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಮತ್ತು ಗೂಗಲ್ ಮ್ಯಾಪ್‌ಗಳನ್ನು ಅವಲಂಬಿಸಿ ಕಾರು ಚಲಾಯಿಸಿ ಇಬ್ಬರು ಯುವ ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ.

ಅವರು ಪ್ರಯಾಣಿಸುತ್ತಿದ್ದ ಕಾರು ನೇರವಾಗಿ ಪೆರಿಯಾರ್ ನದಿಗೆ ಧುಮುಕಿದ್ದು ಈ ದುರಂತಕ್ಕೆ ಕಾರಣ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಶನಿವಾರ ಮಧ್ಯರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ತ್ರಿಶೂರ್ ಜಿಲ್ಲೆಯ ಖಾಸಗಿ ಕ್ಲಿನಿಕ್‌ನಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಅದ್ವೈತ್ (29) ಮತ್ತು ಅಜ್ಮಲ್ (29) ಶನಿವಾರ ರಾತ್ರಿ ಕರ್ತವ್ಯ ಮುಗಿಸಿ ಹೋಂಡಾ ಸಿವಿಕ್‌ನಲ್ಲಿ ಮನೆಗೆ ತೆರಳಿದ್ದರು. ಇವರೊಂದಿಗೆ ಡಾ.ತಬ್ಸೀರ್, ಎಂಬಿಬಿಎಸ್ ವಿದ್ಯಾರ್ಥಿ ತಮನ್ನಾ, ನರ್ಸ್ ಜಿಸ್ಮಾನ್ ಕೂಡ ಕಾರು ಹತ್ತಿದ್ದಾರೆ.

ಡ್ರೈವರ್ ಸೀಟಿನಲ್ಲಿ ಡಾ.ಅದ್ವೈತ್ ಕುಳಿತಿದ್ದರು. ನಾಳೆ ಅವರ ಜನ್ಮದಿನವಾದ್ದರಿಂದ ಮಾರ್ಗ ಮಧ್ಯೆ ಶಾಪಿಂಗ್‌ಗೆ ತೆರಳಿದ್ದರು. ಆ ವೇಳೆ ಜೋರಾಗಿ ಮಳೆ ಸುರಿದು ರಸ್ತೆ ಕಾಣುತ್ತಿರಲಿಲ್ಲ. ಗೂಗಲ್ ಮ್ಯಾಪ್ ಅನುಸರಿಸಿ ಕಾರು ಚಲಾಯಿಸುತ್ತಿದ್ದ ಅದ್ವೈತ್ ರಸ್ತೆ ಮಧ್ಯೆ ನೀರು ನಿಂತಿದ್ದ ಪ್ರದೇಶವನ್ನು ರಸ್ತೆ ಎಂದು ತಪ್ಪಾಗಿ ಭಾವಿಸಿ ಕಾರನ್ನು ನೀರಿನತ್ತ ವೇಗವಾಗಿ ಓಡಿಸಿದರು. ಆದರೆ ಅದು ಪೆರಿಯಾರ್ ನದಿ ಎಂದು ಗುರುತಿಸುವ ಮೊದಲೇ ಕಾರು ನೀರಿನಲ್ಲಿ ಮುಳುಗಿತ್ತು. ಸ್ಥಳೀಯರು ಸ್ಪಂದಿಸಿ ಮೂವರನ್ನು ರಕ್ಷಿಸಿದ್ದಾರೆ. ಅದ್ವೈತ್ ಮತ್ತು ಅಜ್ಮಲ್ ಪ್ರಾಣ ಕಳೆದುಕೊಂಡರು.

ಮಳೆಗಾಲದಲ್ಲಿ ಗೂಗಲ್ ಮ್ಯಾಪ್ ಬಳಸಬೇಡಿ

ಈ ದುರಂತದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಪ್ರಯಾಣಕ್ಕೆ ತಂತ್ರಜ್ಞಾನದ ಬಳಕೆ ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಜಿಪಿಎಸ್ ಮತ್ತು ಗೂಗಲ್ ಮ್ಯಾಪ್ ಬಳಸದಂತೆ ಸೂಚಿಸಲಾಗಿದೆ. ಮಳೆಗಾಲದಲ್ಲಿ ರಸ್ತೆಗಳನ್ನು ಹೆಚ್ಚಾಗಿ ಡೈವರ್ಷನ್‌ ಮಾಡಲಾಗಿರುತ್ತದೆ, ಆದರೆ ಆ ತಿರುವುಗಳು ಗೂಗಲ್ ನಕ್ಷೆಗಳಲ್ಲಿ ಕಾಣಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಇಂದಿನ ದಿನಗಳಲ್ಲಿ ವಾಹನ ಚಾಲನೆಗೆ ಗೂಗಲ್ ಮ್ಯಾಪ್ ಉಪಯುಕ್ತವಾಗಿದ್ದರೂ ಅವುಗಳನ್ನು ಅನುಸರಿಸಿ ಅಪರಿಚಿತ ಮಾರ್ಗಗಳಲ್ಲಿ ಅದರಲ್ಲೂ ಮಳೆಗಾಲದಲ್ಲಿ ವಾಹನಗಳನ್ನು ಓಡಿಸುವುದು ಸೂಕ್ತವಲ್ಲ ಎಂದು ಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು