Home ಬೆಂಗಳೂರು ಇಬ್ಬರು ಪಿಯು ವಿದ್ಯಾರ್ಥಿನಿಯರು ನಾಪತ್ತೆ ಬರೋಬ್ಬರಿ 75 ದಿನಗಳು ಕಳೆದರು ಸುಳಿವಿಲ್ಲ

ಇಬ್ಬರು ಪಿಯು ವಿದ್ಯಾರ್ಥಿನಿಯರು ನಾಪತ್ತೆ ಬರೋಬ್ಬರಿ 75 ದಿನಗಳು ಕಳೆದರು ಸುಳಿವಿಲ್ಲ

ಬೆಂಗಳೂರು : ಬೆಂಗಳೂರಿನ (Bengaluru) ವಿದ್ಯಾರಣ್ಯಪುರದ (Vidyaranyapura) ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು (PUC Students) ನಾಪತ್ತೆಯಾಗಿ (Missing Case) ಬರೋಬ್ಬರಿ 75 ದಿನಗಳು ಕಳೆದಿದ್ದರೂ ಅವರ ಬಗ್ಗೆ ಯಾವುದೇ ಸುಳಿವು ಸಿಗದಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ತನಿಷ್ಕಾ ಹಾಗೂ ಆಕೆಯ ಜ್ಯೂನಿಯರ್ ತೇಜಸ್ವಿನಿ ಕಳೆದ ಜನವರಿ 31 ರಂದು ಮನೆಯಿಂದ ಹೊರಟವರು ಇಂದಿಗೂ ಪತ್ತೆಯಾಗಿಲ್ಲ. ಈ ಪ್ರಕರಣ ಈಗ ಪೊಲೀಸರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

ವಿದ್ಯಾರ್ಥಿನಿಯರ ಪತ್ತೆಗಾಗಿ ಪೊಲೀಸರು 10 ಜನರ ವಿಶೇಷ ತಂಡವನ್ನು ರಚಿಸಿ ಮುಂಬೈ, ಚೆನೈ, ದೆಹಲಿ, ಕಾಶಿ ಸೇರಿದಂತೆ ದೇಶದ 100ಕ್ಕೂ ಹೆಚ್ಚು ನಗರಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ವಿಶೇಷವೆಂದರೆ, ನಾಪತ್ತೆಯಾದ ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಫೋನ್ ಬಳಸುತ್ತಿಲ್ಲ ಮತ್ತು ಯಾವುದೇ ಎಟಿಎಂ ಕಾರ್ಡ್‌ಗಳನ್ನು ಉಪಯೋಗಿಸುತ್ತಿಲ್ಲ. ಕುಟುಂಬಸ್ಥರು ಅಥವಾ ಸ್ನೇಹಿತರನ್ನೂ ಅವರು ಸಂಪರ್ಕಿಸಿಲ್ಲ.

ಇವರು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿದ್ದ ಬಗ್ಗೆ ಆರಂಭದಲ್ಲಿ ಸುಳಿವು ಸಿಕ್ಕಿತ್ತಾದರೂ, ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಅಲ್ಲಿಂದಲೂ ನಾಪತ್ತೆಯಾಗಿದ್ದರು. ಕೈಯಲ್ಲಿ ಕೇವಲ ಮೂರು ಸಾವಿರ ರೂಪಾಯಿ ಹಿಡಿದು ಹೊರಟ ಇಬ್ಬರು ಹುಡುಗಿಯರು ಇಷ್ಟು ದಿನಗಳ ಕಾಲ ಯಾರಿಗೂ ಸಿಗದಂತೆ ಹೇಗೆ ವಾಸಿಸುತ್ತಿದ್ದಾರೆ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ.

ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವಿರುವುದರಿಂದ, ಇವರು ಆಧಾರ್ ಕಾರ್ಡ್ ಬಳಸಿ ಬಸ್ಸುಗಳಲ್ಲಿ ಪ್ರಯಾಣಿಸುತ್ತಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪರೀಕ್ಷೆಯ ಭಯದಿಂದ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಇವರು ಮನೆ ಬಿಟ್ಟಿರಬಹುದು ಎಂದು ಊಹಿಸಲಾಗಿದೆ.

ಪೊಲೀಸರು ಎಷ್ಟು ಹುಡುಕಿದರೂ ಸುಳಿವು ಸಿಗದ ಕಾರಣ, ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಬಾಲಕಿಯರನ್ನು ಪತ್ತೆಹಚ್ಚಲು ಕೋರ್ಟ್ ನೀಡಿದ್ದ ಗಡುವು ಮುಗಿದು ಒಂದು ತಿಂಗಳು ಕಳೆದರೂ ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ದಿನಗಳು ಉರುಳುತ್ತಿದ್ದಂತೆ ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಕಂಗಾಲಾಗಿದ್ದು, ಈ ನಿಗೂಢ ನಾಪತ್ತೆ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.

You cannot copy content of this page

Exit mobile version