Home ಬೆಂಗಳೂರು ಬೆಂಗಳೂರಿನಲ್ಲಿ ಜೋಡಿ ಕೊಲೆ; ಮಾಜಿ ಉದ್ಯೋಗಿಯಿಂದ ಟೆಕ್ ಸಂಸ್ಥೆಯ ಸಿಇಒ, ಎಂಡಿ ಕೊಲೆ

ಬೆಂಗಳೂರಿನಲ್ಲಿ ಜೋಡಿ ಕೊಲೆ; ಮಾಜಿ ಉದ್ಯೋಗಿಯಿಂದ ಟೆಕ್ ಸಂಸ್ಥೆಯ ಸಿಇಒ, ಎಂಡಿ ಕೊಲೆ

0

ಬೆಂಗಳೂರಿನ ಟೆಕ್ ಕಂಪನಿಯೊಂದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ)ರನ್ನು ಜುಲೈ 11, ಮಂಗಳವಾರದಂದು ಮಾಜಿ ಉದ್ಯೋಗಿಯೊಬ್ಬ ಅವರ ಕಚೇರಿಗೆ ನುಗ್ಗಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಏರೋನಿಕ್ಸ್ ಇಂಟರ್‌ನೆಟ್ ಕಂಪನಿಯ ಸಿಇಒ ವಿನು ಕುಮಾರ್ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯ ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡಿದ್ದ ಇಬ್ಬರೂ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ವರದಿಗಳ ಪ್ರಕಾರ, ಫೆಲಿಕ್ಸ್ ಎಂಬ ಹೆಸರಿನ ಮಾಜಿ ಉದ್ಯೋಗಿ ಪ್ರಕರಣದ ಪ್ರಮುಖ ಶಂಕಿತ. ಘಟನೆಯ ನಂತರ ಫೆಲಿಕ್ಸ್ ತಲೆಮರೆಸಿಕೊಂಡಿದ್ದು, ಆತನನ್ನು ಆದಷ್ಟು ಬೇಗ ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಈಶಾನ್ಯ ಬೆಂಗಳೂರು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ಅಮೃತಹಳ್ಳಿಯ ಪಂಪಾ ಎಕ್ಸ್‌ಟೆನ್ಶನ್‌ನಲ್ಲಿನ ವಸತಿ ಪ್ರಾಪರ್ಟಿಯಲ್ಲಿದ್ದ ಕಚೇರಿಗೆ ಮೂವರು ಪ್ರವೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2022ರ ನವೆಂಬರ್‌ನಲ್ಲಿ ಬ್ರಾಡ್‌ಬ್ಯಾಂಡ್ ಕಂಪನಿಯನ್ನು ಪ್ರಾರಂಭಿಸಿದ್ದ ಫಣೀಂದ್ರ ಸೇರಿದಂತೆ ಸುಮಾರು 10 ಜನರು ಕಚೇರಿಯಲ್ಲಿದ್ದರು. ನಂತರ ಮೂವರು ವ್ಯಕ್ತಿಗಳು ಫಣೀಂದ್ರರ ಮೇಲೆ ಹಲ್ಲೆ ನಡೆಸಿದರು ಮತ್ತು ವಿನುಕುಮಾರ್ ಅವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರ ಮೇಲೂ ಹಲ್ಲೆ ನಡೆಸಲಾಯಿತು. ನಂತರ ಮೂವರು ಗಂಡಸರು ಕಟ್ಟಡದ ಹಿಂದಿನ ಬಾಗಿಲಿನಿಂದ ಓಡಿಹೋದರು ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣ ಸಿಬ್ಬಂದಿಗಳು ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರಾದರೂ ಇಬ್ಬರೂ ತೀರಿಕೊಂಡಿದ್ದಾರೆ. ಆರೋಪಿಗಳಲ್ಲಿ ಇಬ್ಬರನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಈಶಾನ್ಯ ಡಿಸಿಪಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ. ಉದ್ದೇಶ ಮತ್ತು ಇತರರು ಶಾಮೀಲಾಗಿರುವ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಫಣೀಂದ್ರ ಮತ್ತು ವಿನುಕುಮಾರ್ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.

You cannot copy content of this page

Exit mobile version